ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಹೈಕಮಾಂಡ್‌ಗೆ ಬಿಸಿ ಮುಟ್ಟಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಿಕ್ಕ 'ಅಭಯ ಹಸ್ತ'!

|
Google Oneindia Kannada News

ಬೆಂಗಳೂರು, ಜು. 19: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಸೂಚಿಸಿದೆ ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆಯೆ ರಾಜ್ಯದಲ್ಲಿ ಮತ್ತೆ ರಾಜಕೀಯ ಮೇಲಾಟ ಶುರುವಾಗಿದೆ. ಇಲ್ಲಿಯವರೆಗೆ ಕೇವಲ ಪಕ್ಷದಲ್ಲಿನ ಆಪ್ತರು ಮಾತ್ರ ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಬಾರದು ಎಂಬ ಹೇಳಿಕೆಗಳನ್ನು ಕೊಡುತ್ತಿದ್ದರು. ಇದೀಗ ವಿರೋಧ ಪಕ್ಷಗಳ ನಾಯಕರೂ ಕೂಡ ಯಡಿಯೂರಪ್ಪ ಬದಲಾವಣೆ ಮಾಡಿದರೆ ಬಿಜೆಪಿಗೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ರಾಜಕೀಯ ನಾಯಕರೊಂದಿಗೆ ಪ್ರಭಾವಿ ಮಠಾಧೀಶರು ಕೂಡ ಯಡಿಯೂರಪ್ಪ ಅವರ ಪರವಾಗಿ ನಿಂತಿದ್ದಾರೆ. ಒಂದು ಮಾಹಿತಿಯಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಬಿಜೆಪಿ ಹೈಕಮಾಂಡ್ ವಿರುದ್ಧ ಪ್ರಯೋಗಿಸುತ್ತಿರುವ ಅಂತಿಮ ರಾಜಕೀಯ ದಾಳಿ ಇದಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಇವತ್ತು ಇಡೀ ದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕೇಂದ್ರವನ್ನಾಗಿಟ್ಟುಕೊಂಡು ನಡೆದ ಬೆಳವಣಿಗೆಗಳು ಏನೇನು? ಇಲ್ಲಿದೆ ಸಂಪೂರ್ಣ ಮಾಹಿತಿ!

ಕುತೂಹಲ ಮೂಡಿಸಿದ ಕಾಂಗ್ರೆಸ್ ನಾಯಕರು

ಕುತೂಹಲ ಮೂಡಿಸಿದ ಕಾಂಗ್ರೆಸ್ ನಾಯಕರು

ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪಕ್ಷಬೇಧ ಬಿಟ್ಟು ಕಾಂಗ್ರೆಸ್ ನಾಯಕರು ಬೆಂಬಲ ಕೊಟ್ಟಿರುವುದು ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಪಕ್ಷದ ಇಬ್ಬರು ಪ್ರಭಾವಿ ನಾಯಕರು ಯಡಿಯೂರಪ್ಪ ಪರವಾಗಿ ನಿಂತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಭೇಟಿಯಾಗಿದ್ದ ಕಾಂಗ್ರೆಸ್ ಪ್ರಭಾವಿ ನಾಯಕ ಯಡಿಯೂರಪ್ಪ ಅವರಿಗೆ ಅಭಯ ನೀಡಿದ್ದರು. ಇವತ್ತೂ ಕೂಡ ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಅವರಿಗೆ ಅಭಯಹಸ್ತ ನೀಡಿದ್ದಾರೆ. ಜೊತೆಗೆ ಪ್ರಭಾವಿ ಮಠಾಧೀಶರು ಕೂಡ ಬಿಜೆಪಿ ಹೈಕಮಾಂಡ್‌ಗೆ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಅವರೆಲ್ಲರ ಹೇಳಿಕೆಗಳು ಮುಂದಿವೆ.

ಯಡಿಯೂರಪ್ಪ ಭೇಟಿ ಮಾಡಿ ಅಭಯ 'ಹಸ್ತ'

ಯಡಿಯೂರಪ್ಪ ಭೇಟಿ ಮಾಡಿ ಅಭಯ 'ಹಸ್ತ'

ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಭೇಟಿ ಬಳಿಕ ಮಾತನಾಡಿರುವ ಅವರು, "ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಅನ್ನೋದು ಲಿಂಗಾಯತ ಸಮುದಾಯದ ಇಚ್ಚೆ. ಅವರ ಬದಲಾವಣೆಗೆ ಕೈ ಹಾಕಿದರೆ ನಿರ್ನಾಮ ಆಗುತ್ತಾರೆ. ಈ ಹಿಂದೆ ವೀರೇಂದ್ರ ಪಾಟೀಲ್, ನಿಜಲಿಂಗಪ್ಪ, ಜೆ.ಹೆಚ್. ಪಟೇಲ್, ಬೊಮ್ಮಾಯಿ‌ ಅವರ ಇತಿಹಾಸವನ್ನು ಬಿಜೆಪಿ ಹೈಕಮಾಂಡ್ ನೆನಪಿಸಿಕೊಳ್ಳಬೇಕು. ಅದನ್ನು ಬಿಟ್ಟು ಯಡಿಯೂರಪ್ಪ ಬದಲಾವಣೆ ಮಾಡಿದರೆ ಅದೇ ರೀತಿ ಆಗುತ್ತದೆ" ಎಂದು ಎಚ್ಚರಿಸಿದ್ದಾರೆ.

ಬಿಜೆಪಿ ಇತಿಹಾಸ ಮುಗಿಯುತ್ತದೆ..?

ಬಿಜೆಪಿ ಇತಿಹಾಸ ಮುಗಿಯುತ್ತದೆ..?

ಇಷ್ಟೇ ಅಲ್ಲ. "ಯಡಿಯೂರಪ್ಪ ಬಿಜೆಪಿ ಪಕ್ಷವನ್ನು ಕಟ್ಟಿದ್ದಾರೆ. ಹೀಗಾಗಿ ಜನರ ಅಭಿಪ್ರಾಯವನ್ನು ಬಿಜೆಪಿ ಹೈಕಮಾಂಡ್ ತಿಳಿದುಕೊಳ್ಳಬೇಕು. ವೀರಶೈವ ಮಹಾಸಭೆ ಯಡಿಯೂರಪ್ಪ ಜೊತೆಗಿದೆ ಎಂದು ಈ ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಮುಂದೆಯೂ ವೀರಶೈವ ಸಮುದಾಯ ಯಡಿಯೂರಪ್ಪ ಜೊತೆಗಿರಲಿದೆ. ಹೈಕಮಾಂಡ್ ಇಳಿಸಲು ತೀರ್ಮಾನ ಮಾಡಿದ್ದಾರೆ ಅನ್ನೋದು ಸುಳ್ಳು, ಎಲ್ಲಾ ಕಥೆ ಕಟ್ಟಿದ್ದಾರೆ. ಯಾವುದು ಏನೂ ಆಗೋದಿಲ್ಲ. ಯಡಿಯೂರಪ್ಪ ಇದ್ದರೆ ಬಿಜೆಪಿ ಉಳಿಯುತ್ತದೆ. ಅವರಿಗೆ ಏನಾದರೂ ತೊಂದರೆ ಮಾಡಿದರೆ ಅಲ್ಲಿಗೆ ಬಿಜೆಪಿ ಇತಿಹಾಸ ಮುಗೀತು ಅಷ್ಟೇ" ಎಂದು ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ. ಅವರೊಂದಿಗೆ ಮತ್ತೊಬ್ಬ ಕಾಂಗ್ರೆಸ್ ಪ್ರಭಾವಿ ನಾಯಕ ಕೂಡ ಎಚ್ಚರಿಸಿದ್ದಾರೆ.

ಸಂಕಷ್ಟ ತೋಡಿಕೊಂಡ ಯಡಿಯೂರಪ್ಪ!

ಸಂಕಷ್ಟ ತೋಡಿಕೊಂಡ ಯಡಿಯೂರಪ್ಪ!

ಮಾಜಿ ಸಚಿವ, ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಧ್ಯ ನಡೆದಿದೆ ಎನ್ನಲಾದ ಮಾಹಿತಿ 'ಒನ್‌ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ. ತಮ್ಮ ಪಕ್ಷದಲ್ಲಿನ ಬೆಳವಣಿಗೆಗಳನ್ನು ಸಿಎಂ ಯಡಿಯೂರಪ್ಪ ಅವರು ನೋವಿನಿಂದಲೇ ಶಾಮನೂರು ಅವರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

"ಪರಿಸ್ಥಿತಿ ತುಂಬಾ ಸೂಕ್ಷ್ಮವಾಗಿದೆ. ಪಕ್ಷದಲ್ಲಿ ಆಗಬಾರದ ಘಟನೆಗಳು ಆಗುತ್ತಿವೆ. ಈಗ ಬಿಜೆಪಿಯಲ್ಲಿ ಮೊದಲಿದ್ದ ಪರಿಸ್ಥಿತಿ ಇಲ್ಲ. ಸಿಎಂ ಸ್ಥಾನದಿಂದ ನನ್ನನ್ನ ಕೆಳಗಿಳಿಸುವ ಪ್ರಯತ್ನಗಳು ನಡೆದಿದೆ. ಇದು ನಿಜಕ್ಕೂ ಆಗಬಾರದಾಗಿತ್ತು. ಇದರ ನಿರೀಕ್ಷೆಯನ್ನೂ ನಾನು ಮಾಡಿರಲಿಲ್ಲ" ಎಂದು ವೀರಶೈವ-ಲಿಂಗಾಯತ ಮಹಾಸಭಾದ ನಾಯಕರ ಎದುರು ಯಡಿಯೂರಪ್ಪ ಅವರು ನೋವು ತೋಡಿಕೊಂಡಿದ್ದಾರಂತೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಪ್ರಭಾವಿ ನಾಯಕ, ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರು ಯಡಿಯೂರಪ್ಪ ಬೆನ್ನಿಗೆ ನಿಂತಿದ್ದಾರೆ.

ಯಡಿಯೂರಪ್ಪಗೆ ಎಂ.ಬಿ. ಪಾಟೀಲ್ ಬೆಂಬಲ

ಯಡಿಯೂರಪ್ಪಗೆ ಎಂ.ಬಿ. ಪಾಟೀಲ್ ಬೆಂಬಲ

ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಪ್ರಭಾವಿ ನಾಯಕ, ಮಾಜಿ ಸಚಿವ ಎಂ.ಬಿ. ಪಾಟೀಲ್ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿರುವ ಅವರು, "ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ಧೀಮಂತ ನಾಯಕರು. ಅವರನ್ನು ಪದಚ್ಯುತಗೊಳಿಸಿದರೆ, ನಿಶ್ಚಿತವಾಗಿಯೂ ಬಿಜೆಪಿ ವರಿಷ್ಠರು ಲಿಂಗಾಯತರ ಅವಕೃಪೆಗೆ ತುತ್ತಾಗುತ್ತಾರೆ. ಯಡಿಯೂರಪ್ಪನವರ ವಯಸ್ಸು ಮತ್ತು ಕೊಡುಗೆಯನ್ನು ಪರಿಗಣಿಸಿ, ಅವರನ್ನು ಘನತೆ ಮತ್ತು ಮರ್ಯಾದೆಯಿಂದ ನಡೆಸಿಕೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅನಿಸಿಕೆ." ಎಂದು ಎಚ್ಚರಿಸಿದ್ದಾರೆ. ಆ ಮೂಲಕ ಲಿಂಗಾಯತ ಸಮುದಾಯವನ್ನು ಕಡೆಗಣಿಸಲು ಮುಂದಾದರೆ ಅದರ ಪರಿಣಾಮವನ್ನು ಬಿಜೆಪಿ ಹೈಕಮಾಂಡ್ ಎದುರಿಸಬೇಕಾಗುತ್ತದೆ ಎಂದು ತಮ್ಮ ಅಭಿಪ್ರಾಯದಲ್ಲಿ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

Recommended Video

Ishan Kishan ಮೊದಲ ಬಾಲ್ ಸಿಕ್ಸ್ ಹೊಡೆಯೋದಕ್ಕೆ ಅಸಲಿ ಕಾರಣ | Oneindia Kannada
ಪ್ರಬಲ ರಾಜಕೀಯ ದಾಳ ಪ್ರಯೋಗ?

ಪ್ರಬಲ ರಾಜಕೀಯ ದಾಳ ಪ್ರಯೋಗ?

ಇಬ್ಬರೂ ಕಾಂಗ್ರೆಸ್ ನಾಯಕರ ಬೆಂಬಲದಿಂದ ಸಿಎಂ ಯಡಿಯೂರಪ್ಪ ಅವರು ರಾಜಕೀಯ ಪ್ರಬಲ ದಾಳವನ್ನು ಉರುಳಿಸಿದಂತಾಗಿದೆ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ತೀರ್ಮಾನ ಮಾಡಿದೆ ಎಂಬ ಮಾಹಿತಿಯಿದೆ. ಹೀಗಾಗಿ ತಮ್ಮ ಸ್ಥಾನವನ್ನು ಶತಾಯ ಗತಾಯ ಉಳಿಸಿಕೊಳ್ಳಲು ಯಡಿಯೂರಪ್ಪ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜಕೀಯ ಮರೆತು ಲಿಂಗಾಯತ ಸಮುದಾಯದ ಕಾಂಗ್ರೆಸ್ ಪ್ರಭಾವಿ ನಾಯಕರು ಯಡಿಯೂರಪ್ಪ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಇತಿಹಾಸವನ್ನು ನೆನಪಿಸುವ ಮೂಲಕ ದೊಡ್ಡ ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಾಗಿ ಇದೀಗ ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪ ಬದಲಾವಣೆಗೆ ಕುರಿತು ಮತ್ತೆ ರಾಜಕೀಯ ಲಾಭ-ನಷ್ಠಗಳ ಲೆಕ್ಕಾಚಾರ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಎಂಬ ಚರ್ಚೆ ರಾಜ್ಯ ರಾಜಕೀಯದಲ್ಲಿ ಶುರುವಾಗಿದೆ.

English summary
In a surprising development, the Congress Party's leaders M.B. Patil and Shamanur Shivashankarappa stand in support of Chief Minister Yediyurappa. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X