• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಣ ಪಡೆದ ಆರೋಪ: ಗದ್ಗದಿತರಾದ ರಮೇಶ್ ಕುಮಾರ್ ರಾಜೀನಾಮೆ ಮಾತು

|
   ಬಿ ಎಸ್ ವೈ ಆಡಿಯೋ ಟೇಪ್ ವಿಷಯಕ್ಕೆ ಸದನದಲ್ಲಿ ಗದ್ಗದಿತರಾದ ರಮೇಶ್ ಕುಮಾರ್ | Oneindia Kannada

   ಬೆಂಗಳೂರು, ಫೆಬ್ರವರಿ 11: ತಮ್ಮ ವಿರುದ್ಧ ಆಪರೇಷನ್ ಕಮಲದಲ್ಲಿ ಕೇಳಿಬಂದಿರುವ 50 ಕೋಟಿ ಲಂಚ ಆರೋಪದ ಕುರಿತು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸದನದಲ್ಲಿ ಕಣ್ಣೀರಿಟ್ಟರು.

   50 ಕೋಟಿ ರೂಪಾಯಿ ಆರೋಪದ ಬಗ್ಗೆ ಆರೋಪದ ಬಳಿಕ ಎರಡು ರಾತ್ರಿಗಳನ್ನು ಕಳೆದಿದ್ದೇನೆ, ನನ್ನ ಮನಸಿಗೆ ನೋವಾಗಿದೆ. ನನ್ನ ನೋವು ಮನೆಯವರಿಗೆ ಗೊತ್ತಾಗದಂತೆ ಇರಬೇಕಾಯಿತು. ಶುಕ್ರವಾರ ರಾತ್ರಿ ರಾಯಚೂರಿನಿಂದ ರೈಲಿನಲ್ಲಿ ಹೊರಟು ಬಂದಿದ್ದೇನೆ.

   ಆಪರೇಷನ್ ಕಮಲದ ಆಡಿಯೋ ಕ್ಲಿಪ್ ಪ್ರಕರಣ ಎಸ್‌ಐಟಿ ತನಿಖೆಗೆ

   ನಾನು ಅವಕಾಶವಾದಿಯಲ್ಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ, ಸರ್ಕಾರಿ ಬಂಗಲೆಯಲ್ಲಿಲ್ಲ. ಅಷ್ಟು ದೊಡ್ಡ ಹಣ ನೀಡಿದರೆ ಎಲ್ಲಿ ಇಟ್ಟುಕೊಳ್ಳಲಿ? ನನಗೆ ಹಣವನ್ನು ಎಲ್ಲಿ ಕೊಟ್ಟರು? ಹೇಗೆ ಕೊಟ್ಟರು? ನನಗೆ ಏಕೆ ಈ ಅನ್ಯಾಯ. ನಾವೀಗ ಎಲ್ಲಿಗೆ ಬಂದು ತಲುಪಿದ್ದೇವೆ? ಎಂದು ರಮೇಶ್ ಕುಮಾರ್ ಭಾವುಕರಾದರು.

   ಮಾತಿನ ಮಧ್ಯೆ ವಾಜಪೇಯಿ ಅವರನ್ನು ರಮೇಶ್ ಕುಮಾರ್ ಸ್ಮರಿಸಿಕೊಂಡರು. ವಾಜಪೇಯಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ ವಿರೋಧ ಪಕ್ಷದವರು ಅವಕಾಶವಾದಿ ಎಂದು ಆರೋಪಿಸಿದ್ದರು. ಆಗ ವಾಜಪೇಯಿ, 40 ವರ್ಷದಿಂದ ನನ್ನನ್ನು ನೋಡಿದ್ದೀರಿ, ನನ್ನನ್ನು ಅವಕಾಶವಾದಿ ಎಂದು ಕರೆದಿದ್ದೀರಲ್ಲ. ಇಬ್ಬರೇ ಸದಸ್ಯರನ್ನು ಕೂರಿಸಿಕೊಂಡು ಸದನಕ್ಕೆ ಬಂದವನು ನಾನು. ನಾನು ಸಾವಿಗೆ ಭಯಪಡುವುದಿಲ್ಲ, ಆದರೆ ನನ್ನ ಚಾರಿತ್ರ್ಯವಧೆ ಮಾಡುವುದು ಸಾವಿಗಿಂತಲು ಕೆಟ್ಟದ್ದು ಎಂದು ವಾಜಪೇಯಿ ಹೇಳಿದ್ದರು.

   ಯಡಿಯೂರಪ್ಪಗೆ ಸಂಕಷ್ಟ: ಆಪರೇಷನ್ ಕಮಲ ವಿರುದ್ಧ ಎಸಿಬಿಗೆ ದೂರು

   ವಾಜಪೇಯಿ ಅವರಿಗೆ ಹೋಲಿಕೆ ಮಾಡಿಕೊಳ್ಳುವಷ್ಟು ದೊಡ್ಡವನಲ್ಲ. ನಾನು ಅವರ ಕಾಲಿನ ದೂಳಿಗೂ ಸಮನಲ್ಲ. ಆದರೆ, ಅವರು ನಮಗೆ ಆದರ್ಶಪ್ರಾಯ. ಅವರ ಮಾತುಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದು ನೋವಿನಿಂದ ಹೇಳಿದರು.

   ಈ ಬಗ್ಗೆ ಸದನದಲ್ಲಿ ಕಾವೇರಿದ ಚರ್ಚೆ ನಡೆಯಿತು, ಸದನದಲ್ಲಿ ಈ ಬಗ್ಗೆ ಚರ್ಚೆಯಾಗಬೇಕು ಎಂದು ಕೃಷ್ಣಬೈರೇಗೌಡ ಒತ್ತಾಯಿಸಿದರು. ಸದನದ ಹೊರಗೆ ಯಾರೋ ಮಾಡಿದ ಆರೋಪವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಇಲ್ಲಿ ಅದರ ಚರ್ಚೆ ಆಗಬೇಕಿಲ್ಲ ಎಂದು ಮಾಧುಸ್ವಾಮಿ ಹೇಳಿದರು.

   ಮಾತಾಡಿದ್ದು ಯಾರೋ ಹೊರಗಿನವರಲ್ಲ

   ಮಾತಾಡಿದ್ದು ಯಾರೋ ಹೊರಗಿನವರಲ್ಲ

   ಯಾರೋ ಹೊರಗಿನವರು ಈ ಆರೋಪ ಮಾಡಿದ್ದರೆ ನಾನು ಯೋಚಿಸುತ್ತಿರಲಿಲ್ಲ. ಈ ಸದನಕ್ಕೆ ಸಂಬಂಧಿಸಿದ್ದವರೇ ಮಾತನಾಡಿದ್ದಾರೆ. ಅವಿರೋಧವಾಗಿ ಆಯ್ಕೆಯಾದ ನಾನು ಇಂತಹ ಆರೋಪವನ್ನು ಹೊತ್ತುಕೊಂಡು ಹೇಗೆ ಇರಲು ಸಾಧ್ಯ? ಒಂದೋ ಆರೋಪ ಮಾಡಿದ ಶಾಸಕರು ರಾಜಕೀಯದಿಂದ ಹೊರಹೋಗಬೇಕು. ಇಲ್ಲವೇ ನಾನು ಸದನದಿಂದ ಹೊರನಡೆಯಬೇಕು. ನಾನು ಈ ಕಸದಬುಟ್ಟಿ ಹೊತ್ತುಕೊಂಡು ಹೆಂಡತಿ ಮಕ್ಕಳಿಗೆ ಮುಖ ತೋರಿಸಲು ಸಾಧ್ಯವಿಲ್ಲ. ಬದುಕಿರುವ ಒಬ್ಬ ಅಣ್ಣ ನನ್ನ ಮೇಲೆ ಜೀವ ಇಟ್ಟುಕೊಂಡಿದ್ದಾರೆ.. ಆತನನ್ನು ಎದುರಿಸಲಾರೆ. ಇದರಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ರಮೇಶ್ ಕುಮಾರ್ ಹೇಳಿದರು.

   ಇಡೀ ಸದನದ ಘನತೆಗೆ ಚ್ಯುತಿ

   ಇಡೀ ಸದನದ ಘನತೆಗೆ ಚ್ಯುತಿ

   ದಾರಿಯಲ್ಲಿ ಹೋಗುವವರು ದಿನವೂ ನೂರಾರು ವಿಚಾರ ಮಾತನಾಡುತ್ತಾರೆ. ಅದು ಕೂಡ ಹಕ್ಕು ಚ್ಯುತಿ ಆಗಲೂಬಹುದು. ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯದ ಹಕ್ಕು ಇದೆ. ಹೀಗಾಗಿ ಕೆಲವು ವಿಚಾರ ಹಾಗೆಯೇ ಬಿಡಬಹುದು. ಆದರೆ, ಜವಾಬ್ದಾರಿಯುತ ಸಂವಿಧಾನಬದ್ಧ ಸ್ಥಾನದಲ್ಲಿರುವವರು ಮಾತನಾಡಿದಾಗ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಕೃಷ್ಣಬೈರೇಗೌಡ ಹೇಳಿದರು.

   ಇದು ವೈಯಕ್ತಿಕ ವಿಚಾರ ಆಗುವುದಿಲ್ಲ. ಇದು ಸದನದ ಸಭಾಧ್ಯಕ್ಷರಿಗೆ ಸಂಬಂಧಿಸಿದ್ದು. ಇದರಲ್ಲಿ ನಿಷ್ಪಕ್ಷಪಾತವಾಗಿ ವರ್ತಿಸಬೇಕಾಗುತ್ತದೆ. ಸಭಾಧ್ಯಕ್ಷರ ಗುಣನಡತೆ ಬಗ್ಗೆ ವ್ಯಕ್ತಿಗತ ಹೇಳಿಕೆಗಳನ್ನು ನೀಡಿದರೆ ಸದನದ ಹಕ್ಕುಚ್ಯುತಿ ಆಗುತ್ತದೆ. ವೈಯಕ್ತಿಕ ಹಕ್ಕುಚ್ಯುತಿ ಆಗುವುದಿಲ್ಲ. ಸದನಕ್ಕೆ ಘನತೆ ಗೌರವ ಮಾನ್ಯತೆ ಇಲ್ಲ ಎಂದಾದರೆ ನಾವೆಲ್ಲ ಸದಸ್ಯರಾಗಿ ಪ್ರಯೋಜನ ಏನಿದೆ. ನಮ್ಮ ಘನತೆಯನ್ನು ಎತ್ತಿಹಿಡಿಯಬೇಕಿದೆ ಎಂದು ಪ್ರತಿಪಾದಿಸಿದರು.

   ಮುದ್ಗಲ್ ಪ್ರಕರಣ ಸ್ಮರಣೆ

   ಮುದ್ಗಲ್ ಪ್ರಕರಣ ಸ್ಮರಣೆ

   ಈ ಸಂದರ್ಭದಲ್ಲಿ ರಮೇಶ್ ಕುಮಾರ್ 1951ರ ಮೊದಲ ಲೋಕಸಭೆ ಚುನಾವಣೆ ಬಳಿಕದ ಘಟನೆಯನ್ನು ನೆನಪಿಸಿಕೊಂಡರು. ಕಾಂಗ್ರೆಸ್ ಸಂಸದ ಎಚ್‌ಜಿ ಮುದ್ಗಲ್ ಅವರು ಲಂಚ ಆರೋಪದಲ್ಲಿ ಸಿಲುಕಿದಾಗ ಪ್ರಧಾನಿ ನೆಹರೂ ಅವರ ಉಚ್ಚಾಟನೆಗೆ ಮುಂದಾದರು. ಅದು ಗೊತ್ತಾಗುತ್ತಿದ್ದಂತೆಯೇ ಮುದ್ಗಲ್ ರಾಜೀನಾಮೆ ನೀಡಿದರು. ಸದಸ್ಯರಲ್ಲದವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಸಾಧ್ಯವಾಗದು ಎನ್ನುವುದು ಅವರ ಉದ್ದೇಶವಾಗಿತ್ತು. ಉಚ್ಚಾಟನೆ ಮಾಡುವುದು ಗೊತ್ತಾದಾಗ ರಾಜೀನಾಮೆ ನೀಡುವುದು ಇನ್ನೂ ದೊಡ್ಡ ಅಪರಾಧ ಎಂದು ನೆಹರೂ ಹೇಳಿದ್ದರು ಎಂದು ವಿವರಿಸಿದರು.

   ಸದನಕ್ಕೆ ಸಂಬಂಧಿಸಿದ್ದವರದೇ ಧ್ವನಿ

   ಸದನಕ್ಕೆ ಸಂಬಂಧಿಸಿದ್ದವರದೇ ಧ್ವನಿ

   ಆಡಿಯೋ ಟೇಪ್‌ನಲ್ಲಿರುವ ಧ್ವನಿ ಯಾರದ್ದು ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ, ಸಂಭಾಷಣೆಯ ತಾತ್ಪರ್ಯ ಗಮನಿಸಿದಾಗ ಅವರು ಸದನದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸದಸ್ಯರೇ ಆಗಿದ್ದಾರೆ ಎನ್ನುವುದು ಖಚಿತವಾಗುತ್ತದೆ. ರಾಜೀನಾಮೆಯನ್ನು ನೀಡಿದಾಗ ಹಿಂದಿನ ಸ್ಪೀಕರ್ ಒಪ್ಪಿರಲಿಲ್ಲ. ಅದರ ವಿರುದ್ಧ ಕೋರ್ಟ್‌ನಲ್ಲಿ ಗೆದ್ದಿರಲಿಲ್ಲವೇ, ಬಳಿಕ ಚುನಾವಣೆಯಲ್ಲಿ ಗೆದ್ದು ಬಂದಿದ್ದೇವೆ ಎಂದು ಮಾತನಾಡಿದ್ದಾರೆ. ಇದು ಆ ಸಮಯದಲ್ಲಿ ಪಕ್ಷ ತೊರೆದು ಯಾರು ಈ ಚಟುವಟಿಕೆಗಳಲ್ಲಿ ಯಾರು ತೊಡಗಿದ್ದರೋ ಅವರಲ್ಲಿ ಒಬ್ಬರು ಎಂದು ಖಚಿತವಾಗಿ ಹೇಳಬಹುದು ಎಂದು ಹೇಳಿದರು.

   ನನ್ನ ತಾಯಿ ಅನಕ್ಷರಸ್ಥೆ. ಆಕೆ ಯಾವಾಗಲೂ ಹೇಳುತ್ತಿದ್ದರು, ಯಾರಾದರೂ ಉಳ್ಳವರ ಮನೆಯೊಳಗೆ ಹೋದರೆ, ಅವರ ಬಾಗಿಲಿನಿಂದ ಬರುವಾಗ ಕಾಲು ತಿಕ್ಕಿ ಅಲ್ಲಿನ ದೂಳು ಅಲ್ಲಿಯೇ ಬಿಟ್ಟು ಬರಬೇಕು ಎಂದು. ನನ್ನ ಅತ್ಯಂತ ದೊಡ್ಡ ರಾಜಕೀಯ, ನೈತಿಕ ಶಿಕ್ಷಕಿ ನನ್ನ ತಾಯಿ ಎಂದು ಭಾವುಕರಾದರು.

   ಸದನದಲ್ಲಿ ಸ್ಪೀಕರ್ ರಮೇಶ್ ಕುಮಾರ್ ವೇಶ್ಯೆಯ ಉದಾಹರಣೆಯನ್ನು ಉಲ್ಲೇಖಿಸಿದಾಗ!

   ರಾಮಾಯಣ, ಸೀಜರ್ ಪ್ರಸ್ತಾಪ

   ರಾಮಾಯಣ, ಸೀಜರ್ ಪ್ರಸ್ತಾಪ

   ಈ ಸಂದರ್ಭದಲ್ಲಿ ಕೃಷ್ಣಬೈರೇಗೌಡ, ಬೇರೆ ಬೇರೆ ಉದಾಹರಣೆಗಳನ್ನು ನೀಡಿದರು. ರಾಮಾಯಣದ ಪ್ರಸಂಗವನ್ನು ಪ್ರಸ್ತಾಪಿಸಿದ ಅವರು, ಯಾರದ್ದೋ ಮಾತು ಕೇಳಿ ಶ್ರೀರಾಮ ಪತ್ನಿ ಮೇಲೆ ಅನುಮಾನಪಟ್ಟು ಅಗ್ನಿಪರೀಕ್ಷೆಗೆ ಒಳಪಡಿಸಿರಲಿಲ್ಲವೇ ಎಂದು ಪ್ರಶ್ನಿಸಿದರು. ಬಳಿಕ ಸೀಜರ್ ತನ್ನ ಎರಡನೆಯ ಪತ್ನಿ ಪಾಂಪೆಯ ಕುರಿತು ತೆಗೆದುಕೊಂಡ ತೀರ್ಮಾನವನ್ನು ಉಲ್ಲೇಖಿಸಿದರು. ಮಧ್ಯಪ್ರವೇಶಿಸಿದ ಬಿಜೆಪಿಯ ಸಿಟಿ ರವಿ, 'ಪ್ರತಿಪಕ್ಷದವರು ರಾಮಾಯಣ ಕಲ್ಪನೆಯದ್ದು ಎಂದು ಹೇಳುತ್ತಾರೆ. ಈಗ ಅದನ್ನು ಒಪ್ಪಿಕೊಂಡರಲ್ಲ' ಎಂದು ಹೇಳಿದರು. ಆಗ ಸ್ಪೀಕರ್, ಮೊದಲು ರಮೇಶ್ ಕುಮಾರ್ ರಾಮಾಯಣ ಮುಗಿಸಿ ಆಮೇಲೆ ಆ ರಾಮಾಯಣ ಮಾತನಾಡಿ ಎಂದು ಚಟಾಕಿ ಹಾರಿಸಿದರು.

   ಯಡಿಯೂರಪ್ಪ ಧ್ವನಿ ಅಲ್ಲ

   ಯಡಿಯೂರಪ್ಪ ಧ್ವನಿ ಅಲ್ಲ

   'ನಾನು ಸಾಮಾನ್ಯವಾಗಿ ಮಾಧ್ಯಮದವರೊಂದಿಗೆ ಮಾತನಾಡುವುದಿಲ್ಲ. ನಾನಾಗೇ ಮಾಧ್ಯಮದವರೊಂದಿಗೆ ಮೊನ್ನೆ ಮಾತನಾಡಿದ್ದೇನೆ. ಧ್ವನಿಸುರುಳಿ ಕೇಳಿದ್ದೇನೆ. ಆ ಧ್ವನಿ ಯಾರದ್ದೆಂದು ಗೊತ್ತಿಲ್ಲ. ಯಡಿಯೂರಪ್ಪ ಅವರನ್ನು ಬಲ್ಲೆ. ಅದು ಅವರ ಧ್ವನಿ ಅಲ್ಲ ಎಂದು ಜಾಗ್ರತೆಯಿಂದಲೇ ಹೇಳಿದ್ದೇನೆ' ಎಂದು ರಮೇಶ್ ಕುಮಾರ್ ತಿಳಿಸಿದರು.

   ಮತ್ತೆ ಮಾತನಾಡಿದ ಕೃಷ್ಣಬೈರೇಗೌಡ, ಇದು ಸದನದ ನಿಂದನೆ ಆಗುತ್ತದೆ. ಈ ಸಂಭಾಷಣೆ ತಮ್ಮದೇ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಇದು ನಿಯಮಬದ್ಧವಾಗಿ ಯಾರ ಧ್ವನಿ ಎಂದು ಗೊತ್ತಾಗಬೇಕು ಎಂದರು. ಆಗ ಆಕ್ಷೇಪ ವ್ಯಕ್ತಪಡಿಸಿದ ಯಡಿಯೂರಪ್ಪ, ಅದು ನನ್ನ ಧ್ವನಿ ಎಂದು ಒಪ್ಪಿಕೊಂಡಿರುವುದಾಗಿ ಹೇಳಿಲ್ಲ. ಹಾಗೆ ಹೇಳಬೇಡಿ ಎಂದರು. ಕೂಡಲೇ ಆ ಹೇಳಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳುವುದಾಗಿ ಕೃಷ್ಣ ಬೈರೇಗೌಡ ಹೇಳಿದರು.

   ಆಡಿಯೋದಲ್ಲಿರುವ ಧ್ವನಿ ನನ್ನದೇ : ಯಡಿಯೂರಪ್ಪ

   ಸಮಗ್ರ ತನಿಖೆ ಆಗಲಿ

   ಸಮಗ್ರ ತನಿಖೆ ಆಗಲಿ

   ಬಿಜೆಪಿ ಮುಖಂಡ ಈಶ್ವರಪ್ಪ ಮಾತನಾಡಿ, ಈ ಬಗ್ಗೆ ತಕ್ಷಣಕ್ಕೆ ತೀರ್ಮಾನಕ್ಕೆ ಬರುವುದು ಸರಿಯಲ್ಲ. ಫೇಕ್ ಹೌದೋ ಅಲ್ಲವೋ ಎನ್ನುವುದೂ ತೀರ್ಮಾನ ಆಗಬೇಕು. ಹಣ ನೀಡಿದ ಆರೋಪದ ಹಿಂದಿನ ಸತ್ಯ ಹೊರಬೇಕಾದರೆ ಸೂಕ್ತ ತನಿಖೆ ಆಗಬೇಕು. ನೀವು ತೀರ್ಮಾನಕ್ಕೆ ಬಂದಿದ್ದೇನೆ ಎನ್ನುವುದು ಆಘಾತ ಆಯಿತು. ನಾವು ತನಿಖೆ ವಿಚಾರದಲ್ಲಿ ನಿಮ್ಮ ಜೊತೆ ಇರುತ್ತೇವೆ. ಕೊಲೆ ಮಾಡಿರುವವನಿಗೂ ಅವಕಾಶ ಇರುತ್ತದೆ. ಊಹೆ ಮಾಡಿ ಗಾಳಿಗೆ ಗುದ್ದು ಹೊಡೆದು ಇವನೇ ಅಪರಾಧಿ ಎಂದು ಬೊಟ್ಟುಮಾಡಬಾರದು. ಇದು ರಾಜ್ಯದಲ್ಲಿ ಮುಂದೆಂದೂ ಆಗಕೂಡದು. ಯಾವುದೇ ತೀರ್ಮಾನ ತೆಗೆದುಕೊಳ್ಳಿ. ಈ ಬಗ್ಗೆ ತನಿಖೆ ನಡೆಯಲಿ ಎಂದರು.

   ಆಡಿಯೋ ಫೇಕ್ ಎಂಬುದು ನಿಜವಾದರೆ ನಾನು ಬಹಳ ನೆಮ್ಮದಿಯಿಂದ ಉಸಿರಾಡುತ್ತೇನೆ ಎಂದು ರಮೇಶ್ ಕುಮಾರ್ ಹೇಳಿದರು.

   ಕೃಷ್ಣಬೈರೇಗೌಡ ಹೊರತುಪಡಿಸಿ ಸಿದ್ದರಾಮಯ್ಯ ಆದಿಯಾಗಿ ಬೇರೆ ಯಾವ ನಾಯಕರೂ ಮಾತನಾಡದೆ ಇರುವುದನ್ನು ಗಮನಿಸಿದ ರಮೇಶ್ ಕುಮಾರ್, ನೀವ್ಯಾರೂ ನನ್ನ ಜೊತೆಗಿಲ್ಲವೇ. ಸಹಾನುಭೂತಿ ವ್ಯಕ್ತಪಡಿಸಿ ಒಂದೂ ಮಾತನಾಡಿಲ್ಲ. ನೀವೂ ನನ್ನ ಕೈಬಿಟ್ಟರೆ ಹೇಗೆ ನಗುತ್ತಾ ಕೇಳಿದರು.

   ಇದು ಸದನವನ್ನು ನಿಂದಿಸಿದಂತೆ

   ಆಗ ಎದ್ದುನಿಂತ ಸಿದ್ದರಾಮಯ್ಯ, ನಾನು ಬಹಳ ವರ್ಷಗಳಿಂದ ನಿಮ್ಮ ವೈಯಕ್ತಿಕ ಬದುಕು, ಸಾರ್ವಜನಿಕ ಬದುಕನ್ನು ನೋಡುತ್ತಾ ಬಂದಿದ್ದೇನೆ. ನಿಮ್ಮ ಬಗ್ಗೆ ಎಳ್ಳಷ್ಟೂ ಅನುಮಾನ ಬರಲು ಸಾಧ್ಯವೇ ಇಲ್ಲ. ಅನುಮಾನ ಪಡುವ ಪ್ರಶ್ನೆಯೇ ಇಲ್ಲ. ಆದರೆ ಇದರ ಬಗ್ಗೆ ಚರ್ಚೆಯಾಗದೆ ಇದ್ದರೆ ಜನರಿಗೆ ಹೋಗುವ ಸಂದೇಶದಲ್ಲಿ ಅನುಮಾನ ಉಳಿದುಕೊಳ್ಳುತ್ತದೆ. ಜನರಿಂದ ಆಯ್ಕೆಯಾಗಿ ಬಂದ ನಮ್ಮ ನಡವಳಿಕೆ ಬಗ್ಗೆ ಜನರು ಏನಂತಾರೆ ಎನ್ನುವುದು ಬಹಳ ಮುಖ್ಯ. ಇಲ್ಲಿ ಚರ್ಚೆಯಾಗುವ ವಿಚಾರ ಸ್ಪಷ್ಟವಾಗಿದೆ. ಯಾರೋ ಮಾತನ್ನಾಡಿದ್ದಲ್ಲ ಇದು. ಸಂವಿಧಾನಾತ್ಮಕ ಜವಾಬ್ದಾರಿ ಇಲ್ಲದ, ಸದನಕ್ಕೆ ಸಂಬಂಧಿಸದವರು ಆಡಿರುವ ಮಾತು ಅಲ್ಲ ಇದು ಎಂದರು.

   ಯಾರೇ ಒಬ್ಬ ಸದಸ್ಯರು ಆಧಾರರಹಿತವಾಗಿ ನಿಮ್ಮ ಬಗ್ಗೆ ಮಾತನಾಡುವುದು ಸದನದ ನಿಂದನೆ. ಸದನದ ಹಕ್ಕುಚ್ಯುತಿಗೆ ಮಾಡಿದಂತೆ. ಎಮೋಷನಲ್ ವಿಚಾರ ಅಲ್ಲ ಇದು. ಸಾರ್ವಜನಿಕರಿಗೆ ಯಾವ ರೀತಿಯ ಸಂದೇಶ ಹೋಗಿದೆ ಅನ್ನುವುದು ಮುಖ್ಯ. ಅದರ ಸತ್ಯ ಹೊರಗೆ ಬರಲೇಬೇಕಾಗುತ್ತದೆ. ಅಗೌರವ ತರುವಂತೆ ಮಾತನಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಮುಖ್ಯ. ಇಡೀ ದೇಶಕ್ಕೆ ನಾವು ಉತ್ತರ ನೀಡಬೇಕಾಗುತ್ತದೆ. ಇಡೀ ಸಮಗ್ರವಾಗಿ ತನಿಖೆ ಆಗಬೇಕು. ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. ಮೊದಲ ನೋಟಕ್ಕೆ ಯಾರು ಮಾತನಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.

   ಸದನದ ಮರ್ಯಾದೆ ಉಳಿಸುವುದು ನಮ್ಮ ಕರ್ತವ್ಯ. ಈ ಬಗ್ಗೆ ನೀವು ತೀರ್ಮಾನ ತೆಗೆದುಕೊಳ್ಳಬೇಕು. ನಿಮ್ಮ ಆದೇಶ ಇತಿಹಾಸವಾಗಬೇಕು. ನಿಮ್ಮ ತೀರ್ಪು ದೇಶಕ್ಕೆ ಮಾದರಿಯಾಗಬೇಕು. ರಾಜೀನಾಮೆ ನೀಡುವ ಉದ್ದೇಶದ ಸುಳಿವು ಸಿಕ್ಕಿದೆ. ಭಾವುಕರಾಗಿ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಡಿಕೆ ಶಿವಕುಮಾರ್ ಹೇಳಿದರು.

   ಯಡಿಯೂರಪ್ಪ ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಸಿದ್ದರಾಮಯ್ಯ

   English summary
   Karnataka assembly speaker Ramesh Kumar went emotional during session on allegation of receiving Rs 50 crore to accept resignation.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more