ಕಳಸಾ-ಬಂಡೂರಿಗಾಗಿ ಏ.18ರಂದು ಕರ್ನಾಟಕ ಬಂದ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 18 : ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಯೋಜನೆ ಜಾರಿಗೆ ಒತ್ತಾಯಿಸಿ ಏಪ್ರಿಲ್ 18ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

ಕರ್ನಾಟಕ ಗಡಿ ಹೋರಾಟ ಸಮಿತಿಯು ಏ.18ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದೆ ಎಂದು ಸಮಿತಿಯ ಅಧ್ಯಕ್ಷ ಪ್ರೊ.ಬಿ.ಕೆ.ರಾ.ರಾವ್ ಬೈಂದೂರ್‌ ಅವರು ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಕಳಸಾ-ಬಂಡೂರಿ ಹೋರಾಟಕ್ಕೆ ಕೈ ಜೋಡಿಸಿದ ಕರ್ನಾಟಕ]

karnataka bandh

ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಬಂದ್‌ಗೂ ಮುನ್ನ ಏಪ್ರಿಲ್ 16ರಂದು ಬೆಂಗಳೂರಿನಲ್ಲಿ ಬೃಹತ್ ಪತ್ರಿಭಟನೆ ಹಮ್ಮಿಕೊಳ್ಳಲಾಗಿದೆ.[ಏನಿದು ಕಸಳಾ-ಬಂಡೂರಿ ಯೋಜನೆ]

ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ, ನರಗುಂದ, ನವಲಗುಂದ, ಬೆಟಗೇರಿ, ಮುಂಡರಗಿ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಕೂಡಲೇ, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಬಿ.ಕೆ.ರಾವ್ ಒತ್ತಾಯಿಸಿದ್ದಾರೆ. [ತೀವ್ರಗೊಂಡ ಕಳಸಾ ಹೋರಾಟ : ಹುಬ್ಬಳ್ಳಿಯಲ್ಲಿ ರೈಲು ಬಂದ್]

1989ರಲ್ಲಿ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಪ್ರತಾಪಸಿಂಹ ರಾಣೆ ಅವರು ರಾಜ್ಯಕ್ಕೆ 45 ಟಿಎಂಸಿ ನೀರು ಬಿಡಲು ಒಪ್ಪಿದ್ದರು. ಆದರೆ, ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಕಳಸಾ -ಬಂಡೂರಿ ಯೋಜನೆ ಜಾರಿಯಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಏನಿದು ವಿವಾದ? :ಕರ್ನಾಟಕದ ಮೂಲಕ ಹರಿದು ಹೋಗುವ ಮಹಾದಾಯಿ ನದಿ ನೀರನ್ನು ಮಲಪ್ರಭಾ ಡ್ಯಾಂನಲ್ಲಿ ಸಂಗ್ರಹಿಸಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವುದು ಮಹಾದಾಯಿ ಅಥವ ಕಳಸಾ-ಬಂಡೂರಿ ಯೋಜನೆಯಾಗಿದೆ.

ಮಹಾದಾಯಿ ನದಿಯನ್ನು ಗೋವಾದ ಜೀವನದಿ ಎಂದು ಕರೆಯುತ್ತಾರೆ. ಸುಮಾರು 77 ಕಿ.ಮೀ. ಇರುವ ಈ ನದಿಯು ಕರ್ನಾಟಕದಲ್ಲಿ ಸುಮಾರು 29 ಕಿ.ಮೀ.ಹರಿಯುತ್ತದೆ. ರಾಜ್ಯದ ಬೆಳಗಾವಿಯ ಮೂಲಕ ಈ ನದಿ ಹರಿದು ಸಮುದ್ರ ಸೇರಿಕೊಳ್ಳುತ್ತದೆ. ಆದರೆ, ಈ ಯೋಜನೆಗೆ ಗೋವಾ ರಾಜ್ಯ ವಿರೋಧ ವ್ಯಕ್ತಪಡಿಸುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Gadi Horata Samiti called for Karnataka bandh on April 18th, 2016 demanding for implementation of Kalasa-Banduri drinking water project.
Please Wait while comments are loading...