ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದ್ಮ ಪ್ರಶಸ್ತಿ ಗೆದ್ದ ಕರ್ನಾಟಕದ ಸಾಧಕರಿವರು

By Sachhidananda Acharya
|
Google Oneindia Kannada News

ನವದೆಹಲಿ, ಜನವರಿ 26: ಗುರುವಾರ ಘೋಷಣೆಯಾದ ಪದ್ಮ ಪ್ರಶಸ್ತಿಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ 9 ಜನರು ಪದ್ಮ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ದೇಶದ ಒಟ್ಟು 85 ಸಾಧಕರಿಗೆ ಪದ್ಮ ಪ್ರಶಸ್ತಿಗಳು ದಕ್ಕಿವೆ.

ಕರ್ನಾಟಕದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರೆ, ಇನ್ನುಳಿದ 8 ಜನರಿಗೆ ಪದ್ಮ ಶ್ರೀ ಪ್ರಶಸ್ತಿ ಸಿಕ್ಕಿದೆ.

ಇಳಯರಾಜಗೆ ಪದ್ಮ ವಿಭೂಷಣ, ಸೂಲಗಿತ್ತಿ ನರಸಮ್ಮಗೆ ಪದ್ಮಶ್ರೀಇಳಯರಾಜಗೆ ಪದ್ಮ ವಿಭೂಷಣ, ಸೂಲಗಿತ್ತಿ ನರಸಮ್ಮಗೆ ಪದ್ಮಶ್ರೀ

ಪಂಕಜ್ ಅಡ್ವಾಣಿ

ಪಂಕಜ್ ಅಡ್ವಾಣಿ

ರಾಜ್ಯದ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಆಟಗಾರ ಪಂಕಜ್‌ ಅಡ್ವಾಣಿ ಅವರಿಗೆ 2018ನೇ ಸಾಲಿನ ಪದ್ಮಭೂಷಣ ಪುರಸ್ಕಾರ ದೊರೆತಿದೆ.

ಬಿಲಿಯರ್ಡ್ಸ್ ಮತ್ತು ಸ್ನೂಕರ್‌ನಲ್ಲಿ 15 ಬಾರಿ ವಿಶ್ವ ಚಾಂಪಿಯನ್ ಆಗಿರುವ ಪಂಕಜ್ ಅಡ್ವಾಣಿ ಈಗಾಗಲೇ ಪದ್ಮ ಶ್ರೀ(2009), ಖೇಲ್ ರತ್ನ( (2005-06) ಮತ್ತು ಅರ್ಜುನ್ ಪ್ರಶಸ್ತಿ (2004)ಯಿಂದ ಪುರಸ್ಕೃತರಾಗಿದ್ದರು. ಇದೀಗ ಪದ್ಮ ಭೂಷಣ ಪ್ರಶಸ್ತಿ ಪಡೆದಿದ್ದಾರೆ.

ದೊಡ್ಡರಂಗೇಗೌಡ

ದೊಡ್ಡರಂಗೇಗೌಡ

ಗೀತ ರಚನೆಕಾರ, ಸಾಹಿತಿ ದೊಡ್ಡರಂಗೇಗೌಡರು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. 100ಕ್ಕೂ ಹೆಚ್ಚು ಧಾರವಾಹಿಗಳಿಗೆ ಚಿತ್ರಕಥೆ, 500ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿದ್ದಾರೆ.

ಕವಿ, ಸಾಹಿತಿ, ಉಪನ್ಯಾಸಕರಾಗಿ ಕನ್ನಡ ಜನಮಾನಸಕ್ಕೆ ಪರಿಚಿತರಾಗಿರುವ ದೊಡ್ಡರಂಗೇಗೌಡರು ಬೆಂಗಳೂರಿನ ಎಸ್ಎಲ್ಎನ್ ಕಾಲೇಜಿನಲ್ಲಿ ವೃತ್ತಿ ಆರಂಭಿಸಿ ಅದೇ ಕಾಲೇಜಿನಿಂದ ಪ್ರಾಂಶುಪಾಲರಾಗಿ ನಿವೃತ್ತರಾದವರು.

ತದನಂತರ ತಮ್ಮ ಸಾಹಿತ್ಯ ಕೃಷಿ ಮುಂದುವರಿಸಿದರು. ಇವರ ಪರಸಂಗನ ಗೆಂಡೆತಿಮ್ಮ, ಆಲೆಮನೆ, ಗಣೇಶನ ಮದುದೆ, ಅರುಣರಾಗ ಸೇರಿದಂತೆ ಹಲವು ಚಿತ್ರಗಳ ಗೀತೆಗಳು ಬಲು ಜನಪ್ರಿಯವಾಗಿವೆ.

ಇವರ ಸಾಧನೆ ಗುರುತಿಸಿ ಒಂದು ಅವಧಿಗೆ ಇವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೆಶನ ಮಾಡಲಾಗಿತ್ತು.

ಸೀತವ್ವ ಜೋಡಟ್ಟಿ

ಸೀತವ್ವ ಜೋಡಟ್ಟಿ

ಚಿಕ್ಕೋಡಿ ಗ್ರಾಮದ ಕಬ್ಬೂರು ಗ್ರಾಮದ ಸೀತವ್ವ ಜೋಡಟ್ಟಿ 1997ರಲ್ಲಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ ಕಟ್ಟಿ ಮಹಿಳೆಯರು, ದಲಿತರು ಮತ್ತು ದೇವದಾಸಿಯರ ಕಲ್ಯಾಣಕ್ಕಾಗಿ ಶ್ರಮಿಸಿದವರು.

300ಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು ಕಟ್ಟಿ ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯಕ್ಕೆ ಆರ್ಥಿಕ ಬಲ ನೀಡಿದವರು ಇವರು. ಮಹಿಳಾ ಮತ್ತು ಮಕ್ಕಳ ಹಕ್ಕುಗಳ ವಿಚಾರದಲ್ಲಿ ಜಾಗೃತಿ ಕಾರ್ಯಕ್ರಮ, ಕಾನೂನು ನೆರವು ಮೊದಲಾದುವುಗಳನ್ನು ನೀಡುತ್ತಾ ಬಂದಿದ್ದಾರೆ.

ಕಳೆದ ಮೂರು ದಶಕಗಳಿಂದ ಹೀಗೆ ದೀನದಲಿತರ ಪರವಾಗಿ ಕೆಲಸ ಮಾಡುತ್ತಾ ಬಂದ ಸೀತವ್ವ ಜೋಡಟ್ಟಿಯವರಿಗೆ ಇದೀಗ ಪದ್ಮ ಪ್ರಶಸ್ತಿ ಒಲಿದು ಬಂದಿದೆ.

ಸೂಲಗಿತ್ತಿ ನರಸಮ್ಮ

ಸೂಲಗಿತ್ತಿ ನರಸಮ್ಮ

ತುಮಕೂರು ಜಿಲ್ಲೆ ಪಾವಗಡದ ತೊಂಬತ್ತೇಳು ವರ್ಷದ ಸೂಲಗಿತ್ತಿ ನರಸಮ್ಮ ಪದ್ಮಶ್ರೀ ಪ್ರಶಸ್ತಿ ಪಡೆದ ಎಲೆಮರೆಯ ಕಾಯಿ ಎಂದರೆ ತಪ್ಪಲ್ಲ. ಕೃಷ್ಣಾಪುರ ಸುತ್ತಮುತ್ತಲ ಗ್ರಾಮದವರ ಪಾಲಿಗೆ ನರಸಮ್ಮ ಅವರು ನರ್ಸ್ ಹೌದು, ಡಾಕ್ಟರೂ ಹೌದು.

ತುಮಕೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಗೌರವ, ಮನ್ನಣೆಗೆ ಪಾತ್ರರಾದವರು ನರಸಮ್ಮ. ರಾಷ್ಟಪತಿಗಳಿಂದ ವಯೋಶ್ರೇಷ್ಠ ಸಮ್ಮಾನ್ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಒಂದೂವರೆ ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ ಅನಕ್ಷರಸ್ಥೆ ನರಸಮ್ಮ ಅವರು 'ಸೂಲಗಿತ್ತಿ ನರಸಮ್ಮ' ಎಂದೇ ಖ್ಯಾತರು. ಅವರ ಆಡುಭಾಷೆ ತೆಲುಗು. ತಮ್ಮ ಸೊಸೆಗೆ ಕೂಡ ಕೆಲ ವರ್ಷಗಳ ಹಿಂದೆ ಅವರೇ ಹೆರಿಗೆ ಮಾಡಿಸಿದ್ದಾರೆ.

ಹೆರಿಗೆ ಮಾಡಿಸಿದ್ದಕ್ಕೆ ಜನರು ರವಿಕೆ ಬಟ್ಟೆ, ಭತ್ತ, ರಾಗಿ ಇತ್ಯಾದಿಗಳನ್ನು ಇವರಿಗೆ ನೀಡುತ್ತಿದ್ದರು. ಇದೇ ಇವರಿಗೆ ನೀಡುತ್ತಿದ್ದ ಶುಲ್ಕ. ಎಷ್ಟೋ ಸಲ 20 ಮೈಲು ದೂರ ನಡೆದುಕೊಂಡು ಹೋಗಿಯೇ ಹೆರಿಗೆ ಮಾಡಿಸಿದ್ದೂ ಇದೆ. ಒಂದೇ ದಿನದಲ್ಲಿ ನಾಲ್ವರಿಗೆ ಹೆರಿಗೆ ಮಾಡಿಸಿದ್ದಿದೆ. ಇಂಥ ಮಹಾತಾಯಿಗೆ ಈಗ ಪದ್ಮಶ್ರೀ ಗೌರವ ಸಂದಿದೆ.

ಸಾವಿರದೈನೂರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಮಹಾತಾಯಿಗೆ 'ಪದ್ಮಶ್ರೀ'ಸಾವಿರದೈನೂರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಮಹಾತಾಯಿಗೆ 'ಪದ್ಮಶ್ರೀ'

ರಾ. ಸತ್ಯನಾರಾಯಣ

ರಾ. ಸತ್ಯನಾರಾಯಣ

ಸಂಗೀತ, ನೃತ್ಯ, ಭೌತವಿಜ್ಞಾನ, ಪುರಾತತ್ವ ಶಾಸ್ತ್ರದಲ್ಲಿ ಹೆಸರು ಮಾಡಿರುವ ವಿದ್ವಾನ್ ರಾ. ಸತ್ಯನಾರಾಯಣ ಮೈಸೂರು ಜಿಲ್ಲೆಯವರು. 1927 ಮೇ 8ರಂದು ಮೈಸೂರಿನಲ್ಲಿ ಜನಿಸಿದ ಅವರು ಮೈಸೂರು ಅರಮನೆಯ ಜನರಲ್ ಮೆರಿಟ್ ಸ್ಕಾಲರ್ ಶಿಪ್ ನಲ್ಲಿ ಶಾಲಾ ಶಿಕ್ಷಣ ಪೂರೈಸಿದ್ದಾರೆ. ಎಸ್.ಎಸ್.ಎಲ್.ಸಿ ಯಲ್ಲಿ ರ‍್ಯಾಂಕ್ ವಿದ್ಯಾರ್ಥಿಯಾಗಿದ್ದ ಇವರು ಟಿ.ಪಿ ಕೈಲಾಸಂರ ನಾಟಕಗಳಲ್ಲಿಯೂ ಕಾಣಿಸಿಕೊಂಡಿದ್ದರು.

ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಇನಾರ್ಗ್ಯಾನಿಕ್ ಕೆಮೆಸ್ಟ್ರಿ ಮತ್ತು ವಿಜ್ಞಾನ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

(ಕೃಪೆ: http://mupadhyahiri.blogspot.in)

ಇಬ್ರಾಹಿಂ ಸುತಾರ್

ಇಬ್ರಾಹಿಂ ಸುತಾರ್

'ಕನ್ನಡದ ಕಬೀರ' ಎಂದು ಕರೆಸಿಕೊಳ್ಳುವ ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದ ಜನಪದ ಕಲಾವಿದ ಇಬ್ರಾಹಿಂ ಸುತಾರ್‌ ಹಿಂದೂ-ಮುಸ್ಲಿಮರಲ್ಲಿ ಭಾವೈಕ್ಯ ಸಂದೇಶ ಸಾರಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

1940ರ ಮೇ 10ರಂದು ಮುಧೋಳ ತಾಲೂಕಿನ ಮಹಾಲಿಂಗಪುರದ ಬಡಕುಟುಂಬದಲ್ಲಿ ಇಬ್ರಾಹಿಂ ಎನ್.ಸುತಾರ ಜನಿಸಿದರು. 1970ರಲ್ಲಿ ಭಾವೈಕ್ಯ ಜನಪದ ಸಂಗೀತ ಮೇಳ ಸ್ಥಾಪಿಸಿದ ಅವರು 44 ವರ್ಷಗಳಿಂದ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆ ಮೂಲಕ ಹಿಂದೂ-ಮುಸ್ಲಿಮರಲ್ಲಿ ಭಾವೈಕ್ಯ ಸಂದೇಶ ಸಾರುತ್ತಾ ಬಂದಿದ್ದಾರೆ. ಕನ್ನಡ ಮತ್ತು ಉರ್ದು ಭಾಷೆಗಳ ಮೇಲೆ ಪಾಂಡಿತ್ಯ ಸಾಧಿಸಿರುವ ಸುತಾರ್ ಅವರು ಅರ್ಹವಾಗಿಯೇ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಸಿದ್ದೇಶ್ವರ ಸ್ವಾಮೀಜಿ

ಸಿದ್ದೇಶ್ವರ ಸ್ವಾಮೀಜಿ

ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳಿಗೆ ಪದ್ಮಶ್ರೀ ಪ್ರಶಸ್ತಿ ದಕ್ಕಿದೆ. ಆದರೆ ಸಿದ್ಧೇಶ್ವರ ಸ್ವಾಮಿಗಳು ಪ್ರಶಸ್ತಿ ನಿರಾಕರಿಸುವ ಸಾಧ್ಯತೆ ಇದೆ.

ಈಗಾಗಲೇ ಅವರು ಮೌಖಿಕವಾಗಿ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದು, ಶುಕ್ರವಾರ ಆಧಿಕೃತವಾಗಿ ಪತ್ರ ಬರೆಯುವ ಸಾಧ್ಯತೆ ಇದೆ ಎಂದು ಆಶ್ರಮದ ಮೂಲಗಳು ಹೇಳಿವೆ. ಇಲ್ಲಿಯವರೆಗೆ ಸಿದ್ಧೇಶ್ವರ ಸ್ವಾಮೀಜಿಗಳು ಯಾವುದೇ ಪ್ರಶಸ್ತಿ ಸ್ವೀಕರಿಸಿಲ್ಲ. ಎಲ್ಲಾ ಪ್ರಶಸ್ತಿಗಳನ್ನು ಅವರು ನಯವಾಗಿಯೇ ತಿರಸ್ಕರಿಸುತ್ತಾ ಬಂದಿದ್ದಾರೆ.

ರುದ್ರಪಟ್ನಂ ಸಹೋದರರು

ರುದ್ರಪಟ್ನಂ ಸಹೋದರರು

ರುದ್ರಪಟ್ನಂ ಸಹೋದರರು ಎಂದೇ ಖ್ಯಾತವಾಗಿರುವ ಕರ್ನಾಟಕ ಸಂಗೀತ ಗಾಯಕರಾದ ರುದ್ರಪಟ್ನಂ ನಾರಾಯಣ ಸ್ವಾಮಿ ತಾರಾನಾಥನ್ ಮತ್ತು ರುದ್ರಪಟ್ನಂ ನಾರಾಯಣ ಸ್ವಾಮಿ ತ್ಯಾಗರಾಜನ್ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಹಾಸನದ ರುದ್ರಪಟ್ನಂ ಇವರ ಊರು. ಕಳೆದ 60 ವರ್ಷಗಳಲ್ಲಿ 2,500 ಕ್ಕೂ ಹೆಚ್ಚು ಸಂಗೀತ ಕಚೇರಿಗಳನ್ನು ಈ ಸಹೋದರರು ನಡೆಸಿಕೊಟ್ಟಿದ್ದಾರೆ.

ಇಳಯರಾಜ

ಇಳಯರಾಜ

ಭಾರತೀಯ ಚಿತ್ರರಂಗದ ಮೇರು ಹೆಸರು ಇಳಯರಾಜ. ಸಂಗೀತ ಸಂಯೋಜಕ, ಗೀತ ರಚನೆಕಾರ, ಗಾಯಕರಾಗಿ ಹಲವು ಭಾಷೆಗಳಲ್ಲಿ ಇಳಯರಾಜ ಹೆಸರು ಮಾಡಿದ್ದಾರೆ. ಹಾಗೆ ಅವರು ಸೇವೆ ಸಲ್ಲಿಸಿದ ಭಾಷೆಗಳಲ್ಲಿ ಕನ್ನಡ ಕೂಡ ಪ್ರಮುಖವಾದುದು.

ಇಳಯರಾಜ ಮೂಲ ತಮಿಳಿಗರಾದರೂ ಅವರ ಸಂಗೀತ ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲೇ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ ವೆಂಕಟೇಶ್ ಶಿಷ್ಯರಾದ ಇವರು ಜನಪ್ರಿಯ ಗಾಯಕಿ ಬಿ.ಕೆ ಸುಮಿತ್ರಾರ ಗಾನಗೋಷ್ಠಿಗಳಲ್ಲಿ ಸಹ ಕಲಾವಿದರಾಗಿದ್ದರು.

1943 ಜೂನ್ 2ರಂದು ತಮಿಳುನಾಡಿನ ಪನ್ನೈಪುರಂನಲ್ಲಿ ಜನಿಸಿದ ಸಂಗೀತ ಮಾಂತ್ರಿಕ ಇಳಯರಾಜ ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡದಲ್ಲಿ ಗೀತಾ, ಜನ್ಮ ಜನ್ಮದ ಅನುಬಂಧ, ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ ಚಿತ್ರಗಳಿಗೆ ನೀಡದ ಅವರ ಸಂಗೀತ ಮಾಧುರ್ಯ ಅನನ್ಯವಾದುದು.

ಅವರೀಗ ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ ಪದ್ಮ ವಿಭೂಷಣಕ್ಕೆ ಭಾಜನರಾಗಿದ್ದಾರೆ.

English summary
President Ram Nath Kovind on Thursday approved conferment of 85 Padma awards which include 9 Kannadigas. They are Pankaj Advani, Doddarange Gowda, Sitavva Joddati, Sulagitti Narasamma, R Sathyanarayana, Ibrahim Sutar, Siddeshwara Swamiji, Illaiyaraja, Rudrapatnam Narayanaswamy and Rudrapatnam Narayanaswamy Thyagarajan (Duo).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X