ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿಐ ತರಬೇತಿ ಪರೀಕ್ಷೆ ಕುರಿತು ಸರ್ಕಾರದ ಮಹತ್ವದ ತೀರ್ಮಾನ!

|
Google Oneindia Kannada News

ಬೆಂಗಳೂರು, ಡಿ. 21: ವೃತ್ತಿಪರ ಕೋರ್ಸ್‌ಗಳಲ್ಲಿ ಒಂದಾದ ಐಟಿಐ ಪರೀಕ್ಷೆಯ ಸುಧಾರಣೆ ಹಾಗೂ ಗ್ರಾಮೀಣ ಪ್ರದೇಶದ ಕಡುಬಡ ಮಹಿಳೆಯರಿಗೆ ಹೈನುಗಾರಿಕೆ ಮೂಲಕ ಜೀವನೋಪಾಯ ಕಲ್ಪಿಸಿಕೊಡುವ ʼಕ್ಷೀರ ಸಂಜೀವಿನಿ ಯೋಜನೆʼ ಒಪ್ಪಂದಗಳಿಗೆ ಡಿಸಿಎಂ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರ ಸಮಕ್ಷಮದಲ್ಲಿ ಸೋಮವಾರ ಬೆಂಗಳೂರಿನಲ್ಲಿ ಸಂಬಂಧಿತ ಅಧಿಕಾರಿಗಳು ಸಹಿ ಹಾಕಿದರು.

ಯುವಜನರಿಗೆ ವೃತ್ತಿಪರ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾಗಿರುವ ಮಹಿಳೆಯರು ಸ್ವಾವಲಂಭನೆಯ ಬದುಕು ಕಟ್ಟಿಕೊಳ್ಳಲು ಇವೆರಡೂ ಒಪ್ಪಂದಗಳು ಅತ್ಯಂತ ಪರಿಣಾಮಕಾರಿಯಾಗಿ ನೆರವಾಗುತ್ತವೆ ಎಂದು ಇದೇ ಸಂದರ್ಭದಲ್ಲಿ ಡಿಸಿಎಂ ಡಾ. ಅಶ್ವಥ್ ನಾರಾಯಣ್ ತಿಳಿಸಿದರು.

ಐಟಿಐ ಮತ್ತು ಪರೀಕ್ಷಾ ಪ್ರಾಧಿಕಾರ

ಐಟಿಐ ಮತ್ತು ಪರೀಕ್ಷಾ ಪ್ರಾಧಿಕಾರ

ಐಟಿಐ (ಎನ್‌ಸಿವಿಟಿ ಮತ್ತು ಎಸ್‌ಸಿವಿಟಿ) ಪರೀಕ್ಷೆಗಳನ್ನು ರಾಜ್ಯ ವೃತ್ತಿಪರ ತರಬೇತಿ ಸಂಸ್ಥೆಯ ಬದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಮೂಲಕ ನಿರ್ವಹಿಸುವುದು ಈ ಒಪ್ಪಂದದ ಉದ್ದೇಶ. ಈ ಒಪ್ಪಂದಕ್ಕೆ ಕೌಶಲ್ಯಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸೆಲ್ವಕುಮಾರ್ ಹಾಗೂ ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯಕ್ ಸಹಿ ಹಾಕಿ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.

ಕೌಶಲ್ಯಾಭಿವೃದ್ಧಿ ಸಂಕಲ್ಪ ಹೆಲ್ಪ್‌ಲೈನ್‌ಗೆ ಚಾಲನೆ ನೀಡಿದ ಡಿಸಿಎಂಕೌಶಲ್ಯಾಭಿವೃದ್ಧಿ ಸಂಕಲ್ಪ ಹೆಲ್ಪ್‌ಲೈನ್‌ಗೆ ಚಾಲನೆ ನೀಡಿದ ಡಿಸಿಎಂ

ಈವರೆಗೆ ವೃತ್ತಿಪರ ತರಬೇತಿ ಸಂಸ್ಥೆ ಐಟಿಐ ಪರೀಕ್ಷೆಯನ್ನು ನಡೆಸುತ್ತಿತ್ತು. ಆದರೆ ಆ ಪರೀಕ್ಷಾ ವಿಧಾನದ ಬಗ್ಗೆ ತೀವ್ರ ಆಕ್ಷೇಪಗಳಿದ್ದವು. ಜೊತೆಗೆ ಪರೀಕ್ಷೆಯೂ ಪಾರದರ್ಶಕವಾಗಿ ನಡೆಯುತ್ತಿರಲಿಲ್ಲ ಎಂಬ ದೂರುಗಳೂ ಇದ್ದವು. ಈ ಕುರಿತು ತಜ್ಞರು ಪರಿಶೀಲನೆ, ಅಧ್ಯಯನ ನಡೆಸಿ ಸಲಹೆಗಳನ್ನು ನೀಡಿದ್ದರು. ಅದರ ಫಲವಾಗಿ ಐಟಿಐ ಪರೀಕ್ಷೆ ನಡೆಸುವ ಅಧಿಕಾರವನ್ನು ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಲಾಗುತ್ತಿದೆ. ಈ ಸಂಬಂಧ ಮಹತ್ವದ ಒಪ್ಪಂದವಾಗಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರು ಇದೇ ವೇಳೆ ವಿವರಿಸಿದರು.

ಪರೀಕ್ಷಾ ಪ್ರಾಧಿಕಾರಕ್ಕೆ ಜವಾಬ್ದಾರಿ

ಪರೀಕ್ಷಾ ಪ್ರಾಧಿಕಾರಕ್ಕೆ ಜವಾಬ್ದಾರಿ

ಇನ್ನು ಮುಂದೆ ಕೈಗಾರಿಕಾ ತರಬೇತಿ ಇಲಾಖೆಯ ಸಹಕಾರದೊಂದಿಗೆ ಪರೀಕ್ಷೆ ಪ್ರವೇಶ ಪತ್ರಗಳ ಮುದ್ರಣ, ಪಟ್ಟಿ ಸಂಖ್ಯೆಗಳ ಮುದ್ರಣ, ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವುದು, ಆಯಾ ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು, ಉತ್ತರ ಪತ್ರಿಕೆಗಳ ಮೌಲ್ಯಮಾಪನ, ಫಲಿತಾಂಶ ಪ್ರಕಟಣೆ ಇತ್ಯಾದಿ ಕಾರ್ಯಗಳನ್ನು ಪರೀಕ್ಷಾ ಪ್ರಾಧಿಕಾರವೇ ಮಾಡಲಿದೆ.

ಕ್ಷೀರ ಸಂಜೀವಿನಿ ಯೋಜನೆ

ಕ್ಷೀರ ಸಂಜೀವಿನಿ ಯೋಜನೆ

ಗ್ರಾಮೀಣ ಕಡುಬಡ ಮಹಿಳೆಯರಿಗೆ ವರದಾನವಾಗಬಲ್ಲ 'ಕ್ಷೀರ ಸಂಜೀವಿನಿ ಯೋಜನೆ' ಒಪ್ಪಂದವು ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ-ಸಂಜೀವಿನಿ ಹಾಗೂ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್)‌ ನಡುವೆ ಏರ್ಪಟ್ಟಿದೆ. ಈ ಒಪ್ಪಂದಕ್ಕೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ-ಸಂಜೀವಿನಿಯ ನಿರ್ದೇಶಕಿ ಚಾರುಲತಾ ಹಾಗೂ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಅವರು ಸಹಿ ಹಾಕಿ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.

ಈಗಾಗಲೇ ಈ ಯೋಜನೆಯ ಮೊದಲ ಹಂತವು ಜಾರಿಯಾಗಿದ್ದು, ಇದೀಗ ಎರಡನೇ ಹಂತಕ್ಕಾಗಿ ಒಡಂಬಡಿಕೆ ಆಗಿದೆ. ಮೊದಲ ಹಂತದಲ್ಲಿ ಗ್ರಾಮೀಣ ಪ್ರದೇಶದ ಒಟ್ಟು ಹತ್ತು ಸಾವಿರದಷ್ಟು ಬಡ ಮತ್ತು ಕಡುಬಡ ಕುಟುಂಬಗಳ ಮಹಿಳೆಯರನ್ನು ಗುರುತಿಸಿ 250 ಮಹಿಳಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಮೂಲಕ ಸಂಘಟಿಸಿ ಈ ಎಲ್ಲ ಮಹಿಳೆಯರಿಗೆ ಹೈನುಗಾರಿಕೆ ಕುರಿತಂತೆ ವಿವಿಧ ಬಗೆಯ ತಾಂತ್ರಿಕ ತರಬೇತಿ, ಶೈಕ್ಷಣಿಕ ಪ್ರವಾಸ, ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕಲ್ಪಿಸುವುದು ಮತ್ತು 9,945 ಆರೋಗ್ಯವಂತ ಹೈನು ರಾಸುಗಳನ್ನು ಖರೀದಿಸಿ ವಿಮೆ ಮಾಡಿ ಮಾಡಿಸಲಾಗಿದೆ ಎಂದು ಇದೇ ವೇಳೆ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಮಾಹಿತಿ ನೀಡಿದರು.

ದುರ್ಬಲ ವರ್ಗದವರಿಗೆ ಸಹಾಯ

ದುರ್ಬಲ ವರ್ಗದವರಿಗೆ ಸಹಾಯ

ದುರ್ಬಲ ವರ್ಗದ ಮಹಿಳೆಯರಿಂದ 9,945 ಹೈನುರಾಸುಗಳ ಖರೀದಿ ಮತ್ತು ವಿಮೆ ಸೌಲಭ್ಯ, ಶೇ. 99%ರಷ್ಟು ಮಹಿಳೆಯರಿಗೆ ವಿವಿಧ ಬಗೆಯ ತರಬೇತಿಗಳ ಮೂಲಕ ತಾಂತ್ರಿಕ ಮತ್ತು ವೈಜ್ಞಾನಿಕ ಸಾಮರ್ಥ್ಯ ಬಲವರ್ಧನೆಗೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ಸುಮಾರು 500 ಮಹಿಳಾ ಸ್ವಸಹಾಯ ಗುಂಪುಗಳಿಂದ 2,70,00,000 ರೂ. ಉಳಿತಾಯ ಮಾಡಲಾಗಿದೆ. ಅಂದರೆ; ಸರಾಸರಿ 54,000 ರೂ.ಗಳನ್ನು ಉಳಿತಾಯ ಮಾಡಿಸಲಾಗಿದೆ ಎಂದರು.

ಹಾಗೆಯೇ; ಹಾಲು ಉತ್ಪಾದನೆಯಲ್ಲೂ ಶೇ.27%ರಷ್ಟು ಹೆಚ್ಚಳವಾಗಿದ್ದು, ತಲಾ ಒಬ್ಬ ಸದಸ್ಯೆಯೂ ಸಾಕುತ್ತಿರುವ ರಾಸುವಿನಿಂದ ಪ್ರತಿದಿನಕ್ಕೆ 9 ಲೀಟರ್ ಪೂರೈಕೆಯಾಗುತ್ತಿದೆ. ಪ್ರತಿದಿನಕ್ಕೆ ಸರಾಸರಿ 250 ರೂ. ನಿವ್ವಳ ಲಾಭವನ್ನು ಅವರು ಗಳಿಸುತ್ತಿದ್ದಾರೆಂದು ಹೇಳಿದರು ಡಿಸಿಎಂ ಅಶ್ವಥ್ ನಾರಾಯಣ ಅವರು ಹೇಳಿದ್ದಾರೆ.

English summary
ITI Examination Improvement, and the Ksheera Sanjeevini Project for Poor Women in Rural Areas was signed by the relevant authorities in front of DCM Dr. Ashwath Narayan in Bengaluru on Monday. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X