ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

OneIndia exclusive: ಕಾಶ್ಮೀರದಲ್ಲಿ ಕರ್ತವ್ಯನಿರತ ಪತಿಗೆ ತಲುಪುತ್ತಿಲ್ಲ ಪತ್ನಿಯ ಪ್ರೀತಿಯ ಕರೆ

|
Google Oneindia Kannada News

''ಪತಿಯೊಂದಿಗೆ ಮಾತನಾಡಿ 11 ದಿನಗಳಾಯಿತು, ನೀವಾದರೂ ಸರ್ಕಾರಕ್ಕೆ ಹೇಳಿ, ಕನಿಷ್ಟ ದೂರವಾಣಿ ಕರೆ ಮಾಡಲಾದರೂ ಅವಕಾಶ ಮಾಡಿಕೊಡಲು. ನನ್ನಂತೆ ಎಷ್ಟು ಹೆಣ್ಣು ಮಕ್ಕಳು ಕಷ್ಟಪಡುತ್ತಿದ್ದಾರೆ ಗೊತ್ತಾ?'' ಗಾನವಿ ಅವರು ಆತಂಕ ತುಂಬಿದ ದ್ವನಿಯಲ್ಲಿ 'ಒನ್‌ ಇಂಡಿಯಾ ಕನ್ನಡ' ಕಚೇರಿಗೆ ಕರೆ ಮಾಡಿ ಮಾತನಾಡುತ್ತಿದ್ದರು.

ಗಾನವಿ ಅವರ ದನಿಯಲ್ಲಿ ಪತಿಯೊಂದಿಗೆ ಮಾತನಾಡಲಾಗುತ್ತಿಲ್ಲವಲ್ಲ ಎಂಬ ಹತಾಶೆಯಿತ್ತು, ಬೇಸರವಿತ್ತು. ತನ್ನ ಕಷ್ಟವನ್ನು ಯಾರಿಗೆ ಹೇಳಿಕೊಳ್ಳಬೇಕು, ಹೇಳಿದರೆ ಯಾರು ಅರ್ಥಮಾಡಿಕೊಳ್ಳಬಲ್ಲರು ಎಂಬ ಗೊಂದಲವಿತ್ತು. ಎಲ್ಲಕ್ಕಿಂತಲೂ ಮಿಗಿಲಾಗಿ ಪತಿಯ ಮೇಲಿನ ಅಪಾರ ಪ್ರೀತಿ, ಕಾಳಜಿ ಅವರ ಮಾತಿನಲ್ಲಿ ಇಣುಕುತ್ತಿತ್ತು.

ಸಂಪರ್ಕಕ್ಕಾಗಿ ಜಮ್ಮು ಕಾಶ್ಮೀರದಲ್ಲಿ ಟೆಲಿಫೋನ್ ಬೂತ್‌ಗಳನ್ನು ತೆರೆಯಲಾಗಿದೆ ಎಂಬ 'ಒನ್‌ ಇಂಡಿಯಾ ಕನ್ನಡ'ದ ವರದಿಯನ್ನು ಓದಿ, ಪತಿಯನ್ನು ಸಂಪರ್ಕಿಸಬಹುದೆಂದು ಆಸೆಯಲ್ಲಿ ಗಾನವಿ ಅವರು, ಟೆಲಿಫೋನ್ ಬೂತ್‌ ಬಗ್ಗೆ ಮಾಹಿತಿ ಪಡೆಯಲೆಂದು 'ಒನ್‌ ಇಂಡಿಯಾ ಕನ್ನಡ' ಕಚೇರಿಗೆ ಕರೆ ಮಾಡಿದ್ದರು. ಆದರೆ ಅಲ್ಲಿನ ಲಕ್ಷಾಂತರ ಜನರಿಗೆ ತೆರೆಯಲಾಗಿರುವುದು ಕೇವಲ ಹತ್ತೇ ಟೆಲಿಫೋನ್ ಬೂತ್ ಎಂಬುದನ್ನು ತಿಳಿದ ಗಾನವಿ ನಿರಾಸೆ ಅನುಭವಿಸಿದರು. ಅದೇ ನಿರಾಸೆಯ ಭಾವದಲ್ಲಿಯೇ ಮಾತು ಮುಂದುವರೆಸಿದರು.

ಮೈಸೂರಿನ ಕೆ.ಆರ್.ನಗರ ನಿವಾಸಿ ಗಾನವಿ ಅವರ ಪತಿ ಸೈನಿಕ. ಜುಲೈ ತಿಂಗಳಲ್ಲಿ ಕರ್ತವ್ಯಕ್ಕಾಗಿ ಜಮ್ಮು ಕಾಶ್ಮೀರಕ್ಕೆ ತೆರಳಿದ್ದಾರೆ. ಆಗಸ್ಟ್‌ 4ರವರೆಗೆ ದಿನವೂ ಪತಿಯೊಂದಿಗೆ ಮಾತನಾಡುತ್ತಿದ್ದ ಗಾನವಿ ಅವರು, ಕಳೆದ 11 ದಿನದಿಂದ ಪತಿಯೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಗಾನವಿ ಅವರ ಮದುವೆಯಾಗಿ ಕೇವಲ ಎಂಟು ತಿಂಗಳಷ್ಟೆ ಆಗಿದೆ.

Jammu Kashmir: soldiers wife call not reaching her husband

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ಆರ್ಟಿಕಲ್ 370 ಅನ್ನು ರದ್ದು ಮಾಡುವ ಸಲುವಾಗಿ ಆಗಸ್ಟ್ 4ರ ಮಧ್ಯರಾತ್ರಿಯಿಂದ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆಗಳನ್ನು ರದ್ದು ಮಾಡಲಾಗಿದೆ. ಮೊಬೈಲ್ ಕರೆ, ಇಂಟರ್ನೆಟ್, ಟಿವಿ ಯಾವುದೂ ಇಲ್ಲ. ರೇಡಿಯೋ ಮತ್ತು ದೂರದರ್ಶನ ವಾಹಿನಿಗಳ ಸೇವೆಯನ್ನು ನಾಲ್ಕು ದಿನದ ಹಿಂದೆಯಷ್ಟೇ ಒದಗಿಸಲಾಗಿದೆ.

''ನನ್ನ ಪತಿ ದೇಶಸೇವೆ ಮಾಡಲು ಅಲ್ಲಿಗೆ ಹೋಗಿದ್ದಾರೆ, ಅವರ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ. ಆದರೆ ಅವರೊಂದಿಗೆ ಮಾತನಾಡಲೂ ಅವಕಾಶ ಇಲ್ಲದೇ ಹೋದರೆ ಹೇಗೆ?'' ಗಾನವಿ ಅವರ ಪ್ರಶ್ನೆ ನೇರವಾಗಿ ಸರ್ಕಾರವನ್ನೇ ಕೇಳುವಂತಿತ್ತು.

ಕಾಶ್ಮೀರದಲ್ಲಿ 10 ಟೆಲಿಫೋನ್ ಬೂತ್‌ಗಳ ಎದುರು ಲಕ್ಷಾಂತರ ಜನ ಕಾಶ್ಮೀರದಲ್ಲಿ 10 ಟೆಲಿಫೋನ್ ಬೂತ್‌ಗಳ ಎದುರು ಲಕ್ಷಾಂತರ ಜನ

''ನನ್ನಂಥ ಸಾವಿರಾರು ಹೆಣ್ಣು ಮಕ್ಕಳು, ತಾಯಂದಿರು ಎಷ್ಟು ಕಷ್ಟ ಪಡುತ್ತಿರುತ್ತಾರೆ, ಎಷ್ಟು ಆತಂಕದಲ್ಲಿರುತ್ತಾರೆ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ?''. ಗಾನವಿ ಅವರು ಸರ್ಕಾರಕ್ಕೆ ಕೇಳಬೇಕೆಂದಿದ್ದ ಪ್ರಶ್ನೆಗಳಿವು. ಆದರೆ, ಅವರ ಬಳಿ 'ಸರ್ಕಾರದ ನಂಬರ್' ಇರಲಿಲ್ಲ. ಸಾಮಾನ್ಯ ಜನರ ನೋವಿನ ನುಡಿಗಳು ಸರ್ಕಾರಗಳನ್ನು ತಲುಪುವುದೂ ಇಲ್ಲ.

ಗಂಡನ ಬಗ್ಗೆ, ಜಮ್ಮು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಏನಾದರೂ ಮಾಹಿತಿ ಸಿಗಬಹುದೇನೋ ಎಂದು ಮೈಯೆಲ್ಲಾ ಕಣ್ಣಾಗಿಸಿ ಕಾಯುತ್ತಿದ್ದಾರೆ ಗಾನವಿ. ''ನಾನು ನ್ಯೂಸ್ ಚಾನೆಲ್‌ಗಳಲ್ಲಿ ನೋಡುತ್ತಿರುತ್ತೇನೆ. ಅಲ್ಲಿ ಕರ್ಪ್ಯೂ ತೆಗೆದಿದ್ದಾರೆ, ಹಿಂಸಾಚಾರ ಇಲ್ಲ ಎಂದೆಲ್ಲಾ ಹೇಳುತ್ತಿರುತ್ತಾರೆ. ಆದರೆ ಫೋನ್ ಕಾಲ್‌ಗೆ ಏಕೆ ಅವಕಾಶ ಮಾಡಿಕೊಟ್ಟಿಲ್ಲ?''. ಗಾನವಿ ಅವರಿಗೆ ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಅರಿವಿಲ್ಲ. ಅದು ಅವರಿಗೆ ಬೇಕಾಗಿಯೂ ಇಲ್ಲ. ಅವರಿಗೆ ಬೇಕಿರುವುದು ಒಂದೇ, ಅದು ಪತಿಯ ದ್ವನಿ. 'ನಾನು ಆರಾಮವಾಗಿದ್ದೇನೆ, ಹೆದರಬೇಡ' ಎಂಬ ಭರವಸೆಯ ನುಡಿ ಅಷ್ಟೆ.

ಜಮ್ಮು ಮತ್ತು ಕಾಶ್ಮೀರ ಸೂಕ್ಷ್ಮ ವಿಚಾರ, ಸರ್ಕಾರಕ್ಕೆ ಕಾಲಾವಕಾಶ ಬೇಕು: ಸುಪ್ರೀಂಜಮ್ಮು ಮತ್ತು ಕಾಶ್ಮೀರ ಸೂಕ್ಷ್ಮ ವಿಚಾರ, ಸರ್ಕಾರಕ್ಕೆ ಕಾಲಾವಕಾಶ ಬೇಕು: ಸುಪ್ರೀಂ

''ನ್ಯೂಸ್ ಚಾನೆಲ್‌ನಲ್ಲಿ ತೋರಿಸುತ್ತಿದ್ದರು. ಕಾಶ್ಮೀರ ಕಾಯಲು ಹೋದ ಸೈನಿಕನೊಬ್ಬನ ಮಗ ಕಳೆದುಹೋಗಿದ್ದನಂತೆ. ಆದರೆ, ಮಗುವಿನ ತಂದೆಗೆ ಅದರ ಮಾಹಿತಿಯೇ ಇಲ್ಲ. ಪಾಪ ಎಷ್ಟು ನೋವನುಭವಿಸಿತ್ತು ಆ ಹೆಂಗಸು? ಮತ್ತಿನ್ಯಾರೋ ಸೈನಿಕರ ಮನೆಯಲ್ಲಿ ಇನ್ನೂ ಕಷ್ಟ ಆಗಿತ್ತು, ಮನೆಯ ಮಾಲೀಕ ಮನೆ ಖಾಲಿ ಮಾಡಲು ಹೇಳಿದ್ದ. ಆದರೆ ಆಕೆಯ ಗಂಡ ಕಾಶ್ಮೀರದಲ್ಲಿದ್ದಾರೆ. ಆಕೆ ಏನು ಮಾಡಬೇಕು ಎಲ್ಲಿಗೆ ಹೋಗಬೇಕು?''. ಗಾನವಿ ಬಳಿ ಹೇಳಲು ಇಂತಹ ಕತೆಗಳು ಇನ್ನೂ ಇದ್ದವೇನೋ. ಆದರೆ ಅವರು ಹೇಳಲಿಲ್ಲ, ಅಪರಿಚಿತರ ಬಳಿ ಕಷ್ಟ ಹೇಳಿಕೊಳ್ಳುವಂತಹ ಸಾಮಾನ್ಯ ಮಹಿಳೆ ಅವರಲ್ಲ ಎಂಬುದು ಅವರ ದ್ವನಿಯಿಂದ ಸ್ಪಷ್ಟವಾಗುತ್ತಿತ್ತು. ಸೈನಿಕರ ಮನೆಯ ಮಹಿಳೆಯರ ಗಟ್ಟಿತನ ಅದು.

''ಸರ್ ಇದು ನನ್ನೊಬ್ಬಳ ಕತೆಯಲ್ಲ, ಸಾವಿರಾರು ಹೆಣ್ಣು ಮಕ್ಕಳು ಈ ರೀತಿಯ ನೋವು ಅನುಭವಿಸುತ್ತಿದ್ದಾರೆ. ಹೀಗೆ ಕರೆ ಮಾಡಿ ಮಾತನಾಡುವ ಧೈರ್ಯ ಮಾಡದೇ ಇರುವ ಹೆಣ್ಣುಮಕ್ಕಳು ಹಲವರು ಇದ್ದಾರೆ. ಆದರೆ ನಾನು ಮಾಡಿದ್ದೇನೆ. ಸೈನಿಕರಿಗೂ ಹೆಂಡತಿ, ಮಕ್ಕಳು ಇರುತ್ತಾರೆ. ಸರ್ಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು'' ಸೈನಿಕರ ಮಡದಿಯ, ತಾಯಂದಿರ, ಅಕ್ಕ-ತಂಗಿಯರ ಪ್ರತಿನಿಧಿಯಂತೆ ಗಾನವಿ ಮಾತನಾಡಿದರು.

370 ವಿಧಿ ಪರಿಣಾಮ: ಜಮ್ಮು ಮತ್ತು ಕಾಶ್ಮೀರದಲ್ಲಿ ಮದುವೆಗಳು ರದ್ದು370 ವಿಧಿ ಪರಿಣಾಮ: ಜಮ್ಮು ಮತ್ತು ಕಾಶ್ಮೀರದಲ್ಲಿ ಮದುವೆಗಳು ರದ್ದು

ರಾಮಾಯಣದ ಊರ್ಮಿಳೆ, ಸಿದ್ಧಾರ್ಥನ ಮಡದಿ ಯಶೋಧರೆಯ ಈ ಕಾಲದ ಪ್ರತಿನಿಧಿ ಗಾನವಿ ಮತ್ತು ಅವರಂತಹ ಲಕ್ಷಾಂತರ ಸೈನಿಕರ ಮಡದಿಯರು. ಗಾನವಿ ಅವರ ಕೂಗು ಸರ್ಕಾರದ ಮುಚ್ಚಿದ ಕಿವಿಗೆ ಬೀಳುವ ಸಾಧ್ಯತೆ ಅತ್ಯಲ್ಪ. ಸರ್ಕಾರಗಳಿಗೆ ತಮ್ಮ ಉದ್ದೇಶ ಈಡೇರಿಕೆಯಷ್ಟೆ ಮುಖ್ಯ, ಸರ್ಕಾರದ ಗುರಿ ಈಡೇರಿಕೆಗೆ ನೆಲಮಟ್ಟದಲ್ಲಿ ದುಡಿಯುತ್ತಿರುವವರ ಜೀವನ, ಅವರ ತ್ಯಾಗ ಇವೆಲ್ಲವನ್ನೂ ಯಾವ ಸರ್ಕಾರಗಳೂ ಗಮನಿಸಿಲ್ಲ.

ಅಕ್ಟೋಬರ್ 31ರಿಂದ ಜಮ್ಮು-ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆಅಕ್ಟೋಬರ್ 31ರಿಂದ ಜಮ್ಮು-ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶ ಅಸ್ತಿತ್ವಕ್ಕೆ

ಜಮ್ಮು ಕಾಶ್ಮೀರದಲ್ಲಿ ಸ್ಥಿತಿ ಶಾಂತವಾಗಲಿ, ದೇಶದ ಇತರೆ ರಾಜ್ಯಗಳಂತೆ ಅಲ್ಲಿಯೂ ಪರಿಸ್ಥಿತಿ ಶಾಂತವಾಗಲಿ. ಮೈಸೂರಿನ ಗಾನವಿ ಅವರ ಪ್ರೀತಿಯ ಕರೆಗೆ ಅವರ ಪತಿ ಅಷ್ಟೇ ಪ್ರೀತಿಯಿಂದ ಉತ್ತರಿಸಲಿ.

English summary
Soldier's wife explains how painful it be to not talking to his husband. She is the representative of Soldiers families who were far from there beloved ones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X