ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕತ್ತಿ ಸ್ವಾರ್ಥಿ ಇರಬಹುದು, ಆದರೆ, ಎಲ್ಲರೂ ಕಳ್ಳರೇ!

By ಮಹಾಂತ ವಕ್ಕುಂದ
|
Google Oneindia Kannada News

ಉಮೇಶ್ ಕತ್ತಿ ಯವರ ಬಗ್ಗೆ ಮಾತನಾಡುವ ನೀವು ಎಂದಾದರು ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದೀರಾ ?

ಕಳೆದ ಕೆಲವು ದಿನಗಳಿಂದ ನಮ್ಮ ಹುಕ್ಕೇರಿ ಶಾಸಕರಾದ ಉಮೇಶ ಕತ್ತಿಯವರು ನೀಡಿದ ಹೇಳಿಕೆಯನ್ನು ಕೇಳಿ ಅನೇಕಾನೇಕರು ಮಾಧ್ಯಮಗಳ ಮುಂದೆ ಬಂದು ಮನಸ್ಸಿಗೆ ಬಂದಿರುವ ಹೇಳಿಕೆಗಳನ್ನೆಲ್ಲ ಕೊಡುತ್ತಿರುವುದು ನೋಡಿ ನಿಜಕ್ಕೂ ನನಗೆ ಮುಜುಗುರವಾಯಿತು. ಮುಜುಗುರವಾಗಿದ್ದು ಕತ್ತಿಯವರ ವಿರುದ್ಧ ಮಾತನಾಡುತ್ತಿರುವವರ ಬಗ್ಗೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬ ಉಮೇಶ ಕತ್ತಿಯವರ ಹೇಳಿಕೆಯನ್ನಷ್ಟೇ ಹಿಡಿದುಕೊಂಡು ಹಿರಿತಲೆಗಳು, ರಾಜಕಾರಣಿಗಳು, ಸಮಾಜ ಚಿಂತಕರು, ಸಂಘಟನೆಗಳು, ಸಂಘಟಕರು, ಮಠಾಧಿಶರೂ ಸೇರಿ ಮುಖ್ಯಮಂತ್ರಿಗಳೂ ಅವರ ಎದುರಾಗಿ ಮಾತನಾಡಿದರು. [ಪ್ರತ್ಯೇಕ ರಾಜ್ಯ ಹೋರಾಟದಲ್ಲಿ ಸ್ವಾರ್ಥವಿಲ್ಲ: ಕತ್ತಿ]

ನಮ್ಮ ಹಿರಿಯರು ಶ್ರಮಿಸಿ ಕಟ್ಟಿದ ಈ ನಾಡನ್ನು ಒಡೆಯುವ ಬಗ್ಗೆ ಮಾತನಾಡುತ್ತಿರುವ ಉಮೇಶ ಕತ್ತಿ ಒಬ್ಬ ಪ್ರತ್ಯೇಕತಾವಾದಿ, ಸ್ವಾರ್ಥಿ ಎಂಬಿತ್ಯಾದಿ ಮಾತುಗಳನ್ನು ಹೇಳಿದರು. ಇರಬಹುದು ಅವರು ಸ್ವಾರ್ಥಿಯೇ ಆಗಿರಬಹುದು.

ಆದರೆ ಈ ದೊಡ್ಡ ಜನಗಳು ಇಂದು ಈ ಮಾತು ಉಮೇಶ ಕತ್ತಿಯಾಗಲಿ ಅವರನ್ನು ಸಮರ್ಥಿಸಿದನಂತಃ ಸಂಸದ ಸುರೇಶ ಅಂಗಡಿಯಾಗಲಿ, ರಾಜ್ಯ ಸಭಾ ಸದಸ್ಯ ಮಹಾಂತೇಶ ಕವಟಗಿಮಠ ಆಗಲಿ ಅಥವಾ ಈ ಲೇಖನ ಬರೆಯುತ್ತಿರುವ ಸಾಮಾನ್ಯ ಪ್ರಜೆ ನಾನಾಗಲಿ ಉತ್ತರ ಕರ್ನಾಟಕದ ಪ್ರತ್ಯೇಕತೆಯ ಬಗ್ಗೆ ಮಾತನಾಡುತ್ತಿರುವುದೇಕೆ ಎಂಬುದನ್ನು ಯೋಚಿಸಿದ್ದಾರೆಯೇ ? ['ಕತ್ತಿ'ವರಸೆಗೆ ನಾಯಕರ ವಿರೋಧ ]

ಉಮೇಶ ಕತ್ತಿ ಈ ಮಾತನ್ನು ಬಹಿರಂಗವಾಗಿ ಹೇಳಿರಬಹುದು ಆದರೆ ಹೇಳಲಾಗದೆ ಮನಸಲ್ಲೇ ಇಟ್ಟುಕೊಂಡಿರುವ, ಹೇಳಿದರೂ ಪ್ರಯೋಜನವಾಗದೆಂಬ ಭಾವನೆ ಇಟ್ಟುಕೊಂಡಿರುವ ಅದೆಷ್ಟೋ ಸಾಮಾನ್ಯ ಜನರಿಗೆ ಈ ಮಾತು ಇಂದು ಬೆಂಕಿ ಹೊತ್ತಿಸುವ ಕಿಡಿಯಾಗಿದೆ.

ಸ್ವಾರ್ಥ ಇಲ್ಲದೆ ಮನೆ ಒಡೆಯಲಾಗದು ನಿಜ

ಸ್ವಾರ್ಥ ಇಲ್ಲದೆ ಮನೆ ಒಡೆಯಲಾಗದು ನಿಜ

ಯಾವುದೇ ಮನೆಯೊಡೆಯುವಾಗ ಅಥವಾ ಮನೆಯೊಡೆಯುವ ಮಾತು ಬಂದಾಗ ಮನೆಯ ಎಲ್ಲ ಸದಸ್ಯರಲ್ಲೂ ಹೃದಯಕ್ಕೆ ಸೂಜಿ ಚುಚ್ಚಿದ ಅನುಭವವಾಗುತ್ತದೆ, ಅದೇ ತರಹದ ನೋವು ಈ ಎಲ್ಲ ಹಿರಿಯರಿಗೆ ಆಗಿರಬಹುದೇನೋ ಆ ಕಾರಣಕ್ಕೆ ಇಂದು ಅವರೆಲ್ಲ ಉಮೇಶ ಕತ್ತಿಯವರ ಅಥವಾ ಉತ್ತರ ಕರ್ನಾಟಕದ ವಿಭಜನೆಯ ಬಗ್ಗೆ ಮಾತನಾಡುವವರ ವಿರುದ್ಧ ಮಾತನಾಡುತ್ತಿದ್ದಾರೆ. ಈ ವಿಭಜನೆ ಆಗಬೇಕು, ಮನಸ್ಸಿಗೆ ನೋವಾದರೂ ಚಿಂತೆಯಿಲ್ಲ ಎಂಬ ಸ್ವಾರ್ಥ ಉತ್ತರ ಕರ್ನಾಟಕದ ಯಾವ ನಾಗರಿಕನಿಗೂ ಇಲ್ಲ, ರಾಜಕಾರಣಿಗೂ ಇಲ್ಲ ಎಂಬುದು ನನ್ನ ಅನಿಸಿಕೆ.

ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ

ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ

ಆದರೆ, ಇಂದು ಈ ಮಾತಿನ ಪ್ರಸ್ತಾಪವಾಗಿರುವುದೇಕೆ ಎಂಬ ಬಗ್ಗೆ ಎಲ್ಲರೂ ಮನವರಿಕೆ ಮಾಡಿಕೊಳ್ಳಬೇಕು, ಉತ್ತರ ಕರ್ನಾಟಕದ ವಿಭಜನೆಯ ಬಗ್ಗೆ ಮಾತನಾಡುತ್ತಿರುವವರ ವಿರುದ್ಧ ಮಾತನಾಡುತ್ತಿರುವ ರಾಜಕಾರಣಿಗಳು ನಮ್ಮ ಕರ್ನಾಟಕ ರಾಜ್ಯ ರಚನೆಯ ನಂತರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ನಾವು ನಿಜವಾಗಲು ಶ್ರಮಿಸಿದ್ದೆವೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಅಭಿವೃದ್ದಿ ವಿಷಯಕ್ಕೆ ಬಂದಾಗ ಕರ್ನಾಟಕವೆಂದರೆ ಬರಿ ಬೆಂಗಳೂರು, ಮಂಗಳೂರು, ಮೈಸೂರಲ್ಲ ಉತ್ತರ ಕರ್ನಾಟಕದ ಅಭಿವೃದ್ಧಿಯೂ ಆಗಬೇಕು ಎಂಬುದನ್ನು ಅರಿಯಬೇಕಿದೆ.

ಉತ್ತರ ಕರ್ನಾಟಕದ ಭೂಗೋಳ ನಿಮಗೆ ಗೊತ್ತಾ?

ಉತ್ತರ ಕರ್ನಾಟಕದ ಭೂಗೋಳ ನಿಮಗೆ ಗೊತ್ತಾ?

ಉತ್ತರ ಕರ್ನಾಟಕವೆಂದರೆ ಬರೀ ಬೆಳಗಾವಿ - ಹುಬ್ಬಳ್ಳಿ - ಧಾರವಾಡಗಳಲ್ಲ. ಅವುಗಳಷ್ಟೇ ಅಂದುಕೊಂಡವರಿಗೂ ನೆನಪಿರಲಿ ಈ ಊರುಗಳೂ ಅಭಿವೃದ್ಧಿಯಾಗಿಲ್ಲ. ಇನ್ನೂ ನಮ್ಮಲ್ಲಿ ಕಿತ್ತೂರು (ಮುಂಬೈ) ಕರ್ನಾಟಕ ಅಥವಾ ಕಲ್ಯಾಣ (ಹೈದರಾಬಾದ್) ಕರ್ನಾಟಕವೆಂಬ ಭೇದ ಭಾವವಿಲ್ಲ.

ಒಟ್ಟು ಕರ್ನಾಟಕದ ಜನಸಂಖ್ಯೆ 6.1 ಕೋಟಿಯಾದರೆ ಉತ್ತರ ಕರ್ನಾಟಕದ್ದು 3+ ಕೋಟಿ. ಜನಸಂಖ್ಯೆಯಲ್ಲಾಗಲಿ ವಿಸ್ತಿರ್ಣದಲ್ಲಾಗಲಿ ದಕ್ಷಿಣ ಕರ್ನಾಟಕಕ್ಕೆನೂ ನಾವು ಕಮ್ಮಿ ಇಲ್ಲ. ಆದರೆ ಅಭಿವೃದ್ಧಿ ವಿಷಯದಲ್ಲಿ ಇಲ್ಲಿಯವರೆಗೂ ನಮಗೆ ಸಿಕ್ಕಿರುವುದು ಬರೀ ಚೊಂಬೆ. ಅರ್ಧದಷ್ಟು ನಾವಿದ್ದರೂ ಲಕ್ಷ ಕೋಟಿ ಬಜೆಟ್ ನಲ್ಲಿ ಕಾಲು ಭಾಗವನ್ನಾದರೂ ರಾಜ್ಯ ಸರ್ಕಾರ ನಮಗೆ ಮೀಸಲಿಡಬೇಡವೇ ?

ಅನುದಾನ ಎಲ್ಲಾ ಸದುಪಯೋಗವಾಗಿದೆಯೇ?

ಅನುದಾನ ಎಲ್ಲಾ ಸದುಪಯೋಗವಾಗಿದೆಯೇ?

ಬೆಳಗಾವಿಯ ಅಭಿವೃದ್ಧಿಗೆ ಕೋಟಿ ಕೋಟಿ ವ್ಯಯಿಸಿದ ಬಗ್ಗೆ ಮಾತನಾಡುವ ಈ ಹಿರಿಯರು ಅದರ ಸದುಪಯೋಗವಾಗಿದೆಯೇ ಎಂಬ ಬಗ್ಗೆ ಮುತುವರ್ಜಿವಹಿಸಿ ಪರಿಶೀಲಿಸುತ್ತಾರ?

ಬಾಗಲಕೋಟೆ - ಬಿಜಾಪುರ - ಗುಲ್ಬರ್ಗ ಭಾಗಗಳಲ್ಲಿ ಜನರು ಪಡುತ್ತಿರುವ ಗೋಳೆನು, ನೀರಿಲ್ಲದೆ ಒದ್ದಾಡುತ್ತಿರುವ, ನೀರು ಹೆಚ್ಚಾಗಿ ಸಾಯುತ್ತಿರುವವರ, ವೈದ್ಯಕೀಯ ಸೌಲಭ್ಯಕ್ಕಾಗಿ ಹೆಂಡರು ಮಕ್ಕಳು ತಂದೆ ತಾಯಿಯನ್ನು ಕರೆದುಕೊಂಡು ಪಕ್ಕದ ಮಿರಜ ಸಾಂಗ್ಲಿಗೆ ಹೋಗಲು ಘಂಟೆಗಟ್ಟಲೆ ಸರಕಾರಿ ಬಸ್ಸಿಗೆ ಕಾದು, ಕಿತ್ತು ಹೋಗಿರುವ ರಸ್ತೆಗಳಲ್ಲಿ ಹೆಣಗಾಡಿ ಹೋಗುವವರ ನೋವೇನು?

ಎಲ್ಲೆಡೆ ಅತಿವೃಷ್ಟಿ ಆದ್ರಾ ಕುಡಿಯಕ್ಕಾ ನೀರಿಲ್ಲ

ಎಲ್ಲೆಡೆ ಅತಿವೃಷ್ಟಿ ಆದ್ರಾ ಕುಡಿಯಕ್ಕಾ ನೀರಿಲ್ಲ

ಸರಿಯಾಗಿ ರೈಲಿಲ್ಲ, ರೈಲು ಕೇಳಿದರೆ ಹಳಿಯಿಲ್ಲ. ಮಳೆಗಾಲದಲ್ಲಿ ಬೆಳಗಾವಿಯ ಬಸ್ ನಿಲ್ದಾಣಕ್ಕೊಮ್ಮೆ ಹೋಗಿ ನೋಡಿ. ಬೇಸಿಗೆಯಲ್ಲಿ ಹುಬ್ಬಳ್ಳಿ - ಧಾರವಾಡಗಳ ನೀರಿನ ಪರಿಸ್ಥಿತಿ ಹೇಗಿರುತ್ತೆ ಎಂಬುದನ್ನು ಅರಿತು ನೋಡಿ.

ಗುಲ್ಬರ್ಗ ಜಿಲ್ಲೆಯ ಶಾಲೆಗಳ ಪರಿಸ್ಥಿತಿ ಏನಾಗಿದೆ ಎಂಬುದನ್ನು ಇದೆ ವಾರದಲ್ಲಿ ನಮ್ಮ ಮಾಧ್ಯಮಗಳು ತೋರಿಸಿವೆ. ಉತ್ತರ ಕರ್ನಾಟಕದ ಯಾವ ಊರಿನ ಆಟೋಗಳಿಗೂ ಮೀಟರ್ ಇಲ್ಲ, ಅದನ್ನು ಕೇಳಿದರು ಉತ್ತರಿಸುವವರಿಲ್ಲ. ಸರಿಯಾಗಿ ವಿದ್ಯುತ್ ನೀಡೋಲ್ಲ, ರಸ್ತೆಗಳಿಲ್ಲ, ಊರುಗಳೆಲ್ಲ ಹಂದಿಗಳ ಗೂಡಾಗಿವೆ.

ಇನ್ನು ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿಯಂತೋ ಆ ದೇವರಿಗೆ ಪ್ರೀತಿ. ಈ ಎಲ್ಲ ಹೀನ ಪರಿಸ್ಥಿತಿಗಳ ಕಾರಣೀಕರ್ತರು ಯಾರು? ಈ ಪರಿಸ್ಥಿತಿ ಉತ್ತರ ಕರ್ನಾಟಕಕ್ಕೆ ಬಂದಿರುವುದೇಕೆ? ಎಂಬ ಬಗ್ಗೆ ಆಲೋಚಿಸಿದ್ದಾರ?

ಕೈಗಾರಿಕೆ ಅಭಿವೃದ್ಧಿಯಾಗಿದೆಯೇ?

ಕೈಗಾರಿಕೆ ಅಭಿವೃದ್ಧಿಯಾಗಿದೆಯೇ?

ನಮ್ಮ ರಾಜ್ಯದಲ್ಲಿ ಕೈಗಾರಿಕಾ ಅಭಿವೃದ್ಧಿಯಾಗಿದೆ, ಸಾಫ್ಟ್ ವೇರ್ ದಿಗ್ಗಜರಾಗಿದ್ದೇವೆ ಆದರೆ ಇದೆಲ್ಲವೂ ಬೆಂಗಳೂರು ಮೈಸೂರು ಮಂಗಳೂರಲ್ಲೇ ಕೇಂದ್ರಿಕೃತವಾಗಿರುವುದೇಕೆ? ಇದರಿಂದ ಆಗಿರುವ ಲಾಭವಾದರೂ ಏನು? ಬೆಂಗಳೂರು ಹೇಗೆ ತುಂಬಿ ತುಳುಕುತ್ತಿದೆ ಎಂಬುದು ಎಲ್ಲರಿಗೂ ಗೊತ್ತು.

ಇಂದು ಪ್ರತಿ ದಿನ ಸಾವಿರಾರು ಜನ ಬೆಂಗಳೂರಿಗೆ ಕೆಲಸಕ್ಕಾಗಿ ವಲಸೆ ಬರುತ್ತಾರೆ, ಉತ್ತರ ಕರ್ನಾಟಕದ ಅದೆಷ್ಟೋ ಕುಟುಂಬಗಳು ಗೋವಾಗೆ ವಲಸೆ ಹೋಗಿ ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿವೆ, ಗೋವಾನಲ್ಲಿ ಅವರ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಹೊಣೆ ಯಾರು ? ಉತ್ತರ ಕರ್ನಾಟಕದಲ್ಲಿ ಒಳ್ಳೆಯ ಉದ್ಯೋಗಾವಕಾಶಗಳು ಇದ್ದಿದ್ದರೆ ನಾವ್ಯಾಕೆ ಬೆಂಗಳೂರಿಗೆ ಬರುತ್ತಿದ್ದೆವು?

ಮೋಜು ಮಾಡಲು ಸೌಧ ಕಟ್ಟಿದ್ದಾರೆಯೇ?

ಮೋಜು ಮಾಡಲು ಸೌಧ ಕಟ್ಟಿದ್ದಾರೆಯೇ?

ಗೋವಾನಲ್ಲಿ ಕನ್ನಡಿಗರೇಕೆ ತುಳಿಯಲ್ಪಡುತ್ತಿದ್ದರು? ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯೋ ಅನಾವೃಷ್ಟಿಯೋ ಆದಾಗ 2-3 ಘಂಟೆ ವೈಮಾನಿಕ ಸಮೀಕ್ಷೆ ನಡೆಸಿದರೆ ನನ್ನ ಜವಾಬ್ದಾರಿ ಮುಗಿಯಿತೆಂಬ ಮುಖ್ಯಮಂತ್ರಿಗಳು ಉಮೇಶ ಕತ್ತಿ ಮಾತಿಗೆ ಮಾತ್ರ ಪ್ರತ್ಯುತ್ತರ ನೀಡುತ್ತಾರೆ.

ಸುವರ್ಣ ಸೌಧ ಕಟ್ಟಿದರೆ ಸಾಕೇ? : ಆದರೆ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂಬ ಆಶ್ವಾಸನೆಯನ್ನೂ ನೀಡುವುದಿಲ್ಲ. ವರ್ಷಕ್ಕೊಂದು ಅಧಿವೇಶನ ನಡೆಸಲು ಬೆಳಗಾವಿಯಲ್ಲೊಂದು ಸುವರ್ಣ ಸೌಧ ಕಟ್ಟಿದರು ಆದರೆ ಅಲ್ಲಿಗೆ ಒಂದೇ ಒಂದು ಇಲಾಖೆಯೂ ವರ್ಗವಾಗಿಲ್ಲ. ವರ್ಷಕ್ಕೊಮ್ಮೆ ಎಲ್ಲ ರಾಜಕೀಯ ನಾಯಕರಿಗೆ ಮಜಾ ಮೋಜು ಮಾಡಲು ಸೌಧವೊಂದನ್ನು ಕಟ್ಟಿದಂತಾಗಿದೆ ಸುವರ್ಣ ಸೌಧದ ಪರಿಸ್ಥಿತಿ.

ತಾವು ಬೆಳೆಯಲು ನಮ್ಮನ್ನು ತುಳಿಯುತ್ತಿರುವ ಸ್ವಾರ್ಥಿಗಳು

ತಾವು ಬೆಳೆಯಲು ನಮ್ಮನ್ನು ತುಳಿಯುತ್ತಿರುವ ಸ್ವಾರ್ಥಿಗಳು

ಇದ್ಯಾವುದೇ ವಿಷಯಗಳನ್ನು ಕಣ್ಣಿನಿಂದ ನೋಡದೆ ಕಿವಿಯಿಂದ ಕೇಳಿಸಿಕೊಳ್ಳದೆ ಕೇವಲ ಉಮೇಶ ಕತ್ತಿ ವಿರುದ್ಧ ದನಿ ಎತ್ತುವ ಎಲ್ಲರೂ ಸ್ವಾರ್ಥಿಗಳೇ. ಉತ್ತರ ಕರ್ನಾಟಕವನ್ನು ಹಾಗು ಅಲ್ಲಿಯ ಜನರನ್ನು ತಮ್ಮ ಅಭಿವೃದ್ಧಿಗಾಗಿ ಬಳಸುತ್ತಿರುವ ಸ್ವಾರ್ಥಿಗಳು. ತಾವು ಬೆಳೆಯಲು ನಮ್ಮನ್ನು ತುಳಿಯುತ್ತಿರುವ ಸ್ವಾರ್ಥಿಗಳು.

ಉಮೇಶ ಕತ್ತಿಯವರ ನಿಜವಾದ ಉದ್ದೇಶವೆನಿದೆಯೋ ನಾ ಕಾಣೆ ಆದರೆ ಇಲ್ಲಿರುವ ಎಲ್ಲ ಅಳಲು ವಾಸ್ತವ, ಉತ್ತರ ಕರ್ನಾಟಕದ ಪ್ರತಿಯೊಬ್ಬ ನಾಗರಿಕ ನೋವು. ಇದನ್ನರಿತು ಇನ್ನಾದರು ನಮ್ಮ ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮುಂದಾಗಲಿ ಇಲ್ಲವೇ ಉತ್ತರ ಕರ್ನಾಟಕದ ನಾಗರಿಕರೆಲ್ಲ ಸೇರಿ ಉಮೇಶ ಕತ್ತಿಗೆ ಜೈ, ನಮಗೊಂದು ಪ್ರತ್ಯೇಕ ರಾಜ್ಯ ಬೇಕು ಎಂದು ರಸ್ತೆಗಿಳಿಯುವ ಕಾಲ ದೂರವಿಲ್ಲ.

English summary
Hukkeri MLA Umesh Katti statement is dependable. He may look like a Selfish politician, but He has a valid point in arguing why bifurcation is required in Karnataka writes Citizen journalist Mahantha Vakkunda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X