ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿನಕ್ಕೆ 2500 ಟನ್ ಆಕ್ಸಿಜನ್ ಉತ್ಪಾದಿಸಿದರೂ ರಾಜ್ಯಕ್ಕೆ ಒಂದು ಸಿಲಿಂಡರ್ ಕೊಡದ ಜಿಂದಾಲ್ ಸ್ಟೀಲ್ !

|
Google Oneindia Kannada News

ಬೆಂಗಳೂರು, ಏಪ್ರಿಲ್, 25: ಕೊರೊನಾ ಸೋಂಕಿತರ ಜೀವ ಉಳಿಸಲು ಸದ್ಯದ ಸ್ಥಿತಿಯಲ್ಲಿ ರಾಜ್ಯಕ್ಕೆ ತುರ್ತು ಅಗತ್ಯ ಇರುವುದು ಆಕ್ಸಿಜನ್ ! ಸೋಂಕಿತರ ಉಸಿರು ಉಳಿಸಲು ವೈದ್ಯರ ಶ್ರಮ ವ್ಯರ್ಥವಾಗದಿರಲು ರಾಜ್ಯದ ಆಸ್ಪತ್ರೆಗಳಿಗೆ ದಿನಕ್ಕೆ ಕನಿಷ್ಠ 500 ಟನ್ ಆಕ್ಸಿಜನ್ ಬೇಕಿದೆ. ಸದ್ಯದ ಸ್ಥಿತಿಯಲ್ಲಿ ಎಲ್ಲಾ ಮೂಲಗಳಿಂದ ವೈದ್ಯಕೀಯ ಕ್ಷೇತ್ರಕ್ಕೆ ಸಿಗುತ್ತಿರುವುದು ಕೇವಲ 300 ಟನ್ ಮಾತ್ರ. ಆದರೆ, ಇಡೀ ರಾಜ್ಯಕ್ಕೆ ಆಗುವಷ್ಟು ಆಕ್ಸಿಜನ್ ಹೊಸಪೇಟೆಯಲ್ಲಿರುವ ಜಿಂದಾಲ್ ಸ್ಟೀಲ್ ಆಕ್ಸಿಜನ್ ಉತ್ಪಾದನಾ ಘಟಕ ಉತ್ಪಾದಿಸುತ್ತಿದ್ದರೂ, ಒಂದು ಸಿಲಿಂಡರ್ ಕೂಡ ರಾಜ್ಯಕ್ಕೆ ಕೊಟ್ಟಿಲ್ಲ !

ಮೋದಿ ಸರ್ಕಾರದಿಂದ ವಿನಾಯ್ತಿ !

ಮೋದಿ ಸರ್ಕಾರದಿಂದ ವಿನಾಯ್ತಿ !

ಇದಕ್ಕೆ ಜಿಂದಾಲ್ ಕಂಪನಿಯನ್ನು ದೂಷಿಸಬೇಕೋ ? ಇಲ್ಲವೇ ನಮ್ಮನ್ನು ಆಳುವ ಸರ್ಕಾರಗಳಿಗೆ ಜನರು ಮಂಗಳಾರತಿ ಹಾಡಬೇಕೋ ಗೊತ್ತಿಲ್ಲ. ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಜಿಂದಾಲ್ ಸ್ಟೀಲ್ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ಅಗತ್ಯವಿಲ್ಲ ಎಂದು ಮೋದಿ ಸರ್ಕಾರವೇ ಅವಕಾಶ ನೀಡಿ ಕೈ ಚೆಲ್ಲಿ ಕೂತಿದೆ. ಹೀಗಾಗಿ ಜಿಂದಾಲ್ ಸ್ವಯಂ ಪ್ರೇರಿತವಾಗಿ ಭಿಕ್ಷೆ ನೀಡಿದರೆ ತೆಗೆದುಕೊಳ್ಳಬೇಕೆ ವಿನಃ ಕೊಡಲ್ಲ ಎಂದರೆ ಅದನ್ನು ಏನೂ ಮಾಡಲಾಗದ ಅಸಹಾಯಕ ಸ್ಥಿತಿ ರಾಜ್ಯ ಸರ್ಕಾರಕ್ಕೆ ಎದುರಾಗಿದೆ. ಇಲ್ಲಿ ವ್ಯಾಪಾರಕ್ಕಿಂತಲೂ ಜೀವವೇ ಮುಖ್ಯ ಎಂದು ಜಿಂದಾಲ್‌ಗೆ ಮನವರಿಕೆ ಆಗಿದ್ದೇ ಆದಲ್ಲಿ, ಏಪ್ರಿಲ್ ಮೂರನೇ ವಾರದಲ್ಲಿ ಬೇಕಾಗುವಷ್ಟು ಆಕ್ಸಿಜನ್ ರಾಜ್ಯಕ್ಕೆ ಕೊಟ್ಟು "ಜೀವದಾತ" ಕಂಪನಿ ಅಂತ ಅನ್ನಿಸಿಕೊಳ್ಳಬಹುದಿತ್ತು. ಆದರೆ ಆಗಿದ್ದೇ ಬೇರೆ.

ಕನ್ನಡಿಗರಿಗೆ ಆಕ್ಸಿಜನ್ ಕೊಡಲಿಕ್ಕೆ ಅದಕ್ಕೆ ಮನಸಿಲ್ಲ

ಕನ್ನಡಿಗರಿಗೆ ಆಕ್ಸಿಜನ್ ಕೊಡಲಿಕ್ಕೆ ಅದಕ್ಕೆ ಮನಸಿಲ್ಲ

ವಿಜಯನಗರ ಜಿಲ್ಲೆಯ ತೋರಣಗಲ್ಲು ಬಳಿ ಇರುವ ಜಿಂದಾಲ್ ಸ್ಟೀಲ್ ಕಂಪನಿಗೆ ರಾಜ್ಯ ಸರ್ಕಾರ ಎಂಟು ನೂರು ಕೋಟಿ ಯಷ್ಟು ಅನುಕೂಲ ಮಾಡಿಕೊಟ್ಟಿದೆ. ಮಿಗಿಲಾಗಿ ಜಿಂದಾಲ್ ಸ್ಟೀಲ್ ಇರುವ ಜಾಗ ಕರ್ನಾಟಕದ್ದು. ಅಲ್ಲಿ ಕೆಲಸ ಮಾಡುವರು ಕನ್ನಡಿಗರು‌. ಅ ಕಾರ್ಖಾನೆ ಬಳಸುತ್ತಿರುವ ವಿದ್ಯುತ್ ಮತ್ತು ನೀರು ಕನ್ನಡ ನೆಲದ್ದು. ಇಡೀ ರಾಜ್ಯವೇ ಕೊರೊನಾ ಸಂಕಷ್ಟದಲ್ಲಿ ಮುಳುಗಿ ಜೀವಗಳನ್ನೇ ಕಳೆದುಕೊಳ್ಳುತ್ತಿದ್ದರೂ, ಆಕ್ಸಿಜನ್ ಕೊಡುತ್ತಿಲ್ಲ. ಸ್ಟೀಲ್ ಪ್ಲಾಂಟ್‌ಗಳು ನೂಕ್ಲಿಯರ್ ಪ್ಲಾಂಟ್‌ಗಳು, ವಾಟರ್ ಟ್ರೀಟ್ ಮೆಂಟ್ ಪ್ಲಾಂಟ್‌ಗಳು ಕೋವಿಡ್ ತುರ್ತು ಅಗತ್ಯಕ್ಕೆ ಆಕ್ಸಿಜನ್ ಪೂರೈಕೆ ಮಾಡುವ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕೇಂದ್ರ ಸರ್ಕಾರದ ಈ ಆದೇಶದಿಂದ ಜಿಂದಾಲ್‌ನಲ್ಲಿ ದಿನಕ್ಕೆ ಸಾವಿರಾರು ಟನ್‌ಗಟ್ಟಲೇ ಆಕ್ಸಿಜನ್ ಉತ್ಪಾದನೆ ಆಗುತ್ತಿದ್ದರೂ ಈ ಕಷ್ಟ ಕಾಲದಲ್ಲಿ ಒಂದು ಸಿಲಿಂಡರ್ ಕೂಡ ರಾಜ್ಯಕ್ಕೆ ಪೂರೈಕೆ ಮಾಡಿಲ್ಲ.

ಮಾನವೀಯ ನೆಲೆಗಟ್ಟಿನಲ್ಲೂ ನೀಡಲಿಲ್ಲ

ಮಾನವೀಯ ನೆಲೆಗಟ್ಟಿನಲ್ಲೂ ನೀಡಲಿಲ್ಲ

ನಮ್ಮ ಕಂಪನಿ ಕರ್ನಾಟಕದಲ್ಲಿದೆ. ಕನ್ನಡಿಗರ ಜೀವ ಉಳಿಸುವ ಬಗ್ಗೆ ಮಾನವೀಯ ನೆಲೆಯಲ್ಲೂ ಕೂಡ ಜಿಂದಾಲ್ ಸ್ಟೀಲ್ ಚಿಂತನೆ ಮಾಡಿಲ್ಲ. ಆಕ್ಸಿಜನ್ ಪೂರೈಕೆ ಮಾಡುವ ವ್ಯಾಪ್ತಿಯಿಂದ ಸ್ಟೀಲ್ ಪ್ಲಾಂಟ್ ಗಳಿಗೆ ಕೇಂದ್ರ ಸರ್ಕಾರ ವಿನಾಯ್ತಿ ನೀಡಿ ಆದೇಶ ಹೊರಡಿಸಿದೆ. ಇದನ್ನೇ ಮುಂದಿಟ್ಟುಕೊಂಡಿರುವ ಜಿಂದಾಲ್ ಕಂಪನಿ ರಾಜ್ಯದ ಜನರ ಮೇಲೆ ಕರುಣೆ ತೋರಿಲ್ಲ. ಜಿಂದಾಲ್ ಸ್ಟೀಲ್‌ಗೆ ರಾಜ್ಯದ ಹಿತಾಸಕ್ತಿಗಿಂತಲೂ ಹೊರ ದೇಶಗಳು, ಹೊರ ರಾಜ್ಯಗಳೇ ಮುಖ್ಯ. ಮಿಗಿಲಾಗಿ ಲಾಭದ ಉದ್ದೇಶ. ಆಕ್ಸಿಜನ್ ಪೂರೈಕೆ ಮಾಡುವಂತೆ ರಾಜ್ಯ ಸರ್ಕಾರ ಕೇಳಿದರೆ, ನಾವು ವಿದೇಶಕ್ಕೆ ರಫ್ತು ಮಾಡುತ್ತಿದ್ದೇವೆ. ಅಲ್ಲದೇ ಹೊರ ರಾಜ್ಯಗಳಿಗೂ ಪೂರೈಕೆ ಮಾಡುತ್ತಿದ್ದೇವೆ ಎಂದು ಜಿಂದಾಲ್ ಸ್ಟೀಲ್ ಸಬೂಬು ಹೇಳಿ ಕೈತೊಳೆದುಕೊಂಡಿದೆ ಎಂಬ ಸಂಗತಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಒಳ ಒಪ್ಪಂದದ ಮರ್ಮ ಏನು ?

ಒಳ ಒಪ್ಪಂದದ ಮರ್ಮ ಏನು ?

ರಾಜ್ಯದಲ್ಲಿ ಕೊರೊನಾ ಅಕ್ರಂದನ ಹೆಚ್ಚಾದ ಬೆನ್ನಲ್ಲೇ ಸಚಿವ ಮುರುಗೇಶ್ ನಿರಾಣಿ ಜಿಂದಾಲ್ ಸ್ಟೀಲ್ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದರು. ಜಿಂದಾಲ್ ಕೂಡ ಆಕ್ಸಿಜನ್ ಪೂರೈಕೆ ಮಾಡಲಿದೆ ಎಂದು ಹೇಳಿದರು. ನಾನೂರು ಟನ್ ಆಕ್ಸಿಜನ್ ಕರ್ನಾಟಕಕ್ಕೆ ನೀಡುವುದಾಗಿ ಸುದ್ದಿಯೂ ಬಿತ್ತರವಾಯಿತು. ಆನಂತರ ಒಳ ಒಪ್ಪಂದ ಏನು ಮಾಡಿಕೊಂಡರೋ ? ಅಥವಾ ಜಿಂದಾಲ್ ಸ್ಟೀಲ್ ಅಮಿಷಗಳಿಗೆ ಬಲಿಯಾದರೋ ಏನೋ ಗೊತ್ತಿಲ್ಲ. ವೈದ್ಯಕೀಯ ಬಳಕೆಗೆ ಜಿಂದಲ್ ಸ್ಟೀಲ್ ಆಕ್ಸಿಜನ್ ಪೂರೈಕೆ ಮಾಡದೇ ಸುಮ್ಮನಾಗಿದೆ. ಆಕ್ಸಿಜನ್ ಇಲ್ಲದೇ ರಾಜ್ಯ ವೈದ್ಯಕೀಯ ಕ್ಷೇತ್ರ ಸಂಕಷ್ಟದಲ್ಲಿ ನರಳಾಡುತ್ತಿದೆ. ಆಕ್ಸಿಜನ್ ಸಿಗದೇ ಇದ್ದರೆ, ಮುಂದಿನ ದಿನಗಳಲ್ಲಿ ಕೋವಿಡ್ ಆಸ್ಪತ್ರೆಗಳನ್ನು ಕ್ಲೋಸ್ ಮಾಡುವ ಸ್ಥಿತಿ ನಿರ್ಮಾಣವಾಗಲಿದೆ.

ಮೂರು ದಿನದಲ್ಲಿ ಆಕ್ಸಿಜನ್ ಇಲ್ಲ ಅಂದ್ರೆ

ಮೂರು ದಿನದಲ್ಲಿ ಆಕ್ಸಿಜನ್ ಇಲ್ಲ ಅಂದ್ರೆ

ರಾಜ್ಯದಲ್ಲಿ ಆಸ್ಪತ್ರೆಗಳು ಬಂದ್: ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಗೆ ಆಕ್ಸಿಜನ್ ಲಭ್ಯವಾಗುತ್ತಿಲ್ಲ. ಸುಮ್ಮನೆ ರೋಗಿಗಳನ್ನು ಹಾಸಿಗೆಗಳ ಮೇಲೆ ಹಾಕಿಕೊಂಡು ಮೋಸ ಮಾಡುವ ಬದಲಿಗೆ ಆಸ್ಪತ್ರೆಗಳನ್ನು ಮುಚ್ಚುವುದೇ ಸೂಕ್ತ. ಇನ್ನೆರಡು ದಿನದಲ್ಲಿ ಆಕ್ಸಿಜನ್ ಆಸ್ಪತ್ರೆಗಳಿಗೆ ಪೂರೈಕೆ ಆಗದಿದ್ದರೆ ಬಹುತೇಕ ಆಸ್ಪತ್ರೆಗಳು ಬಾಗಿಲು ಹಾಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಲಿದೆ. ರಾಜ್ಯಕ್ಕೆ ಪ್ರತಿನಿತ್ಯ ಕನಿಷ್ಠ 500 ಟನ್ ಆಕ್ಸಿಜನ್ ಅಗತ್ಯವಿದೆ. ಜಿಂದಾಲ್ ಹೊರತು ಪಡಿಸಿ ಬೇರೆ ಕಡೆಯಿಂದ ಕೇವಲ 300 ಟನ್ ಆಕ್ಸಿಜನ್ ಲಭ್ಯವಾಗುತ್ತಿದೆ. ಆಕ್ಸಿಜನ್ ಪೂರೈಕೆ ಮಾಡದಿದ್ದರೆ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡದೆ ಕೈಕಟ್ಟಿ ಕೂರಬೇಕಾಗುತ್ತದೆ ಎಂದು ಡಾ. ಯು.ಎಸ್. ವಿಶಾಲ್ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.

ಜಿಂದಾಲ್ ಸ್ಟೀಲ್ ಪ್ಲಾಂಟ್ ಆಕ್ಸಿಜನ್ ಉತ್ಪಾದನೆ ವಿವರ

ಜಿಂದಾಲ್ ಸ್ಟೀಲ್ ಪ್ಲಾಂಟ್ ಆಕ್ಸಿಜನ್ ಉತ್ಪಾದನೆ ವಿವರ

ಜಿಂದಾಲ್ ಸ್ಟೀಲ್ ದಿನಕ್ಕೆ 2500 ಟನ್ ಧ್ರವೀಕೃತ ಆಕ್ಸಿಜನ್ ಉತ್ಪಾದನೆ ಮಾಡುತ್ತಿದೆ. ಕರ್ನಾಟಕ್ಕೆ ದಿನಕ್ಕೆ ಬೇಕಿರುವುದು ಕೇವಲ 500 ಟನ್‌. ಸರ್ಕಾರಗಳಿಂದ 800 ಕೋಟಿ. ರೂ.‌ನೆರವು ಪಡೆದಿರುವ ಜಿಂದಾಲ್ ಸ್ಟೀಲ್ ಉತ್ಪಾದನೆಯ ಐದನೇ ಒಂದು ಭಾಗ ರಾಜ್ಯಕ್ಕೆ ನೀಡಿದರೂ ಸಾಕು. ರಾಜ್ಯದಲ್ಲಿ ಆಕ್ಸಿಜನ್ ಕೊರತೆಯೇ ಇರಲ್ಲ. ಆದರೆ, ಸಚಿವ ನಿರಾಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 400 ಟನ್ ಆಕ್ಸಿಜನ್ ನೀಡುವುದಾಗಿ ಜಿಂದಾಲ್ ಸ್ಟೀಲ್ ಉಪಾಧ್ಯಕ್ಷ ಹೇಳಿಕೆ ನೀಡಿದ್ದರು. ಆದರೆ ಈ ವರೆಗೂ ಒಂದು ಕೆ.ಜಿ ಕೂಡ ಆಕ್ಸಿಜನ್ ಪೂರೈಕೆ ಮಾಡಿಲ್ಲ. ಒಂದು ದಿನದ ಆಕ್ಸಿಜನ್ ಜಿಂದಾಲ್ ರಾಜ್ಯಕ್ಕೆ ಕೊಟ್ಟರೆ, ಇತರೆ ಮೂಲಗಳಿಂದ ಸಿಗುತ್ತಿರುವ ಆಕ್ಸಿಜನ್ ಬಳಸಿಕೊಂಡರೆ ಹದಿನೈದು ದಿನಕ್ಕೆ ಆಕ್ಸಿಜನ್ ಸಮಸ್ಯೆಯೇ ಉದ್ಭವಿಸುವುದಿಲ್ಲ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಜಿಂದಾಲ್ ಸ್ಟೀಲ್ ಎಂದಿನಂತೆ ಕಾರ್ಯ ನಿರ್ವಹಣೆ ಮಾಡುತ್ತಿದೆ. ಇಂಥ ಸಂಸ್ಥೆಗೆ ರಾಜ್ಯ ಸರ್ಕಾರ ಎಂಟು ನೂರು ಕೋಟಿ ರೂ. ಸಬ್ಸಿಡಿ ನೀಡಿ ಉದಾರತೆ ಮರೆಯುತ್ತದೆ ಎಂಬುದು ವಿಪರ್ಯಾಸ ಅಲ್ಲವೇ ?

Recommended Video

ಕೊರೋನ ತಡಿಯೋಕೆ 14 ದಿನಗಳ ಕಾಲ Lock Down! | Oneindia Kannada
ಡಾ. ವಿಶಾಲ್ ರಾವ್ ಮನವಿ

ಡಾ. ವಿಶಾಲ್ ರಾವ್ ಮನವಿ

ಜಿಂದಾಲ್ ಸ್ಟೀಲ್ ಹಾಗೂ ಕಲ್ಯಾಣ್ ಸ್ಟೀಲ್‌ಗೆ ನನ್ನ ಆತ್ಮೀಯ ಕಳಕಳಿ,ಕರ್ನಾಟಕದ ಅಮೂಲ್ಯ ಜೀವ ರಕ್ಷಿಸಲು ಆಕ್ಸಿಜನ್ ಅಗತ್ಯವಿದೆ. ಸ್ಟೀಲ್ ಉತ್ಪಾದನೆಗಿಂತಲೂ ಅಮೂಲ್ಯ ಜೀವಗಳ ರಕ್ಷಣೆ ಅಗತ್ಯ. ಕೋವಿಡ್ ವಿರುದ್ಧದ ಸಮರದಲ್ಲಿ ಕೈ ಜೋಡಿಸೋಣ ಬನ್ನಿ. ದಯವಿಟ್ಟು ವೈದ್ಯಕೀಯ ಕ್ಷೇತ್ರಕ್ಕೆ ಬೇಕಿರುವ ಆಕ್ಸಿಜನ್ ಪೂರೈಕೆ ಮಾಡಿ ಎಂದು ಕಳಕಳಿಯಿಂದ ಮನವಿ ಮಾಡಿದ್ದಾರೆ. ಸರ್ಕಾರದ ಆರೋಗ್ಯ ನೀತಿ ಜಾರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಾ. ಯು.ಎಸ್. ವಿಶಾಲ್ ರಾವ್ ಇದೀಗ ಸಾರ್ವಜನಿಕವಾಗಿ ಜಿಂದಾಲ್‌ಗೆ ಆಕ್ಸಿಜನ್ ಪೂರೈಕೆ ಮಾಡುವಂತೆ ಮನವಿ ಮಾಡಿದ್ದಾರೆ.

English summary
Jindal Steel has been accused of cheating without providing oxygen to the state during the Covid Emergency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X