ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಲಿಕೆ ಕಡ್ಡಾಯ, ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ನೋಟಿಸ್

|
Google Oneindia Kannada News

ಬೆಂಗಳೂರು, ಸೆ.23: ರಾಜ್ಯದಲ್ಲಿರುವ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಯ(ಕುಸ್ಮಾ) ವ್ಯಾಪ್ತಿಗೆ ಬರುವ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಈ ನಿರ್ಧಾರವನ್ನು ಪ್ರಶ್ನಿಸಿ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬರು ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಕುರಿತಂತೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌ ಜಾರಿ ಮಾಡಿದೆ.

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಭಾರತೀಯ ಪ್ರೌಢಶಿಕ್ಷಣ ಸರ್ಟಿಫಿಕೇಟ್‌ನ (ಐಸಿಎಸ್‌ಇ) ನೋಂದಾಯಿತ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕಾ ಕಾಯಿದೆ-2015 ಅನ್ವಯ ಕನ್ನಡ ಕಲಿಕೆ ಕಡ್ಡಾಯಗೊಳಿಸಿರುವುದನ್ನು ಕೀರ್ತನ್ ಸುರೇಶ್‌ ಎಂಬ ವಿದ್ಯಾರ್ಥಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌ ದೇವದಾಸ್‌ ನೇತೃತ್ವದ ಏಕಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿ, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿದೆ.

''ರಾಜ್ಯ ಸರ್ಕಾರದ ಕಾಯಿದೆಯು ಸಂವಿಧಾನದ 14ನೇ ವಿಧಿಯ ಜೊತೆಗೆ 19 (1) (ಜಿ), 21 ಮತ್ತು 301ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಅಲ್ಲದೇ, ಇದು ಕಳೆದ ವರ್ಷದ ಜುಲೈ 29ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ 2020ರ ಗುರಿ ಮತ್ತು ಉದ್ದೇಶಗಳಿಗೆ ವಿರುದ್ಧವಾಗಿದೆ,'' ಎಂದು ಕೀರ್ತನ್ ಪರ ವಕೀಲ ಸುವಿದತ್‌ ಅವರು ಮನವಿಯಲ್ಲಿ ಕೋರಿದ್ದಾರೆ.

HC notice to Karnataka govt on Kannada compulsory All CBSE and ICSE affiliated schools

''ಭಾಷಾ ಮಾಧ್ಯಮದ ಆಯ್ಕೆ ಪೋಷಕರಿಗೆ ಸಿಗಬೇಕೆಂಬುದಷ್ಟೇ ನಮ್ಮ ವಾದ. ಕನ್ನಡ ಭಾಷೆ ಕಲಿಸಲು ನಮ್ಮಲ್ಲಿ ಯಾವುದೇ ವಿರೋಧವಿಲ್ಲ,'' ಎಂದು ಕುಸ್ಮಾ ಈ ಹಿಂದೆಯೇ ಸ್ಪಷ್ಟಪಡಿಸಿದೆ.

ಕನ್ನಡ ಭಾಷಾ ಕಲಿಕಾ ಕಾಯಿದೆ 2015 ಅನ್ನು ಅಸಾಂವಿಧಾನಿಕ, ಕಾನೂನುಬಾಹಿರ ಮತ್ತು ಸಿಬಿಎಸ್‌ಇ/ಐಸಿಎಸ್‌ಇ ನೋಂದಾಯಿತ ಸಂಸ್ಥೆಗಳನ್ನು ಹೊರತಾಗಿಸಿಲ್ಲವಾದ್ದರಿಂದ ಕಾಯಿದೆಗೆ ಯಾವುದೇ ಅಧಿಕಾರ ಇಲ್ಲ ಎಂದು ಘೋಷಿಸಬೇಕು ಎಂದು ಕೀರ್ತನ್ ಪರ ವಕೀಲರು ಹೇಳಿದ್ದಾರೆ.

ಉದ್ಯೋಗದ ನಿಮಿತ್ತ ಮೇಲಿಂದ ಮೇಲೆ ವರ್ಗಾವಣೆಯಾಗುವವರು ತಮ್ಮ ಮಕ್ಕಳನ್ನು ಸಾಮಾನ್ಯವಾಗಿ ಸಿಬಿಎಸ್‌ಇ ಅಥವಾ ಐಸಿಎಸ್‌ಇ ನೋಂದಾಯಿತ ಶಾಲೆಗೆ ಸೇರಿಸುತ್ತಾರೆ. ಒಂದೊಮ್ಮೆ ಮಧ್ಯಂತರದಲ್ಲಿ ವರ್ಗಾವಣೆಯಾದರೂ ಬೇರೆ ಸ್ಥಳದಲ್ಲಿ ಅವರ ಕಲಿಕೆಗೆ ಯಾವುದೇ ತೊಂದರೆಯಾಗದಿರಲಿ ಎಂಬುದಕ್ಕಾಗಿ ಹೀಗೆ ಮಾಡಲಾಗುತ್ತದೆ ಎಂದು ಅರ್ಜಿದಾರರು ವಿವರಿಸಿದ್ದಾರೆ.

"ಎರಡನೇ ಭಾಷೆಯನ್ನಾಗಿ ಮಗು ಕನ್ನಡ ಕಲಿಯುವುದು ಕಡ್ಡಾಯವಾದರೆ ಒಂದೊಮ್ಮೆ ಅವರು ಮುಂದಿನ ವರ್ಷ ಬೇರೆ ರಾಜ್ಯಕ್ಕೆ ವರ್ಗಾವಣೆಯಾದರೆ ಅವರಿಗೆ ಅತಂತ್ರ ಸ್ಥಿತಿ ಎದುರಾಗಲಿದೆ" ಎಂದು ಮನವಿಯಲ್ಲಿ ಹೇಳಲಾಗಿದೆ.

ವರ್ಗಾವಣೆಯ ಉದ್ಯೋಗದಲ್ಲಿರುವ ಪೋಷಕರು ಮತ್ತು ಮಕ್ಕಳಿಗೆ ಅನುಕೂಲವಾಗಿಸುವ ಉದ್ದೇಶದಿಂದಲೇ ಸಿಬಿಎಸ್‌ಇ/ಐಸಿಎಸ್‌ಇ ಶಿಕ್ಷಣ ನೀಡಲಾಗುತ್ತಿದೆ. ಒಂದೊಮ್ಮೆ ವರ್ಗಾವಣೆಯಾದರೂ ಆ ಸ್ಥಳದಲ್ಲಿ ಶಿಕ್ಷಣದಲ್ಲಿ ಅವರಿಗೆ ಸಮಸ್ಯೆಯಾಗುವುದಿಲ್ಲ. ಶಿಕ್ಷಣದ ಗುಣಮಟ್ಟ ಮತ್ತು ಕಲಿಕಾ ವಿಧಾನಕ್ಕೆ ಸಂಬಂಧಿಸಿದಂತೆ ಸಮಸ್ಯೆಯಾಗದು ಎಂದು ತಕರಾರು ಎತ್ತಲಾಗಿದೆ.

ಸಂವಿಧಾನದ 350ಎ ವಿಧಿಯ ಪ್ರಕಾರ, ಯಾವುದೇ ಶಿಕ್ಷಣ ಸಂಸ್ಥೆಯು ಮಾತೃ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ವಾದಿಸಲಾಗಿದೆ.

"ಸಂವಿಧಾನದ 350ಎ ವಿಧಿಯ ಪ್ರಕಾರ ಭಾಷಾ ಅಲ್ಪಸಂಖ್ಯಾತ ಗುಂಪುಗಳಿಗೆ ಸೇರಿದ ಮಕ್ಕಳಿಗೆ ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಬೋಧನೆಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಂದು ರಾಜ್ಯ ಮತ್ತು ಪ್ರತಿ ಸ್ಥಳೀಯ ಪ್ರಾಧಿಕಾರದ ಕರ್ತವ್ಯವಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಲಾಗದು. ಸಂವಿಧಾನದ 19ನೇ ವಿಧಿ ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಲೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕು ಅವರಿಗೆ ಇದೆ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕನ್ನಡದಲ್ಲಿ ಕಲಿಯುವುದನ್ನು ಕಡ್ಡಾಯಗೊಳಿಸುವುದರಿಂದ ಮಕ್ಕಳ ಪೋಷಕರು ವರ್ಗಾವಣೆಗೊಂಡು ಅಲ್ಲಿಗೆ ಹೋಗಿ ಪುನರ್‌ ನೆಲೆ ಕಂಡುಕೊಳ್ಳಬೇಕಾಗುತ್ತದೆ. ಅಲ್ಲದೇ, ತಮಗೆ ಪರಿಚಿತವಲ್ಲದ ಪ್ರಾದೇಶಿಕ ಭಾಷೆಯಲ್ಲಿ ಎಲ್ಲವನ್ನೂ ಕಲಿಯುವ ಸ್ಥಿತಿ ನಿರ್ಮಾಣವಾದಾಗ ಮಕ್ಕಳಿಗೆ ಸಮಸ್ಯೆಯಾಗುತ್ತದೆ ಎಂಬುದನ್ನು ಕಾಯಿದೆ ರೂಪಿಸುವಾಗ ಅರ್ಥೈಸಿಕೊಂಡಿಲ್ಲ ಎಂದು ಹೇಳಲಾಗಿದೆ. (ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್, ಲೈವ್ ಲಾ)

Recommended Video

ಮೋದಿ ಅಮೆರಿಕಾಕ್ಕೆ ಭೇಟಿ ಕೊಟ್ಟಿದ್ದಕ್ಕೆ ಚೀನಾ ತಾಲಿಬಾನ್ ಪಾಕಿಸ್ತಾನಕ್ಕೆ ಭಯ ಯಾಕೆ? | Oneindia Kannada

English summary
Karnataka High court issued notice to Government of Karnataka on making Kannada compulsory All CBSE and ICSE affiliated schools under the Karnataka Unaided School Management Association (KUSMA).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X