ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸರ್ಕಾರದಿಂದ ಸ್ವಚ್ಛ ಆಡಳಿತ : ರಾಜ್ಯಪಾಲ

|
Google Oneindia Kannada News

HR Bhardwaj
ಬೆಂಗಳೂರು, ಜ.22 : ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಿದ್ದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಸ್ವಚ್ಛ ಮತ್ತು ಪಾರದರ್ಶಕ ಆಡಳಿತ ನೀಡುತ್ತಿದೆ ಎಂದು ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.

12 ಗಂಟೆಗೆ ಸರಿಯಾಗಿ ರಾಜ್ಯಪಾಲರು ತಮ್ಮ ಭಾಷಣ ಆರಂಭಿಸಿದರು. ಜಂಟಿ ಸದನ ಉದ್ದೇಶಿಸಿ ಮಾತನಾಡಲು ಆಗಮಿಸಿದ ಎಚ್.ಆರ್. ಭಾರದ್ವಾಜ್‌ರವರಿಗೆ ಭವ್ಯ ಸ್ವಾಗತ ಕೋರಲಾಯಿತು. ವಿಧಾನಸೌಧ ಮೆಟ್ಟಿಲುಗಳ ಮೇಲೆ ರತ್ನಗಂಬಳಿ ಹಾಸಿ, ಪೊಲೀಸ್ ವಾದ್ಯಗೋಷ್ಠಿಯೊಂದಿಗೆ ಅವರನ್ನು ಬರಮಾಡಿಕೊಳ್ಳಲಾಯಿತು.

ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್‌ನ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್, ರಾಜ್ಯಪಾಲರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕೋಮಗಲಭೆ ನಡೆದಿಲ್ಲ, ರಾಜ್ಯದಲ್ಲಿ ಸೌಹಾರ್ದಯು ವಾತಾವರಣವನ್ನು ಕಾಪಾಡಿಕೊಂಡು ಬರಲು ಸರ್ಕಾರ ಸಫಲವಾಗಿದೆ. ದುರ್ಬಲ ವರ್ಗದವರಿಗೆ ಮತ್ತು ಅಲ್ಪ ಸಂಖ್ಯಾತರಿಗೆ ಸೂಕ್ತ ಭದ್ರತೆ ದೊರಕಿದೆ ಎಂದು ರಾಜ್ಯಪಾಲರು ಸಂತಸ ವ್ಯಕ್ತಪಡಿಸಿದರು.

ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರ ಮೆಚ್ಚುಗೆಗಳಿಸಿದೆ ಎಂದು ರಾಜ್ಯಪಾಲರು ಹೇಳಿದರು. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಜಾರಿಗೆ ತಂದ ಹಲವಾರು ಯೋಜನೆಗಳನ್ನು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಹೊಸದಾಗಿ ಜಾರಿಗೆ ಬಂದ ಸರ್ಕಾರ ಕೈಗಾಕೋದ್ಯಮಿಗಳು, ಬಡವರ ವಿಶ್ವಾಸಗಳಿಸಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರ ಹೊಸ ಕೈಗಾರಿಕಾ ನೀತಿಯನ್ನು ರೂಪಿಸಿ ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಹೂಡಿಕೆದಾರರನ್ನು ಸೆಳೆಯಲು ಹೂಡಿಕೆದಾರರ ಸಮಾವೇಶ ನಡೆಸಿದೆ ಎಂದು ರಾಜ್ಯಪಾಲರು ಶ್ಲಾಘಿಸಿದರು.

ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು

ಕೈಗಾರಿಕಾ ನೀತಿ : ಮುಂದಿನ ಐದು ವರ್ಷಗಳಲ್ಲಿ 10 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಹೊಸ ಕೈಗಾರಿಕಾ ನೀತಿಯನ್ನು ರೂಪಿಸಿ 2014ರ ಏಪ್ರಿಲ್ 1 ರಿಂದ ಜಾರಿಗೆ ತರಲಾಗುವುದು. ಕೈಗಾರಿಕೆಗಳ ಸ್ಥಾಪನೆಗೆ ಆನ್‌ಲೈನ್‌ನಲ್ಲಿಯೇ ಅರ್ಜಿಗಳನ್ನು ಸಲ್ಲಿಸಿ ಎಲ್ಲಾ ರೀತಿಯ ಲೈಸೆನ್ಸ್‌ಗಳನ್ನು ವಿತರಿಸುವ ಪದ್ಧತಿಯನ್ನು ಜಾರಿಗೊಳಿಸಲಾಗುವುದು ಎಂದು ರಾಜ್ಯಪಾಲರು ಹೇಳಿದರು.

ವರ್ಷಾಂತ್ಯಕ್ಕೆ ಮೆಟ್ರೋ : ಪೀಣ್ಯ ಮತ್ತು ನಾಗಸಂದ್ರ ನಡುವಿನ ಮೆಟ್ರೋ ರೈಲು ಸಂಚಾರ ಆಗಸ್ಟ್‌ನಿಂದ ಆರಂಭವಾಗಲಿದೆ. ಅದೇ ರೀತಿ ಪೂರ್ವ-ಪಶ್ಚಿಮ ಕಾರಿಡಾರ್ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ರಾಜ್ಯಪಾಲರು ಹೇಳಿದರು. ಮೆಟ್ರೋ ರೈಲ್ವೆ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.

ನೀರು ಪೂರೈಕೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರಿದ 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ 10 ದಶಲಕ್ಷ ನಾಗರಿಕರಿಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ತಾಜ್ಯ ವಿಲೇವಾರಿ, ವಸತಿ ಸೌಲಭ್ಯದಂತಹ ವಿನೂತನ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ರಾಜ್ಯಪಾಲರು ತಿಳಿಸಿದರು.

ಪ್ರಣಾಳಿಕೆಯನ್ನು ಈಡೇರಿಸುತ್ತೇವೆ : ಕಾಂಗ್ರೆಸ್ ಪಕ್ಷ ಚುನಾವಣಾ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಪಿಯುಸಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್ ಮತ್ತು ನೋಟ್‌ಪ್ಯಾಡ್‌ಗಳನ್ನು ನೀಡಲಾಗುವುದು, 3880 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಅಗತ್ಯ ಕ್ರಮ, ಕೋಲಾರ ಮತ್ತು ಯಾದಗಿರಿಯಲ್ಲಿ ರೈಲ್ವೆ ಕೋಚ್ ತಯಾರಿಕಾ ಘಟಕ ಸ್ಥಾಪಿಸಲಾಗುವುದು ಎಂದು ಹೇಳಿದರು.

ನೈತಿಕ ಪೊಲೀಸ್ ಗಿರಿಗೆ ಅಸಮಾಧಾನ : ನೈತಿಕ ಪೊಲೀಸ್ ಗಿರಿ ವಿರುದ್ಧ ತಮ್ಮ ಭಾಷಣದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ರಾಜ್ಯಪಾಲರು, ಕೋಮು ಗಲಭೆಗಳು ನಡೆಯದಂತೆ ಸರ್ಕಾರ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನೈತಿಕ ಪೊಲೀಸ್‌ಗಿರಿ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆ. ಮೂಲಭೂತವಾದಿಗಳು ಹಾಗೂ ಇವುಗಳನ್ನು ಪ್ರಚೋದಿಸುವ ಸಂಘ-ಸಂಸ್ಥೆಗಳನ್ನು ಹತ್ತಿಕ್ಕಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ಗಣಿಗಾರಿಕೆ ಕುರಿತು ಹೇಳಿದ್ದೇನು : ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಲೋಕಾಯುಕ್ತರು ನೀಡಿರುವ ವರದಿಯನ್ನು ಜಾರಿಗೊಳಿಸಿ ತಪ್ಪಿತಸ್ಥರನ್ನು ಶಿಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ. ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಕೋರ್ಟ್ ಆದೇಶದಂತೆ ಬಳ್ಳಾರಿ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಪುನರ್ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ ಎಂದರು.

ಜಾನುವಾರುಗಳಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ : ರಾಜ್ಯದಲ್ಲಿ ಇತ್ತೀಚೆಗೆ ಜಾನುವಾರುಗಳಿಗೆ ಕಾಣಿಸಿಕೊಂಡ ಕಾಲುಬಾಯಿ ರೋಗ ತಡೆಗಟ್ಟಲು ಸರ್ಕಾರ ಪ್ರತಿಯೊಂದು ಕಂದಾಯ ವಿಭಾಗದಲ್ಲಿ ಜಾನುವಾರುಗಳಿಗಾಗಿ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಮುಂದಾಗಿದೆ. ಈ ಆಸ್ಪತ್ರೆಗಳಿಗೆ ಅಗತ್ಯವಾದ ಆರ್ಥಿಕ ನೆರವು ಒದಗಿಸಲು ಸರ್ಕಾರ ಬದ್ಧವಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಗಳು ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.

ಸಂಪನ್ಮೂಲ ಕ್ರೋಡಿಕರಣ : ಡಿಸೆಂಬರ್ ಅಂತ್ಯಕ್ಕೆ ವಾಣಿಜ್ಯ ಹಾಗೂ ಅಬಕಾರಿ ತೆರಿಗೆಯಿಂದ ಸುಮಾರು 35 ಸಾವಿರ ಕೋಟಿ ರೂ. ಸಂಪನ್ಮೂಲ ಕ್ರೋಢೀಕರಿಸಲಾಗಿದೆ. ಇದು ಕಳೆದ ವರ್ಷಕ್ಕಿಂತ ಶೇ.12 ರಷ್ಟು ಹೆಚ್ಚಾಗಿದೆ. ಸಂಪನ್ಮೂಲ ಕ್ರೋಡಿಕರಣದಲ್ಲಿ ನಿಗದಿತ ಗುರಿಯನ್ನು ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

English summary
Karnataka Governor H.R. Bhardwaj on Wednesday, Jan 22 addressed Karnataka State Legislature. Assembly session will held form Jan 22 to 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X