ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಮಾಸಿಕ ಸ್ಟೈಪೆಂಡ್‌

|
Google Oneindia Kannada News

high court
ಬೆಂಗಳೂರು,ಜ.28 : ಎಂಡೋಸಲ್ಫಾನ್‌ ಸಂತ್ರಸ್ತರಿಗೆ ಸಮಾಧಾನ ನೀಡುವಂತಹ ಆದೇಶವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ನೀಡಿದೆ. ಕೀಟನಾಶಕದ ದುಷ್ಪರಿಣಾಮಕ್ಕೆ ತುತ್ತಾಗಿ ದೈಹಿಕ ಹಾಗೂ ಮಾನಸಿಕ ನ್ಯೂನತೆಯಿಂದ ನರಳುತ್ತಿರುವ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 6,140 ಮಂದಿ ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ ಮಾಸಿಕ 'ಸ್ಟೈಪೆಂಡ್‌' ನೀಡಬೇಂದು ಸರ್ಕಾರಕ್ಕೆ ಆದೇಶಿಸಿದೆ.

ಎಂಡೋಸಲ್ಫಾನ್‌ ಸಂತ್ರಸ್ತರ ಪರಿಹಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿ ಕೆ.ಎಲ್‌. ಮಂಜುನಾಥ್‌ ಅವರು ಬರೆದ ಪತ್ರ ಆಧರಿಸಿ ಸ್ವಯಂ ಪ್ರೇರಿತ ಪ್ರಕರಣವನ್ನು ಹೈಕೋರ್ಟ್ ದಾಖಲಿಸಿಕೊಂಡಿತ್ತು. ಸೋಮವಾರ ಎಂಡೋಸಲ್ಫಾನ್‌ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ವಾಸ್ತವ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿ ತಯಾರಿಸಿದ್ದ ವರದಿಯನ್ನು ಅಮಿಕಸ್‌ ಕ್ಯೂರಿ ವಕೀಲೆ ವೈಶಾಲಿ ಹೆಗಡೆ ಅವರು ಸಲ್ಲಿಸಿದರು.

ಕೇರಳ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದಿರುವಂತೆ, ಎಂಡೋಸಲ್ಫಾನ್‌ ದುಷ್ಪರಿಣಾಮಕ್ಕೆ ತುತ್ತಾಗಿ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬಕ್ಕೆ ತಲಾ 5 ಲಕ್ಷ ರೂ., ಶೇ.65ಕ್ಕಿಂತ ಹೆಚ್ಚಿನ ಪ್ರಮಾಣದ ಅಂಗವೈಕಲ್ಯಕ್ಕೆ ಗುರಿಯಾದವರಿಗೆ 5 ಲಕ್ಷ ರೂ. ಮತ್ತು ಶೇ. 65 ಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿದವರಿಗೆ 3 ಲಕ್ಷ ರೂ. ನೀಡಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. [ಕೊಕ್ಕಡದಲ್ಲಿ ನರಕ ಸೃಷ್ಟಿಸಿರುವ ಎಂಡೋಸಲ್ಫಾನ್]

ವರದಿ ಸಲ್ಲಿಸಿದ ನಂತರ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ಒಟ್ಟು 6,140 ಮಂದಿ ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ ಮಾಸಿಕ 'ಸ್ಟೈಪೆಂಡ್‌' ನೀಡಬೇಂದು ಸರ್ಕಾರಕ್ಕೆ ಆದೇಶ ನೀಡಿದೆ.

ಆದೇಶದಲ್ಲೇನಿದೆ : ಎಂಡೋಸಲ್ಫಾನ್‌ ದುಷ್ಪರಿಣಾಮದಿಂದ ಶೇ. 25 ರಿಂದ ಶೇ.60ರಷ್ಟು ಅಂಗವೈಕಲ್ಯಕ್ಕೆ ಗುರಿಯಾದವರಿಗೆ ಮಾಸಿಕ ತಲಾ 1,500 ರೂ. ಮತ್ತು ಶೇ.60ಕ್ಕಿಂತ ಹೆಚ್ಚಿನ ಪ್ರಮಾಣದ ಅಂಗವೈಕಲ್ಯ ಹೊಂದಿದವರಿಗೆ ಮಾಸಿಕ ತಲಾ 3,000 ರೂ. ಸ್ಟೈಪೆಂಡ್‌ ನೀಡಬೇಕು. ಈ ಸ್ಟೈಪೆಂಡ್‌ ಅನ್ನು ಮಾರ್ಚ್‌ 1ರಿಂದ ಆರಂಭಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡುವ ಮುಂದಿನ ಆದೇಶದವರೆಗೆ ವಿತರಿಸಬೇಕು ಎಂದು ಸೂಚನೆ ನೀಡಲಾಗಿದೆ.

ಸ್ಟೈಪೆಂಡ್‌ ನೀಡುವುದು ಹೇಗೆ : ಸಂತ್ರಸ್ತರ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ತೆರೆದು, ಆ ಖಾತೆಗೆ ಪ್ರತಿ ತಿಂಗಳು ಹಣ ಜಮಾ ಮಾಡಬೇಕು. ಆ ಹಣವನ್ನು ಖುದ್ದು ಸಂತ್ರಸ್ತರಿಗೆ ನೀಡಬೇಕು. ಸಂತ್ರಸ್ತರು ಖುದ್ದಾಗಿ ಹಣ ಪಡೆಯಲು ಸಾಧ್ಯವಾಗದಂಥ ಪರಿಸ್ಥಿತಿ ಇದ್ದಲ್ಲಿ ಸಂತ್ರಸ್ತರ ಪೋಷಕರು ಅಥವಾ ಆಪ್ತ ಸಂಬಂಧಿಕರಿಗೆ ನೀಡಬಹುದು ಎಂದು ಕೋರ್ಟ್ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ವೈದ್ಯರ ಭೇಟಿ : ಸಂತ್ರಸ್ತರಿಗೆ ಸೂಕ್ತ ವೈದ್ಯಕೀಯ ಸವಲತ್ತು ಒದಗಿಸುವ ಸಲುವಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವೈದ್ಯರ ವಿಶೇಷ ತಂಡವು ವಾರಕ್ಕೊಮ್ಮೆ ಗ್ರಾಮಗಳಿಗೆ ಭೇಟಿ ನೀಡಬೇಕು. ಸಂತ್ರಸ್ತರ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ಹಾಗೂ ಇತರೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದು ತಿಳಿಸಲಾಗಿದೆ.

ವರದಿ ಒಪ್ಪಿದ ಸರ್ಕಾರ : ವೈಶಾಲಿ ಹೆಗಡೆ ಅವರು ನೀಡಿರುವ ವರದಿಯನ್ನು ಒಪ್ಪಿರುವುದಾಗಿ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಸಂತ್ರಸ್ತರಿಗೆ ಸೂಕ್ತ ವೈದ್ಯಕೀಯ ಪರಿಹಾರ ಕಲ್ಪಿಸಲು ಸರ್ಕಾರ ಸಿದ್ಧವಿದೆ ಎಂದು ಸರ್ಕಾರ ತಿಳಿಸಿತು. ಅರ್ಜಿಯ ವಿಚಾರಣೆಯನ್ನು ಸರ್ಕಾರ ಮಾ. 7ಕ್ಕೆ ಮುಂದೂಡಿದೆ.

English summary
The High Court of Karnataka on Monday, Jan 27 passed an interim order directing the State government to pay a monthly stipend to the identified 6,140 victims affected by the insecticide endosulfan in three districts – Dakshina Kannada, Udupi and Uttara Kannada – from March 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X