• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೇಜಸ್ವಿ- ಸೂಲಿಬೆಲೆ ಹತ್ಯೆ ಸಂಚು ಆರೋಪ: ದಾಖಲೆಗಳು ಹೇಳುವ ಅಸಲಿ ಕತೆ!

|

ಬೆಂಗಳೂರು, ಜ. 20: 'ಅರ್ಧ ಸತ್ಯ ಎಂಬುದು ಸುಳ್ಳೇ ಆಗಿರುತ್ತದೆ'! ಹೀಗೊಂದು ಮಾತನ್ನು ಕಳೆದ ಮೂರು ದಿನಗಳಿಂದ ರಾಜ್ಯದ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿರುವ ಸುದ್ದಿಯೊಂದರ ಹಿನ್ನೆಲೆಯಲ್ಲಿ ಮತ್ತೆ ನೆನಪಿಸಿಕೊಳ್ಳಬೇಕಿದೆ.

ಡಿ. 22ರಂದು ಬೆಂಗಳೂರಿನ ಟೌನ್ ಹಾಲ್‌ ಮುಂಭಾಗ ನಡೆದ ಸಿಎಎ ಪರವಾದ ಸಮಾವೇಶ, ನಂತರ ನಡೆದ ಹತ್ಯೆ ಯತ್ನ ಪ್ರಕರಣ ಹಾಗೂ ಅದಾಗಿ 26 ದಿನಗಳ ನಂತರ ಹೊರಬಿದ್ದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಹತ್ಯೆ ಸಂಚಿನ ಆರೋಪ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್ ಕಮಿಷನರ್‌ ಭಾಸ್ಕರ್‌ ರಾವ್‌ ಅರ್ಧ ಸತ್ಯವನ್ನಷ್ಟೆ ಹೇಳಿದ್ದಾರೆ. ಆ ಮೂಲಕ 'ಗಂಭೀರ ಹಾಗೂ ಸೂಕ್ಷ್ಮ' ಪ್ರಕರಣದ ಸುತ್ತ ಕಾಲ್ಪನಿಕ ಸುದ್ದಿಗಳು ಹರಡಲು ಪರೋಕ್ಷವಾಗಿ ಕಾರಣವಾಗಿದ್ದಾರೆ. ಸಾರ್ವಜನಿಕವಾಗಿ ಆತಂಕ ಮೂಡಿಸಿದ ಹತ್ಯೆ ಸಂಚಿನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವ ದಾಖಲೆಗಳು ಇಂತಹದೊಂದು ಆಯಾಮವನ್ನು ತೆರೆದಿಡುತ್ತಿವೆ.

ತೇಜಸ್ವಿ- ಸೂಲಿಬೆಲೆ ಹತ್ಯೆ ಸಂಚು ಆರೋಪ: ಆರೋಪಿಗಳ ಸ್ವ ಇಚ್ಚಾ ಹೇಳಿಕೆಯಲ್ಲೇನಿದೆ?

ಪೊಲೀಸರೇ ಸಲ್ಲಿಸಿರುವ ದಾಖಲೆಗಳಲ್ಲಿ ಸಂಸದ ತೇಜಸ್ವಿ ಸೂರ್ಯ, ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹೆಸರುಗಳು ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಇವರಿಬ್ಬರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಆರೋಪದ ಕುರಿತು ಒಂದೇ ಒಂದು ಸಾಲು ಉಲ್ಲೇಖವಾಗಿಲ್ಲ. ಬದಲಿಗೆ ಬೆಂಗಳೂರು ಪೊಲೀಸರೇ ತನಿಖೆಯ ಆರಂಭದಲ್ಲಿಯೇ ದಿಕ್ಕು ತಪ್ಪಿರುವುದನ್ನು 'ಒನ್‌ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿರುವ ಪ್ರಕರಣದ ದಾಖಲೆಗಳು ಹೇಳುತ್ತಿವೆ. ಹೀಗಾಗಿ ಇದು ಕಳೆದ 76 ಗಂಟೆಗಳ ಅವಧಿಯಲ್ಲಿ ರಾಷ್ಟ್ರಾದ್ಯಂತ ಸದ್ದು ಮಾಡಿದ ಹತ್ಯೆ ಸಂಚಿನ ಪ್ರಕರಣದ ಇನ್ನೊಂದು ಆಯಾಮ.

 ಪರ- ವಿರೋಧ & ಹತ್ಯೆ ಸಂಚು

ಪರ- ವಿರೋಧ & ಹತ್ಯೆ ಸಂಚು

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹೆಸರಿನಲ್ಲಿ ಕೇಂದ್ರ ಸರಕಾರ ಡಿ. 11ರಂದು ಸಂಸತ್‌ನಲ್ಲಿ ಅನುಮೋದನೆ ಪಡೆದುಕೊಂಡ ಕಾನೂನು ಜಾರಿಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಜೆಪಿ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಹಾಗೂ ಹಿಂದುತ್ವ ಸಂಘಟನೆಗಳು ಕಾಯ್ದೆ ಪರವಾಗಿದ್ದರೆ, ಮುಸ್ಲಿಂ ಸಮುದಾಯ, ಜನಪರ ಸಂಘಟನೆಗಳು ಹಾಗೂ ಕೆಲವು ವಿರೋಧ ಪಕ್ಷಗಳು ಕಾಯ್ದೆ ವಿರುದ್ಧ ಬೀದಿಗಿಳಿದಿವೆ. ಹೆಚ್ಚು ಕಡಿಮೆ ಒಂದೂವರೆ ತಿಂಗಳ ಅಂತರದಲ್ಲಿ ದೇಶದ ಬಹುತೇಕ ಚರ್ಚೆ ಈ ಕಾಯ್ದೆಯ ಸುತ್ತಮುತ್ತ ನಡೆಯುತ್ತಿದೆ.

ಈ ಹಿನ್ನೆಲೆಯಲ್ಲಿ ಡಿ. 20ರಂದು ಸಿಎಎ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಇದಾಗಿ 2 ದಿನಗಳ ಅಂತರದಲ್ಲಿ ಡಿ. 22ರಂದು ಬೆಂಗಳೂರಿನಲ್ಲಿ ನಡೆದ ಸಿಎಎ ಪರವಾದ ಸಮಾವೇಶ ಅಂತಿಮವಾಗಿ ಆರ್‌ಎಸ್‌ಎಸ್‌ ಕಾರ್ಯಕರ್ತನೊಬ್ಬನ ಮೇಲಿನ ಹಲ್ಲೆಯ ಮೂಲಕ ಅಂತ್ಯ ಕಂಡಿತ್ತು. ಕಾನೂನೊಂದಕ್ಕೆ ಪರ- ವಿರೋಧ ಸಹಜವಾದರೂ, ಅಂತಿಮವಾಗಿ ಇವು ಹಿಂಸಾಚಾರಕ್ಕೆ ಎಡೆ ಮಾಡಿಕೊಡುತ್ತಿರುವುದು ಆತಂಕ ಮೂಡಿಸಿತ್ತು, ಆರಕ್ಷಣೆ ನೀಡಬೇಕಿರುವ ಪೊಲೀಸರ ಹೊಣೆಗಾರಿಕೆ ಹೆಚ್ಚಿಸಿತ್ತು.

 ನತದೃಷ್ಟ ವರುಣ್‌ ಬಚಾವಾದ:

ನತದೃಷ್ಟ ವರುಣ್‌ ಬಚಾವಾದ:

"ನಾನು ಆರ್‌ಎಸ್‌ಎಸ್‌ ಕಾರ್ಯಕರ್ತನಾಗಿ ಕೆಲಸ ಮಾಡಿಕೊಂಡಿದ್ದೇನೆ. ಡಿ. 22ರಂದು ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ) ರಿಂದ ಆರ್‌ಎಸ್‌ಎಸ್‌ ರ‍್ಯಾಲಿ ಇತ್ತು. ನಾನು ಬೆಳಗ್ಗೆ ಬೌನ್ಸ್‌ ಬೈಕ್ ಬುಕ್‌ ಮಾಡಿಕೊಂಡು ಟೌನ್‌ ಹಾಲ್ ಹತ್ತಿರಕ್ಕೆ ಹೋಗಿದ್ದೆ..." ಹೀಗೆ ಆರಂಭವಾಗುತ್ತದೆ ಸಿಎಎ ಸಮಾವೇಶ ಮುಗಿಸಿ ಜೆಪಿ ನಗರದಲ್ಲಿರುವ ಮನೆಗೆ ಮರಳುತ್ತಿದ್ದ ವರುಣ್ ನೀಡಿದ ದೂರು. ವಿಕ್ಟೋರಿಯಾ ಆಸ್ಪತ್ರೆಯ ಮಹಿಳಾ ವೈದ್ಯಾಧಿಕಾರಿಗಳ ಮುಂದೆ ಪೊಲೀಸರಿಗೆ ಹೇಳಿಕೆ ನೀಡಿದ ವರುಣ್, ತನ್ನ ಮೇಲೆ ಕುಂಬಾರಗುಂಡಿ ಎಂಬ ಬೆಂಗಳೂರಿನ ಮಾರುಕಟ್ಟೆ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ನಡೆದ ಹಲ್ಲೆಯ ವಿವರ ನೀಡುತ್ತಾನೆ.

ತಲೆಗೆ, ಬೆನ್ನಿಗೆ, ಎಡ ಕಂಕಳ ಬಳಿ ಮಚ್ಚುಗಳಿಂದ ಹೊಡೆದ ಗಾಯಗಳನ್ನು ಪೊಲೀಸರು ಗುರುತು ಮಾಡಿಕೊಳ್ಳುತ್ತಾರೆ. ಈ ಸಂಬಂಧ ಕಲಾಸಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿಯೊಂದು ಅದೇ ದಿನ ತಯಾರಾಗುತ್ತದೆ. "ಯಾರು, ಯಾತಕ್ಕೆ ತನ್ನ ಮೇಲೆ ಅಟ್ಯಾಕ್‌ ಮಾಡಿ ಸಾಯಿಸಲು ಪ್ರಯತ್ನಿಸಿದರೋ ಗೊತ್ತಿಲ್ಲ," ಎಂದು ದೂರಿನಲ್ಲಿ ವರುಣ್ ಪೊಲೀಸರಿಗೆ ತಿಳಿಸುತ್ತಾನೆ.

ವರುಣ್ ನೀಡಿದ ದೂರಿನಲ್ಲಿ ತೇಜಸ್ವಿ ಸೂರ್ಯ ಹೆಸರು ಆರಂಭದಲ್ಲಿಯೇ ಪ್ರಸ್ತಾಪವಾಗುತ್ತದೆ. ಬಿಟ್ಟರೆ ಇನ್ಯಾವುದೇ ಕಡೆಗಳಲ್ಲಿ ಸಂಸದರ ಹೆಸರಾಗಲಿ, ಭಾಷಣಕಾರ ಸೂಲಿಬೆಲೆ ಹೆಸರಾಗಲೀ ಕಾಣಿಸುವುದಿಲ್ಲ. ಪ್ರಕರಣದ ತನಿಖೆ ಮುಂದೆ ಬೇರೆಯದೇ ಆಯಾಮ ಪಡೆದುಕೊಳ್ಳುತ್ತದೆ.

 ವಿಶೇಷ ತಂಡಕ್ಕೆ ಸಿಕ್ಕ ಶಿವಾಜಿನಗರದವರು

ವಿಶೇಷ ತಂಡಕ್ಕೆ ಸಿಕ್ಕ ಶಿವಾಜಿನಗರದವರು

ಸಿಎಎ ಪರವಾದ ಸಮಾವೇಶದ ನಂತರ ನಡೆದ ಹತ್ಯೆ ಯತ್ನ ಪ್ರಕರಣವನ್ನು ಬೆಂಗಳೂರು ಪೊಲೀಸರು ಗಂಭೀರವಾಗಿ ಸ್ವೀಕರಿಸಿದರು. ಪ್ರಕರಣದ ತನಿಖಾಧಿಕಾರಿ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ 'ಪ್ರಕರಣದ ದಿನಚರಿ'ಯಲ್ಲಿ ಒಟ್ಟಾರೆ ಈವರೆಗೂ ಸಾಗಿ ಬಂದ ತನಿಖೆಯ ಸಂಪೂರ್ಣ ವಿವರಗಳು ಲಭ್ಯ ಇವೆ.

"ಪ್ರಕರಣದ ತೀವ್ರತೆ ಹಾಗ ಸೂಕ್ಷ್ಮತೆ ದೃಷ್ಠಿಯಿಂದ ಬೆಂಗಳೂರು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರ ಜ್ಞಾಪನದಂತೆ ವಿಶೇಷ ತಂಡವನ್ನು ರಚಿಸಲಾಯಿತು. ಅರೋಪಿಗಳು ಬಂದ ಎಂಟ್ರಿ ಹಾಗೂ ಎಕ್ಸಿಟ್ ರೂಟ್‌ಗಳಲ್ಲಿನ ಸಿಸಿಟಿವಿ ಫೂಟೇಜ್‌ಗಳನ್ನು ಪರೀಕ್ಷಿಸಲಾಯಿತು. ಇದರಲ್ಲಿ ಹಲವು ಆರೋಪಿಗಳು ಕಾರ್ಯಕ್ರಮದ ಸ್ಥಳದಲ್ಲಿ ಹಾಗೂ ಅವನು ಹೊರಟಿರುವ ದಾರಿಯಲ್ಲಿ ಫಾಲೋ ಮಾಡಿದ್ದು ತಿಳಿದು ಬಂತು. ಭಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ಶಿವಾಜಿನಗರದ ಸಾದಿಕ್ ಅಲಿಯಾಸ್ ಸೌಂಡ್ ಸಾದಿಕ್‌ ಎಂಬಾತನನ್ನು ಮೊದಲು ಬಂಧಿಸಲಾಯಿತು," ಎಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ತಿಳಿಸುತ್ತಾರೆ. ಈತ ಪ್ರಕರಣದ ಆರನೇ ಆರೋಪಿ. ಪೊಲೀಸರು ಜ. 18ರಂದು (ಕಮಿಷನರ್ ಪತ್ರಿಕಾಗೋಷ್ಠಿ ಮಾರನೇ ದಿನ) ನ್ಯಾಯಾಲಯದಲ್ಲಿ ಈತನ ಕಸ್ಟಡಿ ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

 ಎಸ್‌ಡಿಪಿಐ ಕಚೇರಿಯಲ್ಲಿ ಪ್ರೇರಣೆ

ಎಸ್‌ಡಿಪಿಐ ಕಚೇರಿಯಲ್ಲಿ ಪ್ರೇರಣೆ

ಪ್ರಕರಣ ಸಂಬಂಧ ಈವರೆಗೆ ಒಟ್ಟು ಆರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮೊಹಮದ್ ಇರ್ಫಾನ್, ಅಕ್ಬರ್ ಪಾಷ, ಸಯ್ಯದ್ ಸಿದ್ದಿಕ್, ಸನಾವುಲ್ಲಾ ಷರೀಫ್, ಸೈಯದ್ ಅಕ್ಬರ್ ಹಾಗೂ ಸಾದಿಕ್ ವುಲ್ ಅಮೀನ್ ಸದ್ಯ ಪೊಲೀಸರ ವಶದಲ್ಲಿದ್ದು ಎಲ್ಲರೂ ಎಸ್‌ಡಿಪಿಐ ಪಕ್ಷದ ಕಾರ್ಯಕರ್ತರು ಎಂದು ಪೊಲೀಸರು ಹೇಳುತ್ತಿದ್ದಾರೆ. ಇದನ್ನು ಎಸ್‌ಡಿಪಿಐ ಅಲ್ಲಗಳೆದಿದ್ದೆಯಾದರೂ, ಹತ್ಯೆಗೈಯಲು ಪಕ್ಷದ ಕಚೇರಿಯಲ್ಲಿ ಪ್ರೇರಣೆ ಸಿಕ್ಕಿದೆ ಎಂಬುದು ಪೊಲೀಸರು ನ್ಯಾಯಾಲಯದ ಮುಂದೆ ಸಲ್ಲಿಸಿರುವ ಆರೋಪ.

ಜ. 4ರಿಂದ ಜ. 10ರವರೆಗೆ ನಡೆದ ಪ್ರಕರಣದ ತನಿಖೆಯ ದಿನಚರಿಯಲ್ಲಿ ತನಿಖಾಧಿಕಾರಿ ನ್ಯಾಯಾಲಯ ಸಮಕ್ಷಮಕ್ಕೆ ನೀಡಿದ್ದು ಆರೋಪಿಗಳು ಹತ್ಯೆ ಹತ್ನದ ಸಂಚು ರೂಪಿಸಿದ ಬಗೆಯನ್ನು ವಿವರಿಸಿದ್ದಾರೆ. "ಡಿ. 18ರಂದು ಸಿಎಎ ವಿರುದ್ಧ ಪ್ರತಿಭಟನೆಯನ್ನು ನಮ್ಮ ಸಂಘಟನೆ (ಎಸ್‌ಡಿಪಿಐ)ಯವರೂ ಮಾಡಿದ್ದರು. ಈ ಕಾಯ್ದೆ ಮುಸ್ಲಿಂ ಜನಾಂಗದ ವಿರೋಧಿಯಾಗಿದೆ ಎಂದು ಪ್ರಚಾರ ಮಾಡಿದ್ದರು. ಇದರಂತೆ ಡಿ. 20ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ದೆವು. ಇದಾಗಿ ಡಿ. 22ರಂದು ಟೌನ್‌ ಹಾಲ್‌ ಮುಂಭಾಗ ಸಿಎಎ ಪರವಾದ ಪ್ರತಿಭಟನೆ ನಡೆಯುತ್ತಿದೆ ಎಂದು ತಿಳಿದು ಬಂದಿತ್ತು. ಈ ಕುರಿತು ಸಂಘಟನೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಇದರಿಂದ ಸಿಎಎ ಪರವಾಗಿರುವವರಿಗೆ ಶಿಕ್ಷಿಸಬೇಕೆಂದು ತೀರ್ಮಾನಿಸಿದೆವು,'' ಎಂದು ಆರೋಪಿಗಳ ಸ್ವ ಇಚ್ಚಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

"ಅದರಂತೆ ಸಮಯ ನೋಡಿ ಯಾರನ್ನಾದರೂ ಒಬ್ಬ ಆರ್‌ಎಸ್‌ಎಸ್‌ ಮುಖಂಡರನ್ನು ಕೊಲೆ ಮಾಡಬೇಕು ಎಂಬ ಉದ್ದೇಶದಿಂದ..." ಎಂದು ಈ ಹೇಳಿಕೆಗಳಲ್ಲಿ ಹತ್ಯೆ ಯತ್ನದ ಸಂಚನ್ನು ವಿವರಿಸಲಾಗಿದೆ. ಪೊಲೀಸರ ಸಮ್ಮುಖದಲ್ಲಿ ನೀಡಿರುವ ಆರೋಪಿಗಳ ಸ್ವ ಇಚ್ಚಾ ಹೇಳಿಕೆ ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ. ವಿಶೇಷ ಅಂದರೆ, ಎಲ್ಲಿಯೂ ಸಂಸದ ತೇಜಸ್ವಿ ಸೂರ್ಯ ಹಾಗೂ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಅಂಶ ಸ್ಪಷ್ಟವಾಗಿ ಉಲ್ಲೇಖವಾಗಿಲ್ಲ. ಬದಲಿದೆ, 'ಯಾರೋ ಒಬ್ಬ' ಎಂಬುದನ್ನು ಪೊಲೀಸರ ದಾಖಲೆಗಳು ಹಲವು ಕಡೆಗಳಲ್ಲಿ ಪ್ರಸ್ತಾಪಿಸುತ್ತವೆ.

 ಗೋಡೆಮೇಲೆ ಭಾಸ್ಕರ್ ರಾವ್‌ ದೀಪ

ಗೋಡೆಮೇಲೆ ಭಾಸ್ಕರ್ ರಾವ್‌ ದೀಪ

ಒಂದು ಕಡೆ ಪೊಲೀಸರ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಿದ್ದರೆ ಡಿ. 17ರಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮಾಧ್ಯಮಗಳ ಮುಂದೆ ಬರುತ್ತಾರೆ. "ಟೌನ್ ಹಾಲ್‌ ಮುಂಭಾಗ ನಡೆಯುತ್ತಿದ್ದ ಸಿಎಎ ಪರವಾದ ಸಮಾವೇಶದ ಮೇಲೆ ಆರೋಪಿಗಳು 7-8 ಕಲ್ಲು ತೂರಿದರು. ಆ ಸಮಯದಲ್ಲಿ ಗೊಂದಲ ಉಂಟಾದರೆ ಸಿಎಎ ಪರವಾಗಿ ಮಾತನಾಡುವ ಮುಖಂಡರನ್ನು ಹತ್ಯೆ ಮಾಡಬೇಕು ಎಂದು ತೀರ್ಮಾನಿಸಿದ್ದರು,'' ಎಂಬ ಮಾಹಿತಿ ನೀಡುತ್ತಾರೆ. ಹಾಗಂತ ಅವರೂ ಕೂಡ ಈ ಇಬ್ಬರು ಮುಖಂಡರ ಹೆಸರನ್ನು ಪ್ರಸ್ತಾಪಿಸುವುದಿಲ್ಲ. ಹೀಗಿದ್ದೂ ಮಾಧ್ಯಮಗಳಲ್ಲಿ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ಎಂಬ ಸುದ್ದಿಯು ಪ್ರಕರಣದಲ್ಲಿ ಹೊಸ ಆಯಾಮವನ್ನು ಪಡೆದುಕೊಳ್ಳುತ್ತದೆ ಮತ್ತು ದೊಡ್ಡ ಮಟ್ಟದ ಆತಂಕವನ್ನು ಸೃಷ್ಟಿಸಲು ಕಾರಣವಾಗುತ್ತದೆ.

ಹಾಗೆ ನೋಡಿದರೆ, ಪೊಲೀಸರು ಸಲ್ಲಿಸಿರುವ ದಾಖಲೆಗಳೇ ಹೇಳುವಂತೆ, 'ಯಾರೋ ಒಬ್ಬ ಆರ್‌ಎಸ್‌ಎಸ್‌ ಮುಖಂಡರನ್ನು' ಹತ್ಯೆ ಮಾಡಲು ಆರೋಪಿಗಳು ಸಂಚು ರೂಪಿಸುವುದೇ ಡಿ. 22ರಂದು ಬೆಳಗ್ಗೆ 5 ಗಂಟೆಯಿಂದ! ಇಷ್ಟು ದೊಡ್ಡ ಹತ್ಯೆ ಸಂಚನ್ನು ಅದೇ ದಿನ ಬೆಳಗ್ಗೆ ಯಾಕೆ ರೂಪಿಸುತ್ತಾರೆ? ಟೌನ್‌ ಹಾಲ್‌ನಂತಹ ಸಾರ್ವಜನಿಕ ಪ್ರದೇಶದಲ್ಲಿ ಹತ್ಯೆ ನಡೆಸಲು ತೀರ್ಮಾನಿಸಿರುವವರು ಇಷ್ಟು ಕನಿಷ್ಠ ಮಟ್ಟದ ಸಿದ್ಧತೆ ಜತೆಗೆ ಬರುತ್ತಾರಾ? ಈ ಪ್ರಶ್ನೆಗಳಿಗೆ ಕಮಿಷನರ್ ಮಾಧ್ಯಮಗೋಷ್ಠಿಯಲ್ಲಿ ಉತ್ತರ ಸಿಗುವುದಿಲ್ಲ. ಬದಲಿಗೆ ಅರ್ಧ ಸತ್ಯವನ್ನಷ್ಟೆ ಹೇಳಲು ಹೋಗಿ ಸುಳ್ಳಿನ ಕಂತೆಯೊಂದು ಬಿಚ್ಚಿಕೊಳ್ಳಲು ಕಾರಣರಾಗುತ್ತಾರೆ ಭಾಸ್ಕರ್ ರಾವ್.

 ತೇಜಸ್ವಿ ಸೂರ್ಯ, ಸೂಲಿಬೆಲೆ ಏನಂತಾರೆ?

ತೇಜಸ್ವಿ ಸೂರ್ಯ, ಸೂಲಿಬೆಲೆ ಏನಂತಾರೆ?

ಕಮಿಷನರ್ ಪ್ರೆಸ್‌ಮೀಟ್‌ ನಂತರ ಮಾಧ್ಯಮಗಳಲ್ಲಿ ಹತ್ಯೆ ಸಂಚಿನ ಪ್ರಕರಣ ತಿರುವು ಪಡೆದುಕೊಂಡಿತು. ಈ ಸಮಯದಲ್ಲಿ ಪ್ರತಿಕ್ರಿಯೆ ನೀಡಿದ ಸಂಸದ ತೇಜಸ್ವಿ ಸೂರ್ಯ "ಇದು ಹಿಂದುತ್ವ ಹಾಗೂ ಅಭಿವೃದ್ಧಿಯ ವಿರುದ್ಧ ನಡೆದ ಹತ್ಯೆ ಸಂಚು,'' ಎಂದರು. ಚಕ್ರವರ್ತಿ ಸೂಲಿಬೆಲೆ, "ಸಾಯಲು ಸಿದ್ಧ, ನನ್ನ ಮನೆಯವರಿಗೆ ಸಮಾಧಾನ ಹೇಳಿ,'' ಎಂದು ಭಾವನಾತ್ಮಕ ಪ್ರತಿಕ್ರಿಯೆ ನೀಡಿದರು. ಇದೀಗ ಪೊಲೀಸ್ ದಾಖಲೆಗಳಲ್ಲಿ ಇವರಿಬ್ಬರ ಹೆಸರು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂಬುದು ಬಯಲಾಗಿದೆ.

ಈ ಕುರಿತು ತೇಜಸ್ವಿ ಸೂರ್ಯ ಅವರ ಪ್ರತಿಕ್ರಿಯೆಗಾಗಿ ಸಂಪರ್ಕಿಸಲಾಯಿತಾದರೂ, ಬಿಜೆಪಿ ರಾಷ್ಟ್ರಾಧ್ಯಕ್ಷರ ಪ್ರಮಾಣವರನ ಸಮಾರಂಭದ ಹಿನ್ನೆಲೆಯಲ್ಲಿ ದಿಲ್ಲಿಗೆ ತೆರಳಿರುವ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಚಕ್ರವರ್ತಿ ಸೂಲಿಬೆಲೆ ಪ್ರವಾಸದಲ್ಲಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕರೆ ಹಾಗೂ ಎಸ್‌ಎಂಎಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

 ಬಿಜೆಪಿ ಆಳ್ವಿಕೆ, ಹತ್ಯೆ ಸಂಚುಗಳು

ಬಿಜೆಪಿ ಆಳ್ವಿಕೆ, ಹತ್ಯೆ ಸಂಚುಗಳು

ಅದು ಆಗಸ್ಟ್ 31, 2012. ರಾಜ್ಯದಲ್ಲಿ ಆಳ್ವಿಕೆ ನಡೆಸುತ್ತಿದ್ದದ್ದು ಬಿಜೆಪಿ ಸರಕಾರ. ಇಂತಹದ್ದೇ ಒಂದು ಹತ್ಯೆ ಸಂಚಿನ ಪ್ರಕರಣ ಅವತ್ತು ಹೊರಬಿದ್ದಿತ್ತು. ಕೆಲವು ಬಲಪಂಥೀಯ ಆಲೋಚನೆಗಳ ಗುರುತಿಸಿಕೊಂಡಿರುವ ಸಂಪಾದಕರು, ಅಂಕಣಕಾರ, ಮಾಧ್ಯಮ ಮಾಲೀಕರ ಹತ್ಯೆಗೆ ಸಂಚು ರೂಪುಗೊಂಡಿದೆ ಎಂಬ ಆರೋಪದ ಮೇಲೆ ಸಿಸಿಬಿ ಪೊಲೀಸರು ಮುಸ್ಲಿಂ ಯುವಕರನ್ನು ಬಂಧಿಸಿತ್ತು. ಇದರಲ್ಲಿ ಓರ್ವ ಪತ್ರಕರ್ತನ ಹೆಸರೂ ಇತ್ತು.

ಪ್ರಕರಣದ ತನಿಖೆ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ)ಗೆ ವರ್ಗಾವಣೆಗೊಂಡಿತ್ತು. ಕೊನೆಗೆ, ಸುಮಾರು ಮೂವರು ಆರೋಪಿಗಳ ಮೇಲೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಅವರನ್ನು ಪ್ರಕರಣದಿಂದ ಹೊರಗಿಡಲಾಯಿತು. ಉಳಿದ ಆರೋಪಿಗಳು ಪ್ರಕರಣದ ವಿಳಂಬಗತಿಗೆ ಬೇಸತ್ತು ಕೊನೆಗೆ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡು ಕಡಿಮೆ ಅವಧಿಯ ಶಿಕ್ಷೆಗೆ ಸ್ವಇಚ್ಚೆಯಿಂದ ಗುರಿಯಾದರು. ಈ ಪ್ರಕರಣದಲ್ಲಿ ಕನಿಷ್ಟ ಪೊಲೀಸರು ಗಣ್ಯರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದನ್ನು ಪ್ರಾಥಮಿಕ ದಾಖಲೆಗಳಲ್ಲಿ ನಮೋದಿಸಿದ್ದರು. ಆದರೆ ಡಿ. 22ರ ಪ್ರಕರಣದಲ್ಲಿ ತನಿಖೆಯ ದಾಖಲೆಗಳಲ್ಲಿ ಅಂತಹ ಯಾವ ಹೆಸರುಗಳೂ ಕಾಣಿಸುವುದಿಲ್ಲ.

ಹೀಗಿರುವಾಗ, ಯಾಕೆ ಸಂಸದ ಹಾಗೂ ಭಾಷಣಕಾರನ ಹೆಸರುಗಳನ್ನು ಎಳೆದು ತರಲಾಯಿತು? ಈ ಮೂಲಕ ಯಾಕೆ ಆತಂಕವನ್ನು ಆರಕ್ಷಕರೇ ಸೃಷ್ಟಿಸುವ ಪ್ರಯತ್ನ ಮಾಡಿದರು? ಇಂತಹ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

English summary
Hoax of alleged terror module planned to target BJP MP Tejasvi Surya and Chakravarthy Sulibele exposed through case dairy presented by Bangalore Police in the Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X