ಸಿದ್ದರಾಮಯ್ಯನವರಿಂದ ನಿರ್ಜೀವ ಬಜೆಟ್ : ಶೆಟ್ಟರ್ ಟೀಕೆ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮಾರ್ಚ್ 18 : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಿರುವಾಗ (ಮಾ.16ರಂದು ಏರಿಕೆಯಾಗಿದೆ) ರಾಜ್ಯ ಸರ್ಕಾರ ಇವುಗಳ ಮೇಲೆ ಭಾರೀ ತೆರಿಗೆ ವಿಧಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ ಸಾಮಾನ್ಯರ ವಿರೋಧಿ ಬಜೆಟ್ ಮಂಡಿಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಟೀಕಿಸಿದ್ದಾರೆ.

ಶುಕ್ರವಾರ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜನ ಸಾಮಾನ್ಯರು ಬಳಸುವ ಪೆಟ್ರೋಲ್ ಮತು ಡೀಸೆಲ್ ಮೇಲೆ ತೆರಿಗೆ ಹೆಚ್ಚಿಸಿರುವುದು ಸರಿಯಲ್ಲ. ಇಡೀ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಯುತ್ತಿರುವ ಸಂದರ್ಭದಲ್ಲಿ ಸರ್ಕಾರ ಇಂತಹ ಪ್ರತಿಗಾಮಿ ಧೋರಣೆ ತಳೆದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಈ ಸಾಲಿನ ಬಜೆಟ್ ನಿರಾಶೆ ತಂದಿದ್ದು, ಇದೊಂದು ನಿರ್ಜೀವ ಬಜೆಟ್ ಆಗಿದೆ. ಜನ ಸಾಮಾನ್ಯರು, ಬಡವರ ಮತ್ತು ರೈತರ ವಿರೋಧಿ ಬಜೆಟ್ ಇದಾಗಿದೆ. ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಕೃಷಿ ಸಾಲ ಮನ್ನಾ ಘೋಷಣೆಯನ್ನು ಈ ಬಜೆಟ್ನಲ್ಲಿ ನಿರೀಕ್ಷಿಸಲಾಗಿತ್ತು. ಆದರೆ ಸಾಲ ಮನ್ನಾ ಆಗದೇ ಇರುವುದು ನಿರಾಸೆ ತಂದಿದೆ ಎಂದರು. [ಕರ್ನಾಟಕ ಬಜೆಟ್ 2016 : ಮುಖ್ಯಾಂಶಗಳು]

Jagadish Shettar trashes Siddaramaiah budget 2016

ರೈತ ವಿರೋಧಿ ಬಜೆಟ್ : ರೈತ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ರೈತರಿಗೆ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಗ್ರಾಮೀಣಾಭಿವೃದ್ಧಿಗೂ ಒತ್ತು ನೀಡಿಲ್ಲ. ಹಿಂದಿನ ಯೋಜನೆಗಳನ್ನೇ ಮುಂದುವರೆಸಲಾಗಿದೆ ಎಂದು ಜಗದೀಶ್ ಶೆಟ್ಟರ್ ರೈತರ ಪರ ಬ್ಯಾಟಿಂಗ್ ಮಾಡಿದರು.

ಖಾಸಗಿ ಬಸ್ಗಳ ಮೇಲಿನ ತೆರಿಗೆ ಏರಿಕೆ ಜನ ಸಾಮಾನ್ಯರಿಗೆ ಭಾರೀ ಹೊಡೆತವಾಗಿದೆ. ಹಲವೆಡೆ ಜನ ಖಾಸಗಿ ಬಸ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಈ ತೆರಿಗೆ ಏರಿಕೆಯಿಂದ ಜನ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆಯಾಗಲಿದೆ ಎಂದು ಅವರು ಮಾತಿನ ಚಾಟಿ ಬೀಸಿದರು. [ಕರ್ನಾಟಕ ಬಜೆಟ್ : ಯಾವುದು ಏರಿಕೆ, ಯಾವುದು ಇಳಿಕೆ]

ನಿರಾಶಾದಾಯಕ ಬಜೆಟ್ : ಒಟ್ಟಾರೆ ಈ ಬಜೆಟ್ ನಿರಾಶೆ ತಂದಿದೆ. ಅಭಿವೃದ್ಧಿಗೆ ಪೂರಕವಾಗಿಲ್ಲ. ನೀರಾವರಿಗೆ ನೀಡಿರುವ ಹಣ ಸಾಲದು, ಅದರಲ್ಲೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿವರ್ಷ ಹತ್ತು ಸಾವಿರ ಕೋಟಿ ರೂ ನೀಡಬೇಕೆಂಬ ಬೇಡಿಕೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹದಾಯಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನದ ಬಗ್ಗೆಯೂ ಬಜೆಟ್ನಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಎತ್ತಿನ ಹೊಳೆ ಯೋಜನೆಗೆ ನಿರ್ದಿಷ್ಟ ಮೊತ್ತ ನೀಡುವ ಬಗ್ಗೆಯೂ ಪ್ರಸ್ತಾವವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.

ಅಶೋಕ್ ಏನಂತಾರೆ? : ಸಾರಿಗೆ ಸಚಿವರೂ ಆಗಿದ್ದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಖಾಸಗಿ ಬಸ್ಗಳ ಮೇಲಿನ ತೆರಿಗೆ ಏರಿಕೆ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ. ಖಾಸಗಿ ಬಸ್ಗಳ ಟಿಕೆಟ್ ದರ ಹೊರೆಯಾಗಿದೆ. ಇದರಿಂದ ನೇರವಾಗಿ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರು ನಗರದ ಕೆರೆಗಳ ಅಭಿವೃದ್ಧಿಗೆ 100 ಕೋಟಿ ರೂ ಮೀಸಲಿರಿಸಲಾಗಿದೆ. 160 ಕೆರೆಗಳನ್ನು ಅಭಿವೃದ್ಧಿಪಡಿಸಲು ಈ ಹಣ ಸಾಲುವುದಿಲ್ಲ. ರೈತ ಸಂಕಷ್ಟದಲ್ಲಿರುವಾಗ ಬಜೆಟ್ನಲ್ಲಿ ರೈತರ ಪರವಾಗಿ ಹೊಸ ಯೋಜನೆಗಳನ್ನು ಸರ್ಕಾರ ನೀಡಿಲ್ಲ. ಬಜೆಟ್ ನಿರಾಶೆ ತಂದಿದೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Opposition leader Jagadish Shetter, former Chief Minister of Karnataka, has trashed budget by Siddaramaiah, terming it as not a pro-farmer, poor budget. He also lambasted Siddaramaiah for increasing sales tax on petrol and diesel.
Please Wait while comments are loading...