ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಜನತಾದರ್ಶನಕ್ಕೆ ಜನಸಾಗರ: ನೊಂದ ಮನಸ್ಸುಗಳಿಗೆ ಆಸರೆಯಾದ ಎಚ್ಡಿಕೆ

ಸಿಎಂ ಜನತಾದರ್ಶನಕ್ಕೆ ಜನಸಾಗರ: ನೊಂದ ಮನಸ್ಸುಗಳಿಗೆ ಆಸರೆಯಾದ ಎಚ್ಡಿಕೆ

By Balaraj Tantry
|
Google Oneindia Kannada News

ಬೆಂಗಳೂರು, ಸೆ 1: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಮೈತ್ರಿ ಸರ್ಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿದರು. ಸಂಜೆ 5.30 ವೇಳೆಗೆ 1056ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದರು. ಅತಿ ಹೆಚ್ಚು ಅಂದರೆ 132 ಅರ್ಜಿಗಳು ಉದ್ಯೋಗ ತರಬೇತಿ ಇಲಾಖೆಗೆ ಸಂಬಂಧಿಸಿದ್ದವು.

ಈ ಸಂದರ್ಭದಲ್ಲಿ ಅವರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಯಿತು. ಇವರಲ್ಲಿ 300ಕ್ಕೂ ಹೆಚ್ಚು ಮಂದಿ ವಿಕಲಚೇತನರಾಗಿದ್ದರು. ಜನತಾ ದರ್ಶನದ ಕೆಲವು ಮುಖ್ಯ ಅಂಶಗಳು:
(ಜನತಾ ನಸುಕಲ್ಲಿ ಬಂದರೂ ಮಧ್ಯಾಹ್ನವೇ ದೊರೆ ದರ್ಶನ)

1. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನ ಆರ್.ನಾಗಮಣಿ ತಮ್ಮ ಮೂರು ತಿಂಗಳ ಮಗುವನ್ನು ಎತ್ತಿಕೊಂಡು ಜನತಾ ದರ್ಶನಕ್ಕೆ ಬಂದಿದ್ದರು. ಅನಾರೋಗ್ಯ ಪೀಡಿತರಾಗಿರುವ ಇವರು ಆರ್ಥಿಕ ಸಂಕಷ್ಟದಲ್ಲಿಯೂ ಇದ್ದು, ತಮ್ಮ ಹೆರಿಗೆ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗೆ ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಿರುವುದಾಗಿ ಮುಖ್ಯಮಂತ್ರಿಗಳ ಬಳಿ ಅಳಲು ತೋಡಿಕೊಂಡರು. ನಾಗವೇಣಿಗೆ ಸ್ಥಳದಲ್ಲಿಯೇ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ರೂ.ಗಳ ಚೆಕ್‍ನ್ನು ವಿತರಿಸಲಾಯಿತು.

2. ಬೆಂಗಳೂರಿನ ಕೋರಮಂಗಲದ ರಂಗನಾಥ್ ವಿಕಲಚೇತನರು. ಕೋರಮಂಗಲದ ರಸ್ತೆ ಬದಿಯಲ್ಲಿ ಟೀ ಅಂಗಡಿಯನ್ನಿಟ್ಟುಕೊಂಡು ಜೀವನ ನಡೆಸುತ್ತಿದ್ದರು. ಬೆಂಗಳೂರು ಮಹಾನಗರ ಪಾಲಿಕೆಯು ರಸ್ತೆ ಬದಿಯಲ್ಲಿರುವ ಅಂಗಡಿ ಮುಂಗಟ್ಟನ್ನು ತೆರೆವುಗೊಳಿಸಿದ ಸಂದರ್ಭದಲ್ಲಿ ಇವರ ಟೀ ಅಂಗಡಿಯೂ ತೆರೆವುಗೊಂಡಿದ್ದು, ಜೀವನೋಪಾಯಕ್ಕೆ ಮಾರ್ಗ ಕೋರಿ ಅರ್ಜಿ ಸಲ್ಲಿಸಿದರು. ತಕ್ಷಣವೇ ಬಿಬಿಎಂಪಿ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಗಳು ರಂಗನಾಥ್ ಅವರಿಗೆ ಪರ್ಯಾಯ ಸ್ಥಳ ಗೊತ್ತು ಮಾಡಿಕೊಡುವಂತೆ ಸೂಚಿಸಿದರು.

3. 11 ವರ್ಷದ ಲೋಹಿತ್ ಮುಖ್ಯಮಂತ್ರಿಗಳ ಬಳಿ ಬಿಕ್ಕುತ್ತಲೇ ತನಗೆ ಬ್ಲಡ್ ಕ್ಯಾನ್ಸರ್ ಇರುವುದಾಗಿ ತಿಳಿಸಿದ. ಲೋಹಿತ್ ಮತ್ತು ಅವನ ತಾಯಿಗೆ ಧೈರ್ಯ ತುಂಬಿದ ಮುಖ್ಯಮಂತ್ರಿಗಳು, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ವೈದ್ಯ ಸಂಜಯ್ ಅವರೊಂದಿಗೆ ಮಾತನಾಡಿ ಬಾಲಕನಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿದರು. ಲೋಹಿತ್‍ನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಭರವಸೆಯಿತ್ತ ಅವರು ಸ್ಥಳದಲ್ಲಿ 10 ಸಾವಿರ ರೂ.ಗಳ ಚೆಕ್‍ನ್ನು ವಿತರಿಸಿದರು. ಮುಂದೆ ಓದಿ..

ಭಾಗ್ಯಲಕ್ಷ್ಮಿ ಬಾಂಡ್‍ಗಾಗಿ ಅರ್ಜಿ ಸಲ್ಲಿಸಿದ್ದರು

ಭಾಗ್ಯಲಕ್ಷ್ಮಿ ಬಾಂಡ್‍ಗಾಗಿ ಅರ್ಜಿ ಸಲ್ಲಿಸಿದ್ದರು

4. ಚನ್ನಪಟ್ಟಣ ತಾಲ್ಲೂಕಿನ ಭ್ರಮರಾಂಬ ಮೊಮ್ಮಗಳಿಗಾಗಿ ಭಾಗ್ಯಲಕ್ಷ್ಮಿ ಬಾಂಡ್‍ಗಾಗಿ ಅರ್ಜಿ ಸಲ್ಲಿಸಿದ್ದರು. ಬಾಂಡ್ ಗಾಗಿ ಅರ್ಜಿ ಸಲ್ಲಿಸಿದ ವೇಳೆ ಪಡಿತರ ಚೀಟಿ ಸಲ್ಲಿಸುವಂತೆ ಅಧಿಕಾರಿಗಳು ತಿಳಿಸಿದ್ದರು. ಪಡಿತರ ಚೀಟಿ ಇರದಿದ್ದ ಕಾರಣ ಅದಕ್ಕೂ ಅರ್ಜಿ ಸಲ್ಲಿಸಿದರು. ಪಡಿತರ ಚೀಟಿ ಸಿಗುವ ವೇಳೆಗೆ ಅರ್ಜಿ ಸಲ್ಲಿಸುವ ಅವಧಿ ಮೀರಿಹೋಗಿತ್ತು. ಭ್ರಮರಾಂಬ ಅವರ ಅರ್ಜಿಯನ್ನು ಪರಿಶೀಲಿಸುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದೂರವಾಣಿ ಮುಖಾಂತರ ಮುಖ್ಯಮಂತ್ರಿಗಳು ಸೂಚಿಸಿದರು.

ಪತಿಯ ವೈದ್ಯಕೀಯ ವೆಚ್ಚ ಭರಿಸುವುದು ಕಷ್ಟ

ಪತಿಯ ವೈದ್ಯಕೀಯ ವೆಚ್ಚ ಭರಿಸುವುದು ಕಷ್ಟ

5. ಮನೆಗೆ ಆಧಾರವಾಗಿದ್ದ ಪತಿ ಅನಾರೋಗ್ಯಕ್ಕೆ ತುತ್ತಾಗಿ, ಎರಡು ಮಕ್ಕಳನ್ನು ಸಾಕುವುದರೊಂದಿಗೆ ಪತಿಯ ವೈದ್ಯಕೀಯ ವೆಚ್ಚ ಭರಿಸುವುದು ಕಷ್ಟವಾಗಿದೆ. ಎರಡು ಹೊತ್ತು ಊಟಕ್ಕೂ ತತ್ವಾರವಾಗಿದ್ದು, ಸುಮಾರು 3 ಲಕ್ಷ ರೂ. ಕೈಸಾಲ ಮಾಡಿಕೊಂಡಿರುವುದಾಗಿ ಮಂಡ್ಯ ಜಿಲ್ಲೆಯ ಮಂಜುಳಾ ಸಮಸ್ಯೆ ಹೇಳಿಕೊಂಡರು. ಕೂಡಲೇ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಗಳು ಮಂಜುಳಾ ಅವರ ಪತಿ ಕೃಷ್ಣಪ್ಪ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದರಲ್ಲದೆ. ಸೋಮವಾರ ಅವರನ್ನು ಕಾಣುವಂತೆ ಮಂಜುಳಾ ಅವರಿಗೆ ತಿಳಿಸಿದರು. ಮಂಜುಳಾ ಅವರಿಗೆ ಸಾಂತ್ವನ ಹೇಳಿ ಸ್ಥಳದಲ್ಲಿಯೇ 50 ಸಾವಿರ ರೂ.ಗಳ ಚೆಕ್ ವಿತರಿಸಿದರು.

ಉದ್ಯೋಗ ದೊರಕಿಸಿಕೊಡುವಂತೆ ಮನವಿ

ಉದ್ಯೋಗ ದೊರಕಿಸಿಕೊಡುವಂತೆ ಮನವಿ

6. ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕಿನ ತಿಪ್ಪಲಾಪುರ ಗ್ರಾಮದ ಮಂಜುನಾಥ್ ಎಂಬುವರಿಗೆ ಬೆನ್ನುಹುರಿ (ಸ್ಪೈನಲ್ ಕಾರ್ಡ್) ಚಿಕಿತ್ಸೆಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂ.ಗಳ ಚೆಕ್ ನೀಡಲಾಯಿತು.


7. ಸಿವಿಲ್ ಎಂಜಿನಿಯರಿಂಗ್ ನಲ್ಲಿ ಬಿ.ಇ. ಪದವಿ ಪಡೆದಿರುವ ಹಾವೇರಿ ಜಿಲ್ಲೆಯ ಸಂಜನಾ ಕೆಲಸಕ್ಕಾಗಿ ಎಲ್ಲೆಡೆ ಅರ್ಜಿ ಸಲ್ಲಿಸಿದ್ದರೂ, ಎಲ್ಲಿಯೂ ಕೆಲಸ ಸಿಗದೇ ಹತಾಶರಾಗಿ ಜನತಾ ದರ್ಶನಕ್ಕೆ ಬಂದು ಮುಖ್ಯಮಂತ್ರಿಗಳಲ್ಲಿ ಉದ್ಯೋಗ ದೊರಕಿಸಿಕೊಡುವಂತೆ ಮನವಿ ಮಾಡಿದರು. ಸಂಜನಾ ಅವರಿಗೆ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರಕಿಸಿಕೊಡಲಾಯಿತು.

ದಾನಪ್ಪನವರಿಗೆ ರಕ್ಷಣೆ ಒದಗಿಸುವಂತೆ ಸೂಚನೆ

ದಾನಪ್ಪನವರಿಗೆ ರಕ್ಷಣೆ ಒದಗಿಸುವಂತೆ ಸೂಚನೆ

8. ಬಳ್ಳಾರಿ ಜಿಲ್ಲೆಯ ಹುಲವತ್ತಿ ಗ್ರಾಮದ ದಾನಪ್ಪ ಎಂಬ ಯುವಕ ತನ್ನ ತಂದೆ ಮಾಡಿದ್ದ 20 ಸಾವಿರ ರೂ.ಗಳ ಸಾಲ ಬಡ್ಡಿ ಚಕ್ರ ಬಡ್ಡಿ ಸೇರಿ 5 ಲಕ್ಷ ರೂ.ಗಳನ್ನು ದಾಟಿದೆ. ಸಾಲಗಾರರು ಕಿರುಕುಳ ನೀಡುತ್ತಿದ್ದು, ರಕ್ಷಣೆ ಒದಗಿಸುವಂತೆ ಮನವಿ ಮಾಡಿದರು. ಬಳ್ಳಾರಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ದಾನಪ್ಪನವರಿಗೆ ರಕ್ಷಣೆ ಒದಗಿಸುವಂತೆ ಸೂಚನೆ ನೀಡಿದರು. ಒಂದು ತಿಂಗಳಲ್ಲಿ ಋಣ ಪರಿಹಾರ ಕಾಯ್ದೆ ಜಾರಿಗೆ ಬಂದಾಗ ಜಮೀನಿನ ಕಾಗದ ಪತ್ರವನ್ನು ವಾಪಸ್ಸು ಪಡೆಯಲು ಸಾಧ್ಯವಿದೆ ಎಂದು ಮುಖ್ಯಮಂತ್ರಿಗಳು ಸಮಾಧಾನ ಹೇಳಿದರು.

ಸ್ಥಳದಲ್ಲಿಯೇ ಹೆಸ್ಕಾಂ ಗೆ ವರ್ಗಾವಣೆ ಆದೇಶ

ಸ್ಥಳದಲ್ಲಿಯೇ ಹೆಸ್ಕಾಂ ಗೆ ವರ್ಗಾವಣೆ ಆದೇಶ

9. 2007 ರಲ್ಲಿ ಮುಖ್ಯಮಂತ್ರಿಗಳು ಬಾಗಲಕೋಟೆ ಜಿಲ್ಲೆಯ, ಮುಧೋಳದಲ್ಲಿ ಗ್ರಾಮದಲ್ಲಿ ಹೆಚ್.ಐ.ವಿ ಪೀಡಿತ ಕುಟುಂಬವೊಂದರ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆ ಕುಟುಂಬದ ಸದಸ್ಯರು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ದೊರಕಿಸಿಕೊಡುವಂತೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವಂತೆ ಮನವಿ ಸಲ್ಲಿಸಿದರು. ಕುಟುಂಬದ ಸದಸ್ಯರೊಬ್ಬರಿಗೆ ತಕ್ಷಣವೇ ಉದ್ಯೋಗ ನೀಡಲು ವ್ಯವಸ್ಥೆಯನ್ನು ಮಾಡಲಾಯಿತು.


10. ಬೆಸ್ಕಾಂನ ಸಹಾಯಕ ಲೈನ್‍ಮ್ಯಾನ್ ಪ್ರಶಾಂತ್ ಮಾಲೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಕೈ ಕಳೆದುಕೊಂಡಿದ್ದರು. ಇವರ ಮನವಿಯ ಮೇರೆಗೆ ಸ್ಥಳದಲ್ಲಿಯೇ ಹೆಸ್ಕಾಂ ಗೆ ವರ್ಗಾವಣೆ ಆದೇಶ ನೀಡಲಾಯಿತು.

ಕಿದ್ವಾಯಿ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚನೆ

ಕಿದ್ವಾಯಿ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚನೆ

11. ಬೆಂಗಳೂರಿನ ನಾಗಮಣಿ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಯ ವೆಚ್ಚವನ್ನು ಭರಿಸಲು ಅಸಾಧ್ಯವಿರುವುದಾಗಿ ತಿಳಿಸಿದಾಗ, ಅವರಿಗೆ ಚಿಕಿತ್ಸೆಗೆ ನೆರವು ನೀಡುವಂತೆ ಕಿದ್ವಾಯಿ ನಿರ್ದೇಶಕರಿಗೆ ಮುಖ್ಯಮಂತ್ರಿಗಳು ಸೂಚಿಸಿದರು.

ಉದ್ಯೋಗ, ವೈದ್ಯಕೀಯ ವೆಚ್ಚ ಭರಿಸಲು ಧನಸಹಾಯ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಮನವಿ, ಸಾಲಗಾರರಿಂದ ಕಿರುಕುಳ ಸ್ವಯಂ ಉದ್ಯೋಗಕ್ಕೆ ನೆರವಿಗಾಗಿ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ವೀಕೃತವಾದವು.

ಜನತಾ ದರ್ಶನ ಯಾವುದೇ ಗೊಂದಲವಿಲ್ಲದೆ ನಡೆಯುವಂತೆ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರಿಗೆ ಕೃಷ್ಣಾ ಆವರಣದಲ್ಲಿ ಕುಳಿತುಕೊಳ್ಳಲು, ಸೂರು, ಆಸನ ವ್ಯವಸ್ಥೆ ಹಾಗೂ ಕುಡಿಯುವ ನೀರು, ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಅರ್ಜಿದಾರರ ಸಮಸ್ಯೆಗಳ ಇತ್ಯರ್ಥವಾಗುವವರೆಗೂ ಪರಿಶೀಲನೆ ನಡೆಸಲು ಅನುವಾಗುವಂತೆ ಹೆಸರು ನೋಂದಾಯಿಸಿಕೊಂಡು ಸ್ವೀಕೃತಿ ನೀಡಲಾಗಿದೆ.

ಮುಂದಿನ ಶನಿವಾರಗಳಂದು ಜನತಾದರ್ಶನ ದಲ್ಲಿ ಅಹವಾಲು ಸಲ್ಲಿಸ ಬಯಸುವ ಸಾರ್ವಜನಿಕರು ಮಧ್ಯಾಹ್ನ 2 ಗಂಟೆಯೊಳಗೆ ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.

English summary
Hundreds of people problem solved on the spot during Chief Minister HD Kumaraswamy Janata Darshan on September 1. During Janta Darshan CM directed officials to solve their problem immediately and personally he has helped to some of the people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X