ರಾಜ್ಯದಲ್ಲಿ ಮುಂದಿನ ವಾರದಿಂದ ಹಂತ ಹಂತವಾಗಿ ಬಿಸಿಲಿನ ಝಳ ಹೆಚ್ಚಳ
ಬೆಂಗಳೂರು, ಮಾರ್ಚ್ 07: ಮುಂದಿನ ವಾರದಿಂದ ರಾಜ್ಯದಲ್ಲಿ ಹಂತ ಹಂತವಾಗಿ ಬಿಸಿಲ ಝಳ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸೆಕೆ ಹೆಚ್ಚಾಗಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಹೀಗಾಗಿ ಸಾರ್ವಜನಿಕರು ಬಿಸಿಲಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಎಚ್ಚರಿಕೆವಹಿಸುವುದು ಒಳಿತು. ಮುಂದಿನ ವಾರದಿಂದ ಹಂತ ಹಂತವಾಗಿ ತಾಪಮಾನ ಹೆಚ್ಚಾಗಲಿದೆ, ಮೇ ಅಂತ್ಯದ ವೇಳೆಗೆ ಇಳಿಮುಖದತ್ತ ಸಾಗಲಿದೆ. ಈಗಿನ ಪರಿಸ್ಥಿತಿಯನ್ನು ನೋಡುವುದಾದರೆ, ಈ ಬಾರಿ ವಾಡಿಕೆಗಿಂತ ಹೆಚ್ಚು ತಾಪಮಾನ ನಿರೀಕ್ಷಿಸಲಾಗಿದೆ.
ದೆಹಲಿ: ಮುಂದಿನ 2 ದಿನಗಳಲ್ಲಿ 4 ಡಿಗ್ರಿ ಸೆಲ್ಸಿಯಸ್ನಷ್ಟು ಏರಲಿದೆ ಉಷ್ಣಾಂಶ, ಮಳೆ ಸಾಧ್ಯತೆ
ಬೆಳಗ್ಗೆ 11 ರಿಂದ 3 ಗಂಟೆಯವರೆಗೆ ಅಧಿಕ ಬಿಸಿಲಿರಲಿದ್ದು, ಈ ಸಂದರ್ಭದಲ್ಲಿ ಮನೆ, ಕಚೇರಿಗಳಲ್ಲೇ ಇರುವಂತೆ ದಿನಚರಿ ರೂಢಿಸಿಕೊಳ್ಳಬೇಕು. ಹೊರಾಂಗಣ ಕೆಲಸ ಕಾರ್ಯಗಳನ್ನು ಆದಷ್ಟು ಕಡಿಮೆ ಮಾಡಬೇಕು.

ಬೆಂಗಳೂರಲ್ಲಿ 33.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ
ಬೆಂಗಳೂರಿನಲ್ಲಿ 33.3 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಎಚ್ಎಎಲ್ನಲ್ಲಿ 31.2 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ನಲ್ಲಿ 32.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಹಾಗೆಯೇ ಬೆಂಗಳೂರು ನಗರದಲ್ಲಿ 18.4 ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ನಲ್ಲಿ 16.4 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ನಲ್ಲಿ 17.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿರುವುದೆಲ್ಲಿ?
ರಾಜ್ಯದ ಕಲಬುರಗಿಯಲ್ಲಿ 37.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಹಾಗೆಯೇ ಬೆಳಗಾವಿ ಏರ್ಪೋರ್ಟ್ನಲ್ಲಿ 13.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಒಂದು ವಾರದ ಹಿಂದೆ ಬೆಂಗಳೂರಲ್ಲಿ ತಾಪಮಾನ ಹೇಗಿತ್ತು
ಕಳೆದ ಒಂದು ವಾರದ ಹಿಂದೆ ಬೆಂಗಳೂರಿನಲ್ಲಿ ಕನಿಷ್ಠ 17-18 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಹಾಗೂ ಗರಿಷ್ಠ 25-28 ಡಿಗ್ರಿ ಸೆಲ್ಸಿಯಸ್ನಷ್ಟಿತ್ತು. ವಾಡಿಕೆಯಂತೆ ಮಾರ್ಚ್ , ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ. ಹಂತ ಹಂತವಾಗಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಇದೀಗ ಕಳೆದ ಒಂದು ವಾರದಿಂದ ದಿಢೀರ್ ಏರಿಕೆಯಾಗಿದೆ. ಹೀಗಾಗಿ ಜನರಿಗೆ ಬೇಸಿಗೆಯ ಬಿಸಿ ಮುಟ್ಟಿದೆ.

ಆರೋಗ್ಯದ ಬಗ್ಗೆ ಇರಲಿ ಎಚ್ಚರ
ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ ಮಾನವನ ದೇಹದಲ್ಲಿ ನೀರಿನ ಅಸಮತೋಲನ ಉಂಟಾಗುತ್ತದೆ. ಇದರಿಂದ ತಲೆ ಸುತ್ತುವುದು, ರಕ್ತದೊತ್ತಡ ಕಡಿಮೆಯಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಉದ್ಭವಿಸಲಿವೆ.
ಅದರಲ್ಲೂ ವೃದ್ಧರು, ಮಹಿಳೆ ಹಾಗೂ ಮಕ್ಕಳಲ್ಲಿ ಹೆಚ್ಚಾಗಿ ಅನಾರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಹೀಗಾಗಿ ಬಿಸಿಲನಲ್ಲಿ ಓಡಾಟವನ್ನು ನಿಯಂತ್ರಿಸಬೇಕು.