ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲೂ SSLC ಮತ್ತು PUC ಪರೀಕ್ಷೆ ರದ್ದು ಆಗಲಿದೆಯೇ ?

|
Google Oneindia Kannada News

ಬೆಂಗಳೂರು, ಮೇ. 02 : ಕೊರೊನಾ ಸೋಂಕು ಹಳ್ಳಿಗಳಿಗೂ ದಾಂಗುಡಿಯಿಟ್ಟ ಬೆನ್ನಲ್ಲೇ ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಹತ್ತನೇ ತರಗತಿ ಮಕ್ಕಳ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಸೂಕ್ತ ಕಾಲದಲ್ಲಿ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ವಿದ್ಯಾರ್ಥಿಗಳು ಪಾವತಿ ಮಾಡಿರುವ ಪರೀಕ್ಷಾ ಶುಲ್ಕವನ್ನು ವಾಪಸು ನೀಡುವಂತೆ ಶಿಕ್ಷಕರು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ನೆರೆ ರಾಜ್ಯ ಮಹಾರಾಷ್ಟ್ರದಂತೆ ರಾಜ್ಯದಲ್ಲೂ ಹತ್ತನೇ ತರಗತಿ ಪರೀಕ್ಷೆ ರದ್ದು ಮಾಡುವಂತೆ ಶಿಕ್ಷಣ ತಜ್ಞರು ಸಲಹೆ ಮಾಡಿದ್ದಾರೆ.

ಕೊರೊನಾ ಸೋಂಕು ರಾಜ್ಯದಲ್ಲಿ ತೀವ್ರ ಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹತ್ತನೇ ತರಗತಿ ಪರೀಕ್ಷೆ ರದ್ದಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ನೆರೆ ರಾಜ್ಯಗಳ ಮಾದರಿಯಲ್ಲಿ 2021 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆ ರದ್ದು ಮಾಡುವಂತೆ ಅಧಿಕಾರಿಗಳು ಶಿಕ್ಷಣ ಸಚಿವರಿಗೆ ಸಲಹೆ ನೀಡಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು? ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?

ಮಹಾರಾಷ್ಟ್ರದಲ್ಲಿ ಪರೀಕ್ಷೆ ಇಲ್ಲ : ಕೊರೊನಾ ಸೋಂಕು ಹರಡುವಿಕೆ ಮಹಾರಾಷ್ಟ್ರದಲ್ಲಿ ಎಲ್ಲೆ ಮೀರಿದೆ. ದಿನಕ್ಕೆ 60 ಸಾವಿರ ಕೊರೊನಾ ಪಾಸಿಟೀವ್ ಪ್ರಕರಣಗಳು ವರದಿಯಾಗುತ್ತಿವೆ. ದಿನಕ್ಕೆ 800 ಮಂದಿ ಕೊರೊನಾ ಸೋಂಕಿಗೆ ಬಲಿಯಾಗುತ್ತಿದ್ದಾರೆ. ಎರಡನೇ ಅಲೆಯ ಅಪಾಯ ಅರಿತ ಮಹಾರಾಷ್ಟ್ರ ಸರ್ಕಾರ ಒಂದು ವಾರದ ಹಿಂದೆಯೇ ಮಹಾರಾಷ್ಟ್ರದಲ್ಲಿ 2021 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದು ಪಡಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇದಲ್ಲದೇ ಮಕ್ಕಳು ಪರೀಕ್ಷೆಗಾಗಿ ಪಾವತಿ ಮಾಡಿರುವ ಶಾಲಾ ಶುಲ್ಕವನ್ನು ವಾಪಸು ವಿದ್ಯಾರ್ಥಿಗಳಿಗೆ ಹಿಂತಿರುಗಿಸುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಸುಮಾರು 80 ಕೋಟಿ ರೂಪಾಯಿ ವಿದ್ಯಾರ್ಥಿ ಶುಲ್ಕ ವಾಪಸು ಕೊಡುವ ಬಗ್ಗೆ ಅಧಿಕಾರಿ ವಲಯದಲ್ಲಿ ಚರ್ಚೆ ನಡೆದಿದೆ.

ತಮಿಳುನಾಡಿನಲ್ಲಿ SSLC ಪರೀಕ್ಷೆ ರದ್ದು

ತಮಿಳುನಾಡಿನಲ್ಲಿ SSLC ಪರೀಕ್ಷೆ ರದ್ದು

ನೆರೆ ರಾಜ್ಯ ತಮಿಳುನಾಡಿನಲ್ಲಿ ಈ ಬಾರಿಯೂ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದು ಮಾಡಿ ಅಲ್ಲಿನ ಸರ್ಕಾರ ಹದಿನೈದು ದಿನಗಳ ಹಿಂದೆಯೇ ಮಹತ್ವದ ತೀರ್ಮಾನ ಕೈಗೊಂಡಿತ್ತು. ತಮಿಳುನಾಡಿನಲ್ಲಿ ದಿನಕ್ಕೆ ಸರಾಸರಿ 19 ಸಾವಿರ ಕೊರೊನಾ ಪಾಸಿಟೀವ್ ಕೇಸುಗಳು ವರದಿಯಾಗುತ್ತಿವೆ. ಸರಾಸರಿ ದಿನಕ್ಕೆ150 ಮಂದಿ ಸಾವನ್ನಪ್ಪುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ ಅಲ್ಲಿನ ಸರ್ಕಾರ ಹತ್ತನೇ ತರಗತಿ ಮಕ್ಕಳ ಪರೀಕ್ಷೆಯನ್ನು ರದ್ದು ಮಾಡಿ ತೀರ್ಮಾನ ತೆಗೆದುಕೊಂಡಿತು.

ತಮಿಳುನಾಡು ಮತ್ತು ಮಹಾರಾಷ್ಟ್ರ ಸರ್ಕಾರಗಳು ಸೂಕ್ತ ಕಾಲದಲ್ಲಿ ತೀರ್ಮಾನ ಕೈಗೊಳ್ಳುವ ಮೂಲಕ ಮಕ್ಕಳ ಆರೋಗ್ಯ ಹಿತ ಕಾಯುವ ಜತೆಗೆ ಪ್ರಶ್ನೆ ಪತ್ರಿಕೆ ಮುದ್ರಣ, ಪರೀಕ್ಷೆಗೆ ಶಿಕ್ಷಕರ ಆಯೋಜನೆ, ಪ್ರಶ್ನೆ ಪತ್ರಿಕೆ ಸಾಗಣೆ, ಮೌಲ್ಯಮಾಪನ, ಫಲಿತಾಂಶ ಪ್ರಕಟ ಈ ಪ್ರಕ್ರಿಯೆದಿಂದ ಆಗುವಂತಹ ಕೋಟ್ಯಂತರ ರೂಪಾಯಿ ಹೊರೆಯನ್ನು ಮೊದಲೇ ತಪ್ಪಿಸಿದ್ದಾರೆ. ನಮಗೆ ಮಕ್ಕಳ ಆರೋಗ್ಯವೇ ಮುಖ್ಯ, ಮಕ್ಕಳ ಪರೀಕ್ಷೆ ಅಲ್ಲ ಎಂಬ ಸ್ಪಷ್ಟ ನಿರ್ಧಾರಗಳನ್ನು ಸೂಕ್ತ ಕಾಲದಲ್ಲಿ ತೆಗೆದುಕೊಂಡಿವೆ.

ರಾಜ್ಯದಲ್ಲಿ SSLC ಪರೀಕ್ಷೆ ರದ್ದು? :

ರಾಜ್ಯದಲ್ಲಿ SSLC ಪರೀಕ್ಷೆ ರದ್ದು? :

ನೆರೆ ರಾಜ್ಯ ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೋನಾ ಎರಡು ಪಟ್ಟು ಹೆಚ್ಚಾಗಿದೆ. ಹಳ್ಳಿಗಳಲ್ಲಿ ಕೂಡ ಕೊರೊನಾ ಸಾವುಗಳು ಸಂಭವಿಸುತ್ತಿವೆ. ಕರ್ನಾಟಕ ರಾಜ್ಯದಲ್ಲಿ ಪ್ರತಿ ದಿನ 40 ಸಾವಿರಕ್ಕೂ ಅಧಿಕ ಪಾಸಿಟೀವ್ ಪ್ರಕರಣಗಳು ವರದಿಯಾಗುತ್ತಿವೆ. 300 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಪರಿಸ್ಥಿತಿ ನೋಡುತ್ತಿದ್ದರೆ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣ ಗೋಚರಿಸುತ್ತಿಲ್ಲ. ಮಿಗಲಾಗಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗದೇ ಬೀದಿ ಹೆಣವಾಗುತ್ತಿದ್ದಾರೆ. ಮಹಾರಾಷ್ಟ್ರ ರಾಜ್ಯವನ್ನು ಸರಿಗಟ್ಟುವ ಹಾದಿಯಲ್ಲಿ ಕರ್ನಾಟಕ ಸಾಗಿದೆ. ಇಂಥ ಸಂಕಷ್ಟ ಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ SSLC ಮಕ್ಕಳ ಪರೀಕ್ಷೆ ರದ್ದು ಮಾಡುವಂತೆ ಕೆಲವು ನಿಷ್ಠಾವಂತ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಕುರಿತು ಸಚಿವ ಸುರೇಶ್ ಕುಮಾರ್ ಮಹತ್ವದ ಹೇಳಿಕೆಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಕುರಿತು ಸಚಿವ ಸುರೇಶ್ ಕುಮಾರ್ ಮಹತ್ವದ ಹೇಳಿಕೆ

ತಜ್ಞರು ಕೊಟ್ಟ ಸಲಹೆ ಏನು?

ತಜ್ಞರು ಕೊಟ್ಟ ಸಲಹೆ ಏನು?

ಈ ಬಾರಿ ಮಕ್ಕಳು ಶಾಲೆ ಎಂಬುದನ್ನೇ ನೋಡಿಲ್ಲ. ಕೇವಲ ಮೂರು ತಿಂಗಳಷ್ಟೇ ಹತ್ತನೇ ತರಗತಿ ಮಕ್ಕಳು ಶಾಲೆ ನೋಡಿದ್ದಾರೆ. ಇನ್ನು ಸರ್ಕಾರಿ ಶಾಲಾ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದರ ಜತೆಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕೊರೊನಾ ಎರಡನೇ ಅಲೆ ಪರಿಣಾಮಕ್ಕೆ ಯುವ ವಯಸ್ಸಿನವರು ಸಾವಿಗೀಡಾಗುತ್ತಿದ್ದಾರೆ. ಪರೀಕ್ಷೆ ರದ್ದು ಮಾಡದಿದ್ದರೆ,ಅದರ ತಯಾರಿ, ಪರೀಕ್ಷೆಗೆ ಹಾಜರಾಗುವ ಶಿಕ್ಷಕರ ಜತೆಗೆ ಮಕ್ಕಳಿಗೂ ಕೊರೊನಾ ಹರಡಿ ಅಪಾರ ಪ್ರಮಾಣದ ಜೀವ ಹಾನಿ ಆಗುವ ಸಾಧ್ಯತೆಯಿದೆ. ಮಿಗಿಲಾಗಿ ಮಕ್ಕಳ ಆರೋಗ್ಯದ ಜತೆಗೆ ಶಿಕ್ಷಕರ ಜೀವ ಕೂಡ ಅಮೂಲ್ಯವಾದುದು. ಕಳೆದ ವರ್ಷ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುವುದರಲ್ಲಿ ಅರ್ಥವಿತ್ತು.

ಈ ವರ್ಷ ನೆರೆ ರಾಜ್ಯಗಳಂತೆ ಪರೀಕ್ಷೆ ರದ್ದು ಮಾಡಿ ಸೂಕ್ತ ಕಾಲದಲ್ಲಿ ನಿರ್ಣಯ ಕೈಗೊಳ್ಳುವುದು ಸೂಕ್ತ. ಇಲ್ಲದಿದ್ದರೆ ಶಿಕ್ಷಕರು, ವಿದ್ಯಾರ್ಥಿಗಳು ಕೊರೊನಾ ಭೀತಿ ನಡುವೆ ಒತ್ತಡಕ್ಕೆ ಒಳಗಾಗುತ್ತಾರೆ. ಶಿಕ್ಷಣ ಇಲಾಖೆಗೂ ಆರ್ಥಿಕ ನಷ್ಟ ಉಂಟಾಗಲಿದೆ. ಹೀಗಾಗಿ ಸೂಕ್ತ ಕಾಲದಲ್ಲಿ ಪರೀಕ್ಷೆ ರದ್ದು ಮಾಡಿ ನಿರ್ಣಯ ಕೈಗೊಳ್ಳುವುದು ಸೂಕ್ತ ಎಂಬ ಸಲಹೆ ನೀಡಿದ್ದು, ಅದನ್ನು ಶಿಕ್ಷಣ ಸಚಿವರು ಎಷ್ಟರ ಮಟ್ಟಿಗೆ ಪರಿಗಣಿಸುತ್ತಾರೆ ಎಂಬುದು ಕಾದು ನೋಡಬೇಕಿದೆ. ಈಗಾಗಲೇ ತಜ್ಞರ ಸಮಿತಿ ನೀಡಿರುವ ಸಲಹೆಯಂತೆ ಸದ್ಯದ ಸ್ಥಿತಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ SSLC ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿರುವ ಶಿಕ್ಷಣ ಸಚಿವರು ರಾಜ್ಯದಲ್ಲಿ ಹತ್ತನೇ ತರಗತಿ ಪರೀಕ್ಷೆ ರದ್ದು ಮಾಡಿ ಮಹತ್ವದ ತೀರ್ಮಾನ ತೆಗೆದುಕೊಳ್ಳುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.

ಹಾವು ಸಾಯಬಾರ್ದು; ಕೋಲು ಮುರಿಬಾರ್ದು !

ಹಾವು ಸಾಯಬಾರ್ದು; ಕೋಲು ಮುರಿಬಾರ್ದು !

ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ತೀರ್ಮಾನಗಳು ಮೇಲ್ನೋಟಕ್ಕೆ ಅವರೊಬ್ಬ ಪ್ರಾಮಾಣಿಕ ರಾಜಕಾರಣಿ ಎಂಬುದು ಬಿಂಬಿಸುವಂತಿರುತ್ತದೆ. ಆದರೆ ವಾಸ್ತವದಲ್ಲಿ ಆ ಕಡೆ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತೆ ಇರುತ್ತವೆ. ಕರ್ನಾಟಕ ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರದ್ದು ಯಾವಾಗಲೂ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ತೀರ್ಮಾನ ಕೈಗೊಳ್ಳುತ್ತಾರೆ. ಈ ವರ್ಷ ಪೂರ್ತಿ ಶಾಲೆಗಳ ವಿಚಾರವಾಗಿ ತೆಗೆದುಕೊಂಡ ತೀರ್ಮಾನಗಳು ಶಿಕ್ಷಕ ಸಮುದಾಯದ ಬಹುದೊಡ್ಡ ಹೋರಾಟಕ್ಕೆ ನಾಂದಿ ಹಾಡಿತ್ತು. ನೆರೆ ರಾಜ್ಯಗಳಿಗೆ ಹೋಲಿಸಿದರೆ ಕೊರೊನಾ ಸೋಂಕು ಹೆಚ್ಚಳವಾಗಿದೆ. ಈಗಾಗಲೇ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾ ಪಟ್ಟಿಯನ್ನು ಜೂನ್ 21 ರಿಂದ ಎಂದು ಪ್ರಕಟಿಸಿದ್ದಾರೆ.

 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ

ಇದಕ್ಕೂ ಮೊದಲು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಮೇ ತಿಂಗಳಲ್ಲಿ ಘೋಷಣೆ ಮಾಡಿದ್ದಾರೆ. ಕೊರೊನಾ ಪ್ರಕರಣಗಳ ಪರಿಸ್ಥಿತಿ ನೋಡುತ್ತಿದ್ದರೆ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಬೇಕು, ಇಲ್ಲವೇ ಮುಂದೂಡದೇ ಬೇರೆ ದಾರಿ ಕಾಣುತ್ತಿಲ್ಲ. ರದ್ದು ಮಾಡಿದಲ್ಲಿ ಇಷ್ಟು ದಿನ ಮಕ್ಕಳು ಓದಿ ಒತ್ತಡಕ್ಕೆ ಒಳಗಾಗಿದ್ದು ಒಂದಾದರೆ, ಪ್ರಶ್ನೆ ಪತ್ರಿಕೆ ಮುದ್ರಣ, ಉತ್ತರ ಪತ್ರಿಕೆಗಳ ಮುದ್ರಣದ ವೆಚ್ಚ,ಪರೀಕ್ಷೆ ಸಿದ್ಧತೆಗೆ ತಗುಲುವ ವೆಚ್ಚ ಹೀಗೆ ಕೋಟ್ಯಂತರ ರೂಪಾಯಿ ಸರ್ಕಾರಿ ದುಡ್ಡು ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಪರೀಕ್ಷೆ ಮುಂದೂಡಿದರೆ, ಈವರೆಗೂ ತಯಾರಿ ನಡೆಸಿದ ವಿದ್ಯಾರ್ಥಿಗಳು ಮಾನಸಿಕ ಖಿನ್ನತೆಗೆ ಒಳಗಾಗಬಹುದು. ಮತ್ತೆ ಪರೀಕ್ಷೆ ಯಾವಾಗ ನಡೆಯುತ್ತದೆ ಎಂಬ ಅನಿಶ್ಚಿತತೆ ! ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯ ಬಹುದೊಡ್ಡ ಒತ್ತಡಕ್ಕೆ ಒಳಗಾಗಬೇಕಾಗುತ್ತದೆ. ಈ ವಾಸ್ತವ ಶಿಕ್ಷಣ ಸಚಿವರಿಗೆ ಅರಿವಾಗುವುದೇ ಇಲ್ಲ!

Recommended Video

KR ಮಾರುಕಟ್ಟೆಯನ್ನ ಬಂದ್ ಮಾಡಿದ ಪೊಲೀಸರು! | Oneindia Kannada
ಪಿಯು ರದ್ದು ಮಾಡಿ ಎಸ್ಎಸ್ ಎಲ್ ಸಿ ಪರೀಕ್ಷೆ

ಪಿಯು ರದ್ದು ಮಾಡಿ ಎಸ್ಎಸ್ ಎಲ್ ಸಿ ಪರೀಕ್ಷೆ

ಇನ್ನು ರಾಜ್ಯದಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರುತ್ತಿದೆ. ಮೇ. ನಲ್ಲಿ ಪಿಯುಸಿ ಪರೀಕ್ಷೆ ವೇಳಾಪಟ್ಟಿ ನಿಗದಿ ಪಡಿಸಿದ್ದಾರೆ. ಈಗಾಗಲೇ ಪ್ರಶ್ನೆ ಪತ್ರಿಕೆ ಮುದ್ರಣ ಕಾರ್ಯ ಸೇರಿದಂತೆ ಸರ್ವವೂ ಸದ್ದಿಲ್ಲದೇ ತಯಾರಿ ನಡೆಸಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಪಿಯು ಬೋರ್ಡ್ ವೆಚ್ಚ ಮಾಡಿದೆ. ಈಗಿರುವ ಸ್ಥಿತಿ ನೋಡಿದರೆ ರಾಜ್ಯ ಸರ್ಕಾರ ಮ್ಯಾಜಿಕ್ ಮಾಡಿ ಮೇ ತಿಂಗಳಲ್ಲಿ ನಿಯಂತ್ರಣ ಮಾಡುವ ಯಾವುದಾದರೂ ಒಂದು ದಾರಿ ಕಾಣುತ್ತಿದೆಯೇ ? ಇಲ್ಲವೇ ಪಿಯುಸಿ ಮಕ್ಕಳು ಯುವಕರು, ಕೊರೊನಾ ಬಂದರೂ ಏನೂ ಆಗಲ್ಲ ಎಂಬ ಧೈರ್ಯವಾ ಗೊತ್ತಿಲ್ಲ. ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆ ತೀರಾ ಗಂಭೀರವಾಗಿರುವಂತದ್ದು. ಇದರ ಬಗ್ಗೆ ಶಿಕ್ಷಣ ಸಚಿವರು ಗಮನ ಕೊಟ್ಟು ಮಹತ್ವದ ತೀರ್ಮಾನ ಸೂಕ್ತ ಕಾಲದಲ್ಲಿ ಕೈಗೊಳ್ಳುವುದು ಬಿಟ್ಟು, " ರಾಜಾಜಿನಗರ ಬಿಜೆಪಿ ಆಂಬ್ಯೂಲೆನ್ಸ್ "ಗಳಿಗೆ ಚಾಲನೆ ಕೊಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಬಹುಶಃ ಇದೇ ಕೊರೊನಾ ಇದೇ ರೀತಿ ಯಿದ್ದು, ಕೊನೆ ಹಂತದಲ್ಲಿ ಪಿಯುಸಿ ಪರೀಕ್ಷೆ ರದ್ದು ಮಾಡಬೇಕು ಆಗ ಶಿಕ್ಷಣ ಸಚಿವರಿಗೆ ಸಿಗುವ ಗೌರವ , ಪ್ರಶಂಸೆ ನೋಡುವುದೇ ಸೂಕ್ತ.

English summary
Tamilnadu and Maharashtra states cancelled SSLC board exams, experts suggested to cancel SSLC and 2nd PUC exams in Karnataka also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X