ಮಾರ್ಚ್ 21ರಂದು ಎಂ.ಸಿ. ನಾಣಯ್ಯರಿಂದ ಪ್ರಮುಖ ರಾಜಕೀಯ ತೀರ್ಮಾನ

Posted By: ಬಿಎಂ ಲವಕುಮಾರ್
Subscribe to Oneindia Kannada

ಮಡಿಕೇರಿ, ಮಾರ್ಚ್ 20: ಶಾಸಕರಾಗಿ, ವಿರೋಧ ಪಕ್ಷದ ನಾಯಕರಾಗಿ, ಕಾನೂನು ಸಚಿವರಾಗಿ ಸಜ್ಜನ ರಾಜಕಾರಣಿ ಎಂಬ ಖ್ಯಾತಿಗೆ ಪಾತ್ರರಾಗಿರುವ ಎಂ.ಸಿ.ನಾಣಯ್ಯ ಇನ್ನೇನು ಕಾಂಗ್ರೆಸ್ ಸೇರಿಯೇ ಬಿಡುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಇಲ್ಲಿಯವರೆಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಬೆಳವಣಿಗೆಗಳು ನಡೆಯದಿರುವುದು ಅಚ್ಚರಿಗೆ ಕಾರಣವಾಗಿದೆ.

ಜನವರಿ ತಿಂಗಳಲ್ಲಿ ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಮಡಿಕೇರಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಎಂ.ಸಿ ನಾಣಯ್ಯ ಅವರ ಮನೆಗೆ ತೆರಳಿ ಕೆಲ ಕಾಲ ಉಭಯಕುಶಲೋಪರಿ ನಡೆಸಿದ್ದರು. ಇದು ಭಾರೀ ಸುದ್ದಿಗೆ ಗ್ರಾಸವಾಗಿತ್ತು. ಅಷ್ಟೇ ಅಲ್ಲ ಶೀಘ್ರವೇ 'ಕೈ' ಹಿಡಿಯುವುದು ದಿಟ ಎಂಬಂತೆ ಸುದ್ದಿಗಳು ಹರಿದಾಡಿದ್ದವು.

ಎಂ.ಸಿ.ನಾಣಯ್ಯ ಕಾಂಗ್ರೆಸ್ ಸೇರ್ತಾರಾ?

ಈ ವೇಳೆ ಪ್ರತಿಕ್ರಿಯಿಸಿದ ಎಂ.ಸಿ.ನಾಣಯ್ಯ ಅವರು ಸಿಎಂ ಸಿದ್ದರಾಮಯ್ಯ ನನ್ನನ್ನು ಭೇಟಿ ಮಾಡಿದನ್ನು ಗಂಭೀರವಾಗಿ ಪರಿಗಣಿಸುವಂತಹದ್ದೇನಿಲ್ಲ. ನಾವಿಬ್ಬರು ಗೆಳೆಯರು. ನನ್ನ ಆರೋಗ್ಯ ವಿಚಾರಿಸಿಕೊಂಡು ಹೋಗಲು ಬಂದಿದ್ದಾರಷ್ಟೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರುವ ವಿಚಾರವನ್ನು ತಳ್ಳಿಹಾಕಿದ್ದರು.

Important political decision by Nanaiah on March 21

ಹಾಗೆ ನೋಡಿದರೆ ಇವತ್ತು ರಾಜಕೀಯವಾಗಿ ಎಂ.ಸಿ. ನಾಣಯ್ಯ ಅವರು ಬೆಳೆದಿದ್ದಾರೆ ಮತ್ತು ಒಂದಷ್ಟು ಹುದ್ದೆಗಳನ್ನು ಅನುಭವಿಸಿದ್ದಾರೆ ಎಂದರೆ ಅದು ದೇವೇಗೌಡರ ಕೃಪೆಯಿಂದ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. 1978ರಲ್ಲಿ ಅವರು ಮಡಿಕೇರಿಯಲ್ಲಿ ಚುನಾವಣೆಗೆ ನಿಂತು ಗೆದ್ದಿದ್ದು ಬಿಟ್ಟರೆ ಮತ್ತೆ ಯಾವತ್ತೂ ಅವರು ಚುನಾವಣೆ ಎದುರಿಸಿ ಗೆದ್ದವರಲ್ಲ. ಹೀಗಿರುವಾಗ ಕಾಂಗ್ರೆಸ್‍ಗೆ ಸೇರ್ಪಡೆಗೊಂಡರೂ ಅಲ್ಲಿ ಅವರಿಗೆ ತಕ್ಕ ಸ್ಥಾನ ಮಾನ ಸಿಗುತ್ತೆ ಎಂದು ಹೇಳುವಂತಿಲ್ಲ. ಇತ್ತೀಚೆಗಿನ ವರ್ಷಗಳ ತನಕವೂ ದೇವೇಗೌಡರು ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನವನ್ನು ಕರುಣಿಸಿದ್ದರು.

ಕೊಡಗು: 2013ರ ಚುನಾವಣಾ ಫಲಿತಾಂಶದಲ್ಲಿ ಗೆದ್ದವರು, ಸೋತವರು

ನಾಣಯ್ಯ ಮೇಲ್ನೋಟಕ್ಕೆ ತಟಸ್ಥರಂತೆ ಕಂಡು ಬಂದರೂ ಅವರು ಜೆಡಿಎಸ್‍ನ್ನು ಅಷ್ಟು ಸುಲಭವಾಗಿ ತೊರೆಯಲಾರರು. ದಳ ಇಬ್ಭಾಗವಾದಾಗ ಅವರು ಮೌನಕ್ಕೆ ಶರಣಾದರು. ತಮ್ಮೊಂದಿಗೆ ಇದ್ದ ಒಂದಷ್ಟು ನಾಯಕರೊಂದಿಗೆ ತೆರೆಮರೆಗೆ ಸರಿದರು.

ಅವರ ಬೆಂಬಲಿಗರ ಪೈಕಿ ಕೆಲವರು ಇನ್ನು ಹೀಗೆಯೇ ಇದ್ದರೆ ರಾಜಕೀಯವಾಗಿ ಅಸ್ಥಿತ್ವ ಇಲ್ಲದಂತಾಗುತ್ತದೆ ಎಂದು ಬೇರೆ ಬೇರೆ ಪಕ್ಷಗಳಿಗೆ ವಲಸೆ ಹೋದರು. ಇಂತಹ ಸಂದರ್ಭದಲ್ಲಿ ಮತ್ತೊಮ್ಮೆ ಜೆಡಿಎಸ್ ಕರೆದು ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಿತ್ತು.

Important political decision by Nanaiah on March 21

ಸದ್ಯದ ಪರಿಸ್ಥಿತಿಯಲ್ಲಿ ಅವರು ಮೊದಲಿನಂತೆ ಹುಮ್ಮಸ್ಸಿನಿಂದ ಪಕ್ಷ ಕಟ್ಟುವುದು ಸಾಧ್ಯವಾಗದ ಕೆಲಸವಾಗಿದೆ. ವಯಸ್ಸು, ಆರೋಗ್ಯ ಎಲ್ಲವೂ ಅವರಿಗೆ ತಡೆಯಾಗಿದೆ. ಜತೆ ಜತೆಗೆ ಇವತ್ತಿನ ಭ್ರಷ್ಟ ರಾಜಕೀಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದವರು ಅವರು. ಹೀಗಿರುವಾಗ ಅವರೇನಾದರೂ ಕಾಂಗ್ರೆಸ್‍ನತ್ತ ಮುಖ ಮಾಡಿದರೆ ಅವರ ಇಷ್ಟವರೆಗಿನ ಸಾಧನೆ, ಪ್ರಾಮಾಣಿಕತೆಗೆ ಎಳ್ಳುನೀರು ಬಿಟ್ಟಂತಾಗುತ್ತದೆ.

ಇದೆಲ್ಲದರ ನಡುವೆ ನಾಣಯ್ಯ ಅವರ ನಿಲುವು ಏನು ಎಂಬುದು ಗೊತ್ತಾಗುವ ಕಾಲ ಸನ್ನಿಹಿತವಾಗಿದೆ. ಮಾರ್ಚ್ 21ರಂದು ವೀರಾಜಪೇಟೆಯ ಟೌನ್ ಸಹಕಾರ ಬ್ಯಾಂಕ್‍ನ ಸಭಾಂಗಣದಲ್ಲಿ ಜೆಡಿಎಸ್ ಪ್ರಮುಖ ಕಾರ್ಯಕರ್ತರ ಮತ್ತು ಎಂ.ಸಿ.ನಾಣಯ್ಯ ಅವರ ಹಿತೈಷಿ, ಬೆಂಬಲಿಗರ ಸಭೆಯನ್ನು ಕರೆಯಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಈ ಸಭೆಯಲ್ಲಿ ಎಂ.ಸಿ. ನಾಣಯ್ಯ ಅವರು ಭಾಗವಹಿಸುವುದು ಬಹುತೇಕ ಖಚಿತವಾಗಿದ್ದು, ಅಲ್ಲಿ ಅವರು ತೆಗೆದುಕೊಳ್ಳುವ ನಿರ್ಧಾರ ಮಹತ್ವದಾಗಿದೆ. ಅದರ ಮೇಲೆ ಮುಂದಿನ ಬೆಳವಣಿಗೆಗಳು ನಡೆಯಲಿವೆ ಎಂಬುದರಲ್ಲಿ ಎರಡು ಮಾತಿಲ್ಲ.

ಮಾ. 21ರಂದು ಮಾಜಿ ಕಾನೂನು ಸಚಿವ ಎಂ.ಸಿ. ನಾಣಯ್ಯ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದ್ದು, ಜೆಡಿಎಸ್‍ನಲ್ಲೇ ಉಳಿಯುವ ಪ್ರಯತ್ನ ಮಾಡಿದರೆ ಅದರ ಒಂದಷ್ಟು ಲಾಭ ಕುಮಾರಸ್ವಾಮಿ ಅವರಿಗೆ ಆಗುವುದಂತು ನಿಜ. ಒಂದು ವೇಳೆ ಕೈ ಕಡೆಗೆ ವಾಲಿದರೆ ಅದರ ಬೆಳವಣಿಗೆಯನ್ನು ಕಾಲವೇ ಹೇಳಬೇಕಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The meeting of the JDS activists and MC Nanaiah's supporters called on March 21st at Veerajpet's Co-operative Bank Hall. Here, Nanaiah will take his political decision.2) Meta Title: Important political decision by Nanaiah on March 21

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ