• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಾದ್ಯಂತ ಅಬ್ಬರದ ಮಳೆ, ಒಟ್ಟು 7 ಜಿಲ್ಲೆಗಳಿಗೆ ರೆಡ್ ಅಲರ್ಟ್

|
Google Oneindia Kannada News

ಬೆಂಗಳೂರು, ಜುಲೈ 24: ರಾಜ್ಯಾದ್ಯಂತ ಅಬ್ಬರದ ಮಳೆ ಸುರಿಯುತ್ತಿದ್ದು, ರಾಜ್ಯದ ಕರಾವಳಿ ಸೇರಿದಂತೆ ಒಟ್ಟು 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ, ಮನೆಗಳು ಕುಸಿದು ಬಿದ್ದಿವೆ, ನದಿಗಳು ತುಂಬಿ ಹರಿಯುತ್ತಿವೆ, ಹೊಲ ಗದ್ದೆಗಳು ನದಿಯಂತಾಗಿವೆ.

ಕರಾವಳಿ, ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ: 3 ಜಿಲ್ಲೆಗಳಿಗೆ ರೆಡ್ ಅಲರ್ಟ್ಕರಾವಳಿ, ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ: 3 ಜಿಲ್ಲೆಗಳಿಗೆ ರೆಡ್ ಅಲರ್ಟ್

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಉತ್ತರ ಕನ್ನಡದಲ್ಲಿ ಇಬ್ಬರು, ಬೆಳಗಾವಿಯಲ್ಲಿ ಇಬ್ಬರು ಮಹಾಮಳೆಗೆ ಬಲಿಯಾಗಿದ್ದಾರೆ. ಹಾಗೆಯೇ ಚಿಕ್ಕಮಗಳೂರು, ದಾವಣಗೆರೆಯಲ್ಲಿ ಮಳೆಗೆ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಬೆಳಗಾವಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ, ಹಳ್ಳ, ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಗ್ರಾಮಗಳು ಜಲಾವೃತಗೊಂಡಿವೆ. ದೇಗುಲ, ಮನೆಗಳು ಮುಳುಗಡೆಯಾಗಿವೆ. ಹಳ್ಳಿಗಳು ದ್ವೀಪದಂತಾಗಿದ್ದು, ಜನ ಪರದಾಡುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ ಕಾರಣ ಕೊಯ್ನಾ, ರಾಧಾನಗರಿ, ಕಳಂಬ ಡ್ಯಾಂಗಳಿಂದ ರಾಜ್ಯಕ್ಕೆ ಹರಿದುಬರ್ತಿರುವ ನೀರಿನಿಂದ ಇಡೀ ಬೆಳಗಾವಿ ಜಿಲ್ಲೆ ಹೆಚ್ಚು ಕಡಿಮೆ ಜಲದಿಗ್ಬಂಧನದಲ್ಲಿ ಸಿಲುಕಿದೆ. ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆ ಪ್ರಮಾಣ ಹೆಚ್ಚಾದ ಹಿನ್ನೆಲೆ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಮತ್ತೆ ಮಹಾಪ್ರವಾಹದ ಭೀತಿ ಎದುರಾಗಿದೆ. ವೇದಗಂಗಾ ನದಿ ಪ್ರವಾಹಕ್ಕೆ ನಿಪ್ಪಾಣಿ ತಾಲೂಕು ಸಿಲುಕಿದೆ. ಇಲ್ಲಿನ ಕೊಡಣಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಈ ಕೊಡಣಿ ಗ್ರಾಮದಲ್ಲಿ ಸಿಲುಕಿದ್ದ 200 ಜನರನ್ನು ರಕ್ಷಣೆ ಮಾಡಲಾಗಿದೆ.

 ಬೆಂಗಳೂರು ಹವಾಮಾನ ಹೇಗಿದೆ?

ಬೆಂಗಳೂರು ಹವಾಮಾನ ಹೇಗಿದೆ?

ಬೆಂಗಳೂರಿನಲ್ಲಿ ಮೋಡಲವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗಿದೆ. 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವಿದೆ. ಎಚ್‌ಎಎಲ್‌ನಲ್ಲಿ 26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 24.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಕೆಐಎಎಲ್‌ನಲ್ಲಿ 24.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

 ಎಲ್ಲೆಲ್ಲಿ ಅತಿ ಹೆಚ್ಚು ಮಳೆಯಾಗಿದೆ?

ಎಲ್ಲೆಲ್ಲಿ ಅತಿ ಹೆಚ್ಚು ಮಳೆಯಾಗಿದೆ?

ಲೋಂಡಾ, ಕದ್ರಾ, ಬನವಾಸಿ, ಖಾನಾಪುರ್, ತಾಳಗುಪ್ಪ, ಸಿದ್ದಾಪುರ, ಆನವಟ್ಟಿ, ಯಲ್ಲಾಪುರ, ಅಗ್ರಹಾರ, ಕೋಣಂದೂರು, ಸಾಗರ, ಹಳಿಯಾಳ, ಮಂಚಿಕೆರೆ, ಬೆಳಗಾವಿಯಲ್ಲಿ ಅಧಿಕ ಮಳೆಯಾಗಿದೆ.

 ಎಲ್ಲೆಲ್ಲಿ ಸಾಧಾರಣ ಮಳೆಯಾಗಿದೆ?

ಎಲ್ಲೆಲ್ಲಿ ಸಾಧಾರಣ ಮಳೆಯಾಗಿದೆ?

ಕೊಲ್ಲೂರು, ತ್ಯಾಗರ್ತಿ, ಕೊಪ್ಪ, ಸೊರಬ, ಕಿರವತ್ತಿ, ನಿಪ್ಪಾಣಿ, ತೀರ್ಥಹಳ್ಳಿ, ಭಾಗಮಂಡಲ, ಹಿರೆಕೆರೂರು, ಮೂರ್ನಾಡು, ಆಗುಂಬೆ, ಸಂಕೇಶ್ವರ, ಜಯಪುರ, ಹೊನ್ನಾಳಿ, ಶಿಕಾರಿಪುರ, ಅಂಕೋಲ, ಹುಕ್ಕೇರಿ, ಮಾದಾಪುರ, ಕೊಟ್ಟಿಗೆಹಾರ, ಬೆಳಗಾವಿ, ಧರ್ಮಸ್ಥಳ, ಮಂಡಗದ್ದೆ, ಗೋಕರ್ಣ, ಕಾರವಾರ, ಬೆಳ್ತಂಗಡಿ, ಹಾವೇರಿ, ಶಿಗ್ಗಾಂ, ಬಾಳೆಹೊನ್ನೂರು, ರಾಣೆಬೆನ್ನೂರು, ಹಾವೇರಿ, ಸಂತೆಬೆನ್ನೂರು, ದಾವಣಗೆರೆ, ತರಿಕೆರೆ, ಪುತ್ತೂರು, ಮೂಡುಬಿದಿರೆ, ಹೊಳಲ್ಕೆರೆ, ಕಾರ್ಕಳ, ಉಚ್ಚಂಗಿದುರ್ಗಾ, ಮಾಣಿ, ಮುಲ್ಕಿ, ಅರಕಲಗೂಡು, ಆಲೂರು, ಹಿರಿಯೂರು, ಚಿಕ್ಕಮಗಳೂರು, ಭರಮಸಾಗರ, ಲಕ್ಷ್ಮೇಶ್ವರ, ಕೋಟಾ, ಎಚ್‌ಡಿ ಕೋಟೆ, ಮೊಳಕಾಲ್ಮೂರು, ಬಂಡೀಪುರದಲ್ಲಿ ಮಳೆಯಾಗಿದೆ.

 ಉತ್ತರ ಒಳನಾಡಿನಲ್ಲಿ ಮಳೆ

ಉತ್ತರ ಒಳನಾಡಿನಲ್ಲಿ ಮಳೆ

ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಮತ್ತು ಯಾದಗಿರಿ ಜಲ್ಲೆಗಳಿಗೆ ಜುಲೈ 24ರಂದು ಯೆಲ್ಲೋ ಅಲರ್ಟ್‌ ನೀಡಲಾಗಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಮಳೆ ಮುಂದುವರಿಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

 ಮುಂದಿ ಐದು ದಿನ ಮಳೆ

ಮುಂದಿ ಐದು ದಿನ ಮಳೆ

ರಾಜ್ಯದಲ್ಲಿ ಅಬ್ಬರಿಸುತ್ತಿರುವ ಮಳೆ ಮುಂದಿನ 5 ದಿನ ಮುಂದುವರಿಯಲಿದೆ. ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದಲ್ಲಿ ಜುಲೈ 24 ರಂದು ಅತಿ ಹೆಚ್ಚು ಮಳೆಯಾಗಲಿದೆ. ಈ ಹಿನ್ನೆಲೆಯಲ್ಲಿ ಈ ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ಘೋಷಿಸಿದೆ. ಜುಲೈ 25 ರಿಂದ 27ರ ವರೆಗೆ ಕೆಲವು ಕಡೆ ಮಾತ್ರ ಮಳೆಯಾಗಲಿದ್ದು, ಯಲ್ಲೋ ಆಲರ್ಟ್‌ ನೀಡಲಾಗಿದೆ.

 ಮಳೆಯಿಂದಾದ ಅನಾಹುತ

ಮಳೆಯಿಂದಾದ ಅನಾಹುತ

ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದ ಹಾನಿ ಹಿನ್ನೆಲೆ ಬಾಗಲಕೋಟೆ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಇಂದು ಮಧ್ಯಾಹ್ನ 12ಕ್ಕೆ ವಿಜಯಪುರ ಜಿಲ್ಲೆ ಆಲಮಟ್ಟಿಗೆ ಭೇಟಿ ನೀಡಿ ಪರಿಸ್ಥಿತಿ ವೀಕ್ಷಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬಾಗಲಕೋಟೆಯ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜತೆ ಸಭೆಯನ್ನೂ ನಡೆಸಲಿದ್ದು ಪ್ರವಾಹ‌ ನಿರ್ವಹಣೆ ಬಗ್ಗೆ ಚರ್ಚಿಸಲಿದ್ದಾರೆ.

ಮಹಾರಾಷ್ಟ್ರ, ಪಶ್ಚಿಮಘಟ್ಟ ಪ್ರದೇಶದಲ್ಲಿ ಮುಂದುವರೆದ ಮಳೆ ಆರ್ಭಟದಿಂದಾಗಿ ದೂಧ್​ಗಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಮಾಂಗೂರ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆರೋಗ್ಯ ಕೇಂದ್ರಕ್ಕೆ ಏಕಾಏಕಿ ನುಗ್ಗಿದ ಪರಿಣಾಮ ವೈದ್ಯಕೀಯ ಪರಿಕರಗಳನ್ನು ಬೇರೆಡೆಗೆ ಸಾಗಿಸುವಂತಾಗಿ ವೈದ್ಯರು, ಸಿಬ್ಬಂದಿ ಪರದಾಡಿದ್ದಾರೆ.

ಇತ್ತ ಶಿವಮೊಗ್ಗ ಜಿಲ್ಲೆಯಲ್ಲೂ ಭಾರೀ ಮಳೆ ಸುರಿಯುತ್ತಿದ್ದು ತೀರ್ಥಹಳ್ಳಿ ಪಟ್ಟಣದ ಕೆಲ ಭಾಗಗಳು ನಿನ್ನೆ ಜಲಾವೃತಗೊಂಡಿವೆ. ಶಿವಮೊಗ್ಗ ನಗರದ ಕುಂಬಾರಗುಂಡಿ, ಬಿ.ಬಿ ರಸ್ತೆ, ಬಟ್ಟೆ ಮಾರುಕಟ್ಟೆ ಪ್ರದೇಶದಲ್ಲಿ ಮಳೆ ಅವಾಂತರ ಸೃಷ್ಟಿಸಿದ್ದು, ತುಂಗಾ ನದಿಯ ನೀರು ಅನೇಕ ಮನೆಗಳಿಗೆ ನುಗ್ಗಿದ ಪರಿಣಾಮ ಜನರು ತಡರಾತ್ರಿ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಇಂದು ಕೂಡಾ ಮುಂಜಾನೆಯಿಂದಲೇ ಗಾಳಿ, ಮಳೆ ಜೋರಾಗಿದ್ದು, ಜನ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ವಿವಿಧೆಡೆ ಮಳೆಯ ಆರ್ಭಟ ಮುಂದುವರೆದಿದೆ. ಮಳೆಯಿಂದಾಗಿ ಅಂಕೋಲಾ ಸುಂಕಸಾಳದ ನವಮಿ ಹೊಟೇಲ್‌ನಲ್ಲಿ ಸಿಲುಕಿಕೊಂಡಿದ್ದ ಮಹಿಳೆಯರು, ಮಕ್ಕಳು, ಗ್ರಾಹಕರು, ಹೊಟೇಲ್​ ಸಿಬ್ಬಂದಿ ಸೇರಿ 15 ಜನರ ಪೈಕಿ ಅಷ್ಟೂ ಮಂದಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತಗೊಂಡಿವೆ.

ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಡವಳೇಶ್ವರ ನಂದಗಾಂವ ಗ್ರಾಮಗಳು ಯಾವುದೇ ಕ್ಷಣದಲ್ಲಿ ಸಂಪೂರ್ಣ ಜಲಾವೃತಗೊಳ್ಳುವ ಆತಂಕ ಎದುರಾಗಿದೆ. ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಘಟಪ್ರಭಾ ನದಿಯಿಂದಾಗಿ ಡವಳೇಶ್ವರ ನಂದಗಾಂವ ಸೇತುವೆಗಳು ಜಲಾವೃತವಾಗಿವೆ. ನದಿ ಅಕ್ಕಪಕ್ಕದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ಬೆಳೆ ಜಲಾವೃತಗೊಂಡಿದ್ದು, ಯಾವುದೇ ಕ್ಷಣದಲ್ಲಿ ಗ್ರಾಮದ ಲಕ್ಷ್ಮಿದೇವಿ ದೇವಸ್ಥಾನ, ದುರ್ಗಾದೇವಿ ದೇವಸ್ಥಾನವನ್ನು ನೀರು ಸುತ್ತುವರೆಯುವ ಸಾಧ್ಯತೆ ಇದೆ.

English summary
Karnataka has witnessed heavy rainfall over the past 24 hours, resulting in floods in multiple regions. As many as three lives were reported to have been lost so far, while the downpour triggered landslides in at least eight places in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X