ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾನ್ಯ ಜನರ ಶಕ್ತಿಯೇ ನನಗೆ ಸ್ಫೂರ್ತಿ : ಹಿರೇಮಠ

By ಪ್ರಸಾದ ನಾಯಿಕ
|
Google Oneindia Kannada News

ಭಾರತದ ಸಂವಿಧಾನ ಜನತೆಗೆ ನೀಡಿರುವ ಮೂಲಭೂತ ಹಕ್ಕು, ಬ್ರಿಟಿಷರ ವಿರುದ್ಧ ನಡೆದ ಸ್ವಾತಂತ್ರ್ಯ ಸಂಗ್ರಾಮ, ಜೀವನ್ಮುಖಿಯಾಗಿಸುವ ಸ್ಫೂರ್ತಿಯುತ ಪುಸ್ತಕಗಳು, ದೇಶದ ಕೀರ್ತಿಪತಾಕೆ ಹಾರಿಸಿದ ದಿಗ್ಗಜರ ಮುತ್ತಿನಂಥ ನುಡಿಗಳು ಸಂಗಯ್ಯ ರಾಚಯ್ಯ ಹಿರೇಮಠ ಅವರ ಮಾತುಗಳಲ್ಲಿ ನದಿಯ ನೀರಿನಂತೆ ಪ್ರವಹಿಸುತ್ತಿರುತ್ತವೆ. ಹಸನ್ಮುಖಿಯಾಗಿಯೇ ನಿರರ್ಗಳವಾಗಿ ಮಾತನಾಡುವ ಅರವತ್ತೊಂಬತ್ತರ ವಯಸ್ಸಿನಲ್ಲಿಯೂ ಉತ್ಸಾಹದ ಚಿಲುಮೆ ಪುಟಿಯುತ್ತಿರುತ್ತದೆ.

ಅದೇ, ಬದುಕಲು ದೇಶದ ಬಡಜನತೆಗೆ ಬೇಕಾದ ಕನಿಷ್ಠ ಸೌಲಭ್ಯವನ್ನು ಕಸಿಯುತ್ತಿರುವ, ರೈತರ ಭೂಮಿಯನ್ನು ನುಂಗುತ್ತಿರುವ, ಅರಣ್ಯ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ, ದುರಾಸೆಯನ್ನೇ ಮೈತುಂಬಿಕೊಂಡಿರುವ ಭ್ರಷ್ಟ ರಾಜಕಾರಣಿಗಳು, ಅವರ ಕಾಲುನೆಕ್ಕುವ ಅಧಿಕಾರಿಗಳತ್ತ ಹೊರಳಿದಾಗ ಮಾತು ಉಗ್ರವಾಗುತ್ತವೆ, ಕಣ್ಣು ಕೆಂಡಾಮಂಡಲವಾಗುತ್ತವೆ. ಇಂಥ ಭ್ರಷ್ಟರನ್ನು ಜೈಲಿಗೆ ಅಟ್ಟುವುದು ಮಾತ್ರವಲ್ಲ, ಜೈಲಿನಲ್ಲಿಯೇ ಜೀವನಪೂರ್ತಿ ಕೊಳೆಯುವಂತೆ ಮಾಡಬೇಕು ಎಂದು ದಿಟ್ಟವಾದ ಮಾತು ದೇವಸ್ಥಾನದ ಗಂಟೆ ಹೊಡೆದಂತೆ ಕೇಳಿಸುತ್ತದೆ.

ಒನ್ಇಂಡಿಯಾ ಪೋರ್ಟಲ್ ನೀಡಿದ 'ಕರ್ನಾಟಕ ವರ್ಷದ ವ್ಯಕ್ತಿ 2013' ಪ್ರಶಸ್ತಿಯನ್ನು ಅತ್ಯಂತ ಗೌರವದಿಂದ ಮತ್ತು ಪ್ರೀತಿಯಿಂದ ಸ್ವೀಕರಿಸಿದ ನಂತರ ಕಂಪನಿಯ ಉದ್ಯೋಗಿಗಳನ್ನು ಉದ್ದೇಶಿಸಿ ಒಂದು ಗಂಟೆಗೂ ಹೆಚ್ಚು ಕಾಲ ಅತ್ಯಂತ ಸ್ಫೂರ್ತಿಯುತವಾಗಿ ಮಾತನಾಡಿದ ಸಾಮಾಜಿಕ ಚಳವಳಿಗಾರ, ಧಾರವಾಡದಲ್ಲಿ ಸಮಾಜ ಪರಿವರ್ತನಾ ಸಮುದಾಯ ಸಂಸ್ಥೆ ಕಟ್ಟಿರುವ ಎಸ್ ಆರ್ ಹಿರೇಮಠ ಅವರು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು. ಅಕ್ರಮ ಗಣಿಗಾರಿಕೆಯ ವಿರುದ್ಧ ಅವರು ನಡೆಸುತ್ತಿರುವ ಹೋರಾಟವನ್ನು ಬದಿಗಿಟ್ಟು ನೋಡಿದರೆ, ಈ ವ್ಯಕ್ತಿ ಎಂಥ ಮೇಧಾವಿ ಎಂದು ಅನಿಸದೆ ಇರದು. [ಎಸ್ಆರ್ ಹಿರೇಮಠ ಯಾರು?]

I feel inspired by the tremendous power of common man: SR Hiremath

ಮಧ್ಯಾಹ್ನವೇ ಮತ್ತೊಂದು ಪತ್ರಿಕಾಗೋಷ್ಠಿಗೆ ಸಿದ್ಧತೆ ಮಾಡಿಕೊಳ್ಳಬೇಕಾದ ಗಡಿಬಿಡಿ ಮಧ್ಯೆಯೂ, ಹಲವಾರು ಜನರನ್ನು ಭೇಟಿ ಮಾಡಬೇಕಾದ ಸವಡಿಲ್ಲದ ಸಮಯದಲ್ಲಿಯೂ, ನಿರಂತರವಾಗಿ ಬರುತ್ತಿರುವ ಫೋನ್ ಕರೆಗಳ ನಡೆಯುವೆಯೂ, ಒನ್ಇಂಡಿಯಾ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ ನಂತರ ಪುಟ್ಟ ಸಂದರ್ಶನವನ್ನೂ ನೀಡಿದರು. ಇದರಲ್ಲಿ ಭ್ರಷ್ಟ ರಾಜಕಾರಣಿಗಳ ವಿರುದ್ಧ ನಡೆಸುತ್ತಿರುವ ಹೋರಾಟ, ತಮಗೆ ಸ್ಫೂರ್ತಿ ತುಂಬುತ್ತಿರುವ ಜನರ, ತಮ್ಮ ರಾಜಕೀಯ ನೀತಿಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಅದರ ವಿವರ ಮುಂದಿದೆ. [ವರ್ಷದ ವ್ಯಕ್ತಿಯಾಗಿ ಹಿರೇಮಠ ಆಯ್ಕೆ]

ಒನ್ಇಂಡಿಯಾ : ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಹಿನ್ನೆಲೆ ಇದ್ದರೂ ಸಮಾಜಸೇವೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣವೇನು?

ಹಿರೇಮಠ : ಸಮಾಜಸೇವೆಯನ್ನು ಆಯ್ದುಕೊಳ್ಳುವುದಕ್ಕೆ ನಿಖರವಾದ ಕಾರಣವಿದೆ. ನನ್ನ ಬಾಲ್ಯದಲ್ಲಿ ನನ್ನ ತಾಯಿ ಗೀತ ಪ್ರವಚನ ಮತ್ತು 12ನೇ ಶತಮಾನದ ಶರಣ ಸಾಹಿತ್ಯ ಓದಲು ಹುರಿದುಂಬಿಸುತ್ತಿದ್ದಳು. ಕಾಯಕವೇ ಕೈಲಾಸ ಎನ್ನುವುದನ್ನು ಮಾತ್ರ ನಾನು ಕಲಿಯಲಿಲ್ಲ, ಅನೀತಿ ಅನ್ಯಾಯಗಳನ್ನು ಸಹಿಸದಿರುವುದೆ ಮಾನವೀಯ ಗುಣಗಳನ್ನು ನನ್ನಲ್ಲಿ ತುಂಬಿಕೊಂಡೆ.

ನನ್ನಲ್ಲಿ ಪ್ರೇರಣೆ ತುಂಬಿದ ಮತ್ತೊಬ್ಬ ವ್ಯಕ್ತಿಯೆಂದರೆ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಶಿವರಾಮ ಕಾರಂತ್. ಅವರೊಂದಿಗೆ 15 ವರ್ಷ ಕೆಲಸ ಮಾಡಿದ್ದು ನನ್ನ ಸೌಭಾಗ್ಯ. ಬಿಜಾಪುರದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪಿತೃಋಣ ಮತ್ತು ಮಾತೃಋಣ ಮಾತ್ರವಲ್ಲ ಸಮಾಜಋಣ ಕೂಡ ಅಷ್ಟೇ ಮುಖ್ಯ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಸಮಾಜಕ್ಕೆ ನಾವು ತೀರಿಸಬೇಕಾದ ಋಣದ ಬಗ್ಗೆ ಅವರು ಅಚ್ಚಳಿಯದ ಮಾತುಗಳನ್ನಾಡಿದ್ದರು. ಹಾಗೆಯೆ, ಅರ್ಥಶಾಸ್ತ್ರಜ್ಞ ಈಎಫ್ ಶೂಮಾಕರ್ ಕೂಡ ನನ್ನಲ್ಲಿ ಸ್ಫೂರ್ತಿ ತುಂಬಿದರು. [ಒನ್ಇಂಡಿಯಾದಿಂದ ಪ್ರಶಸ್ತಿ ಪ್ರದಾನ]

ಒನ್ಇಂಡಿಯಾ : ಅಂದಿನ ಕಾಲದಲ್ಲಿ ನಿಮ್ಮ ತಾಯಿ, ಕಾರಂತರು, ಅಂಬೇಡ್ಕರ್, ಗಾಂಧೀಜಿ, ಶೂಮಾಕರ್ ಮುಂತಾದವರು ಸ್ಫೂರ್ತಿ ತುಂಬಿದ್ದರು. ಇಂದಿನ ಕಾಲದಲ್ಲಿ ಆ ರೀತಿ ಸ್ಫೂರ್ತಿ ತುಂಬಿದವರು ಯಾರಾದರೂ ಇದ್ದಾರಾ?

ಹಿರೇಮಠ : ಬಡ ಶ್ರೀಸಾಮಾನ್ಯರು. ಸಾಮಾನ್ಯರಲ್ಲಿ ಸಾಮಾನ್ಯರಾಗಿರುವ ಪುರುಷ ಮತ್ತು ಮಹಿಳೆಯರಲ್ಲಿ ಇರುವ ಅಸಾಧಾರಣ ಶಕ್ತಿ ನನ್ನಲ್ಲಿ ಸ್ಫೂರ್ತಿ ತುಂಬಿದೆ. 1983ರಲ್ಲಿ ತುಂಗಭದ್ರಾ ನದಿ ಮಲಿನವಾಗಿ ಲಕ್ಷಾಂತರ ಮೀನುಗಳು ಸತ್ತು, ಪರಿಸರ ನಾಶವಾಗಿ, ಜನರು ಕೂಡ ತತ್ತರಿಸಿದಾಗ ಸಹಸ್ರಾರು ಸಂಖ್ಯೆಯಲ್ಲಿ ಸಾಮಾನ್ಯ ಜನರು ಹರಿಹರ ಪಾಲಿಫೈಬರ್ ಎದಿರು ಯಾವುದೇ ಗದ್ದಲ ಮಾಡದೆ ಶಾಂತಿಯಿಂದ ನಿಂತಾಗ ಆ ಸತ್ಯಾಗ್ರಹಿಗಳಿಂದ ಅತ್ಯದ್ಭುತ ಶಕ್ತಿ ಪ್ರವಹಿಸುವುದನ್ನು ಕಂಡೆ. ಜನಸಾಮಾನ್ಯರ ಇಂಥ ಸತ್ಯಾಗ್ರಹದಲ್ಲಿ ಅಪಾರ ಶಕ್ತಿಯಿದೆ.

ಸಾವಿರಾರು ಪುರುಷರು ಮಹಿಳೆಯರು ಶಾಂತರೀತಿಯಿಂದಲೇ ಪರಿಸರ ಮಾಲಿನ್ಯದ ವಿರುದ್ಧ ಹಾಡು ಹಾಡಿದರು, ಕೂಗು ಎಬ್ಬಿಸಿದರು. ಈ ದನಿ ಬೆಂಗಳೂರನ್ನೂ ತಲುಪಿತು. ಇದರ ಪರಿಣಾಮವಾಗಿ ಫ್ಯಾಕ್ಟರಿಯನ್ನು ಬಂದ್ ಮಾಡಲಾಯಿತು. ಈ ಸಾಮಾನ್ಯರ ಜನರಲ್ಲಿರುವ ಶಕ್ತಿ ನನ್ನಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೂರ್ತಿ ತುಂಬಿತು. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಆರಂಭಿಸಿದ್ದ ಸತ್ಯಾಗ್ರಹವೇ ನನಗೆ ದಾರಿದೀಪ. ಇದನ್ನು ಗುಜರಾತ್ ನಲ್ಲಿ ಕೂಡ ಕಂಡಿದ್ದೇವೆ. ಇಂದು ಕೂಡ ಅಹಿಂಸಾತ್ಮಕ ಸತ್ಯಾಗ್ರಹಗಳು ಪರಿಣಾಮಕಾರಿಯಾಗಿವೆ.

ಭ್ರಷ್ಟ ಅಧಿಕಾರಿಯನ್ನು ಆ ಸ್ಥಾನ ಕಿತ್ತೊಗೆಯುವವರೆಗೆ ಕೊಳಚೆ ನಿರ್ಮೂಲನಾ ಮಂಡಳಿಯನ್ನು ಐದು ದಿನಗಳ ಕಾಲ ಬಂದ್ ಮಾಡಿಸಿದ್ದೆವು. ಅನೇಕ ಜಿಲ್ಲೆಗಳಲ್ಲಿ 75 ಸಾವಿರ ಎಕರೆಗೂ ಹೆಚ್ಚು ಅರಣ್ಯ ಪ್ರದೇಶವನ್ನು ಮರಳಿ ಪಡೆದಿದ್ದೇವೆ. ಇಷ್ಟೆಲ್ಲ ಹೋರಾಟ ನಡೆಸುತ್ತಿದ್ದಾಗ ಪೊಲೀಸರು ನಮನ್ನು ಸ್ಪರ್ಶಿಸಿಲ್ಲ ಕೂಡ. ಪೊಲೀಸರು ಮತ್ತು ಹಲವಾರು ಸರಕಾರಿ ಅಧಿಕಾರಿಗಳು ಕೂಡ ನಮ್ಮ ಜೊತೆಗೆ ಕೈಜೋಡಿಸಿದ್ದಾರೆ.

ಒನ್ಇಂಡಿಯಾ : ಅಕ್ರಮ, ಅನೈತಿಕತೆ ನಡೆದಾಗ ಸಾವಿರಾರು ಯುವಕ, ಯುವತಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅವರಿಗೆ ಯಾವ ಸಂಘಟನೆಯೊಂದಿಗೆ ಗುರುತಿಸಿಕೊಳ್ಳಬೇಕೆಂಬ ಗೊಂದಲವಿದೆ. ಇದಕ್ಕೇನಂತೀರಿ?

ಹಿರೇಮಠ : ಜನರೇ ನಮ್ಮ ಶಕ್ತಿ. ಅವರಲ್ಲಿ ಅಗಾಧವಾದ ಶಕ್ತಿ ಮತ್ತು ಆತ್ಮವಿಶ್ವಾಸವಿದೆ. ಯಾವುದು ಅಸಾಧ್ಯವೆಂದುಕೊಂಡಿರುತ್ತೇವೆಯೋ ಅವರು ಅದನ್ನು ಸಾಧಿಸಿ ತೋರಿಸುತ್ತಾರೆ. ನೀವು ಹೇಳಿದಂತೆ ಆಮ್ ಆದ್ಮಿ ಪಕ್ಷ ಮತ್ತು ಲೋಕಸತ್ತಾ ಪಕ್ಷಗಳು ಯುವಶಕ್ತಿಯ ದನಿಯಾಗುತ್ತಿವೆ. ನಮ್ಮ ಸಂಸ್ಥೆ ಕೂಡ ಅತ್ಯಂತ ಸನಿಹದಿಂದ ಅವರ ಕೈಜೋಡಿಸಿದೆ. ಆದರೆ, ಅವರಲ್ಲಿ ಇಂಥ ಹೋರಾಟಗಳನ್ನು ಪರಿಣಾಮಕಾರಿಯಾಗಿ ಸಂಘಟಿಸುವ ಕೊರತೆಯಿದೆ. ಅವರು ಆಸಕ್ತಿ ತೋರಿಸಿದರೆ ನಾವು ಅವರೊಂದಿಗೆ ಸಹಕರಿಸಲು ಸಿದ್ಧರಿದ್ದೇವೆ. ದೆಹಲಿಯಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದಾಗ ಅವರ ಜೊತೆ ಯಾವುದೇ ಪ್ರಬಲ ನಾಯಕರಿರಲಿಲ್ಲ. ಆದರೆ, ಅವರು ಒತ್ತಡ ತಡೆದುಕೊಂಡ ರೀತಿ, ನಡೆದುಕೊಂಡ ರೀತಿ ಅದ್ಭುತ.

ಒನ್ಇಂಡಿಯಾ : ಸರ್, ನಿಮ್ಮದು ಏಕಾಂಗಿ ಹೋರಾಟವಾಗಿ ಕಾಣುತ್ತಿದೆಯೇ ಹೊರತು, ಒಂದು ಚಳವಳಿಯಾಗಿ ಯಾಕೆ ಪರಿವರ್ತಿತವಾಗಿಲ್ಲ?

ಹಿರೇಮಠ : ಒಂದು ಚಳವಳಿಯನ್ನು ಸರಿಯಾದ ರೀತಿಯಲ್ಲಿ, ಮಾರ್ಗದಲ್ಲಿ ಬಿಂಬಿಸುವಲ್ಲಿ ಮತ್ತು ತಲುಪಿಸುವಲ್ಲಿ ನಾವು ಖಂಡಿತ ಸೋತಿದ್ದೇವೆ. ಇದು ನಮ್ಮ ಗಂಭೀರವಾದ ತಪ್ಪು. ಈ ದೃಷ್ಟಿಯಿಂದ ನಾನು ನಿಮ್ಮ ಸಂಸ್ಥೆಯನ್ನು ಪ್ರಶಂಸಿಸುತ್ತೇನೆ. ಎಲ್ಲಿಯ ಸಿಎನ್ಆರ್ ರಾವ್, ಎಲ್ಲಿಯ ಸಿದ್ದರಾಮಯ್ಯ, ಎಲ್ಲಿಯ ಹಿರೇಮಠ? ಆದರೆ, ನಿಮ್ಮಲ್ಲಿ ಕ್ರಿಯಾತ್ಮಕವಾಗಿ ಮಾಹಿತಿಯನ್ನು ತಲುಪಿಸುವ ಶಕ್ತಿಯಿದೆ. ಜನರು ನಿಮ್ಮ ಪೋರ್ಟಲ್ ಮೂಲಕ, ಇತರ ಮಾಧ್ಯಮಗಳ ಮೂಲಕ ತಾವೇ ಸುದ್ದಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅದಕ್ಕೇ ಹೇಳುವುದು ಪೆನ್ನು ಖಡ್ಗಕ್ಕಿಂತ ಹರಿತ. ಇದು ಇಂದಿಗೂ ಸತ್ಯ.

ಒನ್ಇಂಡಿಯಾ : ಆಮ್ ಆದ್ಮಿ ಪಕ್ಷ ಅಥವಾ ಲೋಕಸತ್ತಾ ಪಕ್ಷ ಆಹ್ವಾನಿಸಿದರೆ ಅವರೊಂದಿಗೆ ಸೇರಿಕೊಳ್ಳುವಿರಾ?

ಹಿರೇಮಠ : ನೋಡಿ, ಆಪ್‌ನ ಪ್ರಶಾಂತ್ ಭೂಷಣ್‌ಗೆ ತುಂಬಾ ಹತ್ತಿರದವನಾಗಿದ್ದೇನೆ. ನಾನು ಅವರನ್ನು ಯಾವುದೇ ರೀತಿ ಬೆಂಬಲಿಸುತ್ತೇನೆ. ಆದರೆ, ನಾನು ಕೆಲಸ ಮಾಡುವ ರೀತಿಯೇ ಬೇರೆ. ನನ್ನದು ರಾಜಕೀಯ ಚಳವಳಿಯೇ ಹೊರತು ರಾಜಕೀಯ ಪಕ್ಷವಾಗಲಾರದು. ರೈತ ಉಳುಮೆ ಆರಂಭಿಸುವ ಮೊದಲು ಎಲ್ಲ ಸಾಧನಗಳನ್ನು ಹೊರತೆಗೆದು, ಭೂಮಿಯನ್ನು ಹಸನು ಮಾಡಿ ನಂತರ ಬೀಜ ಬಿತ್ತಲು ಆರಂಭಿಸುತ್ತಾನೆ. ನನ್ನದು ಆ ರೀತಿಯ ಚಳವಳಿ. ನಮ್ಮಲ್ಲರ ಉದ್ದೇಶ ಒಂದೇ. ಆದರೆ, ಹೋರಾಟದ ರೀತಿ ಬೇರೆಬೇರೆ. ಆ ಎರಡು ಪಕ್ಷಗಳ ಪರವಾಗಿ ಪ್ರಚಾರ ಮಾಡಲು ಖಂಡಿತ ಸಿದ್ಧ.

ಒನ್ಇಂಡಿಯಾ : ನೀವು ಮೇಲು ಸ್ತರದ ಭ್ರಷ್ಟಾಚಾರಿಗಳನ್ನು ಮಾತ್ರ ಗುರಿಯಾಗಿಟ್ಟುಕೊಂಡಿದ್ದೀರಿ. ಬೇರು ಮಟ್ಟದ ಭ್ರಷ್ಟಾಚಾರವನ್ನು ತೊಲಗಿಸುವುದು ಕೂಡ ನಿಮ್ಮ ಗುರಿಯಾಗಬೇಕಲ್ಲವೆ?

ಹಿರೇಮಠ : ನೀವು ಹೇಳುತ್ತಿರುವುದು ಸರಿ. ಆದರೆ, ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬ ಗಾದೆಯೇ ಇದೆ. ಅದು ಇಲ್ಲಿಯೂ ಅನ್ವಯಿಸುತ್ತದೆ. ಆದರೆ, ಮೇಲು ಸ್ತರದ ಭ್ರಷ್ಟಾಚಾರಿಗಳನ್ನೇ ಮಟ್ಟಹಾಕಿದರೆ ಬೇರೆ ಏನು ಕೂಡ ಮಾಡಲು ಸಾಧ್ಯ ಎಂಬುದು ಮನವರಿಕೆಯಾಗುತ್ತದೆ. ಅದಕ್ಕಾಗಿಯೇ ನಾವು ಅಕ್ರಮ ಗಣಿಗಾರಿಕೆಯ ದೊರೆ ಗಾಲಿ ಜನಾರ್ದನ ರೆಡ್ಡಿಯನ್ನು ಜೈಲಿಗೆ ಅಟ್ಟುವ ಮೂಲಕ ಕೆಳಮಟ್ಟದ ಭ್ರಷ್ಟರನ್ನು ತಣ್ಣಗಾಗಿಸಿದ್ದೇವೆ. ಹಾಗೆಯೆ, ಬೇರುಮಟ್ಟದ ಭ್ರಷ್ಟಾಚಾರವನ್ನು ನಿರ್ಮೂಲನ ಮಾಡುವುದು ಕೂಡ ಅಷ್ಟೇ ಮುಖ್ಯ. ಅದನ್ನು ನಾವು ವಿವಿಧ ದಾರಿಗಳ ಮುಖಾಂತರ ಮಾಡಬೇಕಾಗುತ್ತದೆ.

ಒನ್ಇಂಡಿಯಾ : ಡಿಕೆ ಶಿವಕುಮಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನನಗೆ ಹಿರೇಮಠ ಮತ್ತು ದೊರೈಸ್ವಾಮಿ ಅವರ ಆಶೀರ್ವಾದ ಬೇಕು ಎಂದು ಹೇಳಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆಯೇನು?

ಹಿರೇಮಠ : ಅದು ಒಳ್ಳೆಯ ಉದ್ದೇಶಕ್ಕಾದರೆ ಖಂಡಿತ ನನ್ನ ಆಶೀರ್ವಾದವಿರುತ್ತದೆ. ಆದರೆ, ಇಂಥವರು ಅಂದರೆ ಭ್ರಷ್ಟಾಚಾರದಲ್ಲಿ ತೊಡಗಿರುವವರು ಎರಡು ನಾಲಿಗೆಯ ಹಾವಿದ್ದಂತೆ. ಹೇಳುವುದು ಒಂದು ಮಾಡುವುದು ಇನ್ನೊಂದು. ಆದರೆ, ಅವರಿಗೆ ಆಶೀರ್ವಾದವೇ ಬೇಕಾಗಿದ್ದರೆ ಅದನ್ನು ಅವರು ಕಾರ್ಯರೂಪದಲ್ಲಿ ತೋರಿಸಬೇಕು. ಇಲ್ಲದಿದ್ದರೆ ಆಶೀರ್ವಾದ ಯಾವ ಕಾರಣಕ್ಕೆ (ನಗು)? ಅವರು ಒಬ್ಬ ಪಬ್ಲಿಕ್ ಸರ್ವಂಟ್. ಅವರಿಗೆ ಒಳ್ಳೆಯದಾಗಲಿ.

English summary
Sangayya Rachayya Hiremath, the anti-corruption crusader from Karnataka who took on the mining mafia in the state, was felicitated as the Karnataka Person of the Year 2013 by Oneindia on Thursday, January 2. Oneindia got a chance to interview him. Here are the excerpts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X