ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನುಡಿಹಬ್ಬಕ್ಕೂ ಮುನ್ನ ಕನ್ನಡ ಸಾಹಿತ್ಯ ಸಮ್ಮೇಳನದ 10 ಅಧ್ಯಕ್ಷರ ನೆನೆಯೋಣ

|
Google Oneindia Kannada News

ಕನ್ನಡದ ತೇರನ್ನೆಳೆಯುವುದಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಈಗಾಗಲೇ ಅಣಿಗೊಳ್ಳುತ್ತಿದೆ. ದಸರಾ ಸಂಭ್ರಮ ಮುಗಿಯುತ್ತಿದ್ದಂತೆಯೇ ನವೆಂಬರ್ 24 ರಿಂದ 26 ರವರೆಗೆ ಮೈಸೂರಿನಲ್ಲಿ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗೆ ಅರಮನೆ ನಗರಿ ತೆರೆದುಕೊಳ್ಳಲಿದೆ.

ದಿನಾಂಕ ನಿಗದಿಯಾಯ್ತು, ಸೆ.25 ರಂದು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿ ಚಂದ್ರಶೇಖರ ಪಾಟೀಲರನ್ನು ಆಯ್ಕೆ ಮಾಡಿದ್ದೂ ಆಯ್ತು. ಇನ್ನೇನಿದ್ದರೂ ಸಾಹಿತ್ಯ ಜಾತ್ರೆ ಹೇಗಿರಬೇಕೆಂದು ಯೋಚಿಸುವುದಷ್ಟೇ ಬಾಕಿ!

83ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರ ವ್ಯಕ್ತಿಚಿತ್ರ83ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರ ವ್ಯಕ್ತಿಚಿತ್ರ

1915 ರಿಂದ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದೆ. ಕನ್ನಡ ಭಾಷೆಯ ಬೆಳವಣಿಗೆ, ಕನ್ನಡ ಭಾಷಿಕ ಸಮುದಾಯದ ವಿಸ್ತರಣೆ ಮತ್ತು ಕನ್ನಡ ನಾಡಿನ ವಿವಿಧ ಹಿರಿಮೆ-ಗರಿಮೆ, ಸಮಸ್ಯೆಗಳ ಕುರಿತು ಚರ್ಚೆ ನಡೆಸುವ, ಕನ್ನಡ ಸಾಹಿತ್ಯಕ್ಕೆ ಮಹೋನ್ನತ ಕೊಡುಗೆ ನೀಡಿದ ಸಾಹಿತಿಗಳ ನೆನಕೆಗೆ, ಮೇರು ಸಾಹಿತಿಗಳಿಗೆ ಗೌರವ ನೀಡುವುದಕ್ಕೆ ವೇದಿಕೆಯಾಗುವ ಈ ಸಾಹಿತ್ಯ ಸಮ್ಮೇಳನ, ಭಾಷೆಗೆ ಸಂಬಂಧಿಸಿದಂತೆ ಕರ್ನಾಟಕದ ಅತೀ ದೊಡ್ಡ ಹಬ್ಬ.

ಸಹೃದಯತೆ, ರಸಾನುಭೂತಿ, ಅರ್ಥಪೂರ್ಣ ಚರ್ಚೆ, ಕನ್ನಡದ ಕುರಿತ ನೈಜ ಕಾಳಜಿಗೆ ಹೆಸರಾಗಿದ್ದ ಸಾಹಿತ್ಯ ಸಮ್ಮೇಳನಕ್ಕೂ ಕ್ರಮೇಣ ರಾಜಕೀಯದ ಗಾಳಿ ಬೀಸಿರುವ ವಿಷಯ ಗುಟ್ಟಾಗಿ ಉಳಿದಿಲ್ಲ. ಅಧ್ಯಕ್ಷರ ಆಯ್ಕೆಯ ವಿಷಯದಲ್ಲೂ ರಾಜಕೀಯ ನಡೆಯುತ್ತಿದೆ ಎಂಬ ಮಾತೂ ಕೇಳಿಬರುತ್ತಿದೆ.

ಏನೇ ಆದರೂ ಕನ್ನಡ ಸಾಹಿತ್ಯ ಸಮ್ಮೇಳನ ರಾಜಕೀಯ, ಸ್ವಜನಪಕ್ಷಪಾತ, ಎಡ-ಬಲವೆಂಬ ಸಿದ್ಧಾಂತಗಳನ್ನೆಲ್ಲ ಮೀರಿ, ಪರಿಶುದ್ಧ ಸಾಹಿತ್ಯವನ್ನಷ್ಟೇ ನೀಡಲಿ ಎಂಬುದು ಪ್ರತಿಯೊಬ್ಬ ಸಹೃದಯ ಕನ್ನಡಿಗನ ಕಳಕಳಿ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂಪಾಗೆ ಅಭಿನಂದನೆ, ನಿಂದಕರಿಗೆ ಚಂಪಾಕಲಿ!ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಚಂಪಾಗೆ ಅಭಿನಂದನೆ, ನಿಂದಕರಿಗೆ ಚಂಪಾಕಲಿ!

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ನಿನ್ನೆ(ಸೆ.25) ಚಂಪಾ ಅವರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆರಿಸುತ್ತಿದ್ದಂತೆಯೇ ಕಳೆದ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಯಾರಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳುವುದು ಸಕಾಲಿಕವೆನ್ನಿಸಿತು. ಅದಕ್ಕೆಂದೇ ಕಳೆದ 10 ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡದ ತೇರನ್ನು ಮುನ್ನಡೆಸಿದ ಅಧ್ಯಕ್ಷರುಗಳ ಸಂಕ್ಷಿಪ್ತ ಪರಿಚಯವನ್ನು ಒನ್ ಇಂಡಿಯಾ ನಿಮಗಾಗಿ ನೀಡಿದೆ.

82ನೇ ಕನ್ನಡ ಸಾಹಿತ್ಯ ಸಮ್ಮೇಳನ-ರಾಯಚೂರು

82ನೇ ಕನ್ನಡ ಸಾಹಿತ್ಯ ಸಮ್ಮೇಳನ-ರಾಯಚೂರು

ಬರಗೂರು ರಾಮಚಂದ್ರಪ್ಪ: ಕಳೆದ ವರ್ಷ(2016) ರಾಯಚೂರಿನಲ್ಲಿ ನಡೆದ 82 ನೇ ಸಾಹಿತ್ಯ ಸಮ್ಮೇಳನದ ಅಧಕ್ಷರಾಗಿದ್ದವರು ಸಾಹಿತಿ ಬರಗೂರು ರಾಮಚಂದ್ರಪ್ಪನವರು. ತುಮಕೂರು ಜಿಲ್ಲೆಯ ಬರಗೂರಿನಲ್ಲಿ 1946 ಅಕ್ಟೋಬರ್ 18 ರಂದು ಜನಿಸಿದ ಬರಗೂರು ರಾಮಚಂದ್ರಪ್ಪನವರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿದ್ದರು. ಆ ಬಳಿಕ ಎರಡು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದರು. ಕನ್ನಡನಾಡಿನ ಪ್ರಮುಖ ಚಿಂತಕರಲ್ಲಿ ಒಬ್ಬರಾದ ಇವರು ಬಂಡಾಯ ಸಾಹಿತ್ಯ ಚಳವಳಿಯ ನೇತಾರರು. ಒಂದು ಊರಿನ ಕತೆಗಳು, ಕನ್ನಡಾಭಿಮಾನ, ಸುಂಟರಗಾಳಿ, ಕಾಂಟೆಸ್ಸಾ ಕಾವ್ಯ, ನೆತ್ತರಿನಲ್ಲಿ ನೆಂದ ಹೂ, ಗುಲಾಮನ ಗೀತೆ, ಕನ್ನಡ ಪ್ರಜ್ಞೆ ಮುಂತಾದವು ಅವರ ಪ್ರಮುಖ ಕೃತಿಗಳು. ಹಗಲುವೇಷ, ಶಾಂತಿ, ಭಾಗೀರಥಿ, ಕೋಟೆ ಸಿನೆಮಾಗಳನ್ನು ನಿರ್ದೇಶಿಸಿದ್ದಲ್ಲದೆ, ಜನುಮದ ಜೋಡಿ ಚಿತ್ರಕ್ಕೆ ಸಂಭಾಷಣೆ ಬರೆದ ಕೀರ್ತಿಯೂ ರಾಮಚಂದ್ರಪ್ಪನವರದು. ರಾಜ್ಯಸಾಹಿತ್ಯ ಅಕಾಡೆಮಿ, ನೃಪತುಂಗ ಸೇರಿದಂತೆ‌ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

81ನೇ ಕನ್ನಡ ಸಾಹಿತ್ಯ ಸಮ್ಮೇಳನ- ಶ್ರವಣಬೆಳಗೊಳ

81ನೇ ಕನ್ನಡ ಸಾಹಿತ್ಯ ಸಮ್ಮೇಳನ- ಶ್ರವಣಬೆಳಗೊಳ

ಸಿದ್ಧಲಿಂಗಯ್ಯ: ದಲಿತ ಕವಿ ಎಂದೇ ಪ್ರಸಿದ್ಧಿ ಪಡೆದ ಸಿದ್ದಲಿಂಗಯ್ಯ ಅವರು 2015ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಸಿದ್ದಲಿಂಗಯ್ಯ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಗ್ರಾಮದಲ್ಲಿ 1954 ರಲ್ಲಿ ಜನಿಸಿದರು. ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಅಲ್ಲೆಕುಂತವರೆ ಮುಂತಾದ ಕವನ ಸಂಕಲನ, ಹಕ್ಕಿ ನೋಟ, ಎಡಬಲ ಮುಂತಾದ ವಿಮರ್ಶಾ ಕೃತಿಗಳು, ಏಕಲವ್ಯ, ನೆಲಸಮ, ಪಂಚಮ ಮುಂತಾದ ನಾಟಕಗಳು ಸಾಹಿತ್ಯ ಪ್ರೇಮಿಗಳ ಗಮನಸೆಳೆದಿವೆ. ಊರು-ಕೇರಿ ಇವರ ಆತ್ಮಕಥನ. ಚಲನಚಿತ್ರ ಗೀತರಚನಕಾರರಾಗಿಯೂ ಇವರು ಖ್ಯಾತರು.
ರಾಜ್ಯೋತ್ಸವ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.

80ನೇ ಕನ್ನಡ ಸಾಹಿತ್ಯ ಸಮ್ಮೇಳನ-ಕೊಡಗು

80ನೇ ಕನ್ನಡ ಸಾಹಿತ್ಯ ಸಮ್ಮೇಳನ-ಕೊಡಗು

ನಾ.ಡಿಸೋಜಾ: ಮಕ್ಕಳ ಸಾಹಿತ್ಯಕ್ಕೆ ಹೊಸ ದಿಕ್ಕು ನೀಡಿದ ನಾ.ಡಿಸೋಜಾ ಅವರು 2014 ಕೊಡಗಿನಲ್ಲಿ ನಡೆದ 80 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪರಿಸರ ಕಾಳಜಿಯ ಕವಿ ನಾ ಡಿಸೋಜಾ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937 ಜೂನ್ 6 ರಂದು ಜನಿಸಿದರು. ಅಜ್ಞಾತ, ಆಸರೆ, ಇಂಜಿನಿಯರ್ ಆತ್ಮಕಥೆಯ ಮೊದಲ ಪುಟಗಳು, ದ್ವೀಪ, ನೆಲೆ, ದುರ್ಗವೆಂಬ ವ್ಯೂಹ, ಸ್ವರ್ಗದ ಬಾಗಿಲಲ್ಲೂ ನರಕ ಮುಂತಾದ ಹಲವು ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಭೂತ, ಮುಂದೇನು? ಎಂಬ ಮಕ್ಕಳ ನಾಟಕ, ಶರಾವತಿ, ಸಂಗೀತಪುರ, ದಂತ ಮತ್ತು ಗಂಧ, ಕಾಡಾನೆಯ ಕೊಲೆ, ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು, ಮೀನುಗಾರ ದೊರೆ ಮುಂತಾದ ಹಲವು ಮಕ್ಕಳ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಇದರೊಂದಿಗೆ ರೇಡಿಯೋ ನಾಟಕಗಳು, ಕಿರುಕಾದಂಬರಿಗಳೂ ಇವರ ಇಷ್ಟದ ಸಾಹಿತ್ಯ ಪ್ರಕಾರಗಳು. ಬಾಲ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಸಸ್ತಿಗಳು ಇವರ ಮುಡಿಗೆ ಸೇರಿವೆ.

79ನೇ ಕನ್ನಡ ಸಾಹಿತ್ಯ ಸಮ್ಮೇಳನ- ಕೊಡಗು

79ನೇ ಕನ್ನಡ ಸಾಹಿತ್ಯ ಸಮ್ಮೇಳನ- ಕೊಡಗು

ಕೋ.ಚೆನ್ನಬಸಪ್ಪ: ಸಂಶೋಧಕ, ಚಿಂತಕ, ಇತಿಹಾಸಜ್ಞರಾಗಿ ಪ್ರಸಿದ್ಧಿ ಪಡೆದ ಕೋ.ಚನ್ನಬಸಪ್ಪ ಅವರು ಗಣಿನಾಡು ಬಳ್ಳಾರಿಯವರು. 2013ರಲ್ಲಿ ಕೊಡಗಿನಲ್ಲಿ ನಡೆದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ಚಿತ್ರಕೃಪೆ: ಕಣಜ

78 ನೇ ಕನ್ನಡ ಸಾಹಿತ್ಯ ಸಮ್ಮೇಳನ- ಗಂಗಾವತಿ

78 ನೇ ಕನ್ನಡ ಸಾಹಿತ್ಯ ಸಮ್ಮೇಳನ- ಗಂಗಾವತಿ

ಸಿ.ಪಿ.ಕೃಷ್ಣಕುಮಾರ್: ಸಿಪಿಕೆ ಎಂದೇ ಪ್ರಸಿದ್ಧರಾದ ಚಿಕ್ಕನಾಯಕನಹಳ್ಳಿ ಪುಟ್ಟೇನಗೌಡ ಕೃಷ್ಣಕುಮಾರ್ 1939 ಏಪ್ರಿಲ್ 8ರಂದು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ ಜನಿಸಿದರು. 2012ರಲ್ಲಿ ಗಂಗಾವತಿಯಲ್ಲಿ ನಡೆದ 78 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಂತರತಮ, ಅನಂತ-ಪೃಥ್ವಿ, ಒಳದನಿ, ತಾರಾಸಖ, ನೀವೇ ನಮಗೆ ದಿಕ್ಕು, ಹನಿಮಿನಿ, ಬೊಗಸೆ ಸೇರಿದಂತೆ ಹಲವು ಕಾವ್ಯಗಳನ್ನು ಮತ್ತು ಪ್ರಬಂಧ ಮತ್ತು ವಿಮರ್ಶೆ, ಜಾನಪದ, ಜೀವನಚಿತ್ರಗಳನ್ನೂ ರಚಿಸಿದ್ದಾರೆ.

77 ನೇ ಕನ್ನಡ ಸಾಹಿತ್ಯ ಸಮ್ಮೇಳನ-ಬೆಂಗಳೂರು

77 ನೇ ಕನ್ನಡ ಸಾಹಿತ್ಯ ಸಮ್ಮೇಳನ-ಬೆಂಗಳೂರು

ಪ್ರೊ.ಜಿ.ವೆಂಕಟಸುಬ್ಬಯ್ಯ: 2011ರಲ್ಲಿ ಬೆಂಗಳೂರಿನಲ್ಲಿ ನಡೆದ 77 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯನವರು ಜೀವಿ ಎಂದೇ ಪ್ರಸಿದ್ಧರು. 1913 ರಲ್ಲಿ ಮೈಸೂರಿನಲ್ಲಿ ಜನಿಸಿದ ಇವರು ಕನ್ನಡ ಭಾಷೆಗೆ ನೀಡಿದ ಕೊಡುಗೆ ಅಪಾರ. ನಿಘಂಟುತಜ್ಞ ಎಂದೇ ಕರೆಯಿಸಿಕೊಳ್ಳುವ ಜೀವಿಯವರ 'ಇಗೋ ಕನ್ನಡ' ಕೃತಿ, ಒಂದು ಸಂಗ್ರಾಹಕ ಕೃತಿ ಎನ್ನಿಸಿದೆ. ಪದ್ಮಶ್ರೀ, ಪಂಪ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ, ನಾಡೋಜ, ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ.

76ನೇ ಕನ್ನಡ ಸಾಹಿತ್ಯ ಸಮ್ಮೇಳನ ಗದಗ

76ನೇ ಕನ್ನಡ ಸಾಹಿತ್ಯ ಸಮ್ಮೇಳನ ಗದಗ

ಗೀತಾ ನಾಗಭೂಷಣ: 2010ರಲ್ಲಿ ಗದಗದಲ್ಲಿ ನಡೆದ 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಗೀತಾ ನಾಗಭೂಷಣ ಹುಟ್ಟಿದ್ದು ಕಲಬುರಗಿ ಜಿಲ್ಲೆಯ ಸಾವಳಗಿ ಎಂಬ ಹಳ್ಳಿಯಲ್ಲಿ. 1943 ಮಾರ್ಚ್ 25ರಂದು ಜನಿಸಿದ ಗೀತಾ ನಾಗಭೂಷಣ ನಾಡೋಜ, ಅತ್ತಿಮಬ್ಬೆ, ಕೇಂದ್ರಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆದಿದ್ದಾರೆ. ಬದುಕು, ತಾವರೆಯ ಹೂವು ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ಅವರು ನೀಡಿದ್ದಾರೆ.

75ನೇ ಕನ್ನಡ ಸಾಹಿತ್ಯ ಸಮ್ಮೇಳನ-ಚಿತ್ರದುರ್ಗ

75ನೇ ಕನ್ನಡ ಸಾಹಿತ್ಯ ಸಮ್ಮೇಳನ-ಚಿತ್ರದುರ್ಗ

ಎಲ್.ಬಸವರಾಜು: 2009ರಲ್ಲಿ ಕೋಟೆ ನಗರಿ ಚಿತ್ರದುರ್ಗದಲ್ಲಿ ನಡೆದಿದ್ದ 75 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಲ್ ಬಸವರಾಜು ಅವರು 1919 ಅಕ್ಟೋಬರ್ 5 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಇಡಗೂರಿನಲ್ಲಿ ಜನಿಸಿದರು. ಶೂನ್ಯ ಸಂಪಾದನೆ, ಕನ್ನಡ ಛಂದಸ್ಸು, ನಾಟಕ ತ್ರಿವೇಣಿ ಸೇರಿದಂತೆ ಹಲವು ಕೃತಿಗಳನ್ನು ರಚಿಸಿರುವ ಇವರಿಗೆ ಪಂಪಪ್ರಶಸ್ತಿ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

74 ನೇ ಕನ್ನಡ ಸಾಹಿತ್ಯ ಸಮ್ಮೇಳನ-ಉಡುಪಿ

74 ನೇ ಕನ್ನಡ ಸಾಹಿತ್ಯ ಸಮ್ಮೇಳನ-ಉಡುಪಿ

ಎಲ್.ಎಸ್.ಶೇಷಗಿರಿ ರಾವ್: 2008 ರಲ್ಲಿ ಉಡುಪಿಯಲ್ಲಿ ನಡೆದ 74 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಲ್.ಎಸ್.ಶೇಷಗಿರಿ ರಾವ್ ಜನಿಸಿದ್ದು ಬೆಂಗಳೂರಿನಲ್ಲಿ. 1925 ಫೆಬ್ರವರಿ 16 ರಂದು ಜನಿಸಿದ ಇವರು, ರಾಷ್ಟ್ರೋತ್ಥಾನ ಪರಿಷತ್ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಹಲವು ಚಿಕ್ಕ ಹೊತ್ತಿಗೆಗಳನ್ನು ಹೊರತಂದರು. ಸಣ್ಣಕಥೆಗಳ ಸಂಕಲನಗಳು, ಪಾಶ್ಚಾತ್ಯಸಾಹಿತ್ಯ ವಿಹಾರ, ಸಾಹಿತ್ಯ-ಬದುಕು, ಗ್ರೀಕ್ ರಂಗಭೂಮಿ ಮತ್ತು ನಾಟಕ, ಆಕಾಂಕ್ಷೆ ಮತ್ತು ಆಸ್ತಿ ಸೇರಿದಂತೆ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಮಾಸ್ತಿ ಪ್ರಶಸ್ತಿ, ರಾಜ್ಯೋತ್ಸವ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

73 ನೇ ಕನ್ನಡ ಸಾಹಿತ್ಯ ಸಮ್ಮೇಳನ -ಶಿವಮೊಗ್ಗ

73 ನೇ ಕನ್ನಡ ಸಾಹಿತ್ಯ ಸಮ್ಮೇಳನ -ಶಿವಮೊಗ್ಗ

ಪ್ರೊ. ಕೆ.ಎಸ್.ನಿಸಾರ್ ಅಹಮದ್ : ನಿತ್ಯೋತ್ಸವ ಕವಿ ಎಂದೇ ಪ್ರಸಿದ್ಧಿ ಪಡೆದ ಕವಿ ಪ್ರೊ. ಕೆ.ಎಸ್.ನಿಸಾರ್ ಅಹಮದ್ ಅವರು 2007 ರಲ್ಲಿ ಶಿವಮೊಗ್ಗದಲ್ಲಿ ನಡೆದ 73 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1936 ಫೆಬ್ರುವರಿ 5 ರಲ್ಲಿ ಜನಿಸಿದ ಇವರ ಮೊದಲ ಭಾವಗೀತೆಗಳ ಧ್ವನಿಮುದ್ರಿಕೆ ನಿತ್ಯೋತ್ಸವ ಹೊರಬಂದು, ಕನ್ನಡ ಸುಗಮ ಸಂಗೀತ ಕ್ಷೇತ್ರದಲ್ಲಿ ಭರ್ಜರಿ ಯಶಸ್ಸು ಪಡೆಯಿತು. ಮನಸು ಗಾಂಧಿ ಬಜಾರು, ನಿತ್ಯೋತ್ಸವ, ನಾನೆಂಬ ಪರಕೀಯ, ನೆನೆದವರ ಮನದಲ್ಲಿ, ಸಂಜೆ ಐದರ ಮಳೆ ಮುಂತಾದವು ಅವರ ಪ್ರಮುಖ ಕವನ ಸಂಕಲನಗಳು. ಅವರಿಗೆ ರಾಜ್ಯೋತ್ಸವ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ.

English summary
Manu Baligar, president of Kannada sahitya Parishath announces Chanadrashekhara Patil as president of 83rd Akhila Bharatiya Kannada Sahitya Sammelana which will be taking place at Mysuru on Nov.24th to 26th. Here is a list of 10 presidents of recent Kannada Sahiyta Sammelana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X