• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲೈ ಛಲವೇ.. ನಿನಗೆ ಶರಣು ಶರಣೆಂಬೆ

By ಗವಿ ಸ್ವಾಮಿ, ಚಾಮರಾಜನಗರ
|

ಕೈಕಾಲುಗಳು ಗಟ್ಟಿಯಾಗಿದ್ದರೂ ಪ್ರತಿನಿತ್ಯ ಸಿಗ್ನಲ್ಲುಗಳಲ್ಲಿ 'ಕುಂಟು'ನೆಪ ಮಾಡಿಕೊಂಡು ಭಿಕ್ಷೆ ಬೇಡುತ್ತಿರುವ ಮಹಿಳೆ, ಆಕೆಯ ಹಿಂದೆ ಹಿಂಡುಹಿಂಡಾಗಿ ಸುತ್ತುವ ಮಕ್ಕಳು... ದುಡಿಯಲು ಬೇಕಾದಷ್ಟು ದಾರಿಗಳಿದ್ದರೂ ವಾಹನ ಸವಾರರನ್ನು ಕಾಡಿಬೇಡಿ ದುಡ್ಡು ಕಿತ್ತುವ ಜನರನ್ನು ನೋಡಿದಾಗ ಈ ನಮ್ಮ ಜನಕ್ಕೇನಾಗಿದೆ ಎಂಬ ಪ್ರಶ್ನೆ ಯಾವುದೇ ದುಡಿದು ತಿನ್ನುವ ವ್ಯಕ್ತಿಯಲ್ಲಿ ಹುಟ್ಟದೆ ಇರದು. ಅಂಥದರಲ್ಲಿ ಬಾಲ್ಯದಲ್ಲಿಯೇ ಕಾಲು ಕಳೆದುಕೊಂಡಿದ್ದರೂ ವಿದ್ಯಾಭ್ಯಾಸದ ಮಹತ್ವವನ್ನು ಸಾರಲು ಇಡೀ ದೇಶವನ್ನು, ಯಾರ ಸಹಾಯವೂ ಇಲ್ಲದೆ ಸೈಕಲ್ ಮೇಲೆ ಸುತ್ತುತ್ತಿರುವ ವ್ಯಕ್ತಿಯೊಬ್ಬರನ್ನು ಗವಿ ಸ್ವಾಮಿ ಪರಿಚಯಿಸಿದ್ದಾರೆ. ಸಾಧ್ಯವಾದರೆ ಸ್ಫೂರ್ತಿ ಪಡೆಯಿರಿ - ಸಂಪಾದಕ.

ಇವತ್ತು ಮಧ್ಯಾಹ್ನ ನಮ್ಮ ಆಸ್ಪತ್ರೆಯ ಕಾಂಪೌಂಡಿನೊಳಗೆ ನಿಂತು ಹೆದ್ದಾರಿಯಲ್ಲಿ ಓಡಾಡುತ್ತಿದ್ದ ವಾಹನಗಳತ್ತ ಕಣ್ಣಾಡಿಸುತ್ತಿದ್ದೆ. ಆಕಸ್ಮಾತ್ತಾಗಿ ಕತ್ತು ಎಡಕ್ಕೆ ವಾಲಿತು.. ನಮ್ಮ ಕಾಂಪೌಂಡ್ ಎಡಭಾಗದಲ್ಲಿರುವ ಹೋಟೆಲಿನೆದುರು ನಿಂತಿದ್ದ ಸೈಕಲ್ ನನ್ನ ಗಮನ ಸೆಳೆಯಿತು.. ಅದಕ್ಕೊಂದು ದೊಡ್ಡ ತ್ರಿವರ್ಣ ಧ್ವಜವನ್ನು ಕಟ್ಟಲಾಗಿತ್ತು..

ಅರೆ!.. ಸ್ವಾತಂತ್ರ್ಯ ದಿನ ಮುಗಿದು ಎರಡು ತಿಂಗಳಾಯಿತು.. ಗಣರಾಜ್ಯದಿನಕ್ಕೆ ಇನ್ನೂ ಮೂರು ತಿಂಗಳು ಬಾಕಿಯಿವೆ. ಅಂತಾದ್ರಲ್ಲಿ ಎಡಹೊತ್ತಿನಲ್ಲಿ ಇಷ್ಟು ದೊಡ್ಡ ಧ್ವಜ ಕಟ್ಕೊಂಡು ಓಡಾಡ್ತಿದಾನಲ್ಲ.. ಯಾರಪ್ಪಾ ಇವನು ಎಂದು ಅಚ್ಚರಿಗೊಳ್ಳುತ್ತಾ ಸೈಕಲ್ಲಿನ ಹತ್ತಿರಕ್ಕೆ ಹೋದೆ..

ಒಂದು ಕ್ಷಣ ಮೈ ಜುಮ್ಮೆಂದಿತು!

ಸೈಕಲ್ ಹಿಡಿದು ನಿಂತಿದ್ದ ವ್ಯಕ್ತಿಗೆ ಒಂದು ಕಾಲೇ ಇರಲಿಲ್ಲ! ಆತ ತೊಡೆಗೆ ಸೈಕಲ್ ಒರಗಿಸಿಕೊಂಡು, ಸೈಕಲಿಗೆ ಕಟ್ಟಿದ್ದ ಗುಜ್ಜುಗಳನ್ನು ಬಿಚ್ಚುತ್ತಿದ್ದ. ಸೈಕಲ್ಲಿನ ಮುಂದೆ ಕಟ್ಟಿದ್ದ ಸಣ್ಣ ಪ್ಲಕಾರ್ಡಿನಲ್ಲಿ DULAL SARKAR ಎಂಬ ಹೆಸರಿತ್ತು..

"ಎಲ್ಲಿಂದ ಬಂದಿದ್ದೀರಿ?" (ಹಿಂದಿಯಲ್ಲಿ ಕೇಳಿದೆ)

"ಕಾಶ್ಮೀರದಿಂದ ಬಂದಿದೀನಿ" ಎನ್ನುತ್ತಾ ಗುಜ್ಜುಗಳನ್ನು ಕಂಕುಳಿಗೆ ಸಿಕ್ಕಿಸಿಕೊಂಡು ಹೋಟೆಲಿನತ್ತ ತಿರುಗಿದ..

"ಕಾಶ್ಮೀರದಿಂದ ಸೈಕಲ್ಲಿನಲ್ಲಿ ಬಂದಿದ್ದೀರಾ?" ಅಚ್ಚರಿಯಿಂದ ಕೇಳಿದೆ.

"ಹ್ಞೂಂ, ಪ್ರವಾಸ ಆರಂಭಿಸಿ ವರ್ಷ ಆಯ್ತು" ನಸುನಗುತ್ತಾ ಹೋಟೆಲಿನತ್ತ ಹೆಜ್ಜೆ ಹಾಕತೊಡಗಿದ.

ಓ ಮೈ ಗಾಡ್! ಒಂಟಿಕಾಲಿನಲ್ಲಿ ಸೈಕಲ್ ತುಳಿಯುತ್ತಾ ಇಲ್ಲೀವರೆಗೂ ಬಂದಿದ್ದೀರಾ.. ಗುರುವೇ ನಿನ್ ಜೊತೆ ಮಾತಾಡೋಕೆ ಬಹಳಷ್ಟಿದೆ ಅಂದುಕೊಳ್ಳುತ್ತಾ ಆತನನ್ನು ಹಿಂಬಾಲಿಸಿ ಹೋಟೆಲಿನೊಳಕ್ಕೆ ಹೋಗಿ ಆತನ ಎದುರು ಚೇರಿನಲ್ಲಿ ಕುಳಿತು ಮಾತಿಗೆಳೆದೆ..

"ದುಲಾಲ್ ಸರ್ಕಾರ್ ಅಂದ್ರೆ ನೀವು north east ಕಡೆಯವರು ಇರಬೇಕು ಅಲ್ವಾ?"

"ಹೌದು.. ನಾನು ಬಂಗಾಳ ರಾಜ್ಯದ ಮಾಲ್ಡಾ ಜಿಲ್ಲೆಯವ್ನು"

"ಮತ್ತೆ, ಕಾಶ್ಮೀರದಿಂದ ಬಂದಿದ್ದೀನಿ ಅಂದ್ರಿ?"

"ಮಾಲ್ಡಾದಿಂದ ಕಾಶ್ಮೀರಕ್ಕೆ ರೈಲಿನಲ್ಲಿ ಹೋಗಿ ಅಲ್ಲಿಂದ ಟೂರ್ ಆರಂಭಿಸಿದೆ.. ಈ ಸೈಕಲ್ ಕಾಶ್ಮೀರದಲ್ಲೇ ಖರೀದಿಸಿದ್ದು.. ಎರ್ಡೂವರೆ ಸಾವ್ರ ಅಷ್ಟೇ."

"ನಿಮ್ಮ ಈ ಯಾತ್ರೆಯ ಉದ್ದೇಶವೇನು?"

"ಪ್ರತಿ ರಾಜ್ಯದಲ್ಲೂ ಸಂಚರಿಸಿ ಶಾಲಾ ಮಕ್ಕಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸ್ತೀನಿ.. ಜೀವನದಲ್ಲಿ ಸದಾಚಾರವನ್ನು ಅಳವಡಿಸಿಕೊಳ್ಳೋದರ ಬಗ್ಗೆ ತಿಳಿ ಹೇಳ್ತೀನಿ.. ವಿಶೇಷವಾಗಿ ಅಂಗವಿಕಲ ಮಕ್ಕಳಿಗೆ ಸ್ಫೂರ್ತಿ ತುಂಬ್ತೀನಿ!"

"ಹೇಗೆ ಸ್ಫೂರ್ತಿ ತುಂಬ್ತೀರಿ?" ಮೂರ್ಖ ಪ್ರಶ್ನೆ ಕೇಳಿದೆ ಅನ್ನಿಸ್ತು.

ಆತ ನನ್ನ ಅಜ್ಞಾನಕ್ಕೆ ತಿಳಿನಗೆ ಬೀರುತ್ತಾ, "ನನ್ನನ್ನು ನೋಡಿ.. 85% handicapped ನಾನು.. ಒಂಟಿ ಕಾಲಿನಲ್ಲಿ ಇಂಡಿಯಾ ಸುತ್ತುತಾ ಇದೀನಿ.. ಇದು ನನ್ನಿಂದ ಸಾಧ್ಯ ಆಗಿರೋವಾಗ ನೀವ್ಯಾಕೆ ಎದೆಗುಂದಬೇಕು ಎಂದು ವಿಕಲಾಂಗ ಮಕ್ಕಳನ್ನು ಹುರಿದುಂಬಿಸ್ತೀನಿ."

ಹ್ಯಾಟ್ಸ್ ಆಫ್ ಟು ಯು ಮೈ ಬ್ರದರ್.. ಆತನಿಗೆ ಮನಸ್ಸಿನಲ್ಲೇ ವಂದಿಸಿದೆ..

''ಕಾಶ್ಮೀರದ ಅನುಭವ ಹೇಗಿತ್ತು.. ಹೀಗೆಲ್ಲಾ ರಾಜಾರೋಷವಾಗಿ ಧ್ವಜ ಕಟ್ಕೊಂಡು ಓಡಾಡಿದ್ರಾ ಅಲ್ಲೂನೂ?''

ಆತನ ಮುಖ ಅರಳಿತು.. ನಗುತ್ತಾ, "ಅಯ್ಯೋ. ಅಲ್ಲಿ ತ್ರಿವರ್ಣ ಕಟ್ಕೊಂಡು ಓಡಾಡೋಕಾಗುತ್ತಾ ಭಾಯ್.. ಟೆರರಿಸ್ಟುಗಳು ಗುಂಡಿಕ್ತಾರೆ ಅಷ್ಟೇ. ಅಲ್ಲಿದ್ದಷ್ಟು ದಿನ ಧ್ವಜಾನ ಬ್ಯಾಗ್ ಒಳಗಡೆ ಹಾಕ್ಕೊಂಡಿದ್ದೆ.'' ನನ್ನದೇ ದೇಶದಲ್ಲಿ ನನ್ನ ಹೆಮ್ಮೆಯ ತ್ರಿವರ್ಣವನ್ನು ಪ್ರದರ್ಶಿಸಲು ಹೆದರುವ ಸ್ಥಿತಿ ಇದೆಯೇ.. ಮನಸ್ಸು ಮರುಗಿತು. ಆತನೇ ಮಾತು ಮುಂದುವರಿಸಿದ.

"ಅಷ್ಟೇ ಅಲ್ಲ ಭಾಯ್.. ಧ್ವಜ ಕಟ್ಕೊಂಡಿರೋದನ್ನ ನೋಡಿದ್ರೆ ಹೋಟೆಲಿನವ್ರು ವಿಷ ಹಾಕ್ಬಿಡ್ತಾರೆ ಅಲ್ಲಿ" ಹೀಗೆ ಹೇಳುವಾಗ ಆತನ ಮುಖ ಕಪ್ಪಿಟ್ಟಿತು.. ಅವನ ವಿಷಾದದ ನಗೆಯನ್ನು ನೋಡಿ ಮನಸ್ಸು ಮುದುಡಿತು.. ಕಣ್ಣಂಚಿನಲ್ಲಿ ನೀರಿಣುಕಿತು. ಕಾಶ್ಮೀರದ ಟಾಪಿಕ್ ಅಲ್ಲಿಗೇ ನಿಲ್ಲಿಸಿ, ಮಾತನ್ನು ಬೇರೆ ಕಡೆಗೆ ಹೊರಳಿಸಿದೆ..

"ಕಾಶ್ಮೀರದ ನಂತರ ಇದುವರೆಗೆ ಯಾವ್ಯಾವ ರಾಜ್ಯಗಳನ್ನು ನುಗ್ಗಿ ಬಂದಿದ್ದೀರಿ?"

"ಕಾಶ್ಮೀರದಿಂದ ಹೊರಟು ಪಂಜಾಬ್ -ಹರ್ಯಾಣ-ಹಿಮಾಚಲಪ್ರದೇಶ-ಉತ್ತರಾಖಂಡ -ಡೆಲ್ಲಿ -ಯೂಪಿ -ಬಿಹಾರ್ - ಜಾರ್ಖಂಡ್- ಚತ್ತಿಸಘಡ್- ಎಂಪಿ- ರಾಜಾಸ್ಥಾನ - ಗುಜರಾತ್ -ಮಹಾರಾಷ್ಟ್ರ - ಗೊವಾ --- ಈಗ ಕರ್ನಾಟಕದ ಪ್ರವಾಸ ಮುಗಿಸ್ಕೊಂಡು ಕೇರಳದ ತಿರುವನಂತಪುರದ ಕಡೆಗೆ ಹೊರ್ಟಿದೀನಿ.. ತಮಿಳುನಾಡು, ಆಂಧ್ರ, ಒರಿಸ್ಸಾ, ಬಂಗಾಲ, ಸಿಕ್ಕಿಂ, ಅಸ್ಸಾಂ, ಮಣಿಪುರ, ನಾಗಲ್ಯಾಂಡ್ ಬಾಕಿಯಿದೆ."

"ಎಲ್ಲವನ್ನೂ ಮುಗಿಸಿಯೇ ತೀರ್ತೀರಿ ಹಂಗಾದ್ರೆ!"

"ಖಂಡಿತಾ" ಹೀಗೆ ಹೇಳುವಾಗ ಆತನ ಮುಖದಲ್ಲಿ ಹೊಮ್ಮಿದ ಆತ್ವವಿಶ್ವಾಸ ನನ್ನನ್ನು ಅಣಕಿಸಿತು.

"ನಿಮ್ಮ ಕಾಲಿಗೆ ಏನಾಯ್ತು.. ಯಾವ ವಯಸ್ಸಿನಲ್ಲಿ ಕಳ್ಕೊಂಡ್ರಿ?"

"84ರಲ್ಲಿ.. ರೋಡ್ ಸೈಡಿನ ಮಾರ್ಕೆಟ್ಟಿನಲ್ಲಿ ಚಿಕ್ಕಮ್ಮನ ಕೈ ಹಿಡಿದು ಜನ ಸಂದಣಿಯಲ್ಲಿ ತಿರುಗಾಡ್ತಿದ್ದಾಗ ಸರ್ಕಾರಿ ಬಸ್ ಹರಿದು ನನ್ನ ಕಾಲು ಕಟ್ಟಾಯ್ತ.. ನಾಲ್ಕು ಜನ ಸ್ಪಾಟಲ್ಲೇ ಸತ್ತೋದ್ರು.. ನನಗಾಗ ಕೇವಲ ಐದು ವರ್ಷ."

"ಮನೆ ಬಿಟ್ಟು ಒಂದು ವರ್ಷ ಆಯ್ತು ಅಂತೀರಿ.. ಮನೆ ನೆನಪಾಗಲ್ವಾ?"

"ನೆನಪಾಗುತ್ತೆ.. ಅಪ್ಪ ಇಲ್ಲ.. ಅಮ್ಮ, ಅಣ್ಣ ತಂಗೀರು ಇದಾರೆ.. ಆಗಾಗ ಫೋನ್ ಮಾಡ್ತೀನಿ" ಕಿಸೆಯಿಂದ ಚಿಕ್ಕ ಸ್ಕ್ರೀನಿನ, ಸವೆದ ಕೀಪ್ಯಾಡಿನ ಮೊಬೈಲೊಂದನ್ನು ತೆಗೆದು ತೋರಿಸಿದ..

ನನ್ನನ್ನು ನಂಬಿ! ಮೋದಿಯವರ ವಿಷಯವನ್ನು ಅವನೇ ಎತ್ತಿದ!

"ಆಕ್ಸಿಡೆಂಟಿನಲ್ಲಿ ಕೈಕಾಲು ಕಳ್ಕೊಂಡವ್ರಿಗೆ ಒಂದ್ ಲಕ್ಷ ಕೊಟ್ಟು ಕೈ ತೊಳ್ಕೊಳೋ ಕೇಂದ್ರ ಸರ್ಕಾರದ ನಿಲುವನ್ನ ನಾನು ಒಪ್ಪಲ್ಲ.. ಅದ್ರಿಂದ ಸಮಸ್ಯೆ ಪರಿಹಾರ ಆಗಲ್ಲ."

"ಮತ್ತೆ ನಿಮ್ ಸಲಹೆ ಏನು?"

"ಇಡೀ ಸೇವಾವಧಿಯಲ್ಲಿ ಒಂದೂ ಆಕ್ಸಿಡೆಂಟ್ ಮಾಡದ ಡ್ರೈವರುಗಳಿಗೆ ಒಂದ್ ಲಕ್ಷ ಬಹುಮಾನ ಘೋಷಣೆ ಮಾಡ್ಲಿ.. ಚಾಲಕರಿಗೂ ಉತ್ತೇಜನ ನೀಡಿದ ಹಾಗಾಗುತ್ತೆ." ಪರಿಣಾಮಕಾರಿ ಸಲಹೆ ಅನ್ನಿಸಿತು.. ಮಾತು ಮುಂದುವರಿಸುತ್ತಾ...

"ಗುಜರಾತಿನಲ್ಲಿ ಸುತ್ತಾಡ್ತಿದ್ದಾಗ ಒಬ್ಬನನ್ನು ಕೇಳಿದ್ದೆ, 'ಯಾಕೆ ನೀವು ಪದೇ ಪದೇ ಮೋದಿಯನ್ನೇ ಆರಿಸ್ತಾ ಬಂದಿದ್ದೀರಿ' ಅಂತಾ.. ಅದಕ್ಕವನು, 'ಹಿಂದಿನ ಸರ್ಕಾರಗಳಿದ್ದಾಗ ನಮ್ ಕೆಲ್ಸ ಆಗ್ಬೇಕು ಅಂದ್ರೆ ಹದಿನೈದ್ ಜೊತೆ ಚಪ್ಪಲಿಗಳನ್ನು ಸವೆಸ್ಬೇಕಾಗ್ತಿತ್ತು, ಈಗ ಕೇವಲ ಹದಿನೈದ್ ದಿನಗಳ ಒಳ್ಗೆ ಆಗೋಗುತ್ತೆ.. ಮಾಡ್ಲಿಲ್ಲ ಅಂದ್ರೆ ಆಫೀಸರುಗಳು ಮನೆ ದಾರಿ ಹಿಡೀಬೇಕಾಗುತ್ತೆ ಅಂದ.."

ಎಷ್ಟು ಹಸಿದಿತ್ತೋ ಜೀವ.. ಎರಡು ಪ್ಲೇಟ್ ಊಟ ಮಾಡಿದ.. ಹೋಟೆಲ್ ಮಾಲೀಕ ಎರಡನೇ ಪ್ಲೇಟಿನ ಬಿಲ್ ತೆಗೆದುಕೊಳ್ಳಲಿಲ್ಲ..

"ನಿಮಗೆ ಲಾಸ್ ಆಗ್ಬಾರ್ದು ಅಲ್ವಾ.. ಇಗೋ ತಗೊಳ್ಳಿ" ಎಂದು ದುಡ್ಡನ್ನು ಮುಂದೆ ಹಿಡಿದ.. ಮಾಲೀಕ ಮುಟ್ಟಲಿಲ್ಲ.. ಮೊನ್ನೆ ಬೆಂಗಳೂರಿನಲ್ಲಿ ನಡೆದ ಘಟನೆ ನೆನಪಾಯ್ತು.. ಬೇಸರ ಕೊಂಚ ಇಳಿಯಿತು.

"ನೀವು ಇನ್ಯಾವಾಗ ಸಿಗ್ತಿರೋ, ಅಥವಾ ಇದೇ ಕೊನೆಯ ಬಾರಿಗೆ ಸಿಗ್ತಿದೀರೋ ಏನೋ.. ನೆನಪಿಗೆ ಒಂದು ಫೋಟೊ ತೆಗೆಸ್ಕೊಳ್ಳೋಣ ಬನ್ನಿ" ಅಂದೆ.

ದುಲಾಲ್ ಸರ್ಕಾರ್ ಎಂಬ ಅದ್ಭುತ ಸಾಹಸಿಯ ಜೊತೆ ನಿಂತು ಫೋಟೋ ತೆಗೆಸಿಕೊಂಡು ಆತನನ್ನು ಬೀಳ್ಕೊಡುವಾಗ ಮನಸ್ಸು ತುಂಬಿ ಬಂದಿತ್ತು.. ಆತ ಒಂಟಿಕಾಲಿನಲ್ಲಿ ಪೆಡಲ್ ತುಳಿದುಕೊಂಡು ಹೋಗುತ್ತಿರುವುದನ್ನು ಬೆರಗಿನಿಂದ ನೋಡುತ್ತಾ ನಿಂತಿದ್ದೆ.. ಆತ ತಿರುವಿನಲ್ಲಿ ಮರೆಯಾಗುವವರೆಗೂ ನೋಡುತ್ತಲೇ ನಿಂತಿದ್ದೆ.. ಆತ ಹೋಗೋದ್ ಹೋಗ್ತಾ ನನ್ನನ್ನು ಕುಬ್ಜನನ್ನಾಗಿಸಿ ಹೋರಟುಹೋದ..

ಹ್ಞಾಂ, ಹೇಳುವುದನ್ನು ಮರೆತಿದ್ದೆ. 23.12.2012ರ ದಿನದಂದು ಇದೇ ದುಲಾಲ್ ಸರ್ಕಾರ್ ಹೂಗ್ಲಿ ನದಿಯಲ್ಲಿ ಹದಿನಾಲ್ಕು ಕಿಮಿ ಈಜಿದ್ದನಂತೆ.. ಎರಡೂವರೆ ಗಂಟೆಗಳ ಅವಧಿಯಲ್ಲಿ. ಛಲವೇ.. ನಿನಗೆ ಶರಣು.ಶರಣೆಂಬೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hats off this this one legged patriotic cyclist from North-East India, who has been cycling from Jammu and Kashmir to spread the importance of education. He has covered half of India in one year alone on bicycle. Article by Gavi Swamy, Chamarajanagar.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more