ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಟರ್ ಬಡ್ಡಿ ತಿನ್ನೋ 'ಬಡ್ಡೀಮಕ್ಳ'ನ್ನು ಮಟ್ಟ ಹಾಕುವವರು ಯಾರು?

By ಬಾಲರಾಜ್ ತಂತ್ರಿ
|
Google Oneindia Kannada News

ಹಣ ಕಂಡಾಗ ಹೆಣ ಕೂಡಾ ಬಾಯ್ಬಿಡುತ್ತೆ ಅನ್ನೋ ಮಾತಿದೆ. ಮನುಷ್ಯನಿಗೆ ದುಡ್ಡಿನ ಮೇಲೆ ಆಸೆ ಸಹಜ, ಆದರೆ ಅದು ಅತಿಯಾದಾಗಲೇ ಚಕ್ರಬಡ್ಡಿ, ಮೀಟರ್ ಬಡ್ಡಿ, ಅದು..ಇದು ಅನ್ನೋ ಕಾನೂನು ಬಾಹಿರ ದಂಧೆ ನಡೆಯೋದು.

ಚಕ್ರ, ಮೀಟರ್ ಬಡ್ಡಿ ಅನ್ನೋ ದಂಧೆ ಎಷ್ಟು ವ್ಯಾಪಕವಾಗಿ ಬೆಳೆಯುತ್ತಿದೆ ಎಂದರೆ ಈ ದಂಧೆಯಲ್ಲಿ ತೊಡಗಿರುವ ಮನುಷ್ಯ 'ಮನುಷ್ಯತ್ವ'ವನ್ನೇ ಮೆರೆತು ಹಣದ ಪಿಪಾಸಿನಿಂದ ದುಡ್ಡಿನ ಸಾಮ್ರಾಜ್ಯ ಕಟ್ಟಲು ಮುಂದಾಗಿರುವುದು.

ಖಾಕಿ, ಖಾದಿ ಮತ್ತು ಸರಕಾರೀ ಅಧಿಕಾರಿಗಳ ಬೆಂಬಲವಿಲ್ಲದೇ ಈ ದಂಧೆ ನಡೆಯುವುದು ಕಷ್ಟ ಅನ್ನೋದು ಓಪನ್ ಸೀಕ್ರೆಟ್. ಒಂದು ರೀತಿಯಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತೆ ಅನ್ನೋದು ಗೊತ್ತಿದ್ದರೂ ಇದುವರೆಗಿನ ಯಾವುದೇ ಸರಕಾರ ಇದಕ್ಕೆ ಕಡಿವಾಣ ಹಾಕಲು ಮುಂದಾಗದಿರುವುದು ದುರಂತ.

ಈ ಮೀಟರ್ ಬಡ್ಡಿ ದಂಧೆಗೆ ಕೊಡಬಹುದಾದ ಜ್ವಲಂತ ಉದಾಹರಣೆಯೆಂದರೆ ಬೆಂಗಳೂರಿನ ಕಲಾಸಿಪಾಳ್ಯ ಮಾರುಕಟ್ಟೆ. ಇಲ್ಲಿ ಬೆಳಗ್ಗೆ ಐನೂರು ರೂಪಾಯಿ ದುಡ್ಡು ತೆಗೆದುಕೊಳ್ಳುವ ತಳ್ಳುಗಾಡಿ ಅಥವಾ ದೈನಂದಿನ ವ್ಯಾಪಾರಿ ರಾತ್ರಿ ಕಡಿಮೆಯೆಂದರೆ 600-650 ರೂಪಾಯಿ ವಾಪಸ್ ಕೊಡಬೇಕಾಗುತ್ತೆ. (ಮೀಟರ್ ಬಡ್ಡಿ ದಂಧೆಕೋರರ ವಿರುದ್ದ ಕ್ರಮ)

ಅಂದರೆ ದಿನವೊಂದಕ್ಕೆ ಈ ಬಡ್ಡಿ ದಂಧೆಕೋರರು ತೆಗೆದುಕೊಳ್ಳುವ ಬಡ್ಡಿಯ ಪರ್ಸೆಂಟೇಜ್ ಎಷ್ಟು ಅನ್ನೋದನ್ನು ನೀವೇ ಅಂದಾಜಿಸಿಕೊಳ್ಳಿ. ತಳ್ಳುಗಾಡಿನ ವ್ಯಾಪಾರಿಗಳು ಊರೆಲ್ಲಾ ಸುತ್ತಾಡಿ ಕಷ್ಟಪಟ್ಟು ದುಡಿದು ಸಂಸಾರಕ್ಕಾಗಿ ರಾತ್ರಿ ತೆಗೆದುಕೊಂಡು ಹೋಗೋದು ನೂರೋ, ಇನ್ನೂರು.

Government should take dynamic step to control private money lenders meter interest business

ಮೀಟರ್ ಬಡ್ಡಿ ನಡೆಸುವವರು ಫೈನಾನ್ಸ್ ಕಂಪೆನಿ ಓಪನ್ ಮಾಡಬೇಕಾದಾಗ ಪಾಲಿಸಬೇಕಾದ ರೂಲ್ಸ್ ಎಂಡ್ ರೆಗ್ಯುಲೇಶನ್, ನೊಂದಾವಣಿ ಮಾಡಿಸಿಕೊಳ್ಳಬೇಕು, ವರ್ಷಕ್ಕೆ ಇಷ್ಟೇ ಬಡ್ಡಿ ತೆಗೆದುಕೊಳ್ಳಬೇಕು ಅನ್ನೋ ನಿಯಮವಿದೆ.

ಆದರೆ ಈ ನಿಯಮವನ್ನೆಲ್ಲಾ ಪಾಲಿಸುವವರು ಯಾರೂ ಇಲ್ಲ. ತಮ್ಮಿಂದ ಹಣ ಪಡೆಯುವವರಿಂದ ಖಾಲಿ ಚೆಕ್, ಪ್ರಾಮಿಸರಿ ನೋಟ್ ಬರೆಸಿಕೊಂಡು ಅವರು ಏನೂ ಮಾಡಲಾಗದ ಸ್ಥಿತಿಗೆ ತಂದು ಹಾಕುತ್ತಾರೆ.

ಅಕ್ರಮ ಬಡ್ಡಿದಂಧೆ ನಡೀತಾ ಇದೆ ಎಂದು ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೇ ಖಾಕಿ, ಖಾದಿ ಸ್ನೇಹಿತರು ಸುಮ್ಮನಿರುವ ಉದಾಹರಣೆಗಳೇ ಹೆಚ್ಚು . ಮೀಟರ್ ಬಡ್ಡಿಯವರು ಹೇಳಿದ್ದೇ ಬಡ್ಡಿ, ಕೊಡದಿದ್ದರೆ ಗೊತ್ತಲ್ಲಾ..ಅಮ್ಮ.. ಅಕ್ಕ.. ರೌಡಿಸಂ. ಇಂತಹ ದಂಧೆಗೆ ಹಾಲಿ ಶಾಸಕರ ಬೆಂಬಲವಿದೆ ಅನ್ನೋ ಮಾತೂ ಕೇಳಿ ಬರುತ್ತಿದೆ.

ಪ್ರಮುಖವಾಗಿ ಈ ದಂಧೆಯಿಂದಾಗಿ ಅಂದೇ ದುಡಿ, ಅಂದೇ ತಿನ್ನೋ ಕುಟುಂಬಗಳು ದಾರಿಗೆ ಬಿದ್ದಿವೆ. ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊಂಡ ನಂತರ, ಊರೆಲ್ಲಾ ಉಗಿಸಿಕೊಂಡ ನಂತರ ಈ ದಂಧೆಗೆ ಸರಕಾರ ಅಂಕುಶ ಹಾಕಲು ಹೊರಟಿದೆ.

ಈ ಮೂಲಕವಾದರೂ ಸರಕಾರ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿತು ಅನ್ನೋದೊಂದೇ ನಿಟ್ಟಿಸಿರು ಬಿಡುವ ವಿಚಾರ. ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಮಿತಿಯನ್ನು ನೇಮಿಸಲಾಗಿದೆ. ಮುಖ್ಯಮಂತ್ರಿಗಳು ಧೈರ್ಯ ತುಂಬಿದ್ದಾರೆ.

ಪ್ರಧಾನಿ ಇನ್ನೂ ಬಂದು ಸಾಂತ್ವನ ನೀಡಬೇಕಷ್ಟೇ. ಇನ್ನು ಕಾಂಗ್ರೆಸ್ ಉಪಾಧ್ಯಕ್ಷರು ಇಲ್ಲಿನ ರೈತರ ಕುಟುಂಬವನ್ನು ಭೇಟಿ ಮಾಡುವ ಕಾರ್ಯಕ್ರಮ ಇದ್ದರೂ ಇರಬಹುದು. ಅಥವಾ ಕಾಂಗ್ರೆಸ್ಸೇತರ ಸರಕಾರದ ರೈತರು ಮಾತ್ರ ಇವರ ಕಣ್ಣಿಗೆ ಬಿದ್ದರೆ ಏನೂ ಮಾಡೋಕಾಗಲ್ಲ.

ಮೀಟರ್ ಬಡ್ಡಿ ಸಾಲ ಮಾಡಿದರೆ ಏನು ಮಾಡಕಾಗುತ್ತೆ, ರೈತರ ಸಾವು ಪ್ರೇಮ ವೈಫಲ್ಯದಿಂದ ಅನ್ನೋ ಬೇಕಾಬಿಟ್ಟಿ ಹೇಳಿಕೆ ನೀಡುವ ರಾಜಕಾರಣಿಗಳ ಉಡಾಫೆಯ ಮಾತಿಗೆ ಕಡಿವಾಣ ಬೀಳಬೇಕಾಗಿದೆ. ರೈತರ ಸಾವಿನ ವಿಚಾರದಲ್ಲಿ ರಾಜಕೀಯಕ್ಕೆ ಫುಲ್ ಸ್ಟಾಪ್ ಬೀಳಬೇಕಿದೆ. (ರೈತರ ಸಾವಿಗೆ ಪ್ರೇಮ ವೈಫಲ್ಯ ಕಾರಣ)

ಸರಕಾರದಿಂದ ಧೈರ್ಯ ತುಂಬುವ ಕೆಲಸ ನಡೆಯುತ್ತಿದ್ದರೂ, ಸಮೂಹ ಸನ್ನಿಯಂತೆ ರೈತರ ಆತ್ಮಹತ್ಯೆ ಕಮ್ಮಿಯಾಗುತ್ತಿಲ್ಲ. ದಿನಕ್ಕೆ ಐದು, ಹತ್ತರಂತೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರೆಲ್ಲರಿಗೂ ಮೀಟರ್ ಬಡ್ಡಿ/ ಸಾಲದ ಸಮಸ್ಯೆ ಅಲ್ಲದಿದ್ದರೂ ಈ ಬಡ್ಡಿ ದಂಧೆಗೆ ಸರಕಾರ ಕಟ್ಟುನಿಟ್ಟಿನ ಕಾನೂನು ರೂಪಿಸಬೇಕಾಗಿದೆ.

ಸರಕಾರದ ಕಟ್ಟುನಿಟ್ಟಿನ ಎಚ್ಚರಿಕೆಯ ನಡುವೆಯೂ ಮೀಟರ್ ಬಡ್ಡಿ ದಂಧೆ ಅವ್ಯಾಹತವಾಗಿ ಮುಂದುವರಿಯುತ್ತಲೇ ಇದೆ. ಹೇಳೋರಿಲ್ಲ, ಕೇಳೋರಿಲ್ಲ. ಒಬ್ಬರು, ಇಬ್ಬರನ್ನು ಬಂಧಿಸಲಾಗುತ್ತಿದೆ. ಬಂಧನಕ್ಕೊಳಗಾದವಿರಿಗೆ ಸೂಕ್ತ ಶಿಕ್ಷೆ ವಿಧಿಸಲಾಗುತ್ತಿದೆಯೋ ದೇವರೇ ಬಲ್ಲ.

ರೈತರಂತೆ, ಇತರ ಬಹಳಷ್ಟು ಕುಟುಂಬಗಳು ಈ ದಂಧೆಗೆ ಬಲಿಪಶುವಾಗಿದ್ದಾರೆ. ಒಟ್ಟಿನಲ್ಲಿ ಜನರಿಂದ, ವಿರೋಧ ಪಕ್ಷಗಳಿಂದ ಪ್ರತಿರೋಧ ತಪ್ಪಿಸಿಕೊಳ್ಳಲು ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವ ಸರಕಾರದ ಕ್ರಮ ಕಣ್ಣೊರೆಸುವ ಕೆಲಸವಾಗದಿರಲಿ.

English summary
Government should take dynamic step to control private money lenders meter interest percentage and business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X