ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧವಾ ಅರ್ಚಕರ ಅನುಪಸ್ಥಿತಿ: ಪೂಜಾರಿ ವಿವರಣೆ

By Srinath
|
Google Oneindia Kannada News

ಮಂಗಳೂರು, ಅ.28: ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ವಿಧವೆಯರನ್ನು ಅರ್ಚಕರನ್ನಾಗಿ ನೇಮಕ ಮಾಡಿದ ನಂತರ ಅವರು ದೇವಸ್ಥಾನದಲ್ಲಿ ಕಾಣಿಸಿಕೊಳ್ಳದಿರುವ ಬಗ್ಗೆ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಪತ್ರಿಕಾಗೋಷ್ಠಿ ಕರೆದು ಪ್ರತಿಕ್ರಿಯೆ ನೀಡಿದ್ದಾರೆ.

ದೇವಸ್ಥಾನದಲ್ಲಿ ವಿಧವಾ ಅರ್ಚಕರಾದ ಲಕ್ಷ್ಮಿ ಶಾಂತಿ ಮತ್ತು ಇಂದಿರಾ ಶಾಂತಿ ಅವರನ್ನು ದತ್ತಾತ್ರೇಯ, ಸಾಯಿಬಾಬಾ ಮತ್ತು ನಾರಾಯಣ ಗುರುಗಳ ಮೂರ್ತಿಗೆ ಪೂಜೆ ಮಾಡಲು ನೇಮಿಸಲಾಗಿತ್ತು. ಆದರೆ ದಸರಾ ಮಹೋತ್ಸವದ ನಂತರ ಅವರಿಬ್ಬರೂ 10 ದಿನಗಳ ಕಾಲ ರಜೆ ಹಾಕಿ ಹೋಗಿದ್ದಾರೆ. ಹಾಗಾಗಿ ದೇವಸ್ಥಾನಕ್ಕೆ ಅವರು ಬರುತ್ತಿಲ್ಲ ಎಂದು ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ಇವರಿಬ್ಬರಿಗೂ ನಾವು ಯಾವುದೇ ಷರತ್ತುಗಳನ್ನು ವಿಧಿಸಿಲ್ಲ. ಅವರಿಗೆ ಅನುಕೂಲವಾದ ಸಮಯ/ ಸಂದರ್ಭದಲ್ಲಿ ಬಂದು ಪೂಜೆ ಸಲ್ಲಿಸಿಹೋಗಬಹುದು ಎಂದು ಅವರು ತಿಳಿಸಿದ್ದಾರೆ.

janardhan-poojary-widow-archakas-kudroli-temple-run-into-rough-weather
ಬೆಳಗಿನ ಸುದ್ದಿ: ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ವಿಧವೆಯರಿಂದಲೇ ಪೂಜೆ ಮಾಡಿಸುವ ಸಂಪ್ರದಾಯಕ್ಕೆ ಕೈಹಾಕಿದ್ದ ಕೈಪಕ್ಷದ ನಾಯಕನ ಕ್ರಾಂತಿ ಇಪ್ಪತ್ತೇ ದಿನಗಳಲ್ಲಿ ನಿಷ್ಪ್ರಯೋಜಕವಾಗಿ ಮೂಲೆ ಸೇರಿದೆ.

ಗೋಕರ್ಣನಾಥ ದೇವಸ್ಥಾನದಲ್ಲಿ ವಿಧವೆಯರನ್ನು ಅರ್ಚಕರನ್ನಾಗಿ ನೇಮಕ ಮಾಡುವ ಮೂಲಕ ಅತ್ಯಂತ ದೊಡ್ಡ ಕ್ರಾಂತಿಯ ಹುಯಿಲೆಬ್ಬಿಸಿದ್ದ ಪ್ರಚಾರಪ್ರಿಯ, ಕಾಂಗ್ರೆಸ್ ಪಕ್ಷದ ಮಾಜಿ ಕೇಂದ್ರ ಸಚಿವ ಬಿ ಜನಾರ್ದನ ಪೂಜಾರಿ ಅವರ ಬಹು ದೊಡ್ಡ ಕ್ರಾಂತಿಯೊಂದರ ಭ್ರಾಂತಿ ಕಳಚಿದೆ. ಈ ಬಗ್ಗೆ ಇಂದಿನ ಕನ್ನಡ ಪ್ರಭದಲ್ಲಿ ಸವಿವರ ಲೇಖನ ಪ್ರಕಟವಾಗಿದೆ.

ಕುದ್ರೋಳಿ ದೇವಸ್ಥಾನದಲ್ಲಿ ಇದೇ ಮೊದಲ ಬಾರಿಗೆ ವಿಧವೆಯರಿಗೆ ಅರ್ಚಕರಾಗುವ ಅವಕಾಶ ನೀಡುವ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ ಎಂದು ಜನಾರ್ದನ ಪೂಜಾರಿ ಘೋಷಿಸಿದ್ದರು. ಆರಂಭದಲ್ಲಿ ಅಂದರೆ, ಮೊದಲ ದಿನ (ಅ.6ರಂದು) ವಿಧವಾ ಅರ್ಚಕರಿಗೆ ಮುಖ್ಯ ದೇವರ ಪೂಜೆ ಮಾಡಲು ಅವಕಾಶ ನೀಡಲಾಗಿತ್ತು. ಫೋಟೊ, ವೀಡಿಯೋ ಎಲ್ಲಾ ನಡೆಯಿತು. ತೀರ್ಥ, ಪ್ರಸಾದ ವಿತರಣೆಯೂ ಅವರದ್ದೇ. ಜನಾರ್ದನ ಪೂಜಾರಿ ಅವರೂ ಆ ಅರ್ಚಕರಿಂದ ಪ್ರಸಾದ ಸ್ವೀಕರಿಸಿದ್ದೂ ಆಯಿತು.

ಆದರೆ 2ನೇ ದಿನದಿಂದ ಇಬ್ಬರೂ ವಿಧವಾ ಅರ್ಚಕರನ್ನು ದತ್ತಾತ್ರೇಯ, ಸಾಯಿಬಾಬಾ ಮತ್ತು ನಾರಾಯಣ ಗುರುಗಳ ಮೂರ್ತಿಗೆ ಪೂಜೆ ಮಾಡಲು ಮಾತ್ರ ಸೀಮಿತಗೊಳಿಸಲಾಗಿತ್ತು. ಅಲ್ಲಿ ತೀರ್ಥ- ಪ್ರಸಾದ ವಿತರಣೆಗೆ ಮಾತ್ರ ಅವರನ್ನು ಕೂರಿಸಲಾಗುತ್ತಿತ್ತು. ಈಗ ಒಂದು ವಾರದಿಂದ ವಿಧವಾ ಪೂಜಾರಿಗಳು ಕುದ್ರೋಳಿ ದೇವಸ್ಥಾನದ ಅವರಣದಲ್ಲೇ ಕಾಣುತ್ತಿಲ್ಲ!

ವಿಧವಾ ಪೂಜಾರಿಗಳ ಕಥೆ-ವ್ಯಥೆ:
ಅರ್ಚಕರಾಗಿ ನೇಮಕಗೊಂಡಿದ್ದ ಲಕ್ಷ್ಮಿ ಶಾಂತಿ ಮತ್ತು ಇಂದಿರಾ ಶಾಂತಿ ಅವರು ಸಂಪೂರ್ಣವಾಗಿ ಅಥವಾ ಸಾಂಪ್ರದಾಯಿಕವಾಗಿ ಪೂಜೆ ಮಾಡುವುದನ್ನು ಮತ್ತು ಮಂತ್ರಗಳನ್ನು ಕಲಿತವರಲ್ಲ. ಇದರಿಂದಾಗಿ ಅವರು ಭಕ್ತಿಯಿಂದ ಪೂಜೆ ಮಾಡಬಲ್ಲವರಾಗಿದ್ದರೇ ಹೊರತು, ಮಂತ್ರ ಪಠಿಸಲು ಮತ್ತು ಪೂಜಾ ವಿಧಿ ವಿಧಾನಗಳನ್ನು ಪೂರೈಸಲು ಸಮರ್ಥರಾಗಿರಲಿಲ್ಲ. ಇದರಿಂದ ಅವರಿಗೇ ಕೊಂಚ ಹಿಂಜರಿಕೆ ಮತ್ತು ಇರಿಸುಮುರುಸಾಗುತ್ತಿತ್ತು ಎಂದು ಕುದ್ರೋಳಿ ದೇವಸ್ಥಾನಕ್ಕೆ ಸದಾ ಭೇಟಿ ನೀಡುವ ಭಕ್ತರೊಬ್ಬರು ವ್ಯಥೆ ಪಟ್ಟಿದ್ದಾರೆ.

'ಮಂತ್ರ ಮುಖ್ಯವಲ್ಲ. ಭಕ್ತಿ ಮುಖ್ಯ' ಎಂದು ಜನಾರ್ದನ ಪೂಜಾರಿ ಅವರೇನೋ ಹೇಳಿರಬಹುದು. ಆದರೆ ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರೂ ಅದೇ ಮನೋಭಾವ ಹೊಂದಿರುವುದಿಲ್ಲವಲ್ಲಾ? ಇದು ವಿಧವಾ ಅರ್ಚಕರ ಮೇಲೆ ಒತ್ತಡ ಬೀರುತ್ತಿತ್ತು.

ಪದ್ಧತಿಗೆ ವಿರುದ್ಧವಾಗಿ ...
ದೇವಸ್ಥಾನದಲ್ಲಿ ವಿಧವಾ ಅರ್ಚಕರನ್ನು ನೇಮಿಸುವುದಾಗಿ ಜನಾರ್ದನ ಪೂಜಾರಿ ಅವರು ಮಾಧ್ಯಮಗಳ ಮುಂದೆ ಘೋಷಿಸಿ ಬಿಟ್ಟಿದ್ದರು. ಆದರೆ ಈ ಬಗ್ಗೆ ಅವರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಜತೆ ಚರ್ಚಿಸಿಯೇ ಇರಲಿಲ್ಲ. ಇದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಅಸಮಾಧಾನ, ಮೊದಲೇ ದೇವಸ್ಥಾನದಲ್ಲಿದ್ದ ಅರ್ಚಕರ ಅಸಹಕಾರ, ಮೊದಲಿನಿಂದ ನಂಬಿಕೊಂಡು ಬಂದ ಪದ್ಧತಿಗಳು ಇವೆಲ್ಲ ವಿಧವಾ ಅರ್ಚಕರ ಪದ್ಧತಿಯ ವಿರುದ್ಧವಾಗಿದ್ದವು.

ಇದೆಲ್ಲ ಕಾರಣಗಳು ಒಟ್ಟುಗೂಡಿ ವಿಧವಾ ಅರ್ಚಕರು ಕುದ್ರೋಳಿ ದೇವಸ್ಥಾನ ತೊರೆದಿರಬಹುದು ಎಂಬ ಅನುಮಾನವಿದೆ. ವಿಧವಾ ಅರ್ಚಕರು ಒಂದು ವಾರದಿಂದ ದೇವಸ್ಥಾನದಲ್ಲಿ ಕೆಲಸ ನಿರ್ವಹಿಸದೇ ಇರುವುದನ್ನು ದೇವಸ್ಥಾನ ಆಡಳಿತ ಮಂಡಳಿ ಮೂಲಗಳು ಕೂಡ ದೃಢಪಡಿಸಿವೆ.

English summary
Widow archakas who were appopinted by KPCC ex Chief Janardhana Poojary in Kudroli temple have run into rough weather. As the two widows no where seen in the temple premises of late. Earlier the Kudroli Sri Gokarnatha temple in Karnataka's coastal city of Mangalore had inducted two widows as archakas (temple priests) on October 6.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X