ಸೊಲ್ಲಾಪುರ, ಸಾಂಗ್ಲಿ ಮಹಾರಾಷ್ಟ್ರ ಆಕ್ರಮಿತ ಪ್ರದೇಶ: ಬಸವರಾಜ್ ಬೊಮ್ಮಾಯಿ
ಬೆಂಗಳೂರು, ಜ. 18: ಬೆಳಗಾವಿ ಕುರಿತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟ್ವೀಟ್ಗೆ ಪಕ್ಷಬೇಧ ಮರೆತು ಖಂಡನೆ ವ್ಯಕ್ತವಾಗುತ್ತಿದೆ. ಠಾಕ್ರೆ ಟ್ವೀಟ್ಗೆ ತಿರುಗೇಟು ಕೊಟ್ಟಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಠಾಕ್ರೆ ಅವರು ಇಲ್ಲ ಸಲ್ಲದ ಅನಾವಶ್ಯಕ ಹೇಳಿಕೆ ಕೊಟ್ಟಿದ್ದಾರೆ. ಗಡಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಶಾಂತಿ ಕದಡುವ ಪ್ರಯತ್ನಕ್ಕೆ ನಾವು ಜಗ್ಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ವಿಕಾಸಸೌಧದಲ್ಲಿ ಮಾತನಾಡಿರುವ ಅವರು, ಬೆಳಗಾವಿ ಸೇರಿದಂತೆ ಗಡಿ ಕುರಿತು ಮಹಾಜನ್ ವರದಿ ಅಂತಿಮವಾಗಿದೆ. ಲೋಕಸಭೆ ಕೂಡ ಅದನ್ನು ಒಪ್ಪಿಕೊಂಡಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಶಾಂತವಾಗಿರುವ ಬೆಳಗಾವಿ ಪರಿಸ್ಥಿತಿ ಕದಡಲು ಪ್ರಯತ್ನ ಮಾಡಿದ್ದಾರೆ. ಮಹಾಜನ್ ವರದಿಯೇ ಅಂತಿಮ. ರಾಜ್ಯದ ಒಂದಿಂಚೂ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ.
ಮಹಾರಾಷ್ಟ್ರ ಆಕ್ರಮಿತ ಪ್ರದೇಶ: ಸೊಲ್ಲಾಪುರ, ಸಾಂಗ್ಲಿಯಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿದೆ. ಆ ಭಾಗಗಳನ್ನ ನಾವು ರಾಜ್ಯದಲ್ಲಿ ಸೇರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ನೀವು ಶಾಂತಿ ಕದಡುವ ಪ್ರಯತ್ನವನ್ನು ಮಾಡಬೇಡಿ. ಇಂತಹ ಪ್ರಯತ್ನಕ್ಕೆ ನಾವು ಜಗ್ಗುವುದಿಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಹಾ ಸಿಎಂ ಉದ್ಧವ್ ಠಾಕ್ರೆ ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿದ್ದಾರೆ. ತಮ್ಮ ಸ್ಥಾನದ ಜವಾಬ್ದಾರಿ ಮರೆತು ಹೇಳಿಕೆ ಕೊಟ್ಟಿದ್ದಾರೆ. ರಾಜಕೀಯಕ್ಕಾಗಿ ಇಂತಹ ಹೇಳಿಕೆ ಕೊಡುವುದು ಬೇಡ. ಸಾಂಗ್ಲಿ, ಸೊಲ್ಲಾಪುರ ರಾಜ್ಯಕ್ಕೆ ಸೇರಿಸಿಕೊಳ್ಳುತ್ತೇವೆ. ಮಹಾಜನ್ ವರದಿಯಲ್ಲೂ ಇದನ್ನೇ ನಾವು ಮಂಡಿಸಿದ್ದೇವೆ. ಈಗಲೂ ಅದಕ್ಕೆ ನಾವು ಬದ್ಧವಿದ್ದೇವೆ. ಗಡಿ-ನೆಲ-ಜಲ-ಭಾಷೆ ವಿಚಾರದಲ್ಲಿ ನಮ್ಮ ರಾಜ್ಯದ ಎಲ್ಲರೂ ಒಂದಾಗಿದ್ದೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಮರಾಠಾ ಹುತಾತ್ಮರ ದಿನ ಭಾನುವಾರ (ಜ.17) ರಂದು ಟ್ವೀಟ್ ಮಾಡಿದ್ದ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು, ಮರಾಠಿ ಭಾಷಿಕರು ಬಹುಸಂಖ್ಯಾತರಾಗಿರುವ ಕರ್ನಾಟಕದ ಪ್ರದೇಶಗಳನ್ನು ಮರಳಿ ರಾಜ್ಯಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಭಾಷಾವಾರು ಪ್ರಾಂತ್ಯ ವಿಂಗಡಣೆ ವೇಳೆ ಕರ್ನಾಟಕಕ್ಕೆ ಸೇರ್ಪಡೆಯಾಗಿರುವ ಪ್ರದೇಶಗಳನ್ನು ಮರಳಿ ಪಡೆಯುವುದೇ ಮರಾಠಾ ಹುತಾತ್ಮರಿಗೆ ನಾವು ಸಲ್ಲಿಸುವ ನಿಜವಾದ ಗೌರವ.
ಮರಾಠಾ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಬೆಳಗಾವಿ ಹಾಗೂ ಇತರ ಪ್ರದೇಶಗಳು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು. ಈ ವಿಚಾರದಲ್ಲಿ ರಾಜ್ಯದ ರಾಜಕೀಯ ಪಕ್ಷಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಈ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ಈ ಪ್ರದೇಶಗಳನ್ನು ಮಹಾರಾಷ್ಟ್ರ ಆಕ್ರಮಿತ ಪ್ರದೇಶವೆಂದು ಘೋಷಿಸುತ್ತೇವೆ ಎಂದು ಟ್ವೀಟ್ ಮಾಡಿದ್ದರು.