ರಾಜಕೀಯ ಕಾರ್ಯದರ್ಶಿಯಾಗಿ ಎನ್ ಆರ್ ಸಂತೋಷ್ ನೇಮಕ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಡಿ.2: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿ ಎನ್ಆರ್ ಸಂತೋಷ್ ನೇಮಕಾತಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಕುರಿತಂತೆ ವಿಚಾರಣೆ ನಡೆಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ಪ್ರತಿಕ್ರಿಯೆ ನೀಡಲು ಸೂಚಿಸಿದೆ.
''ಎನ್ ಆರ್ ಸಂತೋಷ್ ನೇಮಕಾತಿ ಅಕ್ರಮವಾಗಿದೆ. ಸ್ವಜನಪಕ್ಷಪಾತ, ಆಡಳಿತ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಯಾವುದೇ ನೀತಿ ನಿಯಮ ಅನುಸರಿಸದೇ ರಾಜಕೀಯ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ ನೇಮಕಾತಿ ನಡೆದಿದೆ'' ಎಂದು ವಕೀಲ ಎಸ್ ಉಮಾಪತಿ ಎಂಬುವರು ಆರೋಪಿಸಿದ್ದು, ಈ ಹುದ್ದೆ ರದ್ದುಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಮಂಗಳವಾರ(ಡಿ. 1)ದಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ಸಂತೋಷ್ ಅವರಿಗೆ ನೋಟಿಸ್ ನೀಡಿದ್ದು, ಪ್ರಕರಣ ಮುಂದಿನ ವಿಚಾರಣೆಯನ್ನು ಜನವರಿ 11, 2020ಕ್ಕೆ ಮೂಂದೂಡಿದೆ.
ರಾಜಕೀಯ ಕಾರ್ಯದರ್ಶಿ ಹುದ್ದೆ ನಿಯಮಾವಳಿ, ನೇಮಕಾತಿ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ನೀಡಿರುವ ನೋಟಿಸ್ ನಲ್ಲಿ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.
ಎನ್.ಆರ್. ಸಂತೋಷ್ -ಪಿಎ ಇಂದ ರಾಜಕೀಯ ಕಾರ್ಯದರ್ಶಿ
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಿಎ ಆಗಿದ್ದ ಸಂತೋಷ್ ಅವರು ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದು ಹಲವರ ಹುಬ್ಬೇರಿಸಿತ್ತು. ಅನುಭವಿ ಶಾಸಕರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳುವ ರೂಢಿಯನ್ನು ಯಡಿಯೂರಪ್ಪ ಮುರಿದಿದ್ದರು.
ಸಿಎಂ ರಾಜಕೀಯ ಕಾರ್ಯದರ್ಶಿಗಳಾಗಿ ಶಾಸಕರಾದ ಎಸ್. ಆರ್. ವಿಶ್ವನಾಥ್, ಎಂ.ಪಿ. ರೇಣುಕಾಚಾರ್ಯ ಮತ್ತು ಶಂಕರ ಗೌಡ ಪಾಟೀಲ್ ಅವರ ಜೊತೆಗೆ ಸಂತೋಷ್ ನೇಮಕವಾಗಿದ್ದರು. ಈ ಪೈಕಿ ಎಸ್ಆರ್ ವಿಶ್ವನಾಥ್ ಅವರು ಸದ್ಯ ಬಿಡಿಎ ಅಧ್ಯಕ್ಷರಾಗಿದ್ದು, ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.