• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾತಂತ್ರ್ಯ ಚಳವಳಿಯ ಪರೋಕ್ಷ ಹೋರಾಟಗಾರ್ತಿ: ಅಮ್ಮಕ್ಕ ಗಣಪತಿ ಭಟ್

|

ಸ್ವಾತಂತ್ರ್ಯ ಸಂಗ್ರಾಮದ ಸುದೀರ್ಘ ಹೋರಾಟಗಳ ಬಗ್ಗೆ ಮೊಗೆದಷ್ಟೂ ಮುಗಿಯದ ರೋಚಕ ಕಥೆಗಳಿವೆ. ಇನ್ನು ಅದೆಷ್ಟೋ ಲೆಕ್ಕವಿಲ್ಲದಷ್ಟು ಕಥೆಗಳು ಹೊರ ಜಗತ್ತಿಗೆ ತಿಳಿಯದೆಯೇ ಇತಿಹಾಸದಲ್ಲಿ ಮರೆಯಾಗಿವೆ. ಅನೇಕ ಕಥೆಗಳು ಹೊಸ ಬಣ್ಣ ಪಡೆದುಕೊಂಡು ಮತ್ತಷ್ಟು ರೋಚಕತೆ ಪಡೆದುಕೊಂಡಿವೆ.

ಸಾಗರದಂತಹ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಅದೆಷ್ಟೋ ಕಾಣದ ಕೈಗಳು ಪರೋಕ್ಷವಾಗಿ ದುಡಿದಿವೆ. ಮನೆಯಲ್ಲಿ ದುಡಿಯುವ ಗಂಡಸರೆಲ್ಲ ಸ್ವಾತಂತ್ತ್ಯ ಚಳವಳಿ ಎಂದು ಮನೆಯಿಂದ ಹೊರಗೇ ಇದ್ದಾಗ ಇಡೀ ಕುಟುಂಬವನ್ನು ನಿಭಾಯಿಸುತ್ತಿದ್ದವರು ಮಹಿಳೆಯರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ 'ವಿಧುರಾಶ್ವತ್ಥ' ಹೋರಾಟದ ನೆನಪು

ಇನ್ನು, ವಾರಕ್ಕೋ, ತಿಂಗಳಿಗೋ ಒಮ್ಮೆ ಮನೆಗೆ ಬರುತ್ತಿದ್ದ ಮನೆಯ ಗಂಡಸರು, ಅವರ ಜತೆಗಾರ ಹೋರಾಟಗಾರರಿಗೆ ಊಟೋಪಚಾರ ಮಾಡುವ, ಅವರಿಗೆ ಆಶ್ರಯ ನೀಡಿ ಪೊಲೀಸರಿಂದ ಅಡಗಿಸಿಡುವ ಹೊಣೆಗಾರಿಕೆಗಳೂ ಮಹಿಳೆಯರಿಗೇ ವರ್ಗಾವಣೆಯಾಗುತ್ತಿದ್ದವು.

ಹೀಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಪರೋಕ್ಷವಾಗಿ ನೆರವಾದ ಮಹಿಳೆಯೊಬ್ಬರು ನಮ್ಮ ನಡುವೆ ಇದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಅಮ್ಮಕ್ಕ ಗಣಪತಿ ಭಟ್.

ಯಲ್ಲಾಪುರ ತಾಲ್ಲೂಕಿನ ಬರಬಳ್ಳಿಯ ಗುಡ್ಡೇಮನೆಯ ಅಮ್ಮಕ್ಕ ಗಣಪತಿ ಭಟ್, ಜನರ ಪಾಲಿಗೆ ಪ್ರೀತಿಯ ಅಮ್ಮಕ್ಕಜ್ಜಿ. ಪತಿ ಗಣಪತಿ ಭಟ್ಟರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಸೆರೆಮನೆ ವಾಸ ಅನುಭವಿಸಿದ ಸಂದರ್ಭದಲ್ಲಿಯೂ ಕಂಗೆಡದೆ ಸ್ವಾತಂತ್ರ್ಯ ಸೇನಾನಿಗಳಿಗೆ ಆಶ್ರಯ ನೀಡಿದ ಮಹಾನ್ ಹೃದಯ ಅವರದು.

ಅಮ್ಮಕ್ಕ ಅವರಿಗೆ ಸ್ವಾತಂತ್ರ್ಯ ಹೋರಾಟದ ಕುರಿತು ತಿಳಿವಳಿಕೆ ಮೂಡಿದ್ದು ಗಣಪತಿ ಭಟ್ಟರನ್ನು ಮದುವೆಯಾದ ಬಳಿಕವೇ. ಅಲ್ಲಿಯವರೆಗೂ ಅದರ ಬಗ್ಗೆ ಅಲ್ಲಲ್ಲಿ ಕೇಳಿದ್ದರಷ್ಟೇ. ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿಯವರ ಪ್ರವಾಸ ಸೇರಿದಂತೆ ಕೆಲವೊಂದಿಷ್ಟು ಚಳವಳಿ, ಹೋರಾಟಗಳ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ತಿಳಿದಿತ್ತು.

ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ ಶಿವಪುರ ಧ್ವಜ ಸತ್ಯಾಗ್ರಹ

ಗಣಪತಿ ಭಟ್ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಜೊತೆಗೆ ಆಗಾಗ ಅನೇಕ ಹೋರಾಟಗಾರರು ಗುಡ್ಡೇಮನೆಗೆ ಬರುತ್ತಿದ್ದರು. ಹೀಗೆ ಬರುವವರಲ್ಲಿ ಅನೇಕ ಕ್ರಾಂತಿಕಾರಿಗಳೂ ಇದ್ದರು. ಅಂತವರಿಗೆಲ್ಲ ಮನೆಯಲ್ಲಿ ಆಶ್ರಯ ನೀಡಿ ಅಡುಗೆ ಮಾಡಿ ಹಾಕುವ ಜವಾಬ್ದಾರಿ ಅಮ್ಮಕ್ಕ ಗಣಪತಿ ಭಟ್ಟರದ್ದಾಗಿತ್ತು.

1940ರ ದಶಕದಲ್ಲಿ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ಮನೆಗೆ ಬರುತ್ತಿದ್ದರು. ಪತಿ ಗಣಪತಿ ಭಟ್ಟರ ನೇತೃತ್ವದಲ್ಲಿ ಸಾಕಷ್ಟು ಸಭೆಯೂ ನಡೆಯುತ್ತಿತ್ತು.

ಮೊದಲು ಬೆಳ್ಳಗೆ ಇದ್ದ ದೆಹಲಿ ಕೆಂಪು ಕೋಟೆಯ ಇಂಟರೆಸ್ಟಿಂಗ್ ಮಾಹಿತಿ

ಹೋರಾಟ, ಸಂಘಟನೆ ನಿಮಿತ್ತ ಗಣಪತಿ ಭಟ್ಟರು ಮನೆಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿಯೂ ಕೂಡ ಸ್ವಾತಂತ್ರ್ಯ ಹೋರಾಟಗಾರರನ್ನು ಮನೆಯಲ್ಲಿ ಇರಲು ಅವಕಾಶ ಕಲ್ಪಿಸಿ, ಅವರಿಗೆ ಅಡುಗೆ ಮಾಡಿ ಹಾಕುವ ಕೆಲಸ ಮಾಡುತ್ತಿದ್ದರು.

ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿ ಬರುತ್ತಿದ್ದ ಪೊಲೀಸರ ಕಣ್ತಪ್ಪಿಸಿ ಅವರನ್ನು ಬೇರೆಡೆಗೆ ಕಳಿಸುವ ಅಪಾಯಕಾರಿ ಹಾಗೂ ಸಾಹಸಿ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದರು. ಹೀಗೆ ನೂರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಊಟ ಹಾಕಿದ್ದೇನೆ ಎಂದು ಅಮ್ಮಕ್ಕ ಹೇಳುತ್ತಾರೆ.

'ನಾನು ಅಕ್ಷರ ಕಲಿತಿಲ್ಲ. ಮದುವೆಯಾಗುವವರೆಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಚ್ಚು ತಿಳಿದಿರಲಿಲ್ಲ. ನಾನು ಮದುವೆಯಾಗಿ ಬಂದ ಮೇಲೆ ಮನೆಯಲ್ಲಿ ಹೋರಾಟದ ಕರಪತ್ರಗಳನ್ನು ಅಡಗಿಸಿ ಇಟ್ಟಿದ್ದೇನೆ. ತಲೆ ತಪ್ಪಿಸಿಕೊಂಡು ಬರುತ್ತಿದ್ದ ಚಳವಳಿಗಾರರನ್ನು ಉಳಿಸಿ, ಊಟ ಹಾಕಿದ್ದೇನೆ. ಅವರನ್ನು ಹುಡುಕಿ ಬರುವ ಪೊಲೀಸರ ಬಳಿ ಏನೇನೋ ಸಬೂಬುಗಳನ್ನು ಹೇಳಿ ಸಾಗಹಾಕಿದ್ದೇನೆ.

ಲೆಕ್ಕವಿಲ್ಲದಷ್ಟು ಮಂದಿ ಸ್ವಾತಂತ್ರ್ಯ ಹೋರಾಟದಲ್ಲಿ ಸೆರೆವಾಸ ಅನುಭವಿಸಿದ್ದಾರೆ. ನಾನು ನನಗೆ ತಿಳಿದ ರೀತಿಯಲ್ಲಿ ಕಾರ್ಯ ಮಾಡಿದ್ದೇನೆ. ನಿಜಕ್ಕೂ ಇದೊಂದು ಅಲ್ಪ ಮಟ್ಟದ ದೇಶಸೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲರಂತೆ ನಾನು ಸೆರೆಮನೆ ವಾಸ ಮಾಡಿಲ್ಲ ಎನ್ನುವ ಬೇಸರವೂ ನನಗಿದೆ ಎಂದು ಅಮ್ಮಕ್ಕ ಹೇಳುತ್ತಾರೆ.

ಈಗ ಅಮ್ಮಕ್ಕ ಗಣಪತಿ ಭಟ್ಟರಿಗೆ ಸುಮಾರು 96 ವರ್ಷ. ಪತಿ ಅಗಲುವಿಕೆಯ ಕುಟುಂಬದವರ ಜತೆ ನೆಲೆಸಿರುವ ಅವರು ಈಗಲೂ ಸ್ವಾವಲಂಬಿ. ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಾರೆ.

ತಮಗೆ ಕಿವಿ ಕೇಳುವುದಿಲ್ಲ, ಕಣ್ಣು ಅಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಮುಗ್ಧಮುಖದಲ್ಲಿ ನಗುವರಳಿಸುತ್ತಾ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದ ಅನುಭವ ಹಂಚಿಕೊಳ್ಳುತ್ತಾರೆ.

ಸ್ವಾತಂತ್ರ್ಯ ಚಳವಳಿಯಲ್ಲಿ ಬೀದಿಗಿಳಿದು ಹೋರಾಟ ನಡೆಸಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದವರು ಮಾತ್ರವಲ್ಲ, ಇಂತಹ ಹೋರಾಟಗಾರರಿಗೆ ಆಶ್ರಯ ನೀಡಿ ಪೋಷಿಸಿದ ಪರೋಕ್ಷ ಹೋರಾಟಗಾರರ ಕೊಡುಗೆಯೂ ದೊಡ್ಡದು. ಅಂತಹ ಸಾವಿರಾರು ಕಾಣದ ಕೈಗಳ ಹೋರಾಟವನ್ನು ನಾವು ಈ ಸಂದರ್ಭದಲ್ಲಿ ನೆನಸಿಕೊಳ್ಳಲೇಬೇಕು.

English summary
Many Indian women contributed indirectly to freedom fight by providing shelter and food to the fighters. Here is the story of woman achiever Ammakka Ganapathi Bhat from Yellapur of Uttara Kannada districtm who served Indian freedom movement indirectly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more