ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬೆತ್ತಲೆ ಜಗತ್ತು' ಖ್ಯಾತಿಯ ಪ್ರತಾಪ ಸಿಂಹ ಬಿಜೆಪಿ ಅಭ್ಯರ್ಥಿ?

By Srinath
|
Google Oneindia Kannada News

ಬೆಂಗಳೂರು, ಜ.25- ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ನೀತಿ-ನಿಲುವುಗಳಿಗೆ ಮೊದಲಿಂದಲೂ ಅಂಕಿತರಾಗಿರುವ, ನರೇಂದ್ರ ಮೋದಿ ಕುರಿತು ಪುಸ್ತಕವನ್ನೂ ಬರೆದಿರುವ, ಕನ್ನಡ ಪತ್ರಿಕೋದ್ಯಮದ ಖ್ಯಾತ ಅಂಕಣಕಾರ ಪ್ರತಾಪ್ ಸಿಂಹ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳು ಕಂಡುಬಂದಿವೆ.

ಹೊಸಮುಖಗಳನ್ನು ಕಣಕ್ಕಿಳಿಸುವ ಮೂಲಕ ಹೊಸ ಪ್ರಯೋಗ ನಡೆಸಬೇಕು ಎಂಬ ನಿಲುವಿಗೆ ಬಂದಿರುವ ಬಿಜೆಪಿ ಮತ್ತು ಸಂಘ ಪರಿವಾರ ಕರ್ನಾಟಕದಲ್ಲೂ ಅದನ್ನು ಅನುಷ್ಠಾನಗೊಳಿಸುವ ಪ್ರಯತ್ನ ನಡೆಸಿದೆ. ಈ ನಿಟ್ಟಿನಲ್ಲಿ ಯುವ ಪತ್ರಕರ್ತ ಪ್ರತಾಪ್ ಸಿಂಹಗೆ ಲೋಕಸಭಾ ಟಿಕೆಟ್ ನೀಡುವಂತೆ ಸಂಘ ಪರಿವಾರವು ಬಿಜೆಪಿಗೆ ಸೂಚಿಸಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ!

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ!

ಬಿಜೆಪಿ ನಾಯಕರು ಈ ಪ್ರಸ್ತಾವನೆ ಕುರಿತು ಗಂಭೀರ ಚಿಂತನೆ ನಡೆಸಿದ್ದಾರೆ. ಮೊದಲು ಈ ವಿಷಯ ಪ್ರಸ್ತಾಪವಾದಾಗ ಗೊಂದಲಕ್ಕೀಡಾದ ಪ್ರತಾಪ್‌ ಸಿಂಹ, ತದನಂತರ ಹಿತೈಷಿಗಳ ಸಲಹೆ ಪಡೆದು ಬಿಜೆಪಿ ಟಿಕೆಟ್‌ ನೀಡಿದರೆ ತಾನು ಸ್ಪರ್ಧಿಸುವುದಕ್ಕೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ ಎಂದು ಆಪ್ತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಪ್ರತಾಪ್ ಸಿಂಹನೇ ಏಕೆ?

ಪ್ರತಾಪ್ ಸಿಂಹನೇ ಏಕೆ?

ಉತ್ತರ ಪ್ರದೇಶದಲ್ಲಿ ಸುಮಾರು 25 ಹೊಸ ಮುಖಗಳಿಗೆ ಟಿಕೆಟ್‌ ನೀಡಲು ಉದ್ದೇಶಿಸಿರುವ ಬಿಜೆಪಿ ಕರ್ನಾಟಕದಲ್ಲಿ ಈ ಬಾರಿ ಕನಿಷ್ಠ 4 ಹೊಸಬರನ್ನು ಕಣಕ್ಕಿಳಿಸಲು ಯೋಜಿಸಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಹಿಂದೆ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಈ ಬಾರಿ ಅಲ್ಲಿಂದ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ. ಇವರನ್ನು ಬಿಟ್ಟರೆ ಪಕ್ಷದ ವಲಯದಿಂದ ಕೇಳಿಬರುತ್ತಿರುವ ಹೆಸರುಗಳಲ್ಲಿ ಶಾಸಕ ಸಿಟಿ ರವಿ ಮತ್ತು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಪ್ರಮುಖರು. ರವಿ ಹಾಲಿ ಶಾಸಕರಾಗಿದ್ದರಿಂದ ಅವರನ್ನು ಗೆಲ್ಲಿಸಿ ಮತ್ತೂಂದು ಉಪಚುನಾವಣೆಯನ್ನು ಎದುರಿಸುವುದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ದೇವೇಗೌಡರ ವಿರುದ್ಧ ತೇಜಸ್ವಿನಿ ಗೆದ್ದಂತೆ

ದೇವೇಗೌಡರ ವಿರುದ್ಧ ತೇಜಸ್ವಿನಿ ಗೆದ್ದಂತೆ

ಮೂವರು ಖ್ಯಾತನಾಮರನ್ನು ಕೈಬಿಟ್ಟು ರಾಜಕೀಯಕ್ಕೆ ತೀರಾ ಹೊಸಬರಾದವರನ್ನು ಕರೆತಂದು ಕಣಕ್ಕಿಳಿಸಬೇಕು ಎಂಬ ಚಿಂತನೆ ಸಂಘ ಪರಿವಾರದ ಮುಖಂಡರಲ್ಲಿ ಟಿಸಿಲೊಡೆದಿದೆ. ಅದರ ಪರಿಣಾಮವೇ ಅಂಕಣಕಾರ ಪ್ರತಾಪ್‌ ಸಿಂಹ ಅವರ ಹೆಸರು ಬಲವಾಗಿ ಕೇಳಿಬಂದಿದೆ. ಪ್ರತಾಪ್‌ ಅವರನ್ನು ಕಣಕ್ಕಿಳಿಸುವ ಬಗ್ಗೆ ಹೆಚ್ಚಾ ಕಡಮೆ ಒಮ್ಮತದ ತೀರ್ಮಾನಕ್ಕೆ ಬಂದಿರುವ ಸಂಘ ಪರಿವಾರದ ಮುಖಂಡರು ಬಿಜೆಪಿ ನಾಯಕರಿಗೆ ತಮ್ಮ ಅಭಿಪ್ರಾಯವನ್ನು ರವಾನಿಸಿದ್ದಾರೆ. ಹಿಂದೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ವಿರುದ್ಧ ಕಾಂಗ್ರೆಸ್‌ ಪಕ್ಷವು ಕನಕಪುರ (ಈಗಿನ ಬೆಂಗಳೂರು ಗ್ರಾಮಾಂತರ) ಲೋಕಸಭಾ ಕ್ಷೇತ್ರದಲ್ಲಿ ಪತ್ರಕರ್ತೆಯಾಗಿದ್ದ ತೇಜಸ್ವಿನಿ ಗೌಡ ಅವರನ್ನು ಕಣಕ್ಕಿಳಿಸಿ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಜೈಂಟ್ ಕಿಲ್ಲರ್:

ಜೈಂಟ್ ಕಿಲ್ಲರ್:

ಹಾಗೆ ನೋಡಿದರೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದು ಹಾಲಿ ಕಾಂಗ್ರೆಸ್ ಎಂಪಿ ಜಯಪ್ರಕಾಶ್ ಹೆಗಡೆ ಎಂಬ ಸಜ್ಜನ. ಆದರೆ ಮೋದಿ ಅಲೆಯಲ್ಲಿ ಅಂಕಣಕಾರ ಪ್ರತಾಪ್‌ ಸಿಂಹ ಅವರು ಅಜಾತಶತ್ರು ಜಯಪ್ರಕಾಶ್ ಹೆಗಡೆ ಅವರನ್ನು ಸೋಲಿಸಿ ಜೈಂಟ್ ಕಿಲ್ಲರ್ ಆಗುತ್ತಾರಾ? ಕಾಲವೇ ಹೇಳಬೇಕು.

ಪ್ರತಾಪ್‌ ಸಿಂಹ ಮೂಲತಃ ಚಿಕ್ಕಮಗಳೂರಿನವರು

ಪ್ರತಾಪ್‌ ಸಿಂಹ ಮೂಲತಃ ಚಿಕ್ಕಮಗಳೂರಿನವರು

ಈ ಬಾರಿ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಸಂಘ ಪರಿವಾರದ ನಿಲುವುಗಳ ಬಗ್ಗೆ ಒಲವುಳ್ಳ ಪ್ರತಾಪ್‌ ಸಿಂಹ ಅವರನ್ನು ಕಣಕ್ಕಿಳಿಸಿದಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಸಂಘ ಪರಿವಾರದ ಮುಖಂಡರು ಬಿಜೆಪಿ ನಾಯಕರ ಮುಂದಿಟ್ಟಿದ್ದಾರೆ. ತಮ್ಮ ವಿಚಾರಧಾರೆಗಳಿಗೆ ಒಪ್ಪಿಕೊಂಡಿರುವ, ಯುವಕರನ್ನು ಸೆಳೆಯಬಲ್ಲ ಹಾಗೂ ರಾಜಕೀಯಕ್ಕೆ ಹೊಸಬರಾದ ಪ್ರತಾಪ್‌ ಸಿಂಹ ಅವರನ್ನು ಕಣಕ್ಕಿಳಿಸಿದಲ್ಲಿ ಚುನಾವಣೆ ಎದುರಿಸುವುದು ಸುಲಭವಾಗುತ್ತದೆ ಎಂಬ ಸಂಘ ಪರಿವಾರದ ಪ್ರಸ್ತಾಪವನ್ನು ಬಿಜೆಪಿ ನಾಯಕರು ಒಪ್ಪುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಕರಾವಳಿಯಲ್ಲಿ ಸಂಘದ ಪಾತ್ರವೇ ಮಹತ್ವದ್ದು:

ಕರಾವಳಿಯಲ್ಲಿ ಸಂಘದ ಪಾತ್ರವೇ ಮಹತ್ವದ್ದು:

ಬಿಜೆಪಿಗೆ ಸಂಬಂಧಿಸಿದಂತೆ ಕರಾವಳಿಯಲ್ಲಿ ನಡೆವ ಚುನಾವಣಾ ಪ್ರಚಾರದಲ್ಲಿ ಸಂಘದ ಪಾತ್ರವೇ ಮಹತ್ವವಾದದ್ದು. ಸಂಘದ ಕಾರ್ಯಕರ್ತರ ಪಡೆಯೇ ಚುನಾವಣೆ ರಣತಂತ್ರ ರೂಪಿಸಿ ಪ್ರಚಾರ ಕೈಗೊಳ್ಳುತ್ತದೆ. ಈ ಕಾರಣಕ್ಕಾಗಿಯೇ ಕಳೆದ ಬಾರಿ ಸಂಘದ ನಿಷ್ಠಾವಂತರಾಗಿದ್ದ ನಳಿನ್‌ಕುಮಾರ್‌ ಕಟೀಲು ಅವರನ್ನು ದಕ್ಷಿಣ ಕನ್ನಡದಿಂದ ಕಣಕ್ಕಿಳಿಸಿ ಗೆಲ್ಲಿಸಲಾಗಿತ್ತು. ಅದೇ ರೀತಿ ಉತ್ತರ ಕನ್ನಡದಿಂದ ಸತತವಾಗಿ 3 ಬಾರಿ ಚುನಾಯಿತರಾಗುತ್ತಿರುವ ಅನಂತಕುಮಾರ್‌ ಹೆಗಡೆ ಕೂಡ ಸಂಘದ ಕಟ್ಟಾ ಅನುಯಾಯಿ. ಹೀಗಾಗಿ ಈಗ ಪ್ರತಾಪ್‌ ಸಿಂಹ ಹೆಸರು ಚಾಲ್ತಿಗೆ ಬಂದಿದೆ.
(ಚಿತ್ರ: http://pratapsimha.com/ )

English summary
An ardent follower of Bharatiya Janata Party prime ministerial candidate Narnedra Modi, Kannada journalist Bettale Jagattu fame Pratap Simha may contest Udupi Chikmagalur Lok Sabha seat say Sangha Parivar and BJP sources in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X