ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ: ಅಯ್ಯಯ್ಯೋ ಕಟ್ಟಿಗೆ ಬಳಕೆಗೆ ಮರಳಿದ ಉಜ್ವಲ ಯೋಜನೆ ಫಲಾನುಭವಿಗಳು ಎಷ್ಟು?

|
Google Oneindia Kannada News

ವಿಧಾನಸಭೆ, ಸೆ. 16: ವಿಧಾನಸಭೆ ಅಧಿವೇಶನ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಹಲವು ಜ್ವಲಂತ ಸಮಸ್ಯೆಗಳ ಕುರಿತು ಸನದಲ್ಲಿ ಸಮಗ್ರ ಚರ್ಚೆ ಆಗುತ್ತಿದೆ. ಪ್ರಸ್ತುತ ಬೆಲೆ ಏರಿಕೆ ವಿಚಾರ ನಾಡಿನ ಜನರಿಗೆ ಕೊರೊನಾ ಜೊತೆಗೆ ಹೊಸ ಸಂಕಷ್ಟ ತಂದಿಟ್ಟಿದೆ. ಇದೇ ವಿಚಾರವಾಗಿ ನಿಯಮ 69ರಡಿ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯುತ್ತಿದೆ. ಆಡಳಿತ ಪಕ್ಷದ ಸದಸ್ಯರ ಸಮರ್ಥನೆ ಮಧ್ಯೆ ಮಾಜಿ ಹಣಕಾಸು ಸಚಿವರೂ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಂಕಿ-ಅಂಶದ ಮೂಲಕ ರಾಜ್ಯ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ಬೆಲೆ ಏರಿಕೆ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸುದೀರ್ಘವಾಗಿ ಮಾತನಾಡಿದ್ದಾರೆ. ಅವರು ಮಾತನಾಡುವಾಗ ಆಡಳಿತ ಪಕ್ಷದ ಕೆಲವು ಸದಸ್ಯರು ಮಧ್ಯ ಪ್ರವೇಶ ಮಾಡಿ ಮಾತನ್ನು ತಡೆಯಲು ನೋಡಿದರೂ, ಸಿದ್ದರಾಮಯ್ಯ ಅವರು ಮಂಡಿಸಿದ ನೈಜ ಮಾಹಿತಿ ಎದುರು ಆ ಪ್ರಯತ್ನ ಮಂಕಾಗುವಂತಾಗಿದೆ. ಅಷ್ಟಕ್ಕೂ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತು ಪ್ರಸ್ತಾಪಿಸಿ ಏನೇನು ಮಾತನಾಡಿದ್ದಾರೆ? ಸಿದ್ದರಾಮಯ್ಯ ಅವರ ಭಾಷಣ ಅಕ್ಷರ ರೂಪದಲ್ಲಿ ಸಮಗ್ರವಾಗಿ ಮುಂದಿದೆ.

ನಿಯಮ 69ರಡಿ ಇಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಮಾತನಾಡಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಕಾಶ ಮಾಡಿ ಕೊಟ್ಟಿದ್ದಾರೆ. ಈ ವಿಷಯದ ಬಗ್ಗೆ ಪ್ರಸ್ತಾವನೆ ಮಂಡಿಸಿ ಮೊದಲು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಅಂಕಿ ಅಂಶದೊಂದಿಗೆ ಬೆಲೆ ಏರಿಕೆ ಕುರಿತು ಇಡೀ ರಾಜ್ಯದ ಜನರ ಗಮನ ಸೆಳೆದಿದ್ದಾರೆ.

"ಅಗತ್ಯ ವಸ್ತುಗಳ ಬೆಲೆ ಇಂದು ಗಗನ ಮುಟ್ಟಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್, ದಿನಸಿ, ಔಷಧ, ಪ್ರಯಾಣ ದರ ಹೀಗೆ ಎಲ್ಲಾ ಜೀವನಾವಶ್ಯಕ ವಸ್ತುಗಳ, ಸೇವೆಗಳ ಬೆಲೆ ಮಿತಿಮೀರಿದೆ. ಇದರಿಂದ ಬಡ, ಮಧ್ಯಮ ವರ್ಗದ ಜನರು ಜೀವನ ಮಾಡಲು ಕಷ್ಟಪಡಬೇಕಾಗಿದೆ. ಇದನ್ನೇ ನೀವು ಅಚ್ಚೇದಿನ್ ಎಂದು ಕರೆಯುತ್ತೀರ?" ಎಂದು ತಮ್ಮ ಎದುರಿಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರನ್ನು ಸಿದ್ದರಾಮಯ್ಯ ಅವರು ತರಾಟೆಗೆ ತೆಗೆದುಕೊಂಡರು. ಜತೆಗೆ ಪ್ರಧಾನಿ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಉಜ್ವಲ್ ಯೋಜನೆಯ ಕುರಿತು ಮಹತ್ವದ ಸ್ಫೋಟಕ ಮಾಹಿತಿಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಟ್ಟಿದ್ದಾರೆ!

ಸರ್ಕಾರಕ್ಕೆ ಕನಿಷ್ಠ ಸೌಜನ್ಯವೂ ಇಲ್ಲ!

ಸರ್ಕಾರಕ್ಕೆ ಕನಿಷ್ಠ ಸೌಜನ್ಯವೂ ಇಲ್ಲ!

ಜೊತೆಗೆ, "ಕೊರೊನಾ ಸಾಂಕ್ರಾಮಿಕ ತಡೆ, ಬೆಲೆ ನಿಯಂತ್ರಣ ಮುಂತಾದ ಗಂಭೀರ ವಿಚಾರಗಳ ಬಗ್ಗೆ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಆಸಕ್ತಿಯಾಗಲೀ, ಪ್ರತಿಪಕ್ಷಗಳ ಮಾತು ಕೇಳುವ ಸೌಜನ್ಯವಾಗಲೀ ರಾಜ್ಯ ಸರ್ಕಾರಕ್ಕೆ ಇಲ್ಲ. ಸದನ ಕರೆಯಲು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಖಂಡನೀಯ. ಆರು ತಿಂಗಳಿಗೊಮ್ಮೆ ಸದನ ಕರೆಯಲು ಅವಕಾಶ ನೀಡಿರುವ ಕಾನೂನನ್ನು ಬಳಕೆ ಮಾಡಿಕೊಂಡು ಆರು ತಿಂಗಳಿಗೆ ಒಂದೇ ಬಾರಿ ಸದನ ನಡೆಸೋದು ಸರಿಯಲ್ಲ. ಕನಿಷ್ಟ 60 ದಿನ ಸದನ ನಡೆಸಬೇಕು ಎಂದು ನಾವೇ ಕಾನೂನು ಮಾಡಿದ್ದೇವೆ, ಆ ಕಾನೂನಿಗೆ ಸರ್ಕಾರ ಕವಡೆ ಕಾಸಿನ ಬೆಲೆ ಕೊಡುತ್ತಿಲ್ಲ" ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

"ಕೊರೊನಾದಿಂದಾಗಿ ಸದನ ನಡೆಸಲು ಸರಿಯಾಗಿ ಸಮಯ ಸಿಗುತ್ತಿಲ್ಲ ಎಂಬ ಕುಂಟು ನೆಪವನ್ನು ನಾನು ಒಪ್ಪಲ್ಲ. ಈ ವರ್ಷ ಸದನ ನಡೆದಿರೋದು 20 ದಿನ ಮಾತ್ರ, ಈಗ 10 ದಿನ ಸದನ ನಡೆಸಲು ನೋಟಿಸ್ ನೀಡಿದ್ದೀರಿ, ಇದನ್ನು ಕನಿಷ್ಟ ಇಪ್ಪತ್ತು ದಿನಕ್ಕೆ ಹೆಚ್ಚಿಸಬೇಕು ಎಂದು ಬ್ಯುಸಿನೆಸ್ ಅಡ್ವೈಸರಿ ಕಮೀಟಿಗೆ ಸಲಹೆ ನೀಡಿದ್ದೇನೆ. ಕೇವಲ ಹತ್ತು ದಿನಗಳಲ್ಲಿ ಯಾವ ಪ್ರಮುಖ ವಿಚಾರಗಳ ಬಗ್ಗೆಯೂ ವಿಸ್ತೃತ ಚರ್ಚೆ ನಡೆಸಲು ಸಾಧ್ಯವಿಲ್ಲ ಎಂಬುದು ನನ್ನ ಅನಿಸಿಕೆ" ಎಂದು ವಿಧಾನ ಮಂಡಲ ಅಧಿವೇಶನವನ್ನು ವಿಸ್ತರಣೆ ಮಾಡುವಂತೆ ಪರೋಕ್ಷ ಒತ್ತಾಯ ಮಾಡಿದರು.

ದಿ. ಅಟಲ್ ಬಿಹಾರಿ ಪ್ರತಿಭಟನೆ ನೆನಪಿಸಿದ ಸಿದ್ದರಾಮಯ್ಯ!

ದಿ. ಅಟಲ್ ಬಿಹಾರಿ ಪ್ರತಿಭಟನೆ ನೆನಪಿಸಿದ ಸಿದ್ದರಾಮಯ್ಯ!

"ಹಿಂದೆ 12-11-1973ರಲ್ಲಿ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಪೆಟ್ರೋಲ್ ಬೆಲೆ ಕೇವಲ 7 ಪೈಸೆ ಹೆಚ್ಚಾಗಿದ್ದಕ್ಕೆ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ತಿಗೆ ಎತ್ತಿನಗಾಡಿಯಲ್ಲಿ ಬಂದಿದ್ದರು. ಈ ಬೆಲೆಯೇರಿಕೆಯನ್ನು ಅವರು ಕ್ರಿಮಿನಲ್ ಲೂಟ್ ಎಂದಿದ್ದರು. ನಾನೀಗ ಅದಕ್ಕಿಂತ ಕೀಳು ಪದ ಬಳಕೆ ಮಾಡದೆ, ಅದೇ ಪದವನ್ನು ಬಳಕೆ ಮಾಡುತ್ತೇನೆ. ಈಗಿನ ಬಿಜೆಪಿ ಸರ್ಕಾರವೂ "ಕ್ರಿಮಿನಲ್ ಲೂಟಿ" ಮಾಡುತ್ತಿದೆ" ಎಂದು ರಾಜ್ಯ ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇತಿಹಾಸ ನೆನಪಿಸಿಕೊಟ್ಟರು.

"ಗ್ಯಾಸ್, ಪೆಟ್ರೋಲ್ ಬೆಲೆ ಏರಿಕೆಯಾಗಿದ್ದಕ್ಕೆ ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡುತ್ತಿವೆ, ಬೆಲೆ ನಿಯಂತ್ರಣ ನಮ್ಮ ಕೈಲಿ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳುತ್ತಾರೆ. ಬೆಲೆಯೇರಿಕೆಗೆ ಉತ್ತರ ನೀಡಬೇಕಾದವರು ತೈಲ ಕಂಪನಿಗಳ ಎಂ.ಡಿ ಗಳೋ ಅಥವಾ ಕೇಂದ್ರ ಸರ್ಕಾರವೋ? ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಬಿಜೆಪಿಯವರು ಪೆಟ್ರೋಲ್ ಬೆಲೆ ಏರಿಕೆಯಾದಾಗ ಪ್ರತಿಭಟನೆ ಮಾಡುತ್ತಿದ್ದುದ್ದು ತೈಲ ಕಂಪನಿಯ ವಿರುದ್ಧವೋ ಅಥವಾ ಕೇಂದ್ರ ಸರ್ಕಾರದ ವಿರುದ್ಧವೋ ಎಂದು ನೆನಪಿಸಿಕೊಳ್ಳಲಿ" ಎಂದು ಕೇಂದ್ರ ಬಿಜೆಪಿ ಸರ್ಕಾರವನ್ನು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಏಳು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾದ ಅಬಕಾರಿ ಸುಂಕ!

ಏಳು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾದ ಅಬಕಾರಿ ಸುಂಕ!

"ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಬೇಕಾಬಿಟ್ಟಿ ಏರಿಕೆ ಮಾಡಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಮೇಲೆ ರೂ.3.45 ತೆರಿಗೆ ಇತ್ತು, ಇಂದು ರೂ.31.84 ಆಗಿದೆ. ಅಂದರೆ ಸುಮಾರು ಒಂಭತ್ತು ಪಟ್ಟು ಹೆಚ್ಚಾಗಿದೆ. ಅದೇ ರೀತಿ ಪೆಟ್ರೋಲ್ ಮೇಲೆ ರೂ.9.21 ಅಬಕಾರಿ ಸುಂಕ ಇತ್ತು, ಇಂದು ರೂ.32.98 ಆಗಿದೆ.‌ ಅಂದರೆ ಮೂರು ಪಟ್ಟು ಹೆಚ್ಚಾಗಿದೆ. ಇದರಿಂದ ಡೀಸೆಲ್ ಪೆಟ್ರೋಲ್ ಬೆಲೆ ಹೆಚ್ಚಾಗಿ, ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದೆ. ಇದರಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ." ಎಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಸದನದಲ್ಲಿ ಸಿದ್ದರಾಮಯ್ಯ ವಿವರಿಸಿದರು.

"ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯು.ಪಿ.ಎ ಸರ್ಕಾರದ ಕಾಲದಲ್ಲಿ ಡೀಸೆಲ್ ಬೆಲೆ ಗರಿಷ್ಠ ರೂ.47 ಇತ್ತು, ಈಗ ರೂ‌.95 ಆಗಿದೆ ಮತ್ತು ಪೆಟ್ರೋಲ್ ಬೆಲೆ ರೂ‌. 74 ಇತ್ತು, ಇಂದು ರೂ. 106 ಆಗಿದೆ. 2012-13 ರಲ್ಲಿ ಒಂದು ಬ್ಯಾರಲ್ ಕಚ್ಚಾತೈಲ ಬೆಲೆ 120 ಡಾಲರ್ ಇತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಅದು 105 ಡಾಲರ್ ಗೆ ಇಳಿಕೆ ಕಂಡಿತು, ಈಗ ಆದರೆ ಅದರಿಂದ ಜನತೆಗೆ ಯಾವ ಪ್ರಯೋಜನವೂ ಆಗಿಲ್ಲ." ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

"ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಲು ಮುಖ್ಯ ಕಾರಣ ಕೇಂದ್ರ ಸರ್ಕಾರ ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು. ಮನಮೋಹನಸಿಂಗ್ ಅವರು ಪ್ರಧಾನಿಗಳಾಗಿದ್ದಾಗ ಪೆಟ್ರೋಲ್ ಮೇಲೆ ಕೇಂದ್ರ ವಿಧಿಸುತ್ತಿದ್ದ ತೆರಿಗೆ (ಅಡಿಷನಲ್ ಎಕ್ಸೈಜ್ ಡ್ಯೂಟಿ) 9.21 ರೂಪಾಯಿ, ಡೀಸೆಲ್ ಮೇಲೆ 3.45 ರೂಪಾಯಿ. ಈಗ ಪೆಟ್ರೋಲ್ ಮೇಲೆ 32.98 ರೂಪಾಯಿ ಮತ್ತು ಡೀಸೆಲ್ ಮೇಲೆ 31.84 ರೂಪಾಯಿ ಆಗಿದೆ.

ಆಯಿಲ್ ಬಾಂಡ್ ಪ್ರಾರಂಭಿಸಿದ್ದೆ ವಾಜಪೇಯಿ ಸರ್ಕಾರ!

ಆಯಿಲ್ ಬಾಂಡ್ ಪ್ರಾರಂಭಿಸಿದ್ದೆ ವಾಜಪೇಯಿ ಸರ್ಕಾರ!

ಆಯಿಲ್ ಬಾಂಡ್ ಗಳ ಪರಿಕಲ್ಪನೆ ಪ್ರಾರಂಭಿಸಿದ್ದೆ ವಾಜಪೇಯಿಯವರ ಸರ್ಕಾರ. ಆನಂತರ ಮನಮೋಹನ ಸಿಂಗ್ ಸರ್ಕಾರ ಈ ಯೋಜನೆಯನ್ನು ಮುಂದುವರೆಸಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಾದಾಗ ಅದರ ಹೊರೆಯನ್ನು ಸಾರ್ವಜನಿಕರಿಗೆ ವರ್ಗಾಯಿಸದಂತೆ ಮಾಡಲು ಹಾಗೂ ಸರ್ಕಾರಿ ಸ್ವಾಮ್ಯದ ಆಯಿಲ್ ಕಂಪೆನಿಗಳು ನಷ್ಟ ವಾಗದಂತೆ ನೋಡಿಕೊಳ್ಳಲು ಈ ಆಯಿಲ್ ಬಾಂಡಗಳನ್ನು ಖರೀದಿಸಲಾಯಿತು ಎಂದು ಸದನಕ್ಕೆ ಸಿದ್ದರಾಮಯ್ಯ ವಿವರಿಸಿದರು.

ಅದರಿಂದಾಗಿ ಮನಮೋಹನಸಿಂಗ್ ಅವರ ಕಾಲದಲ್ಲಿ ಕಚ್ಚಾ ತೈಲಬೆಲೆ 125-140 ಡಾಲರ್‌ಗೆ ಏರಿಕೆಯಾದರೂ ಸಹ ಪೆಟ್ರೋಲ್ ಬೆಲೆ 75 ರೂಪಾಯಿ ಮೀರಿರಲಿಲ್ಲ. ಡೀಸೆಲ್ ಬೆಲೆ 47 ರೂಪಾಯಿ ದಾಟಿರಲಿಲ್ಲ. ಆದರೆ ಈಗ 45- 65 ಡಾಲರ್ ಇದ್ದಾಗಲೂ ಪೆಟ್ರೋಲ್ ಬೆಲೆ 105 ರೂ ಆಗಿದೆ. ಡೀಸೆಲ್ ಬೆಲೆ 100 ರೂ ಆಗಿದೆ. ಇದಕ್ಕೆ ಕಾರಣ ಕೇಂದ್ರ, ರಾಜ್ಯಗಳೆರಡೂ ಸೇರಿ 65 ರೂಪಾಯಿಗಳಷ್ಟು ತೆರಿಗೆ ವಸೂಲಿ ಮಾಡುತ್ತಿವೆ ಎಂದು ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಬಗ್ಗೆ ವಿವರಿಸಿದರು.

ಡೀಸೆಲ್ ದರ ಕಡಿಮೆ ಇದ್ದಷ್ಟು ದೇಶದ ಆರ್ಥಿಕ ಪ್ರಗತಿ

ಡೀಸೆಲ್ ದರ ಕಡಿಮೆ ಇದ್ದಷ್ಟು ದೇಶದ ಆರ್ಥಿಕ ಪ್ರಗತಿ

ತೈಲ ಬಾಂಡ್ ಗಳನ್ನು ಖರೀದಿಸಿದ ಕಾರಣಕ್ಕಾಗಿಯೆ ಜನರಿಗೆ ಹೆಚ್ಚು ಹೊರೆ ಬೀಳಲಿಲ್ಲ. ಅದರಲ್ಲೂ ಡೀಸೆಲ್ ದರಗಳು ಕಡಿಮೆ ಇದ್ದಷ್ಟು ದೇಶದ ಆರ್ಥಿಕ ಪ್ರಗತಿ ವೇಗವಾಗಿರುತ್ತದೆ. ಯಾಕೆಂದರೆ ಎಲ್ಲ ಉತ್ಪಾದನೆಗಳು, ಸಾಗಣೆಗಳು ಡೀಸೆಲ್‌ನ್ನು ಅವಲಂಬಿಸಿರುತ್ತವೆ. ಈ ಸಾಮಾನ್ಯ ಜ್ಞಾನ ಇದ್ದ ಕಾರಣಕ್ಕೆ ಮನಮೋಹನಸಿಂಗ್‌ ಅವರು ಡೀಸೆಲ್ ಬೆಲೆಯನ್ನು 47 ರೂಪಾಯಿಗಳ ಒಳಗೆ ಇಟ್ಟಿದ್ದರು.

ಮನಮೋಹನಸಿಂಗ್‌ ಅವರು ತೈಲ ಬಾಂಡ್‌ಗಳನ್ನು ಖರೀದಿಸಿದ ಕಾರಣಕ್ಕಾಗಿಯೆ ಕೇಂದ್ರ ಸರ್ಕಾರದ ಅಧೀನದಲ್ಲಿಯ ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ್ ಪೆಟ್ರೋಲಿಯಂ ಮುಂತಾದ ಕಂಪೆನಿಗಳೂ ನಷ್ಟ ಅನುಭವಿಸಲಿಲ್ಲ. ಬದಲಾಗಿ ನವರತ್ನ ಕಂಪೆನಿಗಳಾಗಿ ಬೆಳೆದವು. ಒಂದೊಂದು ಕಂಪೆನಿಯೂ ಲಕ್ಷಾಂತರ ಕೋಟಿಗಳನ್ನು ತೆರಿಗೆ, ಡಿವಿಡೆಂಟುಗಳ ರೀತಿಯಲ್ಲಿ ಸರ್ಕಾರಕ್ಕೆ ಪಾವತಿ ಮಾಡಿವೆ.

ಈಗ ಈ ಕಂಪೆನಿಗಳನ್ನೆಲ್ಲ ಅದಾನಿ, ಅಂಬಾನಿ, ಸೌದಿ ಆರಾಮ್ಕೊ ಮುಂತಾದ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಮಾರಲು ಹೊರಟಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಯು.ಪಿ.ಎ. ಸರ್ಕಾರ ಅಧಿಕಾರದಲ್ಲಿದ್ದಾಗ 9-9-2012 ರಲ್ಲಿ ರೂ. 5,762 ಕೋಟಿಗಳನ್ನು ತೀರಿಸಿತ್ತು. ಪ್ರಧಾನಿ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 7-3-2015 ಮತ್ತು 23-3-2015ರಲ್ಲಿ ಕೇವಲ ರೂ.3,500 ಬಾಂಡ್ ಮಾತ್ರ ಮೆಚ್ಯೂರ್ ಆಗಿತ್ತು. ಅದನ್ನು ಮಾತ್ರ ತೀರಿಸಲಾಗಿತ್ತು. ಅದರ ಜೊತೆಗೆ ಪ್ರತಿ ವರ್ಷ ಬಡ್ಡಿ ತೀರಿಸಲಾಗುತ್ತಿದೆ. ಪ್ರತಿ ವರ್ಷ ತೀರಿಸಬೇಕಾದ ಬಡ್ಡಿ ರೂ.9989.96 ಕೋಟಿ ಅಂದರೆ 10 ಸಾವಿರ ಕೋಟಿಗಳು.

ಮೋದಿ ತೀರಿಸಿದ ಸಾಲವೆಷ್ಟು? ಜನರಿಗೆ ಯಾಕೆ ಸುಳ್ಳು ಹೇಳುತ್ತಿದ್ದೀರಿ?

ಮೋದಿ ತೀರಿಸಿದ ಸಾಲವೆಷ್ಟು? ಜನರಿಗೆ ಯಾಕೆ ಸುಳ್ಳು ಹೇಳುತ್ತಿದ್ದೀರಿ?

ಈ ವರ್ಷ ತೀರಿಸಬೇಕಾದ ಅಸಲು 10 ಸಾವಿರ ಕೋಟಿ. 2022 ರಲ್ಲಿ ಅಸಲು ಪಾವತಿಸುವಂತಿಲ್ಲ. 2023 ರಲ್ಲಿ 26150 ಕೋಟಿ ತೀರಿಸಬೇಕು. 2024 ರಲ್ಲಿ ಚುನಾವಣೆ ಬರುತ್ತದೆ. ಆಗ ಹೊಸ ಸರ್ಕಾರ ಬರುತ್ತದೆ. ಹೊಸ ಸರ್ಕಾರ ತೀರಿಸಬೇಕಾದ ಮೊತ್ತ 37,306 ಕೋಟಿ ರೂ. ಎಂದು ಕೇಂದ್ರ ಸರ್ಕಾರದ ನಿಯಮವನ್ನು ಸದನಕ್ಕೆ ಸಿದ್ದರಾಮಯ್ಯ ವಿವರಿಸಿದರು.

ಅಂದರೆ ಪ್ರಧಾನಿ ಮೋದಿ ಅವರ ಸರ್ಕಾರ 2014 ರಿಂದ 2024 ರ ವರೆಗೆ ತೀರಿಸುವ ಒಟ್ಟಾರೆ ಅಸಲು ಮೊತ್ತ 40,050 ಕೋಟಿ ಮಾತ್ರ. ಬಡ್ಡಿ ಮೊತ್ತ ಸುಮಾರು 70 ಸಾವಿರ ಕೋಟಿ. ಎರಡೂ ಸೇರಿದರೆ 1 ಲಕ್ಷದ 10 ಸಾವಿರದ 50 ಕೋಟಿ ಮಾತ್ರ. ಅದೂ 2024 ರ ಮಾರ್ಚ್‌ ವರೆಗೆ. ಆದರೆ ಕೇಂದ್ರ ಸರ್ಕಾರ ಇದುವರೆಗೆ ಪೆಟ್ರೋಲ್, ಡೀಸೆಲ್‍ಗಳಿಂದ ಜನರಿಂದ ದೋಚಿಕೊಂಡಿರುವ ತೆರಿಗೆ ಹಣ ಸುಮಾರು 20 ಲಕ್ಷ ಕೋಟಿ. 2020 ರಲ್ಲೆ 3.45 ಲಕ್ಷ ಕೋಟಿ ಹಣವನ್ನು ಸಂಗ್ರಹಿಸಲಾಗಿದೆ. ಇದು ಯಾವ ಲೆಕ್ಕ? ಜನರಿಗೆ ಯಾಕೆ ಸುಳ್ಳು ಹೇಳುತ್ತಿದ್ದೀರಿ? ಎಂದು ನೇರವಾಗಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರವನ್ನು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ಎರಡು ಕಾರಣಕ್ಕೆ ರಾಜ್ಯದಲ್ಲಿ ಬೆಲೆ ಏರಿಕೆಯಾಗಿದೆ. ಒಂದು, ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಏರಿಕೆಯಾದ ಕಾರಣ ವಸ್ತುಗಳ ಬೆಲೆ ಏರಿಕೆಯಾಗಿದೆ. ಅದರಲ್ಲೂ ಡೀಸೆಲ್ ಬೆಲೆ ಏರಿಕೆಯಾದರೆ ನಮ್ಮ ಮನೆಗೆ ಬರುವ ಪ್ರತಿ ಕಾಳು ಅಕ್ಕಿ, ಬೇಳೆಗಳ ಬೆಲೆ ಹೆಚ್ಚಾಗುತ್ತವೆ. ವಸ್ತುಗಳ ಉತ್ಪಾದನಾ ವೆಚ್ಚ ಮತ್ತು ಸಾಗಣೆಯ ವೆಚ್ಚಗಳು ಹೆಚ್ಚುತ್ತವೆ. ಈ ಸತ್ಯ ತಿಳಿದಿದ್ದ ಕಾರಣಕ್ಕಾಗಿಯೆ ಮನಮೋಹನ ಸಿಂಗ್ ಅವರು ಡೀಸೆಲ್ ಬೆಲೆಯನ್ನು 46 ರೂಪಾಯಿಗಳ ಒಳಗೆ ಇರಿಸಿದ್ದರು. ಪೆಟ್ರೋಲ್ ಮೇಲೆ 9.21 ರೂಗಳಷ್ಟು ತೆರಿಗೆ ವಿಧಿಸಿದರೆ, ಡೀಸೆಲ್ ಮೇಲೆ ಕೇವಲ 3.45 ರೂಗಳಷ್ಟು ಅಡಿಷನಲ್ ಎಕ್ಸೈಜ್ ಡ್ಯೂಟಿ ವಿಧಿಸಿದ್ದರು.

ಡೀಸೆಲ್ ಮೇಲೆ ಎಕ್ಸೈಜ್ ಡ್ಯೂಟಿಯನ್ನು ಹೆಚ್ಚಿಸಿದ ಮೋದಿ ಸರ್ಕಾರ!

ಡೀಸೆಲ್ ಮೇಲೆ ಎಕ್ಸೈಜ್ ಡ್ಯೂಟಿಯನ್ನು ಹೆಚ್ಚಿಸಿದ ಮೋದಿ ಸರ್ಕಾರ!

ನಮ್ಮ ರಾಜ್ಯದಲ್ಲಿ ಪೆಟ್ರೋಲ್ ದರ 105 ರೂಪಾಯಿಗಳನ್ನು ದಾಟಿದೆ. 2012 ರಲ್ಲಿ ಕಚ್ಚಾ ತೈಲದ ಬೆಲೆ 125.45 ಡಾಲರ್ ಇದ್ದಾಗ ಪ್ರತಿ ಲೀಟರ್ ಡೀಸೆಲ್ ಬೆಲೆ 41.91 ರೂ., ಪ್ರತಿ ಲೀಟರ್ ಪೆಟ್ರೋಲ್ 78.57 ರೂ. ಇತ್ತು. 2014 ರಲ್ಲಿ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಪ್ರತಿ ಬ್ಯಾರಲ್ ಕಚ್ಚಾ ತೈಲಕ್ಕೆ 105.52 ಡಾಲರ್‌ಗೆ ಇಳಿಯಿತು. ಆಗ ಪ್ರತಿ ಲೀಟರ್ ಡೀಸೆಲ್ ಬೆಲೆ 55.48 ರೂ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 80.11 ರೂ. ಮಾರಾಟ ಮಾಡಿದರು. 2017 ರಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 47.56 ಡಾಲರ್‌ಗಳಿಗೆ ಇಳಿಯಿತು. ಆದರೆ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರ ವಿಧಿಸುವ ಅಡಿಷನಲ್ ಎಕ್ಸೈಜ್ ಡ್ಯೂಟಿಯನ್ನು ಡೀಸೆಲ್ ಮೇಲೆ 15.83 ರೂ. ಏರಿಸಿದರು, ಪೆಟ್ರೋಲ್ ಮೇಲೆ 19.98 ರೂ.ಗೆ ಏರಿಸಿದರು. ಅದಕ್ಕೂ ಮೊದಲು 2013 ರಲ್ಲಿ ಡೀಸೆಲ್ ಮೇಲೆ ರೂ. 3.45 ಪೆಟ್ರೋಲ್ ಮೇಲೆ ರೂ.9.21 ಗಳನ್ನು ಅಡಿಷನಲ್ ಎಕ್ಸೈಜ್ ಡ್ಯೂಟಿ ಎಂದು ಸಂಗ್ರಹ ಮಾಡಲಾಗುತ್ತಿತ್ತು ಎಂದು ಕೇಂದ್ರ ಸರ್ಕಾರ ಹೇರಿರುವ ಸುಂಕದ ವಿವರಣೆಯನ್ನು ಸಿದ್ದರಾಮಯ್ಯ ನಾಡಿಗೆ ಕೊಟ್ಟಿದ್ದಾರೆ.

ಇಂಧನ ಬೆಲೆ ಹೆಚ್ಚಳಕ್ಕೆ ತಾಲಿಬಾನ್ ಕಾರಣ ಅಂದರೆ ಹೇಗೆ?

ಇಂಧನ ಬೆಲೆ ಹೆಚ್ಚಳಕ್ಕೆ ತಾಲಿಬಾನ್ ಕಾರಣ ಅಂದರೆ ಹೇಗೆ?

ಜೊತೆಗೆ 2017 ರಲ್ಲಿ ಅಡಿಷನಲ್ ಎಕ್ಸೈಜ್ ಡ್ಯೂಟಿಯನ್ನು ಹೆಚ್ಚು ಮಾಡಿದ ಕೂಡಲೇ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 54.78 ರೂ., ಪೆಟ್ರೋಲ್ ಬೆಲೆ 76.55 ರೂ. ಏರಿಕೆಯಾಯಿತು. ಆದರೆ ಕಳೆದ ಜೂನ್ 01, 2020 ರಲ್ಲಿ ಕೇಂದ್ರವು ತನ್ನ ಅಡಿಷನಲ್ ಎಕ್ಸೈಜ್ ಡ್ಯೂಟಿಯನ್ನು ಡೀಸೆಲ್ ಮೇಲೆ 31.83 ರೂ., ಪೆಟ್ರೋಲ್ ಮೇಲೆ 32.98 ರೂ. ಗಳನ್ನು ವಿಧಿಸಲಾರಂಭಿಸಿತು. ಅದರ ಪರಿಣಾಮವಾಗಿ ಇಂದು ರಾಜ್ಯದಲ್ಲಿ ಪೆಟ್ರೋಲ್ ಬೆಲೆ 105 ರೂ. ಗಳಿಗೆ ಮತ್ತು ಡೀಸೆಲ್ ಬೆಲೆ 96.61 ರೂ. ಗಳಿಗೆ ಏರಿಕೆಯಾಗಿದೆ.

ಇದೇ ಮಾರ್ಚ್‌ನಲ್ಲಿ ನಾನು ಬಜೆಟ್ ಮೇಲೆ ಮಾತನಾಡಿದಾಗ ಡೀಸೆಲ್ ಬೆಲೆ 89 ರೂಪಾಯಿ ಇತ್ತು. ಈಗ 97 ರೂ ಆಗಿದೆ. ಅಂದರೆ ಪ್ರತಿ ಲೀಟರ್ ಮೇಲೆ 8 ರೂ ಜಾಸ್ತಿಯಾಗಿದೆ. ಜನವರಿಯಲ್ಲಿ 81 ರೂ ಗಳಿದ್ದವು. ಜನವರಿಗೆ ಹೋಲಿಸಿದರೆ ಪ್ರತಿ ಲೀಟರ್ ದರ 15 ರೂಪಾಯಿ ಜಾಸ್ತಿಯಾಗಿವೆ. ಪೆಟ್ರೋಲ್ ವಿಚಾರಕ್ಕೆ ಬಂದರೆ ಜನವರಿಯಲ್ಲಿ 86 ರೂಪಾಯಿ ಇತ್ತು. ಈಗ 105 ರೂ ದಾಟಿದೆ. ಅಂದರೆ ಒಂದು ಲೀಟರ್ ಮೇಲೆ 20 ರೂಪಾಯಿ ಜಾಸ್ತಿಯಾಗಿದೆ. ಬೆಂಗಳೂರಿನಲ್ಲಿ ಮಾರ್ಚಿನಲ್ಲಿ 96 ರೂ ಇತ್ತು. ಮಾರ್ಚ್ ನಿಂದ ಈಚೆಗೆ 11 ರೂಪಾಯಿ ಜಾಸ್ತಿಯಾಗಿದೆ.

ಕಚ್ಚಾತೈಲ ಬೆಲೆ ಆಧರಿಸಿ ಪೆಟ್ರೋಲ್ ನ ಇಂದಿನ ಮೂಲ ಬೆಲೆ ರೂ. 38, ರಾಜ್ಯ ಹಾಗೂ ಕೇಂದ್ರ ಸರ್ಕಾರದ ತೆರಿಗೆ ಒಟ್ಟು 67 ರೂ. ಹೀಗಾಗಿ ಪೆಟ್ರೋಲ್ ಬೆಲೆ ಲೀಟರ್‌ಗೆ 105 ರೂ. ದಾಟಿದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ, ತಾಲಿಬಾನ್ ಕಾರಣ ಅಂದರೆ ಹೇಗೆ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

Recommended Video

ಕೊಹ್ಲಿ ನಂತರ ರೋಹಿತ್ ಮಾತ್ರ ಅಲ್ಲ ನಾಯಕತ್ವದ ರೇಸ್ ನಲ್ಲಿರೋ ಈ ಮೂವರು ಯಾರು? | Oneindia Kannada
ಕಟ್ಟಿಗೆ ಒಲೆ ಬಳಕೆಗೆ ಮರಳಿದ ಉಜ್ವಲ ಯೋಜನೆ ಫಲಾನುಭವಿಗಳು!

ಕಟ್ಟಿಗೆ ಒಲೆ ಬಳಕೆಗೆ ಮರಳಿದ ಉಜ್ವಲ ಯೋಜನೆ ಫಲಾನುಭವಿಗಳು!

ಗ್ಯಾಸ್ ಬೆಲೆ ಹಿಂದೆ 414 ರೂ. ಇವತ್ತು 980 ರೂ. ಆಗಿದೆ. ಸಬ್ಸಿಡಿ ಹಣವನ್ನು ನಿಲ್ಲಿಸಲಾಗಿದೆ. ಇದರಿಂದ ಸಾಮಾನ್ಯ ಜನ ಗ್ಯಾಸ್ ಖರೀದಿಸಲು ಸಾಧ್ಯವಾಗುತ್ತಿಲ್ಲ. ಉಜ್ವಲ ಯೋಜನೆಯಡಿ ಗ್ಯಾಸ್ ಬಳಕೆ ಮಾಡುತ್ತಿದ್ದ ಶೇಕಡಾ 36 ಜನ ಕಟ್ಟಿಗೆ ಒಲೆ ಬಳಕೆಗೆ ಮರಳಿದ್ದಾರೆ. ದೇಶದಲ್ಲಿ ಎಂಟು ಕೋಟಿ ಉಜ್ವಲ ಯೋಜನೆ ಬಳಕೆದಾರರು ಸೇರಿ ಒಟ್ಟು 28 ಕೋಟಿ ಗ್ಯಾಸ್ ಬಳಕೆದಾರರು ಇದ್ದಾರೆ, ನಮ್ಮ ರಾಜ್ಯದಲ್ಲಿ 1 ಕೋಟಿ 78 ಲಕ್ಷ ಗ್ಯಾಸ್ ಬಳಕೆದಾರರಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕ ಕಡಿತ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ವಿಧಾನಮಂಡಲದ ಉಭಯ ಸದನಗಳು ಸರ್ವಾನುಮತದ ಗೊತ್ತುವಳಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕು ಎಂದು ಒತ್ತಾಯಿಸುತ್ತೇನೆ. ಎಲ್ಲ ಪಕ್ಷಗಳ ನಾಯಕರು ಒಪ್ಪಿದರೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಹೊಣೆಯನ್ನು ನಾನು ಹೊರಲು ಸಿದ್ದನಿದ್ದೇನೆ.

ತಮಿಳುನಾಡಿನ ಸ್ಟಾಲಿನ್ ಸರ್ಕಾರ ಈಗಾಗಲೇ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆ ಕಡಿತ ಮಾಡಿದಂತೆ ರಾಜ್ಯ ಸರ್ಕಾರ ಮಾರಾಟ ತೆರಿಗೆಯನ್ನು ಶೇಕಡಾ 50ರಷ್ಟು ಕಡಿತಗೊಳಿಸಬೇಕು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸದನದಲ್ಲಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಸರ್ಕಾರ ಏನು ಉತ್ತರ ಕೊಡಲಿದೆ ಎಂಬುದು ನಾಡಿನ ಜನರಲ್ಲಿ ಕುತೂಹಲ ಮೂಡಿಸಿದೆ.

English summary
Here is a comprehensive speech of the Opposition Leader Siddaramaiah in the Assembly on price hike. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X