ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಪಿಎಲ್ ಕಾರ್ಡ್ ಇಲ್ಲದೆ ಚಿಕಿತ್ಸೆ ವಂಚಿತ ಬಾಲಕ

By Prasad
|
Google Oneindia Kannada News

Is BPL card must for treatment for the poor?
ಯಾದಗಿರಿ, ಸೆ. 19 : ಈ ಹದಿಮೂರು ವರ್ಷದ ಬಾಲಕನ ಸ್ಥಿತಿ ನೋಡಿದರೆ ಕರಳು ಕಿತ್ತುಬರದೆ ಇರದು. ಈ ಬಾಲಕನ ಚಿಕಿತ್ಸೆಗಾಗಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿರುವ ಪಾಲಕರು ಪರಿತಪಿಸುತ್ತಿರುವುದನ್ನು ನೋಡಿದರೆ ಹೃದಯ ಮಿಡಿಯದೆ ಇರದು.

ಆದರೆ, ಕಡುಬಡವರ ಮಗನಾದ ಈ ಬಾಲಕನಿಗೆ ಚಿಕಿತ್ಸೆ ನೀಡಲು ಬೆಂಗಳೂರಿನ ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಬಾಲಕನ ಪಾಲಕರ ಬಳಿ ಬಿಪಿಎಲ್ ಕಾರ್ಡ್ ಇಲ್ಲದೇ ಇರುವುದು! ಜೀವನ್ಮರಣದೊಂದಿಗೆ ಹೋರಾಟ ನಡೆಸಿರುವ ಬಾಲಕ ಬಿಪಿಎಲ್ ಕಾರ್ಡ್ ಇಲ್ಲದ್ದರಿಂದ ಚಿಕಿತ್ಸೆಯಿಂದ ವಂಚಿತನಾಗಿದ್ದಾನೆ.

ಬಡವರ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾ? ಬಾಲಕನ ಈ ಪರಿಸ್ಥಿತಿಯನ್ನು ಗಮನಿಸಿರುವ ಗುರುಮಿಠಕಲ್ ಶಾಸಕ, ಜವಳಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಅವರು ಖರ್ಚುವೆಚ್ಚಗಳನ್ನು ಭರಿಸಲು ಮುಂದೆ ಬಂದಿರುವುದು ಪಾಲಕರಿಗೆ ಹೋದ ಜೀವ ಮರಳಿ ಬಂದಂತಾಗಿದೆ.

ಯಾದಗಿರಿ ತಾಲೂಕಿನ ಸಾವೂರ ಗ್ರಾಮದ ನಿವಾಸಿ ಮರೆಪ್ಪಾ ಎಂಬಾತನ ಮಗ ಮರಿಯಪ್ಪ ಊರ್ಫ್ ಮಹೇಂದ್ರ. ಈತ ಕಳೆದ ಮೂರು ವರ್ಷಗಳಿಂದ ಲೀವರ್ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಮೂರು ವರ್ಷಗಳಿಂದ ಯಾದಗಿರಿಯಿಂದ ಬೆಂಗಳೂರಿಗೆ ಬಂದು ಕೂಲಿನಾಲಿ ಮಾಡಿ ಬಾಲಕನಿಗೆ ಚಿಕಿತ್ಸೆ ಕೊಡಿಸಲು ಪಾಲಕರು ಯತ್ನಿಸುತ್ತಿದ್ದಾರೆ.

ಚಿಕಿತ್ಸೆಗೆ 10ರಿಂದ 12 ಲಕ್ಷ ರು. ಖರ್ಚಾಗುತ್ತದೆಂದು ವೈದ್ಯರು ಹೇಳಿದ್ದಾರೆ. ಅಷ್ಟುಇಷ್ಟು ಚಿಕಿತ್ಸೆ ಕೊಡಿಸಲಾಗಿದೆಯಾದರೂ ಶಸ್ತ್ರಚಿಕಿತ್ಸೆ ಇಲ್ಲದೆ ಸಂಪೂರ್ಣ ಗುಣವಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ದಿನದಿಂದ ದಿನಕ್ಕೆ ಕಾಯಿಲೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಹೊಟ್ಟೆ ಊದಿಕೊಳ್ಳುತ್ತಿದೆ. ಮಗನ ಯಾತನೆ ನೋಡಲಾಗದೆ ಮರೆಪ್ಪಾ ದಂಪತಿ ಒದ್ದಾಡುತ್ತಿದೆ.

ಹೊಟ್ಟೆ ತೀವ್ರವಾಗಿ ಊದಿಕೊಂಡಿದೆ. ಸರಿಯಾಗಿ ಕೂಡುವುದಕ್ಕೆ ಮತ್ತು ನಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಬಾಲಕ ಮಲಗಿದಲ್ಲಿಯೇ ಮಲಗಿರುತ್ತಾನೆ. ಅಪೋಲೋ ಅಥವಾ ನಾರಾಯಣ ಹೃದಯಾಲಯದಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ಕೊಡಿಸಬೇಕಾದರೆ ಬಿಪಿಎಲ್ ಕಾರ್ಡ್ ನ ಅಗತ್ಯವಿದೆ ಅಂತಾರೆ ಮರೆಪ್ಪಾ.

ಬಿಪಿಎಲ್ ಕಾರ್ಡ್ ಇಲ್ಲದ್ದರಿಂದ ಬೇರೆ ದಾರಿ ಕಾಣದೆ ಪಾಲಕರು ಮಗನ ಸಮೇತ ಊರಿಗೆ ಮರಳಿದ್ದಾರೆ. ಬಿಪಿಎಲ್ ಕಾರ್ಡ್ ಕೊಡಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಬುಧವಾರ ಬಂದಿದ್ದರು. ಅರ್ಜಿ ಸಲ್ಲಿಸಿ ಬಾಲಕನ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ತೋರಿಸಿದರೂ ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ.

ಸರ್ಕಾರ ಬಡವರಿಗೆ ಅನುಕೂಲವಾಗಲೆಂದು ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಆದರೆ,ಯೋಜನೆಗಳು ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ಬರದಿದ್ದಾಗ ಎಂತಹ ತೊಂದರೆಗೆ ಒಳಗಾಗಬೇಕಾಗುತ್ತದೆ ಎನ್ನುವುದಕ್ಕೆ ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರಾಗಿರುವ ಈ ಕುಟುಂಬದ ರೋಧನವೆ ಸಾಕ್ಷಿಯಾಗಿದೆ.

ಸರ್ಕಾರದ ನಿಯಮಗಳು ಏನೇ ಇರಲಿ. ಇಂತಹ ತುರ್ತು ಪರಿಸ್ಥಿತಿಯಲ್ಲಿ ದಾಖಲೆಗಳಿದ್ದಾಗ ಮಾತ್ರ ಚಿಕಿತ್ಸೆ ನೀಡುವುದು ಎಂತಹ ನ್ಯಾಯ? ದಾಖಲೆಗಳಿಲ್ಲದಿದ್ದರೆ ಚಿಕಿತ್ಸೆ ನೀಡಬಾರದೆ? ವೈದ್ಯರು ಮಾನವೀಯತೆ ತೋರಿ ತೀವ್ರವಾಗಿ ಬಳಲುತ್ತಿರುವ ಬಾಲಕನಿಗೆ ತುರ್ತು ಶಸ್ತ್ರಚಿಕಿತ್ಸೆ ನೀಡಬೇಕು ಎಂದು ಆ ಬಾಲಕನ ಪರಿಸ್ಥಿತಿ ನೋಡಿದವರು ಹೇಳುತ್ತಿದ್ದಾರೆ.

English summary
A boy is suffering from liver problem for the past 3 years. The poor parents from Yadgir are not able to give him proper treatment in Bangalore as they do not have BJP card. Now, Baburao Chinchanasur, in-charge minister of Yadgir, has come forward to provide help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X