ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂದರ್ಶನ: ಕೊರೊನಾ ಕುರಿತ ಪ್ರಶ್ನೆಗಳಿಗೆ ಸಚಿವ ಸುಧಾಕರ್ ಉತ್ತರ

By ನಾಗೇಶ್ ಕೆ.ಎನ್
|
Google Oneindia Kannada News

ಕೊರೊನಾ ಸೋಂಕು (ಕೋವಿಡ್-19) ಹರಡುವುದು ಇನ್ನೇನು ಕಡಿಮೆ ಆಗುತ್ತಿದೆ ಅನ್ನುವಷ್ಟರಲ್ಲಿ ರಾಜ್ಯದ ಯಾವುದೋ ಒಂದು ಭಾಗದಲ್ಲಿ ಸೋಂಕಿತರ ಸಂಖ್ಯೆ ದಿಢೀರ್ ಮೇಲೆರುತ್ತಿದೆ. ಲಾಕ್‍ಡೌನ್ ನಿಂದ ಬೇಸತ್ತ ಜನ ಮೆಲ್ಲಗೆ ಕೈಕಾಲು ಕೊಡವಿಕೊಂಡು ಓಡಾಡಲಾರಂಭಿಸಿದ್ದಾರೆ. ಜನಕ್ಕೆ ಪೊಲೀಸರ ಭಯಕಡಿಮೆ ಆಗಿದೆ. ಈ ಬರಹಕ್ಕೆ ಕೂರುವ ಹೊತ್ತಿಗೆ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 673 ಕ್ಕೇರಿದೆ. ಒಟ್ಟಾರೆ ಇಷ್ಟು ಕಾಲ ಲಾಕ್‍ಡೌನ್ ಆಗಿದ್ದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಓಡಾಡಲು ಆರಂಭಿಸಿರುವ ಈ ದಿನಗಳಲ್ಲಿ ಒಂದಿಷ್ಟು ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ತಿರುಗಾಡುತ್ತಿರುವುದು ಸುಳ್ಳಲ್ಲ.

ಕೊರೊನಾ ಸಮುದಾಯಕ್ಕೆ ಹರಡಿದೆಯೇ? ಕೊರೊನಾ ಸೋಂಕು ತಗುಲಿದರೆ ಪರೀಕ್ಷೆ ಹಾಗೂ ಚಿಕಿತ್ಸೆ ಮಾಡಿಸಿಕೊಳ್ಳಲು ಸಾಕಷ್ಟು ಸೌಲಭ್ಯಗಳಿವೆಯೇ? ನಾವು ಸೇಫಾ ? ಇಂಥವೇ ಪ್ರಶ್ನೆಗಳು ಜನರಲ್ಲಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಒನ್ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಉತ್ತರಿಸಿದ್ದಾರೆ.

ಸಂಪರ್ಕಗಳಿಂದ ಕೊರೊನಾ ಹರಡುವಿಕೆ

ಸಂಪರ್ಕಗಳಿಂದ ಕೊರೊನಾ ಹರಡುವಿಕೆ

ಪ್ರಶ್ನೆ 1) ಕರ್ನಾಟಕ ರಾಜ್ಯದಲ್ಲಿ ಕೊರೊನಾ ಸೋಂಕು ಹರಡುತ್ತಿರುವ ಪ್ರಮಾಣ ಗಮನಿಸಿದಾಗ ಈ ಸೋಂಕು ಅದಾಗಲೇ ಸಮುದಾಯದಲ್ಲಿ ಹರಡುತ್ತಿದೆ ಎನಿಸಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ?

ಡಾ. ಕೆ. ಸುಧಾಕರ್ : ರಾಜ್ಯದಲ್ಲಿ ಸೋಂಕಿನ ವೇಗ ಮತ್ತು ಸೋಂಕಿತ ಪ್ರದೇಶಗಳ ಅಧ್ಯಯನ ನಡೆಸಿದ ಬಳಿಕ ಗಮನಿಸಿರುವ ಅಂಶಗಳೆಂದರೆ, ಪತ್ತೆಯಾಗುತ್ತಿರುವ ಪಾಸಿಟಿವ್ ಪ್ರಕರಣಗಳು ಈಗಾಗಲೇ ಸೋಂಕಿತರಾದವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರೇ ಆಗಿದ್ದಾರೆ. ಜತೆಗೆ ಸರ್ಕಾರ ಗುರುತಿಸಿರುವ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಇದ್ದವರೇ ಆಗಿದ್ದಾರೆ. ಆದ್ದರಿಂದ ಒಬ್ಬ ವೈದ್ಯನಾಗಿ ರಾಜ್ಯದಲ್ಲಿ ಸೋಂಕು ಸಮುದಾಯದಲ್ಲಿ ಹರಡಿದೆ ಎಂದು ಹೇಳಲು ಆಗುವುದಿಲ್ಲ. ಅಷ್ಟರ ಮಟ್ಟಿಗೆ ಅದು ಸಮಾಧಾನಕರ ಸಂಗತಿಯಾಗಿದೆ.

ಕೊರೊನಾ ಹೋರಾಟ: ಒನ್ಇಂಡಿಯಾ ಜೊತೆ ಡಿಸಿಎಂ ಡಾ. ಅಶ್ವಥ್ ಸಂದರ್ಶನಕೊರೊನಾ ಹೋರಾಟ: ಒನ್ಇಂಡಿಯಾ ಜೊತೆ ಡಿಸಿಎಂ ಡಾ. ಅಶ್ವಥ್ ಸಂದರ್ಶನ

ಲಕ್ಷಣಗಳಿಲ್ಲದಿದ್ದರೂ ಕೊರೊನಾ ರೋಗ

ಲಕ್ಷಣಗಳಿಲ್ಲದಿದ್ದರೂ ಕೊರೊನಾ ರೋಗ

ಪ್ರಶ್ನೆ 2) ಯಾವುದೇ ಲಕ್ಷಣಗಳಿಲ್ಲದಿದ್ದರೂ ಸೋಂಕು ಇರುವುದು ಹಲವರಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ನಾಗರೀಕರು ತಾವು ಸೇಫ್ ಎಂದು ತಿಳಿಯುವುದು ಹೇಗೆ ? ಎಲ್ಲರಿಗೂ ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸುವಿರಾ ?

ಡಾ. ಕೆ. ಸುಧಾಕರ್ : ನಿಮಗೆ ಗೊತ್ತಿರಲಿ, ಕೆಲ ಸೋಂಕಿತರಲ್ಲಿ ರೋಗದ ಯಾವುದೇ ಲಕ್ಷಣಗಳಿಲ್ಲ. ಆದಾಗ್ಯೂ ಪ್ರಾಥಮಿಕ ಮತ್ತು ಎರಡನೇ ಹಂತದ ಸೋಂಕಿತರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿ ಪ್ರತ್ಯೇಕಿಸಲಾಗಿದೆ. ಇದಲ್ಲದೆ, ಸೋಂಕು ಲಕ್ಷಣ ಕಂಡುಬಂದವರು, ಹಿರಿಯ ನಾಗರೀಕರು, ಕಿಡ್ನಿ, ಹೃದಯ, ಶ್ವಾಸಕೋಶ ಸಹಿತ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ಕಂಟೈನ್ಮೆಂಟ್ ಝೋನ್ ಗಳಲ್ಲಿ ಆಯ್ದ ಕೆಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಮಂಗಳವಾರ ಮೇ 5 ರ ಬೆಳಗಿನ ವರದಿಗಳ ತನಕ 82,965 ಪರೀಕ್ಷೆಗಳನ್ನು ಮಾಡಲಾಗಿದೆ. ಸೋಂಕು ಸಮುದಾಯಕ್ಕೆ ಹರಡದಂತೆ ನಿಗಾವಹಿಸಲಾಗಿದೆ. 460 ಕ್ಕೂ ಹೆಚ್ಚು ಫೀವರ್ ಕ್ಲಿನಿಕ್ ಗಳನ್ನು ಸ್ಥಾಪಿಸಿ ರೋಗ ಲಕ್ಷಣ ಕಂಡುಬಂದವರನ್ನು ತಕ್ಷಣ ಕೋವಿಡ್ - 19 ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ ಮತ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅಷ್ಟರ ಮಟ್ಟಿಗೆ ಸೋಂಕನ್ನು ಹಿಮ್ಮೆಟ್ಟಿಸಲು ಕ್ರಮಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಟೆಸ್ಟ್ ಗಳ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಜನರು ಆತಂಕಪಡುವ ಅಗತ್ಯವಿಲ್ಲ.

ಸೋಂಕು ಪರೀಕ್ಷೆಗೆ ರಾಜ್ಯದಲ್ಲಿ ಸೌಲಭ್ಯಗಳಿವೆಯೇ?

ಸೋಂಕು ಪರೀಕ್ಷೆಗೆ ರಾಜ್ಯದಲ್ಲಿ ಸೌಲಭ್ಯಗಳಿವೆಯೇ?

ಪ್ರಶ್ನೆ 3) ಸೋಂಕು ಪರೀಕ್ಷೆಗೆ ಇಡೀ ರಾಜ್ಯಾದ್ಯಂತ ಸೌಲಭ್ಯಗಳಿವೆಯೇ ? ಒಂದು ದಿನಕ್ಕೆ ರಾಜ್ಯದಲ್ಲಿ ಎಷ್ಟು ಮಂದಿಗೆ ಸೋಂಕು ಪರೀಕ್ಷೆಗೆ ಸವಲತ್ತು ಇದೆ?

ಡಾ. ಕೆ. ಸುಧಾಕರ್: ಫೆಬ್ರವರಿ ಮೊದಲ ವಾರ ರಾಜ್ಯದಲ್ಲಿ ಇದ್ದಿದ್ದು ಕೇವಲ ಎರಡು ಲ್ಯಾಬ್ ಮಾತ್ರ. ಆಗ ದಿನಕ್ಕೆ ಅತಿ ಹೆಚ್ಚು ಎಂದರೆ 300 ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗುತ್ತಿತ್ತು. ಈಗ ಲ್ಯಾಬ್ ಗಳ ಸಂಖ್ಯೆ 29 ಆಗಿದ್ದು, ಮೇ ಅಂತ್ಯದ ವೇಳೆಗೆ 60 ಕ್ಕೆ ಏರಿಕೆಯಾಗಲಿದೆ. ಪ್ರತಿ ಜಿಲ್ಲೆಗೆ ಎರಡು ಲ್ಯಾಬ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಸದ್ಯ ದಿನವೊಂದಕ್ಕೆ ಐದೂವರೆ ಸಾವಿರ ಸ್ಯಾಂಪಲ್ ಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಇದುವರೆಗೆ ಒಟ್ಟು 82,965 ಸ್ಯಾಂಪಲ್ ಗಳ ಪರೀಕ್ಷೆ ನಡೆಸಲಾಗಿದೆ. ಒಟ್ಟಾರೆ ಆಯಾ ಜಿಲ್ಲೆಗಳಲ್ಲೇ ಸೋಂಕಿತರ ಪರೀಕ್ಷೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎಂ ರಾಜಶೇಖರ ಕೊರೊನಾ ಜಾಗೃತಿಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎಂ ರಾಜಶೇಖರ ಕೊರೊನಾ ಜಾಗೃತಿ

ಕೊರೊನಾ ಚಲಿಸುವುದಿಲ್ಲ, ನಮ್ಮ ಮೂಲಕ ಹರಡುತ್ತದೆ

ಕೊರೊನಾ ಚಲಿಸುವುದಿಲ್ಲ, ನಮ್ಮ ಮೂಲಕ ಹರಡುತ್ತದೆ

ಪ್ರಶ್ನೆ 4) ಲಾಕ್ ಡೌನ್ ಸಂದರ್ಭದಲ್ಲಿ ಶುಚಿತ್ವಕ್ಕೆ ನೀಡಿರುವ ಕಾಳಜಿ (ಕಾನೂನುಗಳನ್ನು ರೂಪಿಸಿ) ಮುಂದಿನ ದಿನಗಳಲ್ಲಿ ಜಾರಿಯಲ್ಲಿಡಲು ಚಿಂತನೆ ನಡೆಸಿದ್ದೀರಾ ?

ಡಾ. ಕೆ. ಸುಧಾಕರ್: ಹೌದು, ಶುಚಿತ್ವದ ವಿಷಯದಲ್ಲಿ ಸರ್ಕಾರದ ನಿಲುವು ಬದಲಾಗುವುದಿಲ್ಲ. ಏಕೆಂದರೆ ಕೋವಿಡ್ 19 ಕ್ಕೆ ಲಸಿಕೆ ಕಂಡುಹಿಡಿದು ಚಿಕಿತ್ಸೆ ಲಭ್ಯವಾಗುವತನಕ ಕೊರೊನಾ ರೋಗಾಣು ಜತೆ ಬದುಕುವುದು ಅನಿವಾರ್ಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸಾಬೂನಿನಲ್ಲಿ ಕೈ ತೊಳೆದುಕೊಳ್ಳುವುದು ಎಲ್ಲವೂ ದೈನಂದಿನ ಚಟುವಟಿಕೆಯ ಭಾಗವಾಗಬೇಕು. ಅನಿವಾರ್ಯವಲ್ಲದ ತಿರುಗಾಟ ನಿಲ್ಲಿಸಬೇಕು. ಹಿರಿಯ ನಾಗರೀಕರು ಮತ್ತು ಮಕ್ಕಳನ್ನು ಇನ್ನು ಕೆಲ ತಿಂಗಳ ಕಾಲ ಮನೆಯಿಂದ ಹೊರ ಹೋಗದಂತೆ ಎಚ್ಚರವಹಿಸಬೇಕು. ಕೊರೊನಾ ರೋಗಾಣು ಚಲಿಸುವುದಿಲ್ಲ, ಚಲಿಸುವ ನಮ್ಮ ಮೂಲಕವೇ ಅದು ಹರಡುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಹರಡುವಿಕೆಯ ಸರಪಳಿಯನ್ನು ತುಂಡರಿಸಬೇಕು. ಆಗ ಮಾತ್ರ ಸೋಂಕು ಮುಕ್ತ ಬದುಕು ನಡೆಸಲು ಸಾಧ್ಯ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಸೋಂಕಿತರ ಬಗ್ಗೆ ಸಮಾಜದಲ್ಲಿ ಕಳಂಕ

ಸೋಂಕಿತರ ಬಗ್ಗೆ ಸಮಾಜದಲ್ಲಿ ಕಳಂಕ

ಪ್ರಶ್ನೆ 5) ಕೊರೊನಾ ಸೋಂಕಿತರ ಬಗ್ಗೆ ಸಮಾಜದಲ್ಲಿರುವ ಕಳಂಕ, ತಾರತಮ್ಯವನ್ನು ಹೋಗಲಾಡಿಸಲು ನಿಮ್ಮ ಚಿಂತನೆ ಏನು ?

ಡಾ. ಕೆ. ಸುಧಾಕರ್: ಜನರಲ್ಲಿ ಈ ಕುರಿತು ಅರಿವು ಮೂಡಿಸಬೇಕು. ಕೊರೊನಾ ಸೋಂಕಿತರು, ಕುಟುಂಬ ಸದಸ್ಯರು, ವೈದ್ಯರು - ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರನ್ನು ಕಳಂಕಿತರಂತೆಯೂ, ಅಪರಾಧಿಗಳಂತೆ ನೋಡುತ್ತಿರುವ ಹಾಗೂ ಕೆಲವೆಡೆ ಹಲ್ಲೆ ಪ್ರಕರಣಗಳು ನಡೆದಿವೆ. ಒಬ್ಬ ವೈದ್ಯನಾಗಿ ಇದು ಅತ್ಯಂತ ವೇದನೆ ವಿಷಯವಾಗಿದೆ.

ಕೊರೋನಾ ಸಾಮಾಜಿಕ ಪಿಡುಗು ಎಂಬ ಮನೋಭಾವನೆ ಕೆಲವರಲ್ಲಿ ಇದೆ. ಇದನ್ನು ಹೋಗಲಾಡಿಸಬೇಕಿದೆ. ಇತರೆ ರೋಗಾಣುಗಳಂತೆ ಇದು ಒಂದು ರೋಗಾಣು ಅಷ್ಟೇ. ಸೋಂಕಿತರೆಲ್ಲ ಸಾಯುವುದಿಲ್ಲ. ನಮ್ಮಲ್ಲಿ ಸಾವನ್ನಪ್ಪಿರುವ ಸೋಂಕಿತರ ಪ್ರಮಾಣ ಶೇಕಡಾ 4 ಕ್ಕಿಂತ ಕಡಿಮೆ ಮತ್ತು ಅವರೆಲ್ಲರೂ ಹಿರಿಯ ನಾಗರೀಕರು. ಅವರಲ್ಲಿ ಕೆಲವರು ಹೃದಯ, ಕಿಡ್ನಿ, ಶ್ವಾಸಕೋಶ ಹೀಗೆ ನಾನಾ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದವರು. ಕೊನೆ ಹಂತದಲ್ಲಿ ಆಸ್ಪತ್ರೆಗೆ ದಾಖಲಾದವರಾಗಿದ್ದಾರೆ.

ಕರ್ನಾಟಕದಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ 60 ಹೊಸ ಲ್ಯಾಬ್!ಕರ್ನಾಟಕದಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ 60 ಹೊಸ ಲ್ಯಾಬ್!

ಸೋಂಕಿತರ ಪೈಕಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ಹಿಂತಿರುಗಿದವರ ಸಂಖ್ಯೆ 324 ಎಂಬುದನ್ನೂ ನೀವು ಗಮನಿಸಬೇಕು. ವೈಯಕ್ತಿಕವಾಗಿ ನಾನು ಸಮಾಜದ ನಾನಾ ಕ್ಷೇತ್ರಗಳ ಗಣ್ಯರ ಜತೆ ಸಮಾಲೋಚಿಸುತ್ತಿದ್ದೇನೆ. ಜನರಲ್ಲಿ ಅರಿವು ಮೂಡಿಸುವ ಕಾರ್ಯದಲ್ಲಿ ಕೈಜೋಡಿಸುವಂತೆ ಮನವಿ ಮಾಡಿದ್ದೇನೆ. ಎಲ್ಲರೂ ಸಮ್ಮತಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಕಲಾವಿದರು, ಸಾಹಿತಿಗಳು, ಕ್ರೀಡಾಪಟುಗಳು ಸೇರಿದಂತೆ ಜನಾಭಿಪ್ರಾಯ ರೂಪಿಸುವ ಸಾಮರ್ಥ್ಯ ಹೊಂದಿರುವವರು ಜನಜಾಗೃತಿ ಕಾರ್ಯದಲ್ಲಿ ಸರ್ಕಾರದ ಜತೆ ಕೈಜೋಡಿಸಬೇಕು.

ಕೊರೊನಾ ಪೂರ್ವ-ನಂತರ ದಿನಗಳ ಆಲೋಚನೆಗಳಿರಲಿವೆ

ಕೊರೊನಾ ಪೂರ್ವ-ನಂತರ ದಿನಗಳ ಆಲೋಚನೆಗಳಿರಲಿವೆ

ಪ್ರಶ್ನೆ 6) ಸೋಂಕಿತರ ಬಗ್ಗೆ ಕಳಂಕ ತಾರತಮ್ಯ ಹೋಗಲಾಡಿಸಲು ಬಿಹೇವಿಯರ್ ಚೆಂಜ್ ಕಮ್ಯುನಿಕೇಷನ್ ಸ್ಟ್ರಾಟಜಿ ಗಳೇನಾದರೂ ಯೋಚಿಸಿದ್ದೀರಾ? ಹೌದಾದರೆ ಏನು ?

ಡಾ. ಕೆ. ಸುಧಾಕರ್: ಮಾಧ್ಯಮಗಳ ಮೂಲಕ ನಾನು ನಿರಂತರವಾಗಿ ಈ ವಿಷಯದ ಬಗ್ಗೆ ಮಾತನಾಡುತ್ತಲೇ ಇದ್ದೇನೆ. ಇನ್ನು ಮುಂದೆ ಕೋವಿಡ್ 19 ಪೂರ್ವ ಮತ್ತು ನಂತರದ ದಿನಗಳು ಎಂಬುದಾಗಿಯೇ ನಮ್ಮ ಆಲೋಚನಾ ಶೈಲಿ ಬದಲಾಗಬೇಕು. ಜನರಲ್ಲಿ ಅರಿವು ಮೂಡಿಸಲು ಕೆಲ ಕಾರ್ಪೊರೇಟ್ ಸಂಸ್ಥೆಗಳ ಸಹಯೋಗದಲ್ಲಿ ಡಾಕ್ಯುಮೆಂಟರಿ ಮಾಡುವ ಯೋಜನೆ ರೂಪಿಸಿದ್ದೇನೆ. ಚಿತ್ರರಂಗ, ಕ್ರೀಡೆ, ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ನಾನಾ ಕ್ಷೇತ್ರಗಳ ಗಣ್ಯರು, ಸಾಧಕರು ನಮ್ಮ ಜತೆ ಕೈಜೋಡಿಸಲು ಸಮ್ಮತಿಸಿದ್ದಾರೆ. ಇನ್ನೂ ಕೆಲ ತಿಂಗಳುಗಳ ಕಾಲ ಜಾಗೃತಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ. ಮನುಕುಲ ಈ ಹಿಂದೆಯೂ ಅನೇಕ ರೋಗಾಣುಗಳನ್ನು ಕಂಡಿದೆ. ಆ ಎಲ್ಲ ಸಂದರ್ಭಗಳಲ್ಲಿ ನಡೆದ ಹೋರಾಟದಲ್ಲಿ ಮಾನವ ಗೆಲುವು ಸಾಧಿಸಿದ್ದಾನೆ, ಈಗಲೂ ಅಷ್ಟೇ. ಅಂತಿಮ ಗೆಲುವು ನಮ್ಮದೇ. ಆದರೆ ಅಲ್ಲಿಯತನಕ ಸಂಯಮದಿಂದ ಎಚ್ಚರಿಕೆ ಹೆಜ್ಜೆಗಳನ್ನಿರಿಸಬೇಕು. ಪರಿಸ್ಥಿತಿಗೆ ಅನುಗುಣವಾಗಿ ಸರ್ಕಾರ ಕೊಡುವ ಸೂಚನೆ, ಮಾರ್ಗಸೂಚಿಗಳನ್ನು ಪಾಲಿಸಬೇಕು.

English summary
Minister K Sudhakar Interview; Medical Education Minister Dr K Sudhakar has answered to the questions related to coronavirus situation in state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X