ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೀವಾಲಾಗಳಿಗೆ ಯಡಿಯೂರಪ್ಪ ಸರಕಾರದ ಶರಣಾಗತಿಯ ಪರಮಾವಧಿ

|
Google Oneindia Kannada News

ಕನ್ನಡವೇ ನಮ್ಮ ಉಸಿರು, ದೇವರಲ್ಲಿ ನಾವು ಪ್ರಾರ್ಥನೆ ಮಾಡುವುದೂ ಕನ್ನಡದಲ್ಲಿ ಎಂದು ಹೇಳುವ ಯಡಿಯೂರಪ್ಪನವರ ಸರಕಾರ ಮತ್ತು ಬಿಜೆಪಿಯವರು ಮಾಡುತ್ತಿರುವುದು ಇನ್ನೊಂದು. ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿ ಹೇರಿಕೆಯ ಇಂದು ನಿನ್ನೆಯದಲ್ಲದ ಪರಿಪಾಠಕ್ಕೆ ಮತ್ತೊಂದು ಸೇರ್ಪಡೆಯಾಗಿದೆ.

ತ್ರಿಭಾಷಾ ಸೂತ್ರದಡಿ ಆಯಾಯ ರಾಜ್ಯಗಳ ಭಾಷೆಗಳಿಗೆ ಮೊದಲ ಆದ್ಯತೆ ಎನ್ನುವುದು ಈ ದೇಶದ ನಿಯಮ. ಆದರೆ, ಆ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ಪ್ರಾದೇಶಿಕ ಭಾಷೆಗಳಿಗೆ ಮಣೆಹಾಕದೇ, ದ್ವಿಭಾಷಾ (ಹಿಂದಿ, ಇಂಗ್ಲಿಷ್) ಸೂತ್ರದ ಮೂಲಕ, ಕನ್ನಡ ಸೇರಿ, ಇತರ ಭಾಷಿಗರ ಸ್ವಾಭಿಮಾನವನ್ನು ಕೆಣಕುವ ಘಟನೆ ನಡೆಯುತ್ತಲೇ ಇರುತ್ತದೆ. ಅದು, ಕೇಂದ್ರದಲ್ಲಿ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚಾಗುತ್ತಲೇ ಸಾಗುತ್ತಿದೆ.

ಉಕ್ಕಿನ ನಗರಿ ಭದ್ರಾವತಿಯಲ್ಲಿ RAF ಘಟಕಕ್ಕೆ ಶಂಕುಸ್ಥಾಪನೆ ಮಾಡಿದ ಅಮಿತ್ ಶಾಉಕ್ಕಿನ ನಗರಿ ಭದ್ರಾವತಿಯಲ್ಲಿ RAF ಘಟಕಕ್ಕೆ ಶಂಕುಸ್ಥಾಪನೆ ಮಾಡಿದ ಅಮಿತ್ ಶಾ

ಹಿಂದಿ ಹೇರಿಕೆ ವಿರುದ್ದ ಕರ್ನಾಟಕದಲ್ಲಿ ಅದೆಷ್ಟೋ ಚಳುವಳಿಗಳು ನಡೆಯುತ್ತಲೇ ಇದೆ. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕೇಂದ್ರ ಸರಕಾರ ಒಂದು ರೀತಿಯ ಉದ್ದಟತನವನ್ನು ಮುಂದುವರಿಸುತ್ತಲೇ ಇದೆ. ಆದರೆ, ರಾಜ್ಯ ಸರಕಾರಕ್ಕೆ ಏನಾಗಿದೆ ಎನ್ನುವುದಿಲ್ಲಿ ಪ್ರಶ್ನೆ. ಕೇಂದ್ರ ಸರಕಾರ ಹಿಂದಿ ಹೇರಿಕೆ ಮಾಡಿದರೆ, ಅದಕ್ಕೆ ಕನಿಷ್ಠ ಪ್ರತಿಭಟನೆ ತೋರುವ ದಿಟ್ಟತನ ರಾಜ್ಯ ಬಿಜೆಪಿ ಸರಕಾರಕ್ಕೆ ಇಲ್ಲದಾಗಿ ಹೋಗಿರುವುದು ದುರಂತವಲ್ಲದೇ ಇನ್ನೇನು.

 ಹಂಪಿ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲು ಸರ್ಕಾರದ ಸಮ್ಮತಿ ಹಂಪಿ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲು ಸರ್ಕಾರದ ಸಮ್ಮತಿ

ಕೇವಲ ಅಧಿಕಾರಕ್ಕಾಗಿ ಮಾತೃ ಭಾಷೆಯ ಮೇಲೆ ಅಭಿಮಾನ ಕಳೆದುಕೊಳ್ಳುತ್ತಿರುವುದಕ್ಕೋ ಏನೋ, ಕೇಂದ್ರ ಸರಕಾರದ ಕನ್ನಡ ವಿರೋಧಿ ಧೋರಣೆ ಮುಂದುವರಿಯುತ್ತಲೇ ಇದೆ. ಇಂತಹ ಹತ್ತು ಹಲವು ಘಟನೆಗಳಿಗೆ, ಶನಿವಾರದ (ಜ 16) ಕಾರ್ಯಕ್ರಮ ಮತ್ತೊಂದು ಸಾಕ್ಷಿಯಾಗಿದೆ. ಅದೂ, ಹೋರಾಟದಿಂದಲೇ ಈ ಹಂತಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪನವರ ತವರು ಜಿಲ್ಲೆಯಲ್ಲಿ.

ಕನ್ನಡ ಪರ ಹೋರಾಟ ಮತ್ತು ಹೋರಾಟಗಾರರನ್ನು ಲೇವಡಿ ಮಾಡುವ ಪ್ರವೃತ್ತಿ

ಕನ್ನಡ ಪರ ಹೋರಾಟ ಮತ್ತು ಹೋರಾಟಗಾರರನ್ನು ಲೇವಡಿ ಮಾಡುವ ಪ್ರವೃತ್ತಿ

ಹಿಂದಿ ಸಾಮ್ರಾಜ್ಯಶಾಹಿಗಳ ವಿರುದ್ದ ನಡೆಯುತ್ತಿರುವ ಹೋರಾಟವನ್ನು ಸರಕಾರ ಮತ್ತು ಕನ್ನಡಿಗರ ಕೆಲವೊಂದು ಗುಂಪು ಗಂಭೀರವಾಗಿ ತೆಗೆದುಕೊಳ್ಳದೇ ಇರುವುದೇ ಪರಿಸ್ಥಿತಿ ಈ ಮಟ್ಟಕ್ಕೆ ಹೋಗಲು ಕಾರಣ ಎಂದರೆ ತಪ್ಪಾಗಲಾರದು. ಇಂತವರಿಗೆಲ್ಲಾ, ಮುಂದಿನ ದಿನಗಳಲ್ಲಿ ಇದರ ಗಂಭೀರತೆಯ ಅರಿವಾಗದೇ ಇರದು. ಕನ್ನಡ ಪರ ಹೋರಾಟ ಮತ್ತು ಹೋರಾಟಗಾರರನ್ನು ಲೇವಡಿ ಮಾಡುವ ಪ್ರವೃತ್ತಿ ಬೆಳೆಯುತ್ತಿರುವುದು ಹಿಂದಿವಾಲಾಗಳಿಗೆ ವರವಾಗಿ ಪರಿಣಮಿಸುತ್ತಿದೆ.

ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಅಡಿಗಲ್ಲು ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ

ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಅಡಿಗಲ್ಲು ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ

ಶನಿವಾರದಂದು ಕೇಂದ್ರ ಗೃಹಸಚಿವ ಅಮಿತ್ ಶಾ ಭದ್ರಾವತಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ಪಡೆಯ 97ನೇ ಬೆಟಾಲಿನ್ ಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದಿಂದ ಮುಖ್ಯಮಂತ್ರಿಗಳು ಆದಿಯಾಗಿ ಎಲ್ಲಾ ಪ್ರಮುಖ ಸಚಿವರಿದ್ದರು. ಈ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಅಡಿಗಲ್ಲು ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿದ್ದವು. ಆ ಮೂಲಕ, ಕನ್ನಡಕ್ಕೆ ಅವಮಾನವಾದರೂ ಸಿಎಂ, ಸಚಿವರಾದಿಯಾಗಿ ಯಾರೂ ಆಕ್ಷೇಪ ಎತ್ತಲಿಲ್ಲ. ಎಂತೆಂತಹ ಮೇರು ಪ್ರತಿಭೆಗಳನ್ನು ಈ ರಾಜ್ಯ ಮತ್ತು ದೇಶಕ್ಕೆ ಪರಿಚಯಿಸಿದ ಶಿವಮೊಗ್ಗ ಜಿಲ್ಲೆಯಲ್ಲಿ ಕನ್ನಡಕ್ಕಾದ ಅವಮಾನವಿದು, ತಲೆತಗ್ಗಿಸುವ ಘಟನೆಯಿದು.

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ್ರ ತೀವ್ರ ವಿಷಾದ

ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ್ರ ತೀವ್ರ ವಿಷಾದ

ಭದ್ರಾವತಿಯಲ್ಲಿ ನಡೆದ ಘಟನೆಗೆ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣ ಗೌಡ್ರು ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. "ಮುಖ್ಯಮಂತ್ರಿಗಳಾದಿಯಾಗಿ ಹಲವಾರು ಸಚಿವ ಸಂಪುಟದ ಸದಸ್ಯರು ಭಾಗವಹಿಸಿದ್ದರು. ಯಾರೊಬ್ಬರಿಗೂ ಸಹ ಈ ಕನ್ನಡವಿಲ್ಲದ ಹಿಂದೀಮಯ‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಮುಜುಗರ, ನಾಚಿಕೆ ಆಗಲಿಲ್ಲವೇ? ಇವರೆಲ್ಲರೂ ತಮ್ಮ ಕನ್ನಡತನವನ್ನು ದಿಲ್ಲಿ ಹಿಂದೀವಾಲಾಗಳಿಗೆ ಅಡವಿಟ್ಟಿದ್ದಾರೆಯೇ"ಎಂದು ಗೌಡ್ರು ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಇನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡಾ ಕನ್ನಡಕ್ಕಾದ ಅವಮಾನದ ಬಗ್ಗೆ ಟ್ವೀಟ್ ಮಾಡಿದ್ದಾರೆ. "ಶಿವಮೊಗ್ಗದ ಭದ್ರಾವತಿಯಲ್ಲಿ ಶನಿವಾರ RAF ಘಟಕಕ್ಕೆ ಗೃಹಸಚಿವರಾದ ಅಮಿತ್ ಷಾ ಅವರು ಶಂಕುಸ್ಥಾಪನೆ ನೆರವೇರಿಸಿದ್ದು, ಅಡಿಗಲ್ಲು ಫಲಕ ಅನಾವರಣಗೊಳಿಸಿದ್ದಾರೆ. ಅಡಿಗಲ್ಲು ಫಲಕಗಳು ಹಿಂದಿ ಮತ್ತು ಆಂಗ್ಲಭಾಷೆಯಲ್ಲಿವೆ. ಇಲ್ಲಿ ಕನ್ನಡದ ಅವಗಣನೆ ನಿಚ್ಚಳವಾಗಿ ಕಾಣುತ್ತದೆ. ಗೃಹ ಸಚಿವರೆ ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿರುವುದು ಕನ್ನಡಕ್ಕೆ,ಕನ್ನಡಿಗರಿಗೆ ಮಾಡಿದ ಅಗೌರವ.ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ನಾಡು-ನುಡಿಯ ಘನತೆಯನ್ನು ಮರೆತದ್ದು ಅತ್ಯಂತ ಖಂಡನೀಯ" ಎಂದು ಹೇಳಿದ್ದಾರೆ.

ಕರವೇ ಇಂದು (ಜ 17) ಟ್ವಿಟ್ಟರ್ ಅಭಿಯಾನಕ್ಕೆ ಕರೆ ನೀಡಿದೆ

ಕೇಂದ್ರ ಮತ್ತು ರಾಜ್ಯ ಸರಕಾರದ ಕನ್ನಡ ವಿರೋಧಿ ನೀತಿಯನ್ನು ಪ್ರತಿಭಟಿಸಿ ಕರವೇ ಇಂದು (ಜ 17) ಟ್ವಿಟ್ಟರ್ ಅಭಿಯಾನಕ್ಕೆ ಕರೆ ನೀಡಿದೆ. "ಹಿಂದಿ ಸಾಮ್ರಾಜ್ಯಶಾಹಿಯಿಂದಾಗಿ ಮುಂದೊಂದು ದಿನ ಕನ್ನಡವನ್ನು ಬಳಸುವುದೇ ಅಪರಾಧ ಎನ್ನುವಂತಾದರೆ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ನಾಡಿನ ಎಲ್ಲರನ್ನೂ ಎಚ್ಚರಿಸಲು ಇಂದು ಸಂಜೆ 5 ಗಂಟೆಗೆ ಟ್ವಿಟರ್ ಅಭಿಯಾನ ಹಮ್ಮಿಕೊಳ್ಳಲಾಗಿದೆ. #ಹಿಂದಿಗುಲಾಮಗಿರಿಬೇಡ #No‌ToHindiSlavery ಹ್ಯಾಶ್ ಟ್ಯಾಗ್ ಗಳೊಂದಿಗೆ ಈ ಟ್ವಿಟರ್ ಅಭಿಯಾನದಲ್ಲಿ ಭಾಗವಹಿಸಿ" ಎಂದು ಕರವೇ ಆಗ್ರಹಿಸಿದೆ.

English summary
Kannada Again And Again Neglected In Amit Shah RAF Programme In Bhadravathi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X