ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರ ಗಮನಕ್ಕೆ: ಸರೋಜಿನಿ ಮಹಿಷಿ ವರದಿ ಪರಿಷ್ಕರಣೆ & ಉದ್ಯೋಗಾವಕಾಶಗಳು

|
Google Oneindia Kannada News

ಬೆಂಗಳೂರು, ಫೆ. 13: ಡಾ. ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿಯೆ, ವರದಿ ಅನುಷ್ಠಾನ ಈಗ ಪ್ರಸ್ತುತವಾ? ಅಪ್ರಸ್ತುತವಾ ಎಂಬ ಚರ್ಚೆಗಳು ಆರಂಭವಾಗಿವೆ. ಸುಮಾರು 4 ದಶಕಗಳ ಹಿಂದೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಪಡೆಯುವಲ್ಲಿ ಆಗುತ್ತಿದ್ದ ಅನ್ಯಾಯ, ತಾರತಮ್ಯಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಲ್ಲಿಕೆಯಾಗಿದ್ದ ಸರೋಜಿನಿ ಮಹಿಷಿ ವರದಿ ಈ ವರೆಗೆ ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ.

ಆಗಿನ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರು ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ಸಿಗಬೇಕು ಎಂಬುದನ್ನು ಅಧ್ಯಯನ ಮಾಡಿ ವರದಿ ಕೊಡುವಂತೆ ಡಾ. ಸರೋಜಿನಿ ಮಹಿಷಿ ಸಮಿತಿ ರಚಿಸಿ ಸೂಚಿಸಿದ್ದರು. ನಂತರ 1983ರಲ್ಲಿಯೇ ಅಂದಿನ ಜನತಾ ಪಕ್ಷದ ಸರ್ಕಾರದಲ್ಲಿ ವರದಿ ಸಲ್ಲಿಕೆ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಜನತಾ ಪಕ್ಷ, ಕಾಂಗ್ರೆಸ್, ಜೆಡಿಎಸ್, ಜೆಡಿಯು, ಬಿಜೆಪಿ ಸೇರಿದಂತೆ ಕಾಲಕಾಲಕ್ಕೆ ಎಲ್ಲ ರಾಜಕೀಯ ಪಕ್ಷಗಳು ಆಡಳಿತ ನಡೆಸಿವೆ. ಆದರೆ ವರದಿಯ ಸಂಪೂರ್ಣ ಅನುಷ್ಠಾನಕ್ಕೆ ಮಾತ್ರ ಮುಂದಾಗಿಲ್ಲ. ಇದೀಗ ವರದಿ ಅನುಷ್ಠಾನ ಮಾಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೆರೆಯ ಆಂಧ್ರಪ್ರದೇಶ ಸರ್ಕಾರ ಶೇಕಡಾ 80 ರಷ್ಟು ಉದ್ಯೋಗಗಳನ್ನು ತೆಲುಗು ಭಾಷಿಕರಿಗೆ ಮೀಸಲಿಟ್ಟಿದೆ, ತಮಿಳುನಾಡಿನಲ್ಲಿ ಕೂಡ ಅದೇ ರೀತಿಯ ಕಾನೂನಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ರಾಜಕೀಯ ಇಚ್ಚಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಅಂದಿಗೂ ಇಂದಿಗೂ ಉದ್ಯೋಗ ವಲಯಗಳಲ್ಲಿ ಸಾಕಷ್ಟು ಬದಲಾವಣೆಗಳು, ಬೆಳವಣಿಗೆಗಳು ಆಗಿವೆ, ಆಗುತ್ತಿವೆ. 15 ವರ್ಷಗಳ ಅವಧಿಗೆ ಎಂದು ಕೊಟ್ಟಿದ್ದ ವರದಿ ಸಲ್ಲಿಯಾಗಿ 37 ವರ್ಷಗಳಾಗಿವೆ. ಇಂಥ ಪರಿಸ್ಥಿತಿಯಲ್ಲಿ ವರದಿಯಲ್ಲಿನ ಶಿಫಾರಸ್ಸುಗಳನ್ನು ಅನುಷ್ಠಾನ ಮಾಡುವುದು ಸಮಂಜಸವಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿಯೆ ವರದಿ ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ.

ಐಟಿ, ಬಿಟಿ ಕ್ಷೇತ್ರಗಳು ಆಗ ಇರಲೇ ಇಲ್ಲ

ಐಟಿ, ಬಿಟಿ ಕ್ಷೇತ್ರಗಳು ಆಗ ಇರಲೇ ಇಲ್ಲ

ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ದೊರೆಯುವಂತೆ ಮಾಡುವುದು ವರದಿಯ ಪ್ರಮುಖ ಉದ್ದೇಶವಾಗಿತ್ತು. ಆದರೆ ಈಗ ಪ್ರಮುಖ ಉದ್ಯೋಗದಾತ ಕ್ಷೇತ್ರಗಳಾಗಿರುವ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸೇರಿದಂತೆ ಹೆಚ್ಚು ಉದ್ಯೋಗ ಸೃಷ್ಟಿಸಿರುವ ಹಲವು ಕ್ಷೇತ್ರಗಳು ಆಗ ಅಸ್ತಿತ್ವದಲ್ಲೇ ಇರಲಿಲ್ಲ. ಕರ್ನಾಟಕ ಐಟಿ ಹಬ್ ಆಗಲು ಕರ್ನಾಟಕ ಸರ್ಕಾರ ಹಾಗೂ ಸ್ಥಳೀಯರ ಕೊಡುಗೆ ಕೂಡ ಅಪಾರವಾಗಿದೆ. ಹೀಗಾಗಿ ಐಟಿ, ಬಿಟಿ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಮೀಸಲಾತಿ ಸಿಗಲೇಬೇಕು. ಆದರೆ ಈ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ವರದಿಯಲ್ಲಿ ಶಿಫಾರಸ್ಸುಗಳೇ ಇಲ್ಲ. ಐಟಿ, ಬಿಟಿ ಸೇರಿದಂತೆ ಹಲವು ಕ್ಷೇತ್ರಗಳು ವರದಿ ಸಲ್ಲಿಕೆ ಆಗುವ ಸಂದರ್ಭದಲ್ಲಿ ಅಸ್ತಿತ್ವದಲ್ಲಿ ಇರಲೇ ಇಲ್ಲ.

ಇಂತಹ ಸಂದರ್ಭದಲ್ಲಿ ದಶಕಗಳ ಹಿಂದಿನ ವರದಿಯನ್ನು ಅನುಷ್ಠಾನ ಮಾಡುವುದು ಎಷ್ಟರ ಮಟ್ಟಿಗೆ ಪ್ರಯೋಜನ ಕೊಡಬಲ್ಲದು ಎಂಬ ಚರ್ಚೆ ನಡೆದಿದೆ. ಹೀಗಾಗಿಯೇ ವರದಿ ಅನುಷ್ಠಾನ ಮಾಡಲು ರಾಜ್ಯ ಸರ್ಕಾರ ಮುಂದಾಗಿಲ್ಲ ಎಂಬ ಮಾಹಿತಿಯಿದೆ. ತಜ್ಞರ ಅಭಿಪ್ರಾಯ, ಸಲಹೆ ಪಡೆದು ವರದಿ ಪರಿಷ್ಕರಣೆ ಆಗಿದೆ.

ಈಗ ಪ್ರಯೋಜನಕ್ಕೆ ಬಾರದ ಶಿಫಾರಸ್ಸುಗಳನ್ನು ಕೈಬಿಡಲು ತೀರ್ಮಾನ

ಈಗ ಪ್ರಯೋಜನಕ್ಕೆ ಬಾರದ ಶಿಫಾರಸ್ಸುಗಳನ್ನು ಕೈಬಿಡಲು ತೀರ್ಮಾನ

ಸಧ್ಯದ ಪರಿಸ್ಥಿತಿಯಲ್ಲಿ ಪ್ರಯೋಜನಕ್ಕೆ ಬಾರದೇ ಇರುವಂತಹ ಶಿಫಾರಸ್ಸುಗಳು ವರದಿಯಲ್ಲಿವೆ. ಹೀಗಾಗಿ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗಲೇ ವರದಿ ಪರಿಷ್ಕರಣೆ ಆಗಿದೆ. ಸತತ 15 ವರ್ಷಗಳ ಕಾಲ ಕರ್ನಾಟಕದಲ್ಲಿರುವವರು ಕನ್ನಡಿಗರೆಂದು ಪರಿಗಣಿಸಲಾಗುವುದು. ಆದರೆ ಅವರು ಕಡ್ಡಾಯವಾಗಿ ಕನ್ನಡ ಮಾತನಾಡುವುದರೊಂದಿಗೆ ಓದಲು, ಬರೆಯಲು ಕೂಡ ಕಲಿತಿರಲೇಬೇಕು ಎಂದು ಪರಿಷ್ಕೃತ ವರದಿಯಲ್ಲಿ ಸೇರಿಸಲಾಗಿದೆ.

ಜೊತೆಗೆ ಐಟಿ-ಬಿಟಿ, ಖಾಸಗಿ ಹಾಗೂ ಕೇಂದ್ರ ಸರ್ಕಾರ ಸ್ವಾಮ್ಯದ ಉದ್ಯೋಗಗಳು ಕಡ್ಡಾಯವಾಗಿ ಕನ್ನಡಿಗರಿಗೆ ದೊರೆಯಬೇಕು. ಜೊತೆಗೆ 'ಸಿ' ಮತ್ತ 'ಡಿ' ಗ್ರೂಪ್‌ ಉದ್ಯೋಗಗಳನ್ನು ಕಡ್ಡಾಯವಾಗಿ ಕನ್ನಡಿಗರಿಗೆ ಕೊಡಬೇಕು. ವಿಜ್ಞಾನಿಗಳು, ಉನ್ನತ ಹುದ್ದೆಗಳನ್ನು ಬಿಟ್ಟು ಉಳಿದ ಹುದ್ದೆಗಳನ್ನು ಕಡ್ಡಾಯವಾಗಿ ಕನ್ನಡಿಗರಿಗೆ ಮೀಸಲಿಡಬೇಕು ಎಂಬ ಕಾನೂನು ಮಾಡಲು ಒತ್ತಾಯ ಮಾಡಲಾಗಿದೆ.

ಆದ್ಯತೆ ಬೇಡ, ಕಡ್ಡಾಯ ಮಾಡಿ: ಮುಖ್ಯಮಂತ್ರಿ ಚಂದ್ರು

ಆದ್ಯತೆ ಬೇಡ, ಕಡ್ಡಾಯ ಮಾಡಿ: ಮುಖ್ಯಮಂತ್ರಿ ಚಂದ್ರು

ವರದಿ ಅನುಷ್ಠಾನದ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ, ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ, ನಾನು ಪ್ರಾಧಿಕಾರದ ಅಧ್ಯಕ್ಷ ಆಗಿದ್ದಾಗ ವರದಿ ಶಿಫಾರಸ್ಸಗಳನ್ನು ಈಗಿನ ಕಾಲಕ್ಕೆ ತಕ್ಕಂತೆ ಪರಿಷ್ಕರಣೆ ಮಾಡಿ ಸರ್ಕಾರಕ್ಕೆ ಸಲ್ಲಿಸಿದ್ದೇವೆ ಎಂದು 'ಒನ್ ಇಂಡಿಯಾ'ಕ್ಕೆ ಮಾಹಿತಿ ಕೊಟ್ಟಿದ್ದಾರೆ. ಐಟಿ, ಬಿಟಿ, ಖಾಸಗಿ ಕ್ಷೇತ್ರಗಳು ಸೇರಿದಂತೆ ಕೇಂದ್ರ ಸರ್ಕಾರದ ಸ್ವಾಮ್ಯದ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಮೀಸಲಾತಿ ಕೊಡಬೇಕೆಂದು ಸಲಹೆ ಕೊಟ್ಟಿದ್ದೇವೆ. ಮುಂದಿನ 15 ವರ್ಷಗಳ ಕಾಲ ಪರಿಷ್ಕೃತ ವರದಿ ಜಾರಿಯಲ್ಲಿರಬೇಕೆಂದು ಹೇಳಿದ್ದೇವೆ. ಜೊತೆಗೆ ಕನ್ನಡಿಗರಿಗೆ ಆದ್ಯತೆ ಮೇರೆಗೆ ಉದ್ಯೋಗ ಕೊಡುವುದು ಬೇಡ. ಕಡ್ಡಾಯವಾಗಿ ಉದ್ಯೋಗ ಕೊಡಲೇಬೇಕು ಎಂದು ಸೇರಿಸಿ ಎಂದು ಅಧಿಕಾರಿಗಳಿಗೆ ಸಲಹೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.

ನೆರೆಯ ಆಂಧ್ರಪ್ರದೇಶದಲ್ಲಿ ಉನ್ನತ ಹುದ್ದೆಗಳು ಸೇರಿದಂತೆ ತೆಲುಗು ಭಾಷಿಕರಿಗೆ ಶೇಕಡಾ 80 ರಷ್ಟು ಹುದ್ದೆಗಳನ್ನು ಕಡ್ಡಾಯವಾಗಿ ಕೊಡಲೇಬೇಕು ಎಂದು ಕಾನೂನು ಮಾಡಿದ್ದಾರೆ. ರಾಜ್ಯದಲ್ಲಿ ಕನಿಷ್ಠ ಶೇಕಡಾ 75ರಷ್ಟು ಉದ್ಯೋಗಗಳನ್ನು ಕನ್ನಡಿಗರಿಗೆ ಕಡ್ಡಾಯ ಮಾಡಿ ಎಂದು ಬೇಡಿಕೆ ಇಟ್ಟಿದ್ದೇವೆ. ಕಡ್ಡಾಯ ಮಾಡಿದರೆ ಕಾನೂನು ತೊಡಕುಗಳಾಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಆದ್ಯತೆ ಎಂದು ಬಂದರೆ ಅದು ಕನನಡಿಗರಿಗೆ ಪ್ರಯೋಜನವಾಗುವುದಿಲ್ಲ. ಹೀಗಾಗಿ ರಾಜ್ಯದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿ ಎಂದೆ ಮಾಡಬೇಕು ಅಂತಾ ಒತ್ತಾಯಿಸಿದ್ದೇವೆ ಎಂದು ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಹೇಳಿದ್ದಾರೆ.

ಸದನದಲ್ಲಿ ಕರಡು ಮಂಡನೆಯಾದ ಬಳಿಕ ಹೋರಾಟ ಬೇಕು

ಸದನದಲ್ಲಿ ಕರಡು ಮಂಡನೆಯಾದ ಬಳಿಕ ಹೋರಾಟ ಬೇಕು

ಇದೀಗ ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ಕರಡನ್ನು ಮಂಡಿಸುವಲ್ಲಿ ಮತ್ತೆ ವಿಳಂಬ ಆಗಬಾರದು ಎಂಬ ಒತ್ತಾಯವಿದೆ. ಇದೇ ಫೆಬ್ರವರಿ 17ರಿಂದ ಆರಂಭವಾಗುವ ಜಂಟಿ ಅಧಿವೇಶನದಲ್ಲಿಯೆ ಪರಿಷ್ಕೃತ ವರದಿಯನ್ನು ಮಂಡಿಸಿ ಅದಕ್ಕೆ ಕಾನೂನಿನ ರೂಪ ಕೊಡಬೇಕು. ಶೀಘ್ರ ನಿಯಮಾವಳಿ ರೂಪಿಸಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಎಂದು ಕಡ್ಡಾಯಗೊಳಿಸಬೇಕು. ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಆಗಿರುವ ಕಾನೂನು, ರಾಜ್ಯದಲ್ಲಿ ರೂಪಿಸಲು ತೊಂದರೆ ಏನೂ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಕನ್ನಡಪರ ಸಂಘಟನೆಗಳೂ ಕೂಡ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ವಿಚಾರದಲ್ಲಿ ಒಂದಾಗಿ ಹೋರಾಟ ಮಾಡುವ ಅಗತ್ಯವಿದೆ.

ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದ ಯಡಿಯೂರಪ್ಪ

ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದ ಯಡಿಯೂರಪ್ಪ

ವರದಿ ಅನುಷ್ಠಾನದ ಬಗ್ಗೆ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕನ್ನಡಪರ ಸಂಘಟನೆಗಳ ಮುಖಂಡರನ್ನು ಆಹ್ವಾನಿಸಿದ್ದಾರೆ. ಜೊತೆಗೆ ವಿಧಾನಸೌಧದಲ್ಲಿ ಮಾತನಾಡಿ, ಸರೋಜಿನಿ ಮಹಿಷಿ ವರದಿ ಜಾರಿ ಸಂಬಂಧ ಚರ್ಚೆ ಮಾಡುತ್ತೇವೆ ಎಂದಿದ್ದಾರೆ. ನಮ್ಮ ಇತಿಮಿತಿಯಲ್ಲಿ ಏನೇನು ಬದಲಾವಣೆ ತರಬೇಕು ಎಂಬುದನ್ನು ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ. ಏನೇನು ಜಾರಿಗೆ ತರಬೇಕು ಎಂಬುದನ್ನು ವಿಪಕ್ಷಗಳ ಜೊತೆಗೂ ಚರ್ಚಿಸುತ್ತೇವೆ ಎಂದಿದ್ದಾರೆ.


ಈಗಾಗಲೇ ಮಂಡನೆ ಆಗದೇ ಪರಿಷ್ಕೃತವಾಗಿರುವ ಡಾ ಸರೋಜಿನಿ ಮಹಿಷಿ ವರದಿಯನ್ನು ತಕ್ಷಣ ಸದನದಲ್ಲಿಟ್ಟು ಚರ್ಚಿಸಿ ಅಂಗೀಕಾರ ಮಾಡಿಕೊಳ್ಳಬೇಕಿದೆ. ಇಲ್ಲದೆ ಇದ್ದರೆ ಕಳೆದ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತ ಬಂದಿರುವ ಕನ್ನಡಪರ ಸಂಘಟನೆಗಳು ಮತ್ತೆ ಹೋರಾಟವನ್ನು ತೀವ್ರಗೊಳಿಸುವ ಸಾಧ್ಯತೆಗಳಿವೆ. ಈಗಾಗಲೇ ಮಾತು ಕೊಟ್ಟಿರುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡೆದುಕೊಂಡು ವರದಿ ಅನುಷ್ಠಾನ ಮಾಡಲಿ ಎಂಬುದು ಇಡೀ ಕರ್ನಾಟಕ ಜನತೆಯ ಒತ್ತಾಯ!.

English summary
Is the implementation of the Sarojini Mahishi Report relevant or irrelevant? Discussions have begun and there have been demands for a revised report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X