ಕರ್ನಾಟಕದಲ್ಲಿ ಒಂದೇ ದಿನ 24,300 ಕೊರೊನಾ ಯೋಧರಿಗೆ ಲಸಿಕೆ
ಬೆಂಗಳೂರು, ಜನವರಿ.16: ರಾಜ್ಯದಲ್ಲಿ ಮೊದಲ ದಿನವೇ 24,300 ವೈದ್ಯಕೀಯ ಸಿಬ್ಬಂದಿ ಹಾಗೂ ಕೊರೊನಾ ವಾರಿಯರ್ಸ್ ಗೆ ಲಸಿಕೆಯನ್ನು ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಮೆಡಿಕಲ್ ಕಾಲೇಜಿನ ಪಿಎಂಎಸ್ಎಸ್ ವೈ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ವಿಕ್ಟೋರಿಯಾ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ ಹಾಗೂ ಬಿಡದಿಯ ಶ್ರೀಮತಿ ನಾಗರತ್ನ ಎಂಬುವವರಿಗೆ ಮೊದಲು ಲಸಿಕೆ ನೀಡಲಾಯಿತು.
ಕೊವಿಡ್-19 ಲಸಿಕೆ ಬೇಕೇ; ಈ ದಾಖಲೆಗಳೊಂದಿಗೆ ನಿಯಮ ಅನುಸರಿಸಿ!
ಜಗತ್ತು ಕಂಡಿರುವ ಮಹಾಮಾರಿ ರೋಗಗಳಿಗೆ ಲಸಿಕೆ ಅಭಿವೃದ್ಧಿಪಡಿಸುವುದಕ್ಕೆ ವರ್ಷಗಳೇ ತೆಗೆದುಕೊಳ್ಳಲಾಗಿತ್ತು. ಆದರೆ ವಿಶ್ವವನ್ನು ಕಾಡಿದ ಕೊರೊನಾವೈರಸ್ ಸೋಂಕಿಗೆ ಕೇವಲ 10 ತಿಂಗಳಿನಲ್ಲೇ ಲಸಿಕೆ ಅಭಿವೃದ್ಧಿಪಡಿಸಿರುವುದು ಐತಿಹಾಸಿಕ ದಾಖಲೆಯಾಗಿದೆ ಎಂದ ಸಚಿವ ಡಾ.ಕೆ ಸುಧಾಕರ್ ಅವರು ದೇಶದ ಸಂಶೋಧಕರು, ವೈಜ್ಞಾನಿಕ ಸಂಸ್ಥೆಗಳ ಬಗ್ಗೆ ಧನ್ಯವಾದ ಸಲ್ಲಿಸಿದರು.

ಕರ್ನಾಟಕದಲ್ಲಿ ಒಂದೇ ದಿನ 24,300 ಸಿಬ್ಬಂದಿಗೆ ಲಸಿಕೆ
ಕೊರೊನಾವೈರಸ್ ಲಸಿಕೆ ವಿತರಣೆ ಆರಂಭವಾದ ಮೊದಲ ದಿನವೇ ಐತಿಹಾಸಿಕವಾಗಿದೆ. ರಾಜ್ಯದಲ್ಲಿ ಒಂದೇ ದಿನ 24,300 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಸ್ವಚ್ಛತಾ ಸಿಬ್ಬಂದಿ ನಾಗರತ್ನ, ತಾಂತ್ರಿಕ ಸಲಹಾ ಸಮಿತಿಯಲ್ಲಿರುವ 70 ವರ್ಷದ ವೈದ್ಯರು, ಮಣಿಪಾಲ್ ಆಸ್ಪತ್ರೆಯ ನಿರ್ದೇಶಕ ಡಾ.ಸುದರ್ಶನ್ ಬಲ್ಲಾಳ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಹಿರಿಯ ವೈದ್ಯರೂ ಕೂಡ ಲಸಿಕೆಯನ್ನು ಪಡೆದುಕೊಂಡಿದ್ದು, ಅನುಮೋದನೆ ಪಡೆದಿರುವ ಲಸಿಕೆಯು ವಿಶ್ವಾಸಾರ್ಹವಾಗಿದೆ ಎಂದು ಸಾರ್ವಜನಿಕರು ಸಹ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ.

ಕೆಳಮಟ್ಟದ ರಾಜಕಾರಣ ಬಿಡುವಂತೆ ಸಚಿವರ ಸಲಹೆ
ಕೊವಿಡ್-19 ಲಸಿಕೆ ವಿತರಣೆ ವಿಚಾರದಲ್ಲೂ ವಿರೋಧ ಪಕ್ಷಗಳು ಕೆಳಮಟ್ಟದ ರಾಜಕಾರಣವನ್ನು ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ಲಸಿಕೆ ಪಡೆಯುವುದು ಕಡ್ಡಾಯವಲ್ಲ. ಸರ್ಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮಾಹಿತಿ ಮಾತ್ರ ಅಧಿಕೃತವಾಗಿದೆ. ಬೇರೆ ಕಡೆ ಪ್ರಕಟಿಸುವ ತಪ್ಪು ಮಾಹಿತಿಯನ್ನು ಜನರು ನಂಬಬಾರದು. ಅಡ್ಡ ಪರಿಣಾಮ ಉಂಟಾದರೆ ತಕ್ಷಣ ಸೂಕ್ತ ಚಿಕಿತ್ಸೆ ಲಭ್ಯವಿದೆ. ಕ್ಲಿನಿಕಲ್ ಟ್ರಯಲ್ ನಲ್ಲೇ 20-30 ಸಾವಿರ ಜನರ ಮೇಲೆ ಪ್ರಯೋಗ ಮಾಡಲಾಗಿದೆ. ಆದ್ದರಿಂದ ಆತಂಕ ಬೇಕಿಲ್ಲ. ಇಂದು ಕೊರೊನಾವೈರಸ್ ಲಸಿಕೆ ಪಡೆದವರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕಾಣಿಸಿಕೊಂಡಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಭಾರತದಲ್ಲೇ ಲಸಿಕೆಯ ದರ ತೀರಾ ಕಡಿಮೆ
ವಿದೇಶಗಳಲ್ಲೂ ಕೊರೊನಾವೈರಸ್ ಲಸಿಕೆಗೆ ಸಾಕಷ್ಟು ಬೇಡಿಕೆಯಿದೆ. ಅಷ್ಟಾಗಿಯೂ ಭಾರತದಲ್ಲಿ ಅತ್ಯಂತ ಕಡಿಮೆ ದರದ ಲಸಿಕೆ ನೀಡಲಾಗುತ್ತಿದೆ. ಕೇವಲ 210 ರೂ. ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು. ಅದೇ ವಿದೇಶಗಳಲ್ಲಿ ಕೊವಿಡ್-19 ಲಸಿಕೆಗಳಿಗೆ ಕನಿಷ್ಠ 2 ರಿಂದ 3 ಸಾವಿರ ರೂಪಾಯಿವರೆಗೂ ದರ ನಿಗದಿಗೊಳಿಸಲಾಗಿದೆ. ದೇಶದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗೆ, ಎರಡನೇ ಹಂತದಲ್ಲಿ ಕೋಮಾರ್ಬಿಡಿಟಿ ಇರುವವರಿಗೆ ಲಸಿಕೆ ನೀಡಲಾಗುವುದು ಎಂದ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮೊದಲ ವಾರದಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಪೂರ್ಣ
ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಇನ್ನಷ್ಟು ವ್ಯವಸ್ಥೆ ಮಾಡಲಾಗುತ್ತದೆ. ಒಂದು ವಾರದಲ್ಲೇ ಆರೋಗ್ಯ ಸಿಬ್ಬಂದಿಗೆ ಅಗತ್ಯವಿರುವ ಲಸಿಕೆ ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ. ಲಸಿಕೆಗೆ ಚಾಲನೆ ನೀಡಿದ ದಿನವೇ ನಾನೂ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಯೋಚಿಸಿದ್ದೆ. ಆ ಮೂಲಕ ಲಸಿಕೆಯು ಸುರಕ್ಷಿತವಾಗಿದೆ ಎಂಬ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸಲು ಸಿದ್ಧನಾಗಿದ್ದೆನು. ಆದರೆ ಮೊದಲ ಹಂತದಲ್ಲಿ ಕೊರೊನಾ ಯೋಧರಿಗೆ ಲಸಿಕೆ ನೀಡಬೇಕೆಂದು ಪ್ರಧಾನಿ ಮೋದಿಯವರು ಸೂಚಿಸಿದ್ದು ಎಂದು ಸಚಿವರು ಹೇಳಿದ್ದಾರೆ.