ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಗೆಳೆಯ ಸಿದ್ಧಾರ್ಥ ಬುದ್ಧನಾಗಲು ಹೋದ: ಪೊಲೀಸ್ ಅಧಿಕಾರಿಯ ಆಪ್ತ ಬರಹ

|
Google Oneindia Kannada News

ಬಳ್ಳಾರಿ, ಜುಲೈ 31: ಅಕಾಲಿಕ ಸಾವಿನಿಂದ ಆಘಾತ ಮೂಡಿಸಿರುವ ಉದ್ಯಮಿ ವಿ.ಜಿ. ಸಿದ್ಧಾರ್ಥ ಅವರ ಕುರಿತು ಅವರನ್ನು ಕಂಡವರು, ಪ್ರತ್ಯಕ್ಷ ನೋಡದೆಯೂ ಅವರಿಂದ ನೆರವು ಪಡೆದವರು, ಅವರ ಕುರಿತು ಕೇಳಿದವರು- ಹೀಗೆ ಎಲ್ಲ ವರ್ಗ, ಸಮುದಾಯಗಳ ಜನರು ಅವರ ಸಾಧನೆಯನ್ನು, ಮಾನವೀಯ ಗುಣದ ವ್ಯಕ್ತಿತ್ವವನ್ನು ಕೊಂಡಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಾವಿನ ಕುರಿತು ದುಃಖ ವ್ಯಕ್ತಪಡಿಸುವ, ಅವರ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುವ ಬರಹಗಳನ್ನು ಪ್ರಕಟಿಸುತ್ತಿದ್ದಾರೆ.

ಸಿದ್ಧಾರ್ಥ ಅವರನ್ನು ಹತ್ತಿರದಿಂದ ಕಂಡಿದ್ದ, ಅವರೊಂದಿಗೆ ಒಡನಾಟ ಹೊಂದಿದ್ದ ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿ ಅವರು ಫೇಸ್‌ಬುಕ್‌ನಲ್ಲಿ ಬರಹವೊಂದನ್ನು ಬರೆದಿದ್ದಾರೆ. 'ಸಿದ್ಧಾರ್ಥ ಬುದ್ಧನಾಗಲು ಹೋದ' ಎಂಬ ಶೀರ್ಷಿಕೆಯಲ್ಲಿ ಬರೆದಿರುವ ಈ ಲೇಖನ, ಸಿದ್ಧಾರ್ಥ ಅವರ ಸರಳತೆ ಮತ್ತು ಮಾದರಿ ವ್ಯಕ್ತಿತ್ವವನ್ನು ತೆರೆದಿಡುತ್ತದೆ. ಆ ಬರಹ ಇಲ್ಲಿದೆ.

ರಾಜ್ಯದ ಖ್ಯಾತ ಉದ್ಯಮಿ ಸಿದ್ಧಾರ್ಥ ನಿಧನ: ಗಣ್ಯರ ಶೋಕದ ನುಡಿರಾಜ್ಯದ ಖ್ಯಾತ ಉದ್ಯಮಿ ಸಿದ್ಧಾರ್ಥ ನಿಧನ: ಗಣ್ಯರ ಶೋಕದ ನುಡಿ

ಕಾಫಿ ಡೇಯ ಸಿದ್ಧಾರ್ಥ ಅವರನ್ನು ನಾನು ಮೊದಲು ನೋಡಿದ್ದು ಅವರ ಮೊದಲ ಕಾಫಿ ಡೇ ಅಂಗಡಿಯಲ್ಲಿ. ನನ್ನ ಕೆಆರ್ಇಸಿ ಗೆಳೆಯ ಶಶಿ ಮೋಹನ್ ಮತ್ತು ನಾನು ಒಂದು ರಾತ್ರಿ ಜೊತೆಯಲ್ಲಿ ಊಟ ಮಾಡಿದ ನಂತರ ಕಾಫಿ ಡೇಗೆ ಹೋಗಿದ್ವಿ. ಆಗ ಅದೊಂದೇ ಕಾಫಿ ಡೇ ಅಗಿತ್ತು. ಶಶಿಮೋಹನ್ ನನಗೆ ಸಿದ್ಧಾರ್ಥ್ ಅವರ ಪರಿಚಯ ಮಾಡಿಸಿದ. ನಾನು ಆಗತಾನೆ ಹೈದರಾಬಾದ್‌ನ ಪೊಲೀಸ್ ಅಕಾಡೆಮಿಯಿಂದ ತರಬೇತಿ ಮುಗಿಸಿಕೊಂಡು ಬೆಂಗಳೂರು ಬಂದಿದ್ದೆ. ಬೆಂಗಳೂರು ಜೀವನ ನನಗೆ ಹೊಸದಾಗಿತ್ತು.

IGP Nanjundaswamy On Coffee Day Founder VG Siddhartha

ಸಿದ್ಧಾರ್ಥ್ ಅಂದು ಕಾಫಿ ಡೇಯಲ್ಲಿ ಕೆಲಸ ಮಾಡುವ ಹುಡುಗರಂತೆ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಟಿ-ಷರ್ಟ್ ಧರಿಸಿದ್ದ. ಮೊದಲ ಭೇಟಿಯಲ್ಲಿಯೇ ನಾವಿಬ್ಬರೂ ಬಹಳ ಮಾತಾಡಿದೆವು. ಆಗ ಅವರ ಮಾವ ಎಸ್ ಎಂ ಕೃಷ್ಣ ಅವರು ಇನ್ನೂ ಕನ್ನಡ ನಾಡಿನ ಮುಖ್ಯಮಂತ್ರಿ ಆಗಿರಲಿಲ್ಲ. ಸಿದ್ಧಾರ್ಥ್ ನನ್ನ ಹಳೆಯ ಗೆಳೆಯನೆಂಬಂತೆ ತುಂಬಾ ಹೊತ್ತು ಖುಷಿ ಖುಷಿಯಾಗಿ ಮಾತಾಡುತ್ತಿದ್ದರು. ಅವರು ಕಾಫಿ ಡೇಯನ್ನು ಪ್ರಪಂಚದ ಶ್ರೇಷ್ಠ ಕಾಫಿ ಅಂಗಡಿಗಳ ಸರಪಣಿ (Chain of Restaurants) ಮಾಡುವುದಾಗಿ ಹೇಳುತ್ತಿದ್ದರು. ತಾವು ಅಂದು ಕಂಡಿದ್ದ ಕನಸುಗಳ ನನಸು ಮಾಡುತ್ತಲೇ ಸಾಗಿದರು.

ನಲವತ್ತು ವರ್ಷದ ನಂಟು; ಸಿದ್ಧಾರ್ಥ್ ಸಾವಿಗೆ ಕಣ್ಣೀರಾದ ಶಾಸಕ ರಾಜೇಗೌಡನಲವತ್ತು ವರ್ಷದ ನಂಟು; ಸಿದ್ಧಾರ್ಥ್ ಸಾವಿಗೆ ಕಣ್ಣೀರಾದ ಶಾಸಕ ರಾಜೇಗೌಡ

ಅವರ ಪರಿಚಯವಾದ ಮೇಲೆ ನಾವು ತುಂಬಾ ಸಾರಿ ಬೇರೆ ಬೇರೆ ಕಡೆ ಭೇಟಿ ಆಗುತ್ತಲೇ ಇದ್ದೆವು. ಅವರೊಂದು ಸಾರಿ ಅವರ ಸ್ವಂತ ಊರಾದ ಚೇತನಹಳ್ಳಿಯಲ್ಲಿ ಒಂದು ಭವ್ಯವಾದ ಡಿನ್ನರ್ ವ್ಯವಸ್ಥೆ ಮಾಡಿದ್ದರು. ಆಗ ನಾನು ಹಾಸನದಲ್ಲಿ ಎಸ್ಪಿ ಆಗಿದ್ದೆ. ಆಗ ಸನ್ಮಾನ್ಯ ಎಸ್.ಎಂ. ಕೃಷ್ಣ ಅವರು ಕನ್ನಡನಾಡಿನ ಮುಖ್ಯಮಂತ್ರಿಗಳಾಗಿದ್ದರು.

ಸಿದ್ಧಾರ್ಥ ಅವರು ಉತ್ತಮ ರೀತಿಯಲ್ಲಿ ತಮ್ಮ ಎಲ್ಲ ಅತಿಥಿಗಳನ್ನು ಸತ್ಕರಿಸುತ್ತಿದ್ದರು. ನನಗೆ ತಮ್ಮ ಹಳೆಯ-ಭವ್ಯವಾದ ಬ್ರಿಟಿಷ್ ಕಾಲದ ಮನೆಯನ್ನು ಸುತ್ತಾಡಿಸಿ ತೋರಿಸಿದರು. ಬ್ರಿಟಿಷರ ಕಾಫಿ ತೋಟ ಸ್ವಾತಂತ್ರ್ಯಾನಂತರ ತಮ್ಮ ಮನೆತನದ ಒಡೆತನಕ್ಕೆ ಹೇಗೆ ಬಂತು ಎಂದು ತಿಳಿಸಿದರು.

IGP Nanjundaswamy On Coffee Day Founder VG Siddhartha

ಅವರಲ್ಲಿ ಅದಮ್ಯ ಸಾಹಸ ಮನೋಭಾವವಿತ್ತು. ಅವರ ಕಂಡಾಗಲೆಲ್ಲಾ ನಾನು ಇವರಂತೆ ಆಗಬೇಕು, ನಾನೂ ತುಂಬಾ ಆಕ್ಟಿವ್-ಚೇತನಶೀಲನಾಗಿರಬೇಕು ಎಂದುಕೊಳ್ಳುತ್ತಿದ್ದೆ.

ಮೈಸೂರಿನ ಆಸ್ಪತ್ರೆಯಲ್ಲಿ ಸಿದ್ಧಾರ್ಥ್ ತಂದೆ: ಮಗನ ಮುಖವನ್ನು ಕೊನೇ ಬಾರಿಯೂ ನೋಡಲಾಗದೆ ಅಪ್ಪನಿಗೆ? ಮೈಸೂರಿನ ಆಸ್ಪತ್ರೆಯಲ್ಲಿ ಸಿದ್ಧಾರ್ಥ್ ತಂದೆ: ಮಗನ ಮುಖವನ್ನು ಕೊನೇ ಬಾರಿಯೂ ನೋಡಲಾಗದೆ ಅಪ್ಪನಿಗೆ?

ಅಂತಹ ವ್ಯಕ್ತಿ ನನ್ನ ಭಾಷಣಗಳ-ಬರಹಗಳ ಅಭಿಮಾನಿಗಳಾಗಿದ್ದರು. ಅವರ ತಂದೆ, ನಾನು ಒಂದು ಸಾರಿ ಪೂರ್ಣಪ್ರಜ್ಞ ಶಾಲೆಯ ಸಮಾರಂಭದಲ್ಲಿ ಭಾಗವಹಿಸಿದ್ದೆವು. ನನ್ನ ಭಾಷಣ ಮುಗಿದ ಮೇಲೆ ಅವರ ತಂದೆ ಹೇಳಿದ ಮಾತು, ''ನಿಮ್ಮ ಮಾತು ಕೇಳಿದ್ರೆ, ನಾನು ಒಮ್ಮೆ ಹಿಂದೆ ದ.ರಾ. ಬೇಂದ್ರೆ ಅವರ ಭಾಷಣ ಕೇಳಿದ್ದೆ, ಅವರಂತೆ ನೀವು ಮಾತಾಡ್ತಿರಿ. ನಮ್ಮ ಸಿದ್ಧಾರ್ಥ ನಿಮ್ಮ ಭಾಷಣಗಳ ಅಭಿಮಾನಿ" ಎಂದಿದ್ದರು. "ಆತ ನಾನು ನಿಮ್ಮೊಡನೆ ಒಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಅಂದಿದ್ದಕ್ಕೆ, ನಿಮಗೆ ಒಳ್ಳೆಯ ಭಾಷಣ, ಒಳ್ಳೆಯ ಮಾತುಗಾರರ ಕೇಳುವ ಭಾಗ್ಯ ಇವತ್ತು ಸಿಗುತ್ತದೆ" ಎಂದು ಹೇಳಿದ್ದ ಎಂದಿದ್ದರು.

ಈ ಸಿದ್ಧಾರ್ಥ ನಿಜವಾಗಿಯೂ ಬುದ್ಧನಾಗುವ ಮೊದಲು ಆ ಸಿದ್ಧಾರ್ಥನಂತೆ ಮಾನವೀಯ ರಾಜಕಳೆಯಿಂದ ಬದುಕಿದ. ಇಂದು ಕಳೆಬರವಾಗಿದ್ದಾನೆ. ಈ ಸಿದ್ಧಾರ್ಥನೂ ಬುದ್ಧನಾಗಲು ಹೊರಟಿದ್ದ. ಆತನಲ್ಲಿ ಈ ಪ್ರಪಂಚದ ಸಾವಿರಾರು ಸತ್ಯಗಳು ಉಳಿದು ಬಿಟ್ಟಿದ್ದವು. ಆತನೂ ಸಹ ಆ ಸತ್ಯಗಳನ್ನು ಈ ಪ್ರಪಂಚಕ್ಕೆ ತಿಳಿಸಲು ಹಪಹಪಿಸುತ್ತಿದ್ದ. ತನ್ನ ಅರಿವಿಗೆ ಬಂದ ಸತ್ಯಗಳ ತಿಳಿಸುವ ಮೊದಲೇ, ಬುದ್ಧನಾಗುವ ಮೊದಲೇ ನಡೆದುಬಿಟ್ಟ.

ಅತನ ಮನದೊಳಗಿದ್ದ ಆ ಸತ್ಯಗಳೆಲ್ಲಾ ಹೊರಕ್ಕೆ ಬರಬೇಕು. ಆತನ ಈ ಅಕಾಲಿಕ ಸಾವಿಗೆ ಕಾರಣಗಳ ಕಂಡುಹಿಡಿಯಲೇಬೇಕು. ಯಾವ ವ್ಯಕ್ತಿಗಳಿಂದ, ಸಂಘಗಳಿಂದ, ಸಂಸ್ಥೆಗಳಿಂದ, ಇಲಾಖೆಗಳಿಂದ ಆತ ನೊಂದಿದ್ದ, ಆತ ಈ ನಿರ್ಧಾರ ತಳೆದಿದ್ದ ಎಂಬ ಸತ್ಯ ಹೊರಬರಬೇಕಾಗಿದೆ.

ನಮ್ಮ ಕಾಫಿ ಡೇ ಸಿದ್ಧಾರ್ಥ ಬುದ್ಧನಾಗಲೇ ಹೊರಟವನು, ತನ್ನ ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡವನು. ಸಾಹಸಿ. ಆತ ಹೀಗಾದ ಎಂದರೆ ಆತನನ್ನು ನಂಬಿದ್ದವರಿಗೆ, ಅತನನ್ನು ಆದರ್ಶವಾಗಿ ಕಂಡವರಿಗೆ ನೋವಾಗಿದೆ. ಸಂಪೂರ್ಣ ತನಿಖೆ ಆಗಲಿ, ಸತ್ಯ ಹೊರಬರಲಿ.

ಸಿದ್ಧಾರ್ಥ ಬುದ್ಧನಾಗಲು ಹೋದ. ಆತ ನನಗೆ ಎಂದೆಂದಿಗೂ ಬುದ್ಧನೇ...

-ಮನಂ (ನಂಜುಂಡಸ್ವಾಮಿ ಮಳವಳ್ಳಿ)

English summary
A touching writeup by IGP Nanjundaswamy (Manam) about Coffee Day Founder VG Siddhartha in Facebook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X