ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
ಬೆಂಗಳೂರು, ಜನವರಿ 19: ದೇಶದಾದ್ಯಂತ ಶನಿವಾರ ಕೋವಿಡ್ ಲಸಿಕೆ ಕಾರ್ಯಕ್ರಮ ಆರಂಭವಾದ ಸಂದರ್ಭದಲ್ಲಿ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಕಾರ್ಯಕರ್ತರೊಬ್ಬರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಳ್ಳಾರಿಯಲ್ಲಿ ಆರೋಗ್ಯ ಇಲಾಖೆಯ ಕಾಯಂ ಉದ್ಯೋಗಿಯಾಗಿದ್ದ 43 ವರ್ಷದ ನಾಗರಾಜು ಮೃತ ದುರ್ದೈವಿ.
ನಾಗರಾಜು ಅವರ ಸಾವಿನ ಬಗ್ಗೆ ಆರೋಗ್ಯ ಇಲಾಖೆ ವಿವರಣೆ ನೀಡಿದ್ದು, ಕೊವಿಡ್ ಲಸಿಕೆಗೂ ಅವರ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಕೊರೊನಾ ಲಸಿಕೆ ಪಡೆದ 24 ಗಂಟೆಗಳಲ್ಲೇ ವೈದ್ಯಕೀಯ ಸಿಬ್ಬಂದಿ ಸಾವು!
ನಾಗರಾಜು ಅವರು ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಲಸಿಕೆ ಪಡೆದುಕೊಂಡಿದ್ದರು. ಸೋಮವಾರ ಬೆಳಗಿನವರೆಗೂ ಅವರು ಸಹಜವಾಗಿದ್ದರು. ಲಸಿಕೆ ಪಡೆದುಕೊಂಡ 24 ಗಂಟೆಯವರೆಗೂ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ಬಂದಿದ್ದ ಅವರು 9.30ರ ಸುಮಾರಿಗೆ ಎದೆ ನೋವಿನಿಂದ ಕುಸಿದುಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಜಿಂದಾಲ್ ಸಂಜೀವಿನ ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಲಾಯಿತು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಬೆಳಿಗ್ಗೆ 11.15ರ ವೇಳೆಗೆ ಅವರನ್ನು ಜಿಂದಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತು. ಆದರೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅದೇ ಬಾಟಲಿಯಿಂದ ಲಸಿಕೆ ಪಡೆದುಕೊಂಡಿದ್ದರೂ ಯಾವ ಇತರೆ ಆರೋಗ್ಯ ಕಾರ್ಯಕರ್ತರಲ್ಲಿಯೂ ಅಡ್ಡಪರಿಣಾಮದ ಸಮಸ್ಯೆ ಕಂಡುಬಂದಿಲ್ಲ.
ನಾಗರಾಜು ಅವರು ಹೃದಯಾಘಾತದ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಮಟ್ಟದ ಎಇಎಫ್ಐ ಸಮಿತಿಯ ಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅಂತಿಮ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಅದು ಹೇಳಿದೆ.