• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
LIVE

Assembly Session Day 1 : ಕಲಾಪದಲ್ಲಿ ಅಬ್ಬರಿಸಿದ ವಿಪಕ್ಷ, ಸರ್ಕಾರಕ್ಕೆ ಸಂಕಟ

|

ಬೆಂಗಳೂರು, ಅಕ್ಟೋಬರ್ 10 : ರಾಜ್ಯದ ಭೀಕರ ಪ್ರವಾಹ ಪರಿಸ್ಥಿತಿ, ಉಪ ಚುನಾವಣೆ ಕಾವಿನ ನಡುವೆ ಮೂರು ದಿನಗಳ ವಿಧಾನಸಭೆ ಅಧಿವೇಶನ ಆರಂಭವಾಗಿದೆ. ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಅಸ್ತಿತ್ವಕ್ಕೆ ಬಂದ ಬಳಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.

ಗುರುವಾರ ಬೆಳಗ್ಗೆ 11 ಗಂಟೆಗೆ ಸಂತಾಪ ಸೂಚನೆಯೊಂದಿಗೆ ಕಲಾಪವನ್ನು ಆರಂಭಿಸಲಾಯಿತು. ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಿಲುವಳಿ ಸೂಚನೆ ಮಂಡಿಸಿದವು.

ಸಂತಾಪ ಸೂಚನೆ ಬಳಿಕ ಪ್ರವಾಹದ ಬಗ್ಗೆ ಚರ್ಚೆ ಆರಂಭಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಡಳಿ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ವಿಧಾನಸಭೆ ಅಧಿವೇಶನ; ಸರ್ಕಾರಕ್ಕೆ ಸಂಕಷ್ಟ ತರುವ ವಿಷಯಗಳು

ಅಧಿವೇಶನದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಕಲಾಪ ಮುಂದೂಡುವ ಸಂಪ್ರದಾಯವಿದೆ. ಆದರೆ, ಮೂರು ದಿನದ ಅಧಿವೇಶನ ಆದ್ದರಿಂದ ಸಂತಾಪ ಸೂಚನೆ ಬಳಿಕ ಕಲಾಪ ನಡೆಸಲು ಸ್ಫೀಕರ್ ಅವಕಾಶ ಮಾಡಿಕೊಟ್ಟರು.

Karnataka Assembly Session Day 1 LIVE Updates In Kannada

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಪ್ರವಾಹ ಪರಿಸ್ಥಿತಿ ಬಗ್ಗೆ ಸುಧೀರ್ಘವಾಗಿ ಮಾತನಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಕೈಗೊಂಡಿದ್ದ ಕಾರಣ ಜೆಡಿಎಸ್ ಸದಸ್ಯರ ಬಲ ಸದನದಲ್ಲಿ ಕಡಿಮೆ ಇತ್ತು.

ಅಧಿವೇಶನಕ್ಕೆ ಒಂದೇ ದಿನ ಬಾಕಿ! ಸವಾಲು ಎದುರಿಸಲು ಕಾಗೇರಿ ಸಮರ್ಥರೇ?

ಅಧಿವೇಶನ ವರದಿಗೆ ಖಾಸಗಿ ಮಾಧ್ಯಗಳಿಗೆ ನಿರ್ಬಂಧ ಹಾಕಿರುವ ವಿಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಪ್ರತಿಪಕ್ಷಗಳು ಮಾಧ್ಯಮಗಳನ್ನು ದೂರವಿಟ್ಟು ಸದನ ನಡೆಸುವ ಸರ್ಕಾರದ ತೀರ್ಮಾನವನ್ನು ಖಂಡಿಸಿದವು.

ಅಧಿವೇಶನಕ್ಕೆ ಮಾಧ್ಯಮ ನಿಷೇಧ; ಆದೇಶದಲ್ಲಿ ಏನಿದೆ?

ಗುರುವಾರದ ಕಲಾಪದ ಅಂತ್ಯದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮೂರು ದಿನದ ಕಲಾಪವನ್ನು ವಿಸ್ತರಣೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಸ್ಪೀಕರ್ ಇದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಅಂತಿಮವಾಗಿ ಕಲಾಪವನ್ನು ಶುಕ್ರವಾರ ಬೆಳಗ್ಗೆ 10ಗಂಟೆಗೆ ಮೂಂದೂಡಲಾಯಿತು. ಗುರುವಾರದ ಕಲಾಪದ ಕ್ಷಣ-ಕ್ಷಣ ಮಾಹಿತಿ ಇಲ್ಲಿದೆ.

Newest First Oldest First
6:50 PM, 10 Oct
ಸಭಾನಾಯಕರ ಸಲಹೆಯಂತೆ ಸಭಾಧ್ಯಕ್ಷರು ಕಲಾಪವನ್ನು ನಾಳೆ ಬೆಳಿಗ್ಗೆ 10 ಗಂಟೆಗೆ ಮುಂದೂಡಿದರು. ನಾಳೆ ಸಿದ್ದರಾಮಯ್ಯ ಅವರು ಮಾತು ಆರಂಭಿಸಲಿದ್ದಾರೆ.
6:50 PM, 10 Oct
ಸಭಾಧ್ಯಕ್ಷರ ನಿರ್ಣಯವನ್ನು ವಿರೋಧಿಸಿ ವಿಪಕ್ಷಗಳು ಸಭಾತ್ಯಾಗ ಮಾಡಿದವು. ಸಭಾತ್ಯಾಗದ ನಂತರ ಮಾತನಾಡಿದ ಸಭಾನಾಯಕ ಯಡಿಯೂರಪ್ಪ ಅವರು, ನಾಳೆ ಹತ್ತು ಗಂಟೆಗೆ ಕಲಾಪ ಮುಂದೂಡಿ, ಮಧ್ಯಾಹ್ನಕ್ಕೆ ಎಲ್ಲರೂ ಮಾತನಾಡಿ ಮುಗಿಸುವಂತೆ ಮಾಡಿ ಎಂದು ಯಡಿಯೂರಪ್ಪ ಸಲಹೆ ನೀಡಿದರು.
6:48 PM, 10 Oct
ಚರ್ಚೆ ಆಲಿಸಿದ ಸಭಾಧ್ಯಕ್ಷ ಕಾಗೇರಿ ಅವರು, ಯಡಿಯೂರಪ್ಪ ಅವರ ಇಚ್ಛೆಯ ರೀತಿಯಲ್ಲಿ ಇಂದೇ ಎರಡು ಗಂಟೆ ಕಾಲ ವಿಪಕ್ಷದ ಸದಸ್ಯರು ಮಾತನಾಡಬೇಕು ಎಂದು ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಮತ್ತೆ ಆಕ್ಷೇಪ ಎತ್ತಿದರು.
6:46 PM, 10 Oct
ಎಷ್ಟು ದಿನಗಳ ಕಾಲ ಸದನ ನಡೆಯಬೇಕು, ಸದನ ಇಂದು ಮುಗಿಯಬೇಕು, ನಾಳೆಗೆ ಮುಂದೂಡಬೇಕು ಎಂಬ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ನಾಳೆಗೆ ಸದನ ಮುಂದುವರೆಸಬೇಕು, ಒಂದು ದಿನವಾದರೂ ಕಲಾಪದ ಅವಧಿ ವಿಸ್ತರಿಸಬೇಕು ಎಂಬುದು ಸಿದ್ದರಾಮಯ್ಯ ಪಟ್ಟಾದರೆ. ಬೇಡ ಇಂದೇ ಕನಿಷ್ಟ ಎರಡು ತಾಸಾದರೂ ಮಾತನಾಡಲಿ ಅಧಿವೇಶನವನ್ನು ಶನಿವಾರವೇ ಮುಗಿಸಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ.
6:00 PM, 10 Oct
ಕಲಾಪವನ್ನು ನಾಳೆಗೆ ಮುಂದೂಡಬೇಕು ಮತ್ತು ನೆರೆ ವಿಷಯದ ಬಗ್ಗೆ ಚರ್ಚೆ ಮಾಡಲು ನಾಳೆಯೂ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯ ಮಾಡುತ್ತಿದ್ದಾರೆ. ಆದರೆ ಸ್ಪೀಕರ್ ಅವರು ಇದಕ್ಕೆ ಒಪ್ಪದೆ, ಸಿದ್ದರಾಮಯ್ಯ ಇಂದೇ ಹೆಚ್ಚು ಸಮಯ ತೆಗೆದುಕೊಂಡು ಮಾತನಾಡಲಿ ಎಂದು ಸೂಚಿಸಿದರು. ಆದರೆ ಇದಕ್ಕೆ ಸಿದ್ದರಾಮಯ್ಯ ಒಪ್ಪುತ್ತಿಲ್ಲ.
5:52 PM, 10 Oct
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ತಮಗೆ ಮಾತನಾಡಲು ಅವಕಾಶ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಅಧಿವೇಶನವನ್ನು ಬೇಕೆಂದೇ ಮೊಟಕು ಮಾಡಿದ್ದೀರಿ, ಉದ್ದೇಶಪೂರ್ವಕವಾಗಿ ನಮ್ಮ ಹಕ್ಕು ಮೊಟಕು ಮಾಡುತ್ತಿದ್ದೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಸದನವನ್ನು ಒಂದು ವಾರ ವಿಸ್ತರಣೆ ಮಾಡಿ ಎಂದು ಶಿವಲಿಂಗೇಗೌಡ ಒತ್ತಾಯಿಸಿದರು.
5:49 PM, 10 Oct
ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ತಮಗೆ ಮಾತನಾಡಲು ಅವಕಾಶ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ.
5:18 PM, 10 Oct
ನೆರೆಯಲ್ಲಿ ಜಮೀನು ಆಸ್ತಿ ಕಳೆದುಕೊಂಡ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳಿಗೆ ನಷ್ಟ ಪರಿಹಾರ ನೀಡಿಲ್ಲವೆಂದು ಸಿದ್ದರಾಮಯ್ಯ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಪರಿಹಾರ ನಿಯಮಗಳು ಅಡ್ಡಿ ಬರುತ್ತಿವೆ, ಆದರೆ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಐದು ಲಕ್ಷ ನೀಡುತ್ತಿದ್ದೇವೆ ಎಂದು ಸಚಿವ ಸಿಟಿ ರವಿ ಹೇಳಿದರು.
4:59 PM, 10 Oct
ರೇವಣ್ಣ ಅವರನ್ನು ಸಿದ್ದರಾಮಯ್ಯ ಅವರು ನಿಂಬೆಹಣ್ಣು ಕೇಳಿ ಸದನವನ್ನು ನಗೆಗಡಲಲ್ಲಿ ತೇಲಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಸ್ಪೀಕರ್ ಅವರು, 'ನಮಗೆ ಬಂದ ಮಾಹಿತಿ ಪ್ರಕಾರ ರೇವಣ್ಣ ಅವರೇ ನಿಮಗೆ ನಿಂಬೆ ಹಣ್ಣು ನೀಡಿದ್ದಾರಂತೆ' ಎಂದು ಹೇಳಿದರು.
4:54 PM, 10 Oct
ಬಿಸಿ-ಬಿಸಿ ಚರ್ಚೆಯ ನಡುವೆ ಸ್ವಲ್ಪ ತಮಾಷೆಯನ್ನೂ ಮಾಡಿದ ಸಿದ್ದರಾಮಯ್ಯ ಅವರು, ಆರ್.ಅಶೋಕ್ ಅವರ ಕಾಲೆಳೆದರು. ಅವರು ಮಾಜಿ ಡಿಸಿಎಂ ಆಗಿದ್ದರು ಅದಕ್ಕೆ ಮರ್ಯಾದೆ ಕೊಟ್ಟು ಕೂತುಕೊಂಡೆ ಎಂದರು. ಸಭಾಧ್ಯಕ್ಷರ ಕಾಲೆಳೆದ ಸಿದ್ದರಾಮಯ್ಯ, 'ನೀವು ಮಂತ್ರಿ ಆಗುವ ಆಸೆಯಲ್ಲಿದ್ದಿರಿ ಆದರೆ ಸ್ಪೀಕರ್ ಆಗಿಬಿಟ್ಟಿರಿ, ಅವರನ್ನು (ಬಿಜೆಪಿ) ಯನ್ನು ನಂಬಿದರೆ ಹಾಗೆಯೇ ಆಗುತ್ತೆ ನಮ್ಮ ಕಡೆ ಬಂದುಬಿಡಿ, ನಾವಿಬ್ಬರು ಚೆನ್ನಾಗಿ ಇರೋಣ' ಎಂದು ಹೇಳಿದರು.
4:36 PM, 10 Oct
ಎಂ.ಬಿ.ಪಾಟೀಲ್ ಮಧ್ಯೆ ಎದ್ದು ನಿಂತು, '2009 ರಲ್ಲಿ ನಿರ್ಮಿಸಿಕೊಟ್ಟ ಮನೆಗಳು ಸೂಕ್ತವಾದ ಮನೆಗಳಲ್ಲಿ ದಾನಿಗಳ ಕೊಟ್ಟ ಜಾಗದಲ್ಲಿ ಕಡಿಮೆ ಹಣದಲ್ಲಿ ಮನೆ ಕಟ್ಟಿಕೊಡಲಾಗಿದೆ. ಆಗ ಕಟ್ಟಿಕೊಟ್ಟ ಮನೆಗಳಿಗೆ ನೀರು, ಶೌಚಾಲಯ ಮತ್ತಿತರೆ ವ್ಯವಸ್ಥೆಗಳು ಸೂಕ್ತವಾಗಿಲ್ಲ' ಎಂದು ಅವರು ಹೇಳಿದರು.
4:34 PM, 10 Oct
ಸರ್ಕಾರ 38000 ಕೋಟಿ ನಷ್ಟವಾಗಿದೆ ಎಂದು ಹೇಳಿದೆ. ಆದರೆ ನನ್ನ ಅಂದಾಜಿನ ಪ್ರಕಾರ ಒಂದು ಲಕ್ಷಕೋಟಿಗೂ ಹೆಚ್ಚು ನಷ್ಟವಾಗಿದೆ. ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಲು ಹೋದಾಗ ಅವರ ಬೇಡಿಕೆ ಒಂದೇ ನಮ್ಮನ್ನು ಸ್ಥಳಾಂತರ ಮಾಡಿ ಎಂದು ಕೇಳುತ್ತಿದ್ದಾರೆ- ಸಿದ್ದರಾಮಯ್ಯ
4:33 PM, 10 Oct
ಇದಕ್ಕೆ ಪ್ರತಿಯಾಗಿ ಮಾತನಾಡಿದ ಸಿದ್ದರಾಮಯ್ಯ, ಹಣದ ಮೌಲ್ಯ ಎಲ್ಲಬಾರಿಯೂ ಒಂದೇ ಇರುವುದಿಲ್ಲ. ನಾನು ಮೊದಲ ಬಜೆಟ್ ಅನ್ನು ಒಂದು ಲಕ್ಷ ಕೋಟಿಗೆ ಮಂಡಿಸಿದ್ದೆ, ಕೊನೆಯ ಬಜೆಟ್ ಅನ್ನು 2 ಲಕ್ಷ ಕೋಟಿಗೆ ಮಂಡಿಸಿದ್ದೆ. ಯುಪಿಎ ಹತ್ತು ವರ್ಷದ ಹಿಂದೆ ಕೊಟ್ಟಿದ್ದ ಎರಡು ಸಾವಿರ ಕೋಟಿಯ ಮೌಲ್ಯ ಈಗಿನ ಎಂಟು ಸಾವಿರ ಕೋಟಿ ಮೌಲ್ಯಕ್ಕಿಂತಲೂ ದೊಡ್ಡದು ಎಂದು ಹೇಳಿದರು.
4:31 PM, 10 Oct
ಕಂದಾಯ ಸಚಿವ ಆರ್.ಅಶೋಕ್ ಅವರು ಮಾತನಾಡಿ, ಯುಪಿಎ ಅವಧಿಯಲ್ಲಿ ಹೆಚ್ಚು ಅನುದಾನ ರಾಜ್ಯಕ್ಕೆ ಬಂದಿಲ್ಲ. ಎನ್‌ಡಿಎ ಅವಧಿಯಲ್ಲಿ 8000 ಕೋಟಿ ಅನುದಾನ ಬಂದಿದೆ. ಯುಪಿಎ ಅವಧಿಯಲ್ಲಿ 2000 ಕೋಟಿ ಗೂ ಸ್ವಲ್ಪ ಹೆಚ್ಚು ಆಗಿದೆ ಎಂದು ಹೇಳಿದರು.
4:24 PM, 10 Oct
2009 ರಲ್ಲಿ ಪ್ರವಾಹದಿಂದ 7600 ಕೋಟಿ ನಷ್ಟವಾಗಿದೆ ಎಂದು ಯಡಿಯೂರಪ್ಪ ಹೇಳಿದ್ದರು, ಆಗ ಮನಮೋಹನ್ ಸಿಂಗ್ ಅವರು 1600 ಕೋಟಿ ಕೊಟ್ಟರು. ಈ ಬಾರಿ ಯಡಿಯೂರಪ್ಪ ಅವರೇ ಹೇಳಿರುವ ಪ್ರಕಾರ 38,000 ಕೋಟಿ ನಷ್ಟವಾಗಿದೆ ಎಂದು ಹೇಳಿದ್ದಾರೆ ಆದರೆ ಕೊಟ್ಟಿರುವುದು 1200 ಕೋಟಿ ಅಷ್ಟೆ ಎಂದು ಹೇಳಿದರು.
4:22 PM, 10 Oct
2005 ರಲ್ಲಿ ನೆರೆ ಬಂದಿದ್ದಾಗ ಮನಮೋಹನ್ ಸಿಂಗ್ ಅವರು ಐನೂರು ಕೋಟಿ ಹಣವನ್ನು ತತ್‌ಕ್ಷಣಕ್ಕೆ ಬಿಡುಗಡೆ ಮಾಡಿದ್ದರು. ನಂತರ 2009 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ನೆರೆ ಬಂತು ಅಂದು ಸಿಂಗ್ ರಾಜ್ಯಕ್ಕೆ ಬಂದು 1600 ಕೋಟಿ ಘೋಷಣೆ ಮಾಡಿದರು ಎಂದು ಸಿದ್ದರಾಮಯ್ಯ ಇತಿಹಾಸ ನೆನಪಿಸಿದರು.
12:49 PM, 10 Oct
ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆಯ ಬಳಿಕ 2 ಗಂಟೆಗೆ ಮತ್ತೆ ಕಲಾಪ ಮುಂದುವರೆಯಲಿದೆ.
12:45 PM, 10 Oct
ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆಯ ಬಳಿಕ ಮತ್ತೆ ಕಲಾಪ ಮುಂದುವರೆಯಲಿದೆ.
12:44 PM, 10 Oct
ವರದಿ ಓದಿದ ನಂತರ ಸದನ ಕಾರ್ಯಕಲಾಪ ಸಲಹಾ ಸಮಿತಿ ಸಭೆ ಇದ್ದು ಸಭೆಗೆ ಹಾಜರಾಗಿ ಕಲಾಪ ಹೇಗೆ ನಡೆಯಬೇಕೆಂದು ಚರ್ಚಿಸಬೇಕು ಎಂದು ಸಭಾಧ್ಯಕ್ಷ ಕಾಗೇರಿ ಹೇಳಿ ವಿಪಕ್ಷಗಳ ಪ್ರತಿಭಟನೆಯನ್ನು ಲೆಕ್ಕಿಸದೆ ಸದನದಿಂದ ಹೊರನಡೆದರು.
12:41 PM, 10 Oct
'ಶೇಮ್, ಶೇಮ್' ಘೋಷಣೆಗಳನ್ನು ಕಾಂಗ್ರೆಸ್‌ನ ನಾಯಕರು ಕೂಗುತ್ತಿದ್ದಾರೆ. ಇದಕ್ಕೆ ಜೆಡಿಎಸ್‌ನ ಶಾಸಕರೂ ಸಹ ಸೇರಿಕೊಂಡಿದ್ದಾರೆ. ವರದಿ ಓದುತ್ತಿರುವ ಮಧ್ಯೆಯೂ ಸಿದ್ದರಾಮಯ್ಯ ಅವರು ಪ್ರತಿಭಟನೆ ಮುಂದುವರೆಸಿದ್ದಾರೆ. ಸಭಾಧ್ಯಕ್ಷರು ಸರ್ಕಾರದೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
12:39 PM, 10 Oct
ಸಭಾಧ್ಯಕ್ಷರ ಸೂಚನೆಯಂತೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಸಚಿವರು ವಾರ್ಷಿಕ ವರದಿ ಓದಲು ಪ್ರಾರಂಭಿಸಿದ್ದಾರೆ. ಆದರೆ ವಿಪಕ್ಷಗಳು ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. 'ಅಧಿವೇಶನದಲ್ಲಿ ವಿರೋಧ ಪಕ್ಷದ ಹಕ್ಕನ್ನು ಕಿತ್ತುಕೊಳ್ಳಲಾಗಿದೆ' ಎಂದು ಸಿದ್ದರಾಮಯ್ಯ, ಕೃಷ್ಣಬೈರೇಗೌಡ ಸೇರಿ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
12:37 PM, 10 Oct
ನಿಲುವಳಿಗೆ ಸಂಬಂಧಪಟ್ಟಂತೆ ಚರ್ಚೆಗೆ ಸಭಾಧ್ಯಕ್ಷರು ಅನುಮತಿ ನೀಡಲಿಲ್ಲ ಇದಕ್ಕೆ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಭಾಧ್ಯಕ್ಷರು ಪ್ರಜಾಪ್ರಭುತ್ವವನ್ನು ಗಲ್ಲಿಗೇರಿಸುತ್ತಿದ್ದಾರೆ, ವಿಪಕ್ಷಗಳಿಗೆ ಇರುವ ಹಕ್ಕನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ಪ್ರಾರಂಭಿಸಿದರು.
12:27 PM, 10 Oct
ವಿಧಾನಸಭೆ ನಿಯಮವಾಳಿಗಳನ್ನು ಉಲ್ಲೇಖಿಸಿದ ಕೃಷ್ಣಬೈರೇಗೌಡ, 'ಶೂನ್ಯ ವೇಳೆಯ ನಂತರ ಕಾರ್ಯಕ್ರಮಗಳ ಪಟ್ಟಿಗೆ ಮೊದಲೇ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ನೀಡಬಹುದಾಗಿದೆ' ಎಂದು ಹೇಳಿದರು.
12:23 PM, 10 Oct
ಅಜೆಂಡಾ ಪ್ರಕಾರವೇ ಕಲಾಪ ನಡೆಯಲಿ ಎಂದು ಬಿಜೆಪಿ ಪಟ್ಟು ಹಿಡಿದಿದ್ದಾರೆ. ಯಡಿಯೂರಪ್ಪ ಅವರೂ ಸಹ ವಿಪಕ್ಷಗಳಿಗೆ ಭರವಸೆ ನೀಡಿದ್ದು, ಪ್ರವಾಹದ ಬಗ್ಗೆ ಚರ್ಚೆ ಮಾಡೋಣ ಆದರೆ ಈಗ ಅಜೆಂಡಾ ಪ್ರಕಾರ ಕಲಾಪ ನಡೆಯಲಿ ಎಂದು ಹೇಳಿದರು.
12:21 PM, 10 Oct
ತಾವು ಸಲ್ಲಿಸಿರುವ ನಿಲುವಳಿ ನಿರ್ಣಯವನ್ನು ಮೊದಲಿಗೆ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಹಠ ಹಿಡಿದಿದ್ದಾರೆ. ಆದರೆ ಸಭಾಧ್ಯಕ್ಷರು ಕಾರ್ಯದರ್ಶಿ ಅವರು ವರದಿಯನ್ನು ಸಲ್ಲಿಸಬೇಕೆಂದು ಸಭಾಧ್ಯಕ್ಷರು ಆತುರ ತೋರುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹಠ ಬಿಡುತ್ತಿಲ್ಲ. ಜೆಡಿಎಸ್‌ನವರೂ ಸಹ ನಿಲುವಳಿ ಮಂಡಿಸಿದ್ದಾರೆ.
11:47 AM, 10 Oct
ಸಚಿವೆ ಶಶಿಕಲಾ ಜೊಲ್ಲೆ ಅವರು ಸುಷ್ಮಾ ಸ್ವರಾಜ್ ಅವರ ಕುರಿತು ನೆನಪುಗಳನ್ನು ಹಂಚಿಕೊಂಡರು. ಅವರೊಂದಿಗೆ ಇಂದ ಆತ್ಮೀಯ ಸಂಬಂಧದ ಬಗ್ಗೆ ಜೊಲ್ಲೆ ಅವರು ನೆನಪು ಮಾಡಿಕೊಂಡರು.
11:42 AM, 10 Oct
ಬಿಜೆಪಿ ಮೊದಲ ರಾಜ್ಯಾಧ್ಯಕ್ಷ ಎ.ಕೆ.ಸುಬ್ಬಯ್ಯ ಅವರ ಬಗ್ಗೆ ಹಲವು ವಿಷಯಗಳನ್ನು ರಮೇಶ್ ಕುಮಾರ್ ಪ್ರಸ್ತಾಪಿಸಿದರು. ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷರಾಗಿದ್ದರೂ ಸಹ ಸುಬ್ಬಯ್ಯನವರು ಆ ನಂತರ ಬಿಜೆಪಿಯ ಕಡು ವೈರಿಯಾದರು.
11:39 AM, 10 Oct
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸಂತಾಪ ಸೂಚಕ ಭಾಷಣ ಆರಂಭಿಸಿದ್ದು, ಇತ್ತೀಚೆಗೆ ನಿಧನ ಹೊಂದಿದ ರಾಮ್‌ಜೇಟ್‌ಮಲಾನಿ ಅವರ ಬಗ್ಗೆ ಸ್ವಾರಸ್ಯಕರ ವಿಷಯವೊಂದನ್ನು ಹೇಳಿದರು. ಜೊತೆಗೆ ಎ.ಕೆ.ಸುಬ್ಬಯ್ಯ ಅವರ ಹೆಸರು ಸಂತಾಪ ಸೂಚಕ ಪಟ್ಟಿಯಲ್ಲಿದ್ದೇ ಇದ್ದುದರ ಬಗ್ಗೆಯೂ ಆಕ್ಷೇಪ ಎತ್ತಿ ಎ.ಕೆ.ಸುಬ್ಬಯ್ಯ ಅವರಿಗೆ ಸಂತಾಪ ಸೂಚಿಸಿದರು.
11:35 AM, 10 Oct
ಸಿದ್ದರಾಮಯ್ಯ ಅವರು ಸಂತಾಪ ಸೂಚನೆ ಭಾಷಣ ಮುಗಿಸಿದ್ದು, ಆರ್.ವಿ.ದೇಶಪಾಂಡೆ ಅವರು ಭಾಷಣ ಆರಂಭಿಸಿದ್ದಾರೆ.
11:19 AM, 10 Oct
ವಿಧಾನಸಭೆ ಕಲಾಪ ಆರಂಭವಾಗಿದ್ದು ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನಿರ್ಣಯ ನಡೆಯುತ್ತಿದೆ. ಸಿಎಂ ಯಡಿಯೂರಪ್ಪ ಅವರು ಪ್ರಸ್ತಾಪಿಸಿದ ಸಂತಾಪ ಸೂಚಕ ನಿರ್ಣಯ ತಂದಿದ್ದು, ಸಿದ್ದರಾಮಯ್ಯ ಅವರು ಇದಕ್ಕೆ ಒಪ್ಪಿಗೆ ನೀಡಿ ಸಂತಾಪ ಸೂಚನೆ ಆರಂಭಿಸಿದ್ದಾರೆ.
READ MORE

English summary
Karnataka assembly session Day 1 live updates. Government in hurry to close session as soon as possible without any debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more