ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕದ್ದುಮುಚ್ಚಿ ತಮಿಳುನಾಡಿಗೆ ನೀರು: ರೈತರ ಪ್ರತಿಭಟನೆ

By Ashwath
|
Google Oneindia Kannada News

ಮಂಡ್ಯ,ಜು. 17: ಕೆಆರ್‌ಎಸ್ ಜಲಾಶಯ ಭರ್ತಿಯಾಗುವ ಮುನ್ನವೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಕೆಆರ್‌ಎಸ್ ಬಳಿ ಇರುವ ಕಾವೇರಿ ನೀರಾವರಿ ನಿಗಮದ ಎದುರು ಪ್ರತಿಭಟನೆ ನಡೆಸಿದರು.

ಕಳೆದ ಎರಡು ದಿನಗಳಿಂದ ತಮಿಳುನಾಡಿಗೆ 8ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸುತ್ತಿದ್ದರೆ, ಬುಧವಾರದಿಂದ ಸಂಜೆ 6 ಗಂಟೆಯಿಂದ 10 ಸಾವಿರ ಕ್ಯೂಸೆಕ್ಸ್ ನೀರನ್ನು ಜಲಾಶಯದಿಂದ ಹೊರ ಬಿಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಜುಲೈ 31 ರವರೆಗೆ ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ರೈತರ ನಾಲೆಗಳಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳು ಈ ಹಿಂದೆ ಹೇಳಿದ್ದರು. ಆದರೀಗ ಜಿಲ್ಲೆಯ ರೈತರಿಗೆ ನೀರು ನೀಡದೆ ನೆರೆಯ ತಮಿಳುನಾಡಿಗೆ ನೀರು ಬಿಡುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿ ನಿಗಮದ ಫಲಕವನ್ನು ಕಿತ್ತುಹಾಕಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

krs dam

ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ, ಸರ್ಕಾರ ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸದಿದ್ದರೆ ಮಂಡ್ಯ-ಬೆಂಗಳೂರು ಹೆದ್ದಾರಿಯನ್ನು ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಕಾವೇರಿ ನ್ಯಾಯಾಧಿಕರಣ ತೀರ್ಪಿನ ಪ್ರಕಾರ ತಮಿಳುನಾಡಿಗೆ ಜೂನ್‌ನಲ್ಲಿ 30 ಟಿಎಂಸಿ ಹಾಗೂ ಜುಲೈನಲ್ಲಿ 50-60 ಟಿಎಂಸಿ ನೀರನ್ನು ಕೆಆರ್‌ಎಸ್‌ನಿಂದ ಬಿಡಬೇಕಾಗಿತ್ತು. ಆದರೆ, ಜೂನ್‌ನಲ್ಲಿ ಮುಂಗಾರು ಕೈ ಕೊಟ್ಟಿದ್ದರಿಂದ ತಮಿಳುನಾಡಿಗೆ ನಿಗದಿತ ನೀರನ್ನು ಬಿಡಲಾಗಿರಲಿಲ್ಲ. ಈಗ ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಕೆಆರ್‌ಎಸ್‌ಗೆ ಈಗ ಎರಡು ದಿನಗಳಿಂದ ಅಂದಾಜು 20 ಸಾವಿರ ಅಧಿಕ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ನ್ಯಾಯಾಧಿಕರಣದ ತೂಗು ಕತ್ತಿಯಿಂದ ತಪ್ಪಿಸಿಕೊಳ್ಳಲು ಇದೀಗ ರಾಜ್ಯ ಸರ್ಕಾರ ಬರುತ್ತಿರುವ ನೀರಿನಲ್ಲಿ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸುತ್ತಿದೆ.

ನೀರು ಎಷ್ಟಿದೆ? ಗರಿಷ್ಠ 124 ಅಡಿಯ ಜಲಾಶಯದಲ್ಲಿ ಪ್ರಸ್ತುತ 90.40 ಅಡಿ ನೀರು ಸಂಗ್ರಹವಾಗಿದೆ. 24829 ಕ್ಯೂಸೆಕ್ಸ್‌‌‌‌ ನೀರು ಹರಿದು ಬರುತ್ತಿದ್ದರೆ, 9871 ಕ್ಯೂಸೆಕ್ಸ್‌ ನೀರನ್ನು ಹೊರಬಿಡಲಾಗುತ್ತಿದೆ.

English summary
Various organisations protested against the Cauvery Niravari Nigam Limited (CNNL) officials and the state government for releasing 8,052 cusecs from the KRS reservoir to Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X