ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊರು ಬಿಟ್ಟು ಬೆಂಗ್ಳೂರಿಗ್ ಬಂದು ವೋಟ್ ಹಾಕೋಕಾಯ್ತದಾ?

|
Google Oneindia Kannada News

ಬೆಂಗಳೂರು, ಮೇ 11: ವಾರಾಂತ್ಯ ಬಂತೆಂದರೆ ಊರ ದಾರಿಯನ್ನು ತಲುಪಿಸುವ ಬಸ್‌ಗಳೆಲ್ಲ ತುಂಬಿಕೊಳ್ಳುತ್ತದೆ. ಹಬ್ಬಹರಿದಿನಗಳಲ್ಲಂತೂ ಮನೆ ಸೇರಿಕೊಂಡು ಸಂಭ್ರಮಿಸುವುದೇನೋ ಸರಿ. ಆದರೆ, ಊರಿಗೆ ಹೊರಡುವ ತವಕದ ಹಿಂದಿರುವ ಸಂಕಟ ಅನುಭವಿಸಿದವರಿಗೇ ಗೊತ್ತು.

ಬೃಹತ್ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಇರುವವರು ವಲಸಿಗರು. ರಾಜ್ಯದ ವಿವಿಧ ಭಾಗಗಳಿಂದ ಬಂದ ಆಂತರಿಕ ವಲಸಿಗರಂತೆಯೇ ವಿವಿಧ ರಾಜ್ಯಗಳಿಂದ ಉದ್ಯೋಗಕ್ಕಾಗಿ ಬಂದ ವಲಸಿಗರೂ ಇದ್ದಾರೆ. ಇವರೆಲ್ಲ ತಮ್ಮೂರಿನ ಬಸ್, ರೈಲು ಹತ್ತಿದರೆಂದರೆ ಬೆಂಗಳೂರೆಂಬ ಮಹಾನಗರಿ ಖಾಲಿ ಖಾಲಿ!

ಮತದಾನಕ್ಕಾಗಿ ಊರಿಗೆ ಹೊರಟವರು ಬಸ್ ದರ ಕೇಳಿಯೇ ಸುಸ್ತಾದ್ರು! ಮತದಾನಕ್ಕಾಗಿ ಊರಿಗೆ ಹೊರಟವರು ಬಸ್ ದರ ಕೇಳಿಯೇ ಸುಸ್ತಾದ್ರು!

ಯುಗಾದಿ, ಗೌರಿ ಗಣೇಶ, ದಸರಾ, ದೀಪಾವಳಿ ಹೀಗೆ ಹಬ್ಬದ ಸಂದರ್ಭಗಳಲ್ಲಿ ಸಾಲು ಸಾಲು ರಜೆಗಳನ್ನು ಹಾಕಿ ತವರೂರಿನ ದಿಕ್ಕು ಹಿಡಿಯುವ ಜನರಿಗೆ ಊರು ತಲುಪಲು ಬಸ್ ಹಿಡಿಯುವುದೇ ದೊಡ್ಡ ಸವಾಲು. ವಾರಾಂತ್ಯಕ್ಕೆ ಚುನಾವಣೆ ಬಂದಿರುವಾಗ ಮತ ಚಲಾಯಿಸಲು ಊರಿಗೆ ಹೋಗದಿದ್ದರೆ ಹೇಗೆ? ಮತ ಹಾಕುವ ಹಕ್ಕನ್ನೂ ಚಲಾಯಿಸಬಹುದು, ವಾರಾಂತ್ಯದ ರಜೆಯನ್ನೂ ಊರಿನಲ್ಲಿ ಕುಟುಂಬ ಮತ್ತು ಸ್ನೇಹಿತರ ನಡುವೆ ಕಳೆಯಬಹುದು ಎಂಬ ಲೆಕ್ಕಾಚಾರದಲ್ಲಿ ಜನರು ಊರಿನತ್ತ ದೌಡಾಯಿಸುತ್ತಿದ್ದಾರೆ.

ವೇತನ ಇಲ್ಲಿ, ಮತದಾನ ಅಲ್ಲಿ!

ವೇತನ ಇಲ್ಲಿ, ಮತದಾನ ಅಲ್ಲಿ!

ಕೆಲಸಕ್ಕಾಗಿ ಬೆಂಗಳೂರಿನತ್ತ ಮುಖ ಮಾಡುವ ರಾಜ್ಯದ ವಿವಿಧ ಭಾಗಗಳ ಜನರು ತಮ್ಮನ್ನು ಬೆಂಗಳೂರಿಗರೆಂದು ಗುರುತಿಸಿಕೊಳ್ಳಲು ಬಯಸುವುದಿಲ್ಲ. ಹುಟ್ಟಿಬೆಳೆದ ಊರಿನೆಡೆಗಿನ ಪ್ರೀತಿ ಸದಾ ಅತ್ತ ಸೆಳೆಯುತ್ತಿರುತ್ತದೆ. ಹತ್ತಾರು ವರ್ಷ ಬೆಂಗಳೂರಿನಲ್ಲಿ ಕಳೆದಿದ್ದರೂ, ಮತ ಚಲಾಯಿಸುವ ಹಕ್ಕನ್ನು ಊರಿನಲ್ಲೇ ಉಳಿಸಿಕೊಂಡಿರುತ್ತಾರೆ. ಊರಿನ ಅಭಿವೃದ್ಧಿ, ರಾಜಕೀಯ ಬೆಳವಣಿಗೆಗಳ ಮೇಲೆ ಸದಾ ಕಣ್ಣಿಟ್ಟಿರುತ್ತಾರೆ. ಬದುಕಿಗೆ ನೆಲೆ ಕಂಡುಕೊಳ್ಳುವುದು ಮಹಾನಗರಿಯಲ್ಲಿ ಆದರೂ, ಭಾವನಾತ್ಮಕವಾಗಿ ತವರಿನ ನಂಟನ್ನು ಬಿಟ್ಟುಕೊಳ್ಳಲು ಬಯಸುವುದಿಲ್ಲ.

ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ

ಊರ ದಾರಿ ನೋಡಲು ಬಸ್‌ಗಳಿಲ್ಲ

ಊರ ದಾರಿ ನೋಡಲು ಬಸ್‌ಗಳಿಲ್ಲ

ಮೆಜೆಸ್ಟಿಕ್‌ನ ವಿಶಾಲ ಅಂಗಳದತ್ತ ಮತದಾರರ ಪ್ರವಾಹ ಹರಿದುಹೋಗುತ್ತಿದೆ. ಜನರೇನೋ ಕಿಕ್ಕಿರಿದು ತುಂಬಿಕೊಳ್ಳುತ್ತಿದ್ದಾರೆ. ಆದರೆ ಅಲ್ಲಿ ಬಸ್‌ಗಳಿಲ್ಲ. ತಮ್ಮೂರಿನ ಬೋರ್ಡು ಹೊತ್ತಿರುವ ಬಸ್ ಎಲ್ಲಾದರೂ ಬಂದೀತೇ ಎಂದು ಹುಡುಕಾಟದಲ್ಲಿದ್ದಾರೆ. ಹಬ್ಬದ ದಿನಗಳಂದು ಹೆಚ್ಚುವರಿ ಬಸ್‌ಗಳನ್ನು ಬಿಡಲಾಗುತ್ತದೆ. ಆದರೆ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಂಡಿರುವುದರಿಂದ ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಮತದಾರ ಪ್ರಭುಗಳ ಪರದಾಟ ಹೆಚ್ಚಾಗಿದೆ.

ಮತದಾನಕ್ಕೆ ಊರಿನೆಡೆಗೆ ತೆರಳಲು ಸಿದ್ಧತೆ: ಬಸ್ ಸೀಟುಗಳು ಫುಲ್!ಮತದಾನಕ್ಕೆ ಊರಿನೆಡೆಗೆ ತೆರಳಲು ಸಿದ್ಧತೆ: ಬಸ್ ಸೀಟುಗಳು ಫುಲ್!

ಮೊದಲೇ ಬುಕ್ಕಿಂಗ್

ಮೊದಲೇ ಬುಕ್ಕಿಂಗ್

ಮತ ಚಲಾಯಿಸುವ ಹಕ್ಕನ್ನು ಯಾವ ಕಾರಣಕ್ಕೂ ಬಿಡಬಾರದು ಎಂದು ಮೊದಲೇ ತೀರ್ಮಾನಿಸಿದ್ದವರು ಹಲವು ದಿನಗಳ ಹಿಂದೆಯೇ ಊರಿನ ಬಸ್‌ ಮತ್ತು ರೈಲುಗಳ ಟಿಕೆಟ್ ಬುಕ್ ಮಾಡಿಕೊಂಡಿದ್ದಾರೆ. ರಜೆ ಖಾತರಿಯಿಲ್ಲದ ಅನೇಕ ಖಾಸಗಿ ಕಂಪೆನಿಗಳ ಉದ್ಯೋಗಿಗಳಿಗೆ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗಿರಲಿಲ್ಲ. ಕೊನೆಯ ಕ್ಷಣದಲ್ಲಿ ಟಿಕೆಟ್ ಬುಕ್‌ ಮಾಡಲು ಬಸ್‌ ಮತ್ತು ರೈಲುಗಳಲ್ಲಿ ಜಾಗವೇ ಇಲ್ಲ.

ಬಲು ದುಬಾರಿ ಪ್ರಯಾಣ

ಬಲು ದುಬಾರಿ ಪ್ರಯಾಣ

ಬಸ್‌ ಟಿಕೆಟ್ ಬೆಲೆ ವಾರಾಂತ್ಯದಲ್ಲಿ ತುಸು ಹೆಚ್ಚಾಗುವುದು ಸಹಜ. ಸಾಮಾನ್ಯ ದಿನಗಳಲ್ಲಿ 500-600 ರೂಪಾಯಿ ದರ, ವಾರಾಂತ್ಯದಲ್ಲಿ 650-700ಕ್ಕೆ ಮುಟ್ಟುತ್ತದೆ. ಆದರೆ, ಚುನಾವಣೆಯ ಸಲುವಾಗಿ ಜನ ಸಿಕ್ಕ ಬಸ್ ಏರುವುದು ಅನಿವಾರ್ಯ. ಹೀಗಾಗಿ ಖಾಸಗಿ ಬಸ್‌ಗಳು ಮನಬಂದಂತೆ ದರ ಏರಿಸುತ್ತಿವೆ. 1,500-2000 ರೂಪಾಯಿ ತೆತ್ತು ಹೊರಡುತ್ತಿದ್ದಾರೆ. ಈ ಬಸ್ ಬಿಟ್ಟರೆ ಮತ್ತೊಂದು ಸಿಗುವುದಿಲ್ಲ ಎಂಬ ಆತಂಕ ಅವರದು. ಈ ಕಾರಣಕ್ಕಾಗಿಯೇ ಮತಹಾಕುವ ಬಯಕೆ ಇದ್ದರೂ ಕೆಲವರು ಊರಿಗೆ ತೆರಳುವ ಆಲೋಚನೆಯನ್ನೇ ಕೈಬಿಟ್ಟಿದ್ದಾರೆ.

ಟ್ಯಾಕ್ಸಿಗಳಿಗೂ ಬೇಡಿಕೆ

ಟ್ಯಾಕ್ಸಿಗಳಿಗೂ ಬೇಡಿಕೆ

ಸ್ವಂತ ವಾಹನವುಳ್ಳವರು ಬಸ್‌, ರೈಲುಗಳ ಸಹವಾಸವೇ ಬೇಡ ಎಂದು ಕುಟುಂಬದವರು, ಸ್ನೇಹಿತರನ್ನು ಸೇರಿಸಿಕೊಂಡು ಮತಚಲಾಯಿಸಲು ಹೋಗುತ್ತಿದ್ದಾರೆ. ಇನ್ನು ಅನೇಕರು ಸಾವಿರಾರು ರೂಪಾಯಿ ತೆತ್ತರೂ ಬಸ್‌ಗಳು ಸಿಗುವುದಿಲ್ಲ ಎಂಬ ಕಾರಣಕ್ಕೆ, ಟ್ಯಾಕ್ಸಿಗಳ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಬಸ್‌ ಟಿಕೆಟ್‌ಗೆ ಹಣ ತೆರುವುದಕ್ಕಿಂತಲೂ ನಾಲ್ಕೈದು ಜನರು ಒಟ್ಟಿಗೆ ಟ್ಯಾಕ್ಸಿ ಮಾಡಿಕೊಂಡು ಹೋಗುವುದು ಅಗ್ಗ ಎನ್ನುವುದು ಅನೇಕರ ಅಭಿಪ್ರಾಯ. ನಾಲ್ಕೈದು ಜನರು ಸೇರಿಕೊಂಡು ಖಾಸಗಿ ವಾಹನದಲ್ಲಿ ಹೊರಡುವುದೇ ಅವರಿಗೆ ಅನುಕೂಲಕರವಾಗಿ ಕಂಡಿದೆ. ಆದರೆ, ಚುನಾವಣಾ ಕಾರ್ಯಕ್ಕಾಗಿ ಖಾಸಗಿ ವಾಹನಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಖಾಸಗಿ ವಾಹನಗಳು ಸಹ ಸುಲಭವಾಗಿ ಲಭ್ಯವಾಗುತ್ತಿಲ್ಲ.

ಬನ್ನಿ ಖರ್ಚು ಕೊಡುತ್ತೇವೆ!

ಬನ್ನಿ ಖರ್ಚು ಕೊಡುತ್ತೇವೆ!

ಇಷ್ಟು ಕಾಲ ಮತದಾರರು ಇದ್ದಾರೋ ಇಲ್ಲವೋ ಎಂಬ ಬಗ್ಗೆ ತಲೆಕೆಡಿಸಿಕೊಳ್ಳದ ರಾಜಕೀಯ ಪಕ್ಷಗಳಿಗೆ ದಿಢೀರನೆ ಅವರ ಬಗ್ಗೆ ಪ್ರೀತಿ ಉಂಟಾಗಿದೆ. ತಮ್ಮ ಕ್ಷೇತ್ರದ ಮತದಾರರು ಬೇರೆ ಯಾವ ಊರುಗಳಲ್ಲಿ ನೆಲೆಸಿದ್ದಾರೆ ಎಂಬ ಬಗ್ಗೆ ಸಂಶೋಧನೆ ಮಾಡಿ ಅವರ ಮೊಬೈಲ್ ನಂಬರ್‌ಗಳನ್ನು ಹುಡುಕಿ ತೆಗೆದು ಕರೆ ಮಾಡಿದ್ದಾರೆ. ಮತ ಹಾಕಲು ಊರಿಗೆ ಬರುವುದಾದರೆ ಬಸ್ ಚಾರ್ಜ್ ನೀಡುತ್ತೇವೆ ಎಂದು ಆಹ್ವಾನಿಸಿದ್ದಾರೆ. ಬೆಂಗಳೂರು ಅಥವಾ ಬೇರೆ ನಗರಗಳಲ್ಲಿ ನೆಲೆಸಿರುವವರಲ್ಲಿ ಯಾವ ಬೂತ್‌ಗೆ ಎಷ್ಟು ಮತದಾರರು ಬರುತ್ತಾರೆ ಎಂಬ ಲೆಕ್ಕಾಚಾರ ಹಾಕಲಾಗಿದೆ. ಅವರಿಗೆ ಬಸ್ ಪ್ರಯಾಣದ ವೆಚ್ಚ ನೀಡುವ ವ್ಯವಸ್ಥೆಯನ್ನು ಮಾಡಿದ್ದಾರೆ.

ರಜೆ ಇದ್ದವರು ಪ್ರವಾಸ ಹೊರಟರು

ರಜೆ ಇದ್ದವರು ಪ್ರವಾಸ ಹೊರಟರು

ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಚುನಾವಣೆಯು ಪ್ರವಾಸಕ್ಕೆ ತೆರಳಲು ಅವಕಾಶ ನೀಡಿದಂತಾಗಿದೆ. ಮತದಾನದ ನೆಪದಲ್ಲಿ ಕೆಲವರು ಪ್ರವಾಸಿ ತಾಣಗಳಿಗೆ ತೆರಳಿ ಮೋಜು ಮಾಡಲು ಸಿದ್ಧತೆ ನಡೆಸಿದ್ದಾರೆ. ಬೆಳಿಗ್ಗೆ ಬೇಗನೆ ಮತ ಹಾಕಿ, ಸೀದಾ ಪ್ರವಾಸಕ್ಕೆ ತೆರಳುವ ಉದ್ದೇಶವೂ ಕೆಲವರದು. ಚುನಾವಣೆ ಕಾರಣದಿಂದ ಪ್ರವಾಸಿ ತಾಣಗಳಲ್ಲಿ ಜನರ ಸಂಖ್ಯೆ ಕಡಿಮೆ ಇರುತ್ತದೆ ಎಂದು ಈ ಸಮಯವನ್ನು ಕೆಲವರು ಆಯ್ಕೆ ಮಾಡಿಕೊಳ್ಳುತ್ತಾರೆ.

ಚುನಾವಣೆ ಕಾರಣ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಮದ್ಯ ಮಾರಾಟಗಾರರಿಗೆ ಈ ರೀತಿ ಎರಡು ಮೂರು ದಿನ ಸತತ ವಿರಾಮ ಸಿಗುವುದು ಬಹಳ ಅಪರೂಪ. ಈ ಕಾರಣದಿಂದ ಮದ್ಯ ಮಾರಾಟ ನಿಷೇಧ ಜಾರಿಯಾದ ದಿನದಿಂದಲೇ ಅವರು ಪ್ರವಾಸ ಆರಂಭಿಸಿದ್ದಾರೆ.

ವಾಪಸ್ ಬರುವುದೂ ಸುಲಭವಲ್ಲ

ವಾಪಸ್ ಬರುವುದೂ ಸುಲಭವಲ್ಲ

ಎರಡು ದಿನದ ರಜೆ ಕಳೆದು ಮತ್ತೆ ಬೆಂಗಳೂರಿನ ಹಾದಿ ಹಿಡಿಯುವುದು ಮತದಾರರ ಲೆಕ್ಕಾಚಾರವಾದರೂ, ಇಲ್ಲಿಂದ ಹೊರಡುವಾಗ ಎಷ್ಟು ಪರದಾಡಬೇಕಾಗಿತ್ತೋ, ಊರಿಂದ ಮರಳುವಾಗಲೂ ಅಷ್ಟೇ ಪರದಾಡುವುದು ಅನಿವಾರ್ಯ. ಬೆಂಗಳೂರಿಗೆ ಬರುವ ಬಹುತೇಕ ಬಸ್‌ಗಳೂ ಬುಕ್ ಆಗಿವೆ. ಭಾನುವಾರ ರಾತ್ರಿಯ ಬಸ್‌ಗಳಲ್ಲಿ ಸೀಟು ಸಿಗುತ್ತಿಲ್ಲ. ಹಗಲು ಸಂಚರಿಸುವ ಬಸ್‌ಗಳಲ್ಲೂ ಪ್ರಯಾಣಿಕರು ತುಂಬಿಕೊಳ್ಳುವ ಸಾಧ್ಯತೆ ಇದೆ. ಈ ಸಂಕಷ್ಟದಿಂದ ಪಾರಾಗಲು ಕೆಲವರು ಶನಿವಾರವೇ ಬೆಂಗಳೂರಿಗೆ ವಾಪಸ್ ಹೊರಡಲು ತೀರ್ಮಾನಿಸಿದ್ದಾರೆ.

English summary
People from various parts of Karnataka living in bengaluru, are travelling back to their hometown to cast vote on saturday. Bus ticket prices are increased due to high demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X