ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ದಿನಪತ್ರಿಕೆಗಳ ಕಣ್ಣಲ್ಲಿ ಹೀಗಿದೆ 'ಕರ್ನಾಟಕ ಕದನ'

|
Google Oneindia Kannada News

ಬೆಂಗಳೂರು, ಮಾರ್ಚ್ 28: ಇಡೀ ದೇಶದಲ್ಲೂ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕ ನಿನ್ನೆ ಬಯಲಾಗಿದೆ. ಭಾರತೀಯ ಚುನಾವಣಾ ಆಯೋಗ ನಿನ್ನೆ(ಮಾ.27) ಮೇ 12 ರಂದು ಮತದಾನದ ದಿನಾಂಕ ಮತ್ತು ಮೇ 15 ರಂದು ಫಲಿತಾಂಶ ಎಂದು ಘೋಷಿಸುತ್ತಿದ್ದಂತೆಯೇ ರಾಜ್ಯದಲ್ಲಿ ಬಿರುಸಿನ ಚಟುವಟಿಕೆ ಗರಿಗೆದರಿದೆ.

ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಮಾಧ್ಯಮಗಳು ಸಂಖ್ಯಾ ಶಾಸ್ತ್ರಜ್ಞರ ಮೊರೆ ಹೋಗಿದ್ದೇನು, '12-15' ರಲ್ಲಡಗಿದ ರಾಜ್ಯದ ಭವಿಷ್ಯದ ಕುರಿತು ಅವರೊಂದಿಗೆ ಚರ್ಚಿಸಿದ್ದೇನು! ಏನೇ ಇದ್ದಿರಲಿ, ಮತದಾನ ಶನಿವಾರ, ಫಲಿತಾಂಶ ಮಂಗಳವಾರ ಎಂಬುದಂತೂ ಸತ್ಯ!

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ: ಮುಖ್ಯಾಂಶಗಳುಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ: ಮುಖ್ಯಾಂಶಗಳು

ಚುನಾವಣಾ ದಿನಾಂಕ ಘೋಷಣೆಯ ಕುರಿತು ಕನ್ನಡ ದಿನಪತ್ರಿಕೆಗಳು ಆಕರ್ಷಕ ಶೀರ್ಷಿಕೆಯೊಂದಿಗೆ ಗಮನಸೆಳೆದಿವೆ. ಕನ್ನಡ ಪ್ರಭದ 'ವಿಧಾನ ಕದನಕ್ಕೆ ಮುಹೂರ್ತ' ಮತ್ತು 'ಉದಯವಾಣಿ' ಬೆಂಗಳೂರು ಆವೃತ್ತಿಯ '12ರ ಹಣೆಬರಹ 15ಕ್ಕೆ ಬಯಲು' ಎಂಬ ತಲೆಬರಹಗಳಿಗೆ ಹೆಡ್ ಲೈನ್ಸ್ ಆಫ್ ದಿ ಡೇ ಬಿರುದು ನೀಡಬಹುದು. ಮಿಕ್ಕ ಪತ್ರಿಕೆಗಳಲ್ಲಿ ಸರಳ ತಲೆಬರಹ ನೀಡಲಾಗಿದೆ.

ಕನ್ನಡ ಪ್ರಭ

ಕನ್ನಡ ಪ್ರಭ

ಮೇ 12ರಂದು ಮತದಾನ, ಮೇ15 ರಂದು ಫಲಿತಾಂಶ ಎಂಬ ಕಿಕ್ಕರ್ ನೊಂದಿಗೆ 'ವಿಧಾನ ಕದನಕ್ಕೆ ಮುಹೂರ್ತ' ಎಂಬ ಅರ್ಥವತ್ತಾದ, ಆಕರ್ಷಕ ಶೀರ್ಷಿಕೆ ನೀಡಿದೆ ಕನ್ನಡ ಪ್ರಭ. ಜೊತೆಗೆ ಒಟ್ಟೂ ವಿಧಾನಸಭಾ ಕ್ಷೇತ್ರಗಳು, ಮತದಾರರ ಸಂಖ್ಯೆ ಮುಂತಾದ ವಿವರಗಳನ್ನು ನೀಡಿದೆ. ಜೊತೆಗೆ ಈ ಚುನಾವಣೆ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿದೆ ಎಂದಿರುವ 'ಕನ್ನಡ ಪ್ರಭ', ವಿವಿಪ್ಯಾಟ್ ಬಳಕೆ, ಮಹಿಳೆಯರಿಗೆ ಪ್ರತ್ಯೇಕ ಮತಕೇಂದ್ರ, ಅಂಗವಿಕಲ ಸ್ನೇಹಿ ಮತಯಂತ್ರ ಮುಂತಾದವುಗಳನ್ನು ಹೊಂದಿರುವ ಈ ಬಾರಿಯ ಚುನಾವಣೆ ವಿಭಿನ್ನವಾಗಿರುತ್ತದೆ ಎಂದು ವಿವರಿಸಿದೆ.

ಉದಯವಾಣಿ

ಉದಯವಾಣಿ

ನಾಮಪತ್ರ ಸಲ್ಲಿಕೆಯಿಂದ ಹಿಡಿದು ಫಲಿತಾಂಶದವರೆಗಿನ ಎಲ್ಲಾ ಮಹತ್ವದ ದಿನಾಂಕಗಳನ್ನೂ 'ಈ ದಿನಗಳು ನೆನಪಿರಲಿ' ಎಂಬ ಶೀರ್ಷಿಕೆಯೊಂದಿಗೆ ನೀಡಿರುವ ಉದಯವಾಣಿ, '12ರ ಹಣೆಬರಹ 15ಕ್ಕೆ ಬಯಲು' ಎಂಬ ತಲೆಬರಹ ನೀಡಿದೆ. ಜೊತೆಗೆ ಕರುನಾಡ ಕದನ ಕಲಿಗಳಿವರು ಎಂದು ಸಿದ್ದರಾಮಯ್ಯ, ಬಿ ಎಸ್ ಯಡಿಯೂರಪ್ಪ ಮತ್ತು ಎಚ್ ಡಿ ಕುಮಾರಸ್ವಾಮಿಯವರ ಚಿತ್ರಗಳನ್ನೂ ನೀಡಿದೆ. 2013 ರ ಚುನಾವಣೆಯಲ್ಲಿ ಯಾವ್ಯಾವ ಪಕ್ಷಗಳು ಎಷ್ಟು ಸ್ಥಾನ ಗಳಿಸಿದ್ದವು ಎಂಬುದನ್ನೂ ಈ ಸಂದರ್ಭದಲ್ಲಿ ಮೆಲುಕು ಹಾಕಿದೆ.

2018ರ ಚುನಾವಣೆಯ ಪ್ರಮುಖ ಸಂಗತಿಗಳು ಇವು2018ರ ಚುನಾವಣೆಯ ಪ್ರಮುಖ ಸಂಗತಿಗಳು ಇವು

ವಿಜಯವಾಣಿ

ವಿಜಯವಾಣಿ

ಮೇ 12 ರಂದು ಒಂದೇ ದಿನ ಮತದಾನ, 15ಕ್ಕೆ ಫಲಿತಾಂಶ, 28 ಕ್ಕೆ ಹೊಸ ಸರ್ಕಾರ ಎಂಬ ಕಿಕ್ಕರ್ ನೊಂದಿಗೆ 'ಮತದಾರರೇ ಮಹಾದಿನಕ್ಕೆ ಸಜ್ಜಾ'ಗಿ ಎಂಬ ಶೀರ್ಷಿಕೆ ನೀಡಿದೆ 'ವಿಜಯವಾಣಿ'. ಮತಸಮರಕ್ಕೆ ಇನ್ನು 46 ದಿನವಷ್ಟೇ ಬಾಕಿ ಎಂದಿರುವ ವಿಜಯವಾಣಿ, ಮೊದಲ ಬಾರಿ ವಿವಿಪ್ಯಾಟ್ ಬಳಕೆ, ಕನ್ನಡ ಇಂಗ್ಲಿಷ್ ನಲ್ಲಿರಲಿವೆ ಇವಿಎಂ, ಮತದಾನದ ಅವಧಿ ಎರಡು ಗಂಟೆ ವಿಸ್ತರಣೆ ಸೇರಿದಂತೆ ಹಲವು ಸಂಗತಿಗಳು ಈ ಬಾರಿಯ ಚುನಾವಣೆಯ ವಿಶೇಷತೆಗಳಾಗಿರಲಿವೆ ಎಂದು ವಿಜಯವಾಣಿ ಹೇಳಿದೆ.

ವಿಜಯ ಕರ್ನಾಟಕ

ವಿಜಯ ಕರ್ನಾಟಕ

ಕರುನಾಡ ಕದನಕ್ಕೆ ಮೊಳಗಿದ ಪಾಂಚಜನ್ಯ, ಒಂದೇ ಹಂತದಲ್ಲಿ ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ, ಅಭ್ಯರ್ಥಿಗಳ ಪಟ್ಟಿ ಪ್ರಕಟ, ಒತ್ತಡದಲ್ಲಿ ರಾಜಕೀಯ ಪಕ್ಷಗಳು, ರಾಜ್ಯಾಧ್ಯಂತ ಏರಲಿದೆ ಚುನಾವಣಾ ಜ್ವರ ಎಂಬ ಸಾರಾಂಶದೊಂದಿಗೆ ವಿಧಾನಸಭಾ ಚುನಾವಣೆಯನ್ನು ವಿವರಿಸಿದ 'ವಿಜಯ ಕರ್ನಾಟಕ'. ಮೇ '12 ಕ್ಕೆ ಎಲೆಕ್ಷನ್, 15 ಕ್ಕೆ ರಿಸಲ್ಟ್' ಎಂದು ಸರಳ ಶೀರ್ಷಿಕೆಯನ್ನು ನೀಡಿದೆ. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಮಹತ್ವದ ದಿನಾಂಕಗಳು, ಒಟ್ಟು ಮತದಾರರ ಸಂಖ್ಯೆ ಸೇರಿದಂತೆ ಇತರೆ ವಿವರಗಳನ್ನೂ ನೀಡಿದೆ.

ವಿಶ್ವವಾಣಿ

ವಿಶ್ವವಾಣಿ

ಏ.17 ರಂದು ಚುನಾವಣೆ ಅಧಿಸೂಚನೆ, ಏ.24ರವರೆಗೂ ನಾಮಪತ್ರ ಸಲ್ಲಿಕೆಗೆ ಅವಕಾಶ, ಏ.25 ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ, ಏ.27 ರವರೆಗೆ ನಾಮಪತ್ರ ಹಿಂಪಡೆಯಲು ಕಾಲಾವಕಾಶ, ಒಂದೇ ಹಂತದಲ್ಲಿ ಮತದಾನ, ಮೇ 28 ರ ಒಳಗಾಗಿ ಚುನಾವಣಾ ಪ್ರಕ್ರಿಯೆ ಪೂರ್ಣ ಎಂಬ ಕಿಕ್ಕರ್ ನೊಂದಿಗೆ 'ಮೇ 12 ಕ್ಕೆ ಚುನಾವಣೆ, 15 ಕ್ಕೆ ಫಲಿತಾಂಶ' ಎಂಬ ಸರಳ ಶಿರ್ಷಿಕೆ ನೀಡಿದೆ ವಿಶ್ವವಾಣಿ. ಮುಖಪುಟದಲ್ಲೇ ಇರುವ ವಿಶ್ಲೇಷಣಾತ್ಮಕ ಲೇಖನದ 'ರಣಕಣಕ್ಕೆ ಪಕ್ಷಗಳು ಸಜ್ಜು' ಶಿರ್ಷಿಕೆ ಹೆಚ್ಚು ಗಮನ ಸೆಳೆಯುತ್ತದೆ.

ಹೊಸ ದಿಗಂತ

ಹೊಸ ದಿಗಂತ

ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆ, ಒಂದೇ ಹಂತದಲ್ಲಿ ಮೇ 12ಕ್ಕೆ ಮತದಾನ, ಮೇ 15 ಕ್ಕೆ ಫಲಿತಾಂಶ, ಏ.17 ಕ್ಕೆ ಅಧಿಸೂಚನೆ ಪ್ರಕಟ, ಮಂಗಳವಾರದಿಂದ ನೀತಿ ಸಂಹಿತೆ ಜಾರಿ ಎಂಬ ಕಿಕ್ಕರ್ ನೊಂದಿಗೆ 'ಈಗ ಪ್ರಜೆಗಳೇ ಪ್ರಭುಗಳು' ಎಂಬ ಶೀರ್ಷಿಕೆ ನೀಡಿದೆ 'ಹೊಸ ದಿಗಂತ' ಪತ್ರಿಕೆ. ಎಂದಿನಂತೆ ಆಕರ್ಷಕ ವಿನ್ಯಾಸದೊಂದಿಗೆ ಗಮನಸೆಳೆಯುತ್ತದೆ.

ಪ್ರಜಾವಾಣಿ

ಪ್ರಜಾವಾಣಿ

'ಮೇ 12ಕ್ಕೆ ಮತದಾನ, 15 ಕ್ಕೆ ಫಲಿತಾಂಶ' ಎಂಬುದು ಪ್ರಜಾವಾಣಿ ಶೀರ್ಷಿಕೆ. ಜನತಂತ್ರದ ಹಬ್ಬಕ್ಕೆ ದಿನಾಂಕ ನಿಗದಿ, ಒಂದೇ ಹಂತದಲ್ಲಿ ಪೂರ್ಣ, ನೀತಿ ಸಂಹಿತೆ ತಕ್ಷಣದಿಂದಲೇ ಜಾರಿ ಎಂಬ ಕಿಕ್ಕರ್ ಗಮನಸೆಳೆಯುತ್ತದೆ. ಈ ಬಾರಿಯ ಚುನಾವಣೆಯ ಮುಖ್ಯಾಂಶಗಳು ಏನು ಎಂಬುದನ್ನೂ ಪ್ರಜಾವಾಣಿ ವಿವರಿಸಿದೆ. ಇವಿಎಂ ನಲ್ಲಿ ಪ್ರತಿ ಅಭ್ಯರ್ಥಿಯ ಭಾವಚಿತ್ರವನ್ನೂ ಪ್ರಕಟಿಸಲಿರುವುದು ಈ ಬಾರಿಯ ವಿಶೇಷತೆ ಎಂದಿದೆ. ಜೊತೆಗೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಕೇಂದ್ರ ಸರ್ಕಾರವು ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲು ಅಡ್ಡಿಯಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ರಾವತ್ ಹೇಳಿರುವುದನ್ನೂ ಪ್ರಜಾವಾಣಿ ಮುಖಪುಟದಲ್ಲೇ ತಿಳಿಸಿದೆ.

ಸಂಯುಕ್ತ ಕರ್ನಾಟಕ

ಸಂಯುಕ್ತ ಕರ್ನಾಟಕ

ಕರ್ನಾಟಕ ಕುರುಕ್ಷೇತ್ರ 2018 ಎಂಬ ಸ್ಥಿರ ಶೀರ್ಷಿಕೆ(ಚುನಾವಣೆ ಮುಗಿಯುವವರೆಗೂ)ಯೊಂದಿಗೆ 'ಅಶ್ವಮೇಧಕ್ಕೆ ಮುಹೂರ್ತ' ಎಂಬ ತಲೆಬರಹ ನೀಡಿದೆ ಸಂಯುಕ್ತ ಕರ್ನಾಟ ಪತ್ರಿಕೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಈ ಮೂವರು ಪ್ರಮುಖ ನಾಯಕರ ಹೇಳಿಕೆಗಳನ್ನೂ ಮುಖಪುಟದಲ್ಲೇ ನೀಡಿದೆ.

ವಾರ್ತಾ ಭಾರತಿ

ವಾರ್ತಾ ಭಾರತಿ

'ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ' ಎಂಬ ಕಿಕ್ಕರ್ ನೊಂದಿಗೆ 'ಮೇ 12 ಕ್ಕೆ ಮತದಾನ ಎಂಬ ಸರಳ ಶೀರ್ಷಿಕೆ ನೀಡಿದೆ ವಾರ್ತಾ ಭಾರತಿ. ಜೊತೆಗೆ ಒಟ್ಟು ಮತದಾರರ ಸಂಖ್ಯೆ, ಮಹಿಳಾ, ಪುರುಷ ಮತದಾರರ ಸಂಖ್ಯೆಯನ್ನು ಮುಖಪುಟದಲ್ಲೇ ನೀಡಿದೆ.

English summary
Election commission of India on March 27th announced dates of Karnataka assembly elections 2018 and results. Elections will be held on 12th May and 15th will be results. Here is Kannada newspapers' coverage on Elections news.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X