ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್‌ನಲ್ಲೂ ಮಕ್ಕಳು ಕಲಿತಿದ್ದಾರೆ- ಅದಕ್ಕೂ ಬೆಲೆ ಕೊಡಿ: ನಿರಂಜನಾರಾದ್ಯ

|
Google Oneindia Kannada News

ಬೆಂಗಳೂರು, ಮೇ 16: ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳ ಕಾಲ ಬಹುತೇಕ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದವು ಎಂಬುದು ನಿಜ. ಈ ಆವಧಿಯಲ್ಲಿ ಮಕ್ಕಳು ಏನೂ ಕಲಿತಿಲ್ಲ, ಅವರನ್ನು ಶೈಕ್ಷಣಿಕವಾಗಿ ಸುಧಾರಿಸಬೇಕು ಎಂಬ ಕಾರಣದಿಂದ ನಿಮ್ಮ ಹಳೆಯ ಪ್ರಯೋಗಗಳನ್ನೇ ಮಕ್ಕಳ ಮೇಲೆ ಹೇರಬೇಡಿ. ಕೋವಿಡ್ ಕಾಲದಲ್ಲಿಯೂ ಮಕ್ಕಳು ಸಾಮಾಜಿಕ ಜವಾಬ್ದಾರಿಗಳು, ಮನೆಯ ಪರಿಸ್ಥಿತಿಗಳು, ಕುಟುಂಬದ ಹಿರಿಯರೊಂದಿಗೆ ಕೆಲವು ಸಾಂಸ್ಕೃತಿಕ ಕಲೆಗಳು ಕಲಿತಿದ್ದಾರೆ. ಅವುಗಳನ್ನು ಒಳಗೊಂಡಂತೆ ಶೈಕ್ಷಣಿಕ ಪಠ್ಯಗಳನ್ನು ಸಿದ್ಧಪಡಿಸುವ ಅಪರೂಪದ ಅವಕಾಶ ಇದೆ. ಅದನ್ನು ಬಳಸಿಕೊಳ್ಳಬೇಕು ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾಪೋಷಕ ವಿ.ಪಿ. ನಿರಂಜನಾರಾಧ್ಯ ಹೇಳಿದ್ದಾರೆ.

2022-23ನೇ ಸಾಲಿನ ಶೈಕ್ಷಣಿಕ ವರ್ಷದ ತರಗತಿಗಳು ಮೇ 16ರಿಂದ ಆರಂಭವಾಗಿವೆ. ಬಹುತೇಕ ನಿಯಮಿತವಾಗಿ ಶಾಲೆಯ ಮುಖ ನೋಡದ ಮಕ್ಕಳು ಇಂದಿನಿಂದ ಖುಷಿ ಖುಷಿಯಾಗಿ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ, ಮಕ್ಕಳು ಮತ್ತು ಪೋಷಕರ ಪಾತ್ರದ ಬಗ್ಗೆ ನಿರಂಜನಾರಾಧ್ಯ 'ಒನ್ಇಂಡಿಯಾ ಕನ್ನಡ' ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

"ಕಲಿಕಾ ಚೇತನ" ಕಾರ್ಯಕ್ರಮ

ಪ್ರಶ್ನೆ: ಎರಡು ವರ್ಷಗಳ ಬಳಿಕ ಶಾಲೆಯ ಮೆಟ್ಟಿಲು ಹತ್ತಿದ ಮಕ್ಕಳ ಮಾನಸಿಕ ಸ್ಥಿತಿ ಹೇಗಿದೆ?

ನಿರಂಜನಾರಾಧ್ಯ: ಕಳೆದರೆಡು ವರ್ಷಗಳಿಂದ ಮಕ್ಕಳು ಮನೆಯಲ್ಲಿಯೇ ಇದ್ದರು. ಹೊರಗಡೆಯ ಸಾಂಕ್ರಾಮಿಕ ಪರಿಸ್ಥಿತಿಯ ಮಧ್ಯೆ ಪೋಷಕರೂ ಸಹ ಮಕ್ಕಳನ್ನು ಸಾಕಷ್ಟು ಜತನದಿಂದಲೇ ಕಾಪಾಡಿಕೊಂಡಿದ್ದಾರೆ. ಆದರೆ, ಅದು ಹೆದರಿಯಾಗಬಾರದು. ಮಕ್ಕಳು ಹೊರಗೆ ಬರಲೇಬೇಕು, ಶಾಲಾ ಶಿಕ್ಷಣ ಕಲಿಯಲೇಬೇಕು. ಹೀಗೆ ಶಾಲೆಗೆ ಬಂದ ಮಕ್ಕಳಿಗೆ ಕೆಲವರಲ್ಲಿ ಅಕ್ಷರ ಜ್ಞಾನ ಇದ್ದರೆ, ಕೆಲವರಲ್ಲಿ ಅದರ ಕೊರತೆ ಇರಬಹುದು. ಆದರೆ, ಎರಡು ವರ್ಷಗಳ ಮಕ್ಕಳ ಅನುಭವ ಕಥನವೂ ದೊಡ್ಡದೇ. ಅವರು ಏನೂ ಕಲಿತಿಲ್ಲ ಎಂದು ನಿರ್ಧರಿಸುವುದು ತಪ್ಪು. ಸಾಮಾಜಿಕ ಪರಿಸ್ಥಿತಿ, ಹಾಡುಗಳು, ಕತೆ ಹೇಳುವುದು, ಕುಟುಂಬದ ಒತ್ತಡಗಳಿಗೆ ಭಾವನಾತ್ಮಕವಾಗಿ ಸ್ಪಂದಿಸುವುದು ಹೀಗೆ ಹಲವು ವಿಷಯಗಳನ್ನು ಕಲಿತಿದ್ದಾರೆ. ಅವರ ಕಲಿಕೆಗೆ ಪೂರಕವಾಗಿ ಶಾಲೆಯ ವಾತಾವರಣವನ್ನೂ ನಿರ್ಮಿಸಿದರೆ ಮಕ್ಕಳಿಗೆ ತಾವು ಕಲಿಕೆಯಲ್ಲಿ ಹಿಂದುಳಿದಿದ್ದೇವೆ ಎಂಬ ಮನೋಭಾವ ಬರುವುದಿಲ್ಲ.

ಸರ್ಕಾರ, ಶಿಕ್ಷಣ ಇಲಾಖೆ ಕಳೆದ ಎರಡು ವರ್ಷಗಳಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು "ಕಲಿಕಾ ಚೇತನ" ಕಾರ್ಯಕ್ರಮ ರೂಪಿಸಿ ಮತ್ತದೇ ಸಾಮರ್ಥ್ಯ ವೃದ್ಧಿ, ಕಲಿವಿನ ಫಲ ಎಂಬಂತ ಹಳೆಯ ಮಾದರಿಗಳನ್ನೇ ಮತ್ತೆ ತಂದು ಮಕ್ಕಳ ಮೇಲೆ ಒತ್ತಡ ಹೇರುವಂತಹ ಕೆಲಸ ಮಾಡಬಾರದು. ಮಕ್ಕಳ ಸಾಮರ್ಥ್ಯವನ್ನು ಸಹ ಶಿಕ್ಷಣದೊಳಗೆ ಸೇರಿಸಿಕೊಳ್ಳಬಹುದಾದಂತಹ ಬಹುದೊಡ್ಡ ಅವಕಾಶವೊಂದು ಈಗ ಇತ್ತು. ಆದರೆ, ಶಿಕ್ಷಣ ಇಲಾಖೆ ಅದನ್ನು ಎಷ್ಟರ ಮಟ್ಟಿಗೆ ಗುರುತಿಸಿದೆ, ಎಷ್ಟರ ಮಟ್ಟಿಗೆ ಬಳಸಿಕೊಂಡಿದೆ ಎಂದು ನೋಡಿದರೆ ನಿರಾಸೆಯಾಗುತ್ತದೆ.

ಪಠ್ಯಪುಸ್ತಕ ಶೈಕ್ಷಣಿಕ ಚಟುವಟಿಕೆಯ ಒಂದು ಭಾಗ

ಪಠ್ಯಪುಸ್ತಕ ಶೈಕ್ಷಣಿಕ ಚಟುವಟಿಕೆಯ ಒಂದು ಭಾಗ

ಪ್ರಶ್ನೆ: ಮಕ್ಕಳನ್ನು ಈಗ ಶಾಲೆಯಲ್ಲಿ ಯಾವ ರೀತಿ ನೋಡಿಕೊಳ್ಳಬೇಕು?

ನಿರಂಜನಾರಾಧ್ಯ: ಸರ್ಕಾರ ಅಥವಾ ಶಾಲೆಗಳು ಮಕ್ಕಳನ್ನು ಡಿಮೋಟಿವೇಟ್ ಮಾಡುವಂತಹ ಕೆಲಸ ಆಗಬಾರದು. ಮಕ್ಕಳು ಏನೂ ಕಲಿತಿಲ್ಲ, ಅವರಿಗೆ ಏನೂ ಬರುತ್ತಿಲ್ಲ, ಅಕ್ಷರ ಜ್ಞಾನ ಕಳೆದುಕೊಂಡಿದ್ದಾರೆ ಎಂಬ ಪದಪುಂಜಗಳನ್ನು ಅವರ ಮುಂದೆಯೇ ಬಳಸಿ ಅವರಲ್ಲಿ ಮತ್ತಷ್ಟು ಕೀಳರಿಮೆ ಉಂಟು ಮಾಡಬಾರದು. ಪಠ್ಯಪುಸ್ತಕ ಶೈಕ್ಷಣಿಕ ಚಟುವಟಿಕೆಯ ಒಂದು ಭಾಗ. ಶಿಕ್ಷಕರು ಕೇವಲ ಪಠ್ಯಪುಸ್ತಕವೇ ಅಂತಿಮ ಎಂದು ಭಾವಿಸಿ ಮಕ್ಕಳ ಸಾಮರ್ಥ್ಯವನ್ನು ಇಂತಹ ಸಂದರ್ಭದಲ್ಲಿ ಅಳೆಯುವಂತಹ ಕೆಲಸ ಬೇಡ. ಮಕ್ಕಳಲ್ಲಿ ಇರುವುದನ್ನು ಹೊರಗೆ ತರುವುದು ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆಸಿ ಅದಕ್ಕೆ ತಕ್ಕಂತಹ ಬೋಧನಾ ಕ್ರಮವನ್ನು ರೂಪಿಸಿಕೊಳ್ಳಬೇಕು.

ಸಾಮಾಜಿಕ ಜವಾಬ್ದಾರಿಯನ್ನೂ ಮೆರೆಯಬೇಕು

ಸಾಮಾಜಿಕ ಜವಾಬ್ದಾರಿಯನ್ನೂ ಮೆರೆಯಬೇಕು

ಪ್ರಶ್ನೆ: ಶಿಕ್ಷಣ ಇಲಾಖೆಯ ಆದೇಶಗಳು ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರವೇ?

ನಿರಂಜನಾರಾಧ್ಯ: ಹೌದು ಇದು ಬಹುಮುಖ್ಯವಾದ ವಿಷಯ. ಸರ್ಕಾರ, ಇಲಾಖೆ ಏನೇ ಆದೇಶ ಮಾಡಿದರೂ ಅದು ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ವಯ ಆಗುತ್ತದೆ. ಸರ್ಕಾರ ಎಂದ ಮೇಲೆ ಅನುದಾನಿತ ಮತ್ತು ಖಾಸಗಿ ಶಾಲೆಗಳ ಕಲಿಕೆಯ ಮೇಲೆಯೂ ಸಹ ನಿಯಂತ್ರಣ ಸಾಧಿಸಬೇಕು. ಸರ್ಕಾರ ಯಾವುದೇ ಒಂದು ಆದೇಶ ಮಾಡಿದರೆ ಅದು ಖಾಸಗಿ ಶಾಲೆಗಳಿಗೆ ಅನ್ವಯ ಆಗುವುದಿಲ್ಲ ಎಂಬ ಅಭಿಪ್ರಾಯ ಖಾಸಗಿ ಶಾಲೆಗಳ ಮಕ್ಕಳ ಪೋಷಕರಿಗೆ ಇದೆ. ಹೀಗಾಗಿ ಸರ್ಕಾರ ಸಾರ್ವತ್ರಿಕವಾದಂತಹ ಆದೇಶಗಳನ್ನು ಮಾಡುವತ್ತ ಬದ್ಧತೆ ತೋರಿಸಬೇಕು.

ಪ್ರಶ್ನೆ: ಈ ಸಂದರ್ಭದಲ್ಲಿ ಶಿಕ್ಷಕರ ಜವಾಬ್ದಾರಿ ಏನಾಗಿರಬೇಕು?

ನಿರಂಜನಾರಾಧ್ಯ: ಕೋವಿಡ್ ಕಾರಣದಿಂದಾಗಿ ಕೆಲ ಖಾಸಗಿ ಶಾಲಾ ಬೋಧಕ ವರ್ಗದಲ್ಲಿ ವ್ಯತ್ಯಾಸಗಳಾಗಿವೆ ನಿಜ. ಆದರೆ, ಸರ್ಕಾರಿ ಶಾಲೆ ಶಿಕ್ಷಕರಿಗೆ ಸಾಮಾಜಿಕ ಭದ್ರತೆ ಮತ್ತು ಸವಲತ್ತುಗಳು ಎಲ್ಲವೂ ಇದ್ದವು. ದೀಪ ತಾನು ಉರಿಯದೆ ಬೆಳಕು ನೀಡಲು ಸಾಧ್ಯವಿಲ್ಲ ಎಂಬಂತೆ ಬೋಧಕರು ಮೊದಲು ತಾವು ತಮ್ಮೊಳಗಿನ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ತಮ್ಮ ಆದಾಯದ ಕೊಂಚ ಭಾಗವನ್ನು ತಮ್ಮ ಮತ್ತು ಮಕ್ಕಳ ಕಲಿಕೆಗೆ ಪೂರಕ ಎಂಬಂತೆ ಮೀಸಲಿಟ್ಟು ಸಾಮಾಜಿಕ ಜವಾಬ್ದಾರಿಯನ್ನೂ ಮೆರೆಯಬೇಕು. ಉದಾಹರಣೆಗೆ ಅವರೇ ಒಂದು ಸಣ್ಣದಾದ ಗ್ರಂಥಾಲಯ ಮಾಡಿಕೊಳ್ಳಬಹುದು. ಅಲ್ಲಿ ತಾವು ಬೋಧಿಸುವಂತಹ ವಿಷಯದ ಕುರಿತೇ ಲಭ್ಯ ಇರುವಂತಹ ಪುಸ್ತಕಗಳು ಮತ್ತು ಮಾದರಿಗಳನ್ನು ಸಂಗ್ರಹಿಸಿ ಇಡಬಹುದು. ವಿದ್ಯಾರ್ಥಿಗಳನ್ನು ಅಲ್ಲಿಗೆ ಆಹ್ವಾನಿಸಿ ತಾವೂ ಜ್ಞಾನ ಹೆಚ್ಚಿಸಿಕೊಳ್ಳುವುದರ ಜೊತೆಗೆ ಕೇವಲ ಪಠ್ಯಪುಸ್ತಕ ಹೊರತಾದ ಜ್ಞಾನವನ್ನೂ ಮಕ್ಕಳಿಗೆ ಹಂಚಬಹುದು.

ಮಕ್ಕಳಿಗೆ ಸೈಕಲ್ ಕೊಡುವ ವ್ಯವಸ್ಥೆ ಮತ್ತೆ ಜಾರಿಯಾಗಬೇಕು

ಮಕ್ಕಳಿಗೆ ಸೈಕಲ್ ಕೊಡುವ ವ್ಯವಸ್ಥೆ ಮತ್ತೆ ಜಾರಿಯಾಗಬೇಕು

ಪ್ರಶ್ನೆ: ಆರ್ಥಿಕ ಸಂಕಷ್ಟ- ಮಕ್ಕಳ ಶಿಕ್ಷಣ: ಪೋಷಕರ ಜವಾಬ್ದಾರಿ ಹೇಗಿರಬೇಕು?

ನಿರಂಜನಾರಾಧ್ಯ: ಕೋವಿಡ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡೋ, ವೇತನಗಳಲ್ಲಿ ವ್ಯತ್ಯಾಸ ಆಗಿಯೋ ಪೋಷಕರೂ ಸಹ ಸಂಕಷ್ಟದಲ್ಲಿ ಇದ್ದಾರೆ ನಿಜ. ಅದರ ಮಧ್ಯೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಅಗತ್ಯ ಎಂದು ನಿರ್ಧರಿಸಿ. ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿ, ಅವರಿಗಾಗಿ ಸಮಯ ಕೊಡಿ. ಸರ್ಕಾರ ಮತ್ತು ಶಾಲೆಗಳೂ ಸಹ ಪೋಷಕರ ಪಾತ್ರ ದೊಡ್ಡದು ಎಂಬುದನ್ನು ನಿರ್ಧಾರಪಡಿಸಬೇಕು. ಡಿಎಸ್‌ಇಆರ್‌ಟಿ ಈ ಹಿಂದೆ ಶಾಲೆ-ಪೋಷಕ-ಮಕ್ಕಳು ಈ ಮೂವರನ್ನೂ ಭಾಗಿ ಮಾಡಿಕೊಂಡು ಕಾರ್ಯಕ್ರಮವೊಂದನ್ನು ಸಿದ್ಧಪಡಿಸಿತ್ತು. ಪೋಷಕರು ಶಾಲೆಗೆ ಬರುವುದಿಲ್ಲ, ಮಕ್ಕಳ ಬಗ್ಗೆ ಚಿಂತಿಸುವುದಿಲ್ಲ, ಅವರಿಗೆ ಅಕ್ಷರ ಜ್ಞಾನ ಇಲ್ಲ ಎಂದು ನಿಂದಿಸದೆ ಅವರನ್ನೂ ಸಹ ಶಿಕ್ಷಣದ ಭಾಗೀದಾರರನ್ನು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಈ ಹಿಂದಿಗಿಂತ ಈಗ ಹೆಚ್ಚಾಗಿ ಕಾಣಿಸುತ್ತಿದೆ.

ಪ್ರಶ್ನೆ: ಸರ್ಕಾರಿ ಶಾಲೆಗಳ ಬಗ್ಗೆ ಏನು ಹೇಳುತ್ತೀರಿ?

ನಿರಂಜನಾರಾಧ್ಯ: ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳಿಗೆ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಅವರಲ್ಲಿ ಪೋಷಕಾಂಶ ಹೆಚ್ಚಿಸುವಂತಹ, ಈಗಾಗಲೇ ಜಾರಿಯಲ್ಲಿರುವಂತಹ ಮಧ್ಯಹ್ನದ ಬಿಸಿಯೂಟ, ಕ್ಷೀರಭಾಗ್ಯದಂತಹ ಯೋಜನೆಗಳೂ ಸಹ ಇಂದಿನಿದಲೇ ಜಾರಿಯಾಗಬೇಕು. ಕಳೆದ ಎರಡು ವರ್ಷಗಳಲ್ಲಿ ನಿಂತು ಹೋಗಿರುವ ಮಕ್ಕಳಿಗೆ ಸೈಕಲ್ ಕೊಡುವ ವ್ಯವಸ್ಥೆ ಮತ್ತೆ ಜಾರಿಯಾಗಬೇಕು. ಮುಖ್ಯವಾಗಿ ಸಾವಿರಾರು ಏಕೋಪಾಧ್ಯಾಯ ಶಾಲೆಗಳಿದ್ದು ಅಲ್ಲಿ ಹೆಚ್ಚಿನ ಶಿಕ್ಷಕನ್ನು ನಿಯೋಜಿಸುವಂತಹ ಕೆಲಸ ಸರ್ಕಾರದಿಂದ ಆಗಬೇಕು.

English summary
Interview with VP Niranjanaradhya Development Education Specialist on Schools Opening in Karnataka. He said Govt should not make any new experiments on students as they learned something in pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X