ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಇರೋ 1 ಸ್ಥಾನಕ್ಕೆ ಅದೆಷ್ಟು ಜನ ಟವಲ್ ಹಾಕ್ತಾರೋ!

|
Google Oneindia Kannada News

ರಾಜಕಾರಣದಲ್ಲಿ ಪದವಿ ಎನ್ನುವ ಪದದ ಮೇಲೆ ರಾಜಕಾರಣಿಗಳಿಗೆ ಅದೇನು ಆಕರ್ಷಣೆಯೋ? ಪಕ್ಷ ಅಧಿಕಾರದಲ್ಲಿದ್ದಾಗ ಸಚಿವ ಸ್ಥಾನ, ಕ್ಯಾಬಿನೆಟ್, ನಿಗಮ ಮಂಡಳಿ.. ಅಧಿಕಾರದಲ್ಲಿ ಇಲ್ಲದೇ ಇದ್ದಾಗ ರಾಜ್ಯಾಧ್ಯಕ್ಷ, ಕಾರ್ಯದರ್ಶಿ, ಖಜಾಂಜಿ, ಅದು.. ಇದು..

ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಜೊತೆಗೆ ರಾಜ್ಯ ಗೃಹ ಸಚಿವರೂ ಆಗಿರುವ ಡಾ. ಪರಮೇಶ್ವರ್ ಅವರ ರಾಜ್ಯಾಧ್ಯಕ್ಷ ಅವಧಿ ಮುಗಿದಿರುವುದರಿಂದ, ಪ್ರತಿಷ್ಠೆಯ ಈ ಸ್ಥಾನಕ್ಕೆ ಬಹಳಷ್ಟು ಕಾಂಗ್ರೆಸ್ಸಿಗರು ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿಕೊಂಡು ಬರುತ್ತಿರುವುದು ಹಳೆಯ ವಿಷಯ. (ಯುಗಾದಿ ಬಳಿಕ ಹೊಸ ಖುರ್ಚಿ, ಹೊಸ ಮಂತ್ರಿ)

ಕೇಂದ್ರ ಬಿಜೆಪಿ ಮುಖಂಡರು ರಾಜ್ಯದಲ್ಲಿ ಪಕ್ಷದ ಮುಖವಾಣಿಯಂತಿರುವ ಯಡಿಯೂರಪ್ಪನವರನ್ನು ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆ ಮಾಡಿದ ನಂತರ, ತನ್ನ ನಿಲುವನ್ನು ಬದಲಿಸಿಕೊಂಡಂತಿರುವ ಕಾಂಗ್ರೆಸ್ ದಲಿತ ಅಥವಾ ಒಕ್ಕಲಿಗ ಸಮುದಾಯದವರನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇಲ್ಲದಿಲ್ಲ.

ಕುಲ ಕುಲ ಕುಲವೆಂದು ಹೊಡೆದಾಡದಿರಿಯೆಂದು ರಾಜಕೀಯ ಪಕ್ಷಗಳು ಜನರ ಕಣ್ಣೊರೆಸುವ ಭಾಷಣ ಮಾಡಿದರೂ, ಆಯಕಟ್ಟಿನ ಹುದ್ದೆಗೆ ಲೆಕ್ಕಾಚಾರ ಹಾಕುವುದು ಜಾತಿ ಸಮೀಕರಣವನ್ನೇ..

ಯಡಿಯೂರಪ್ಪ ಅಧ್ಯಕ್ಷರಾಗಿ ಆಯ್ಕೆಯಾಗುವ ಮುನ್ನ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜ್ಯದ ಪ್ರಭಾವಿ ಲಿಂಗಾಯಿತ ಸಮುದಾಯದ ಹಿರಿಯ ಮುಖಂಡರ ಹೆಸರು ಹೆಚ್ಚುಕಮ್ಮಿ ಅಂತಿಮವಾಗಿತ್ತು ಎನ್ನುವಷ್ಟರಲ್ಲಿ, ಹೈಕಮಾಂಡ್ ತನ್ನ ನಿರ್ಧಾರಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿತ್ತು. (ಸರ್ಕಾರಿ ಟೆಂಡರ್‌ನಲ್ಲಿ ಮೀಸಲಾತಿ)

ಈ ನಡುವೆ ಪಕ್ಷದ ನಿಷ್ಠಾವಂತ ಹಿರಿಯ ಮುಖಂಡರೊಬ್ಬರು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದೆಹಲಿಗೆ ಹೋಗಿ ಟವೆಲ್ ಹಾಕಿ ಬಂದಿದ್ದಾರೆ. ಮುಂದೆ ಓದಿ..

ಕೆ ಎಚ್ ಮುನಿಯಪ್ಪ

ಕೆ ಎಚ್ ಮುನಿಯಪ್ಪ

ಕೆಲವು ದಿನಗಳ ಹಿಂದೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದ ಮಾಜಿ ಕೇಂದ್ರ ಸಚಿವ, ಸತತ ಏಳು ಬಾರಿ ಸಂಸದರಾಗಿರುವ ಕೆ ಎಚ್ ಮುನಿಯಪ್ಪ ಗುರುವಾರ (ಏ 21) ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮಗೇ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷದ ಮೇಲಿರುವ ತಮ್ಮ ನಿಷ್ಠೆಯ ಕುರಿತು ಹೈಕಮಾಂಡಿಗೆ ಮನವರಿಕೆ ಮಾಡಿದ್ದೇನೆ. ತಮ್ಮ ಮನವಿಗೆ ಸೋನಿಯಾ ಗಾಂಧಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಎಲ್ಲರೊಡನೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ ಎಂದು ಮುನಿಯಪ್ಪ ಹೇಳಿದ್ದಾರೆ.

ಎಸ್ ಆರ್ ಪಾಟೀಲ್

ಎಸ್ ಆರ್ ಪಾಟೀಲ್

ಲಿಂಗಾಯಿತ ಸಮುದಾಯ, ಉತ್ತರ ಕರ್ನಾಟಕದ ಭಾಗದ ಮುಖಂಡ ಮತ್ತು ರಾಜ್ಯ ಮಾಹಿತಿ ತಂತ್ರಜ್ಞಾನ ಸಚಿವ ಎಸ್ ಆರ್ ಪಾಟೀಲ್ ಹೆಸರು ಬಹುತೇಕ ಅಂತಿಮವಾಗುವ ಸಾಧ್ಯತೆಯಿತ್ತು. ಆದರೆ ಬಿಜೆಪಿ ಯಡಿಯೂರಪ್ಪ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ನಂತರ ಇವರ ಹೆಸರು ಈಗ ಅಷ್ಟಾಗಿ ಕೇಳಿ ಬರುತ್ತಿಲ್ಲ.

ಪ್ರಕಾಶ್ ಹುಕ್ಕೇರಿ

ಪ್ರಕಾಶ್ ಹುಕ್ಕೇರಿ

ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಸಮಾಜದಿಂದ ಬಂದ ತಮ್ಮಗೆ ನೀಡಿದರೆ ಜವಾಬ್ದಾರಿಯಿಂದ ನಿಭಾಯಿಸಲು ಸಿದ್ಧವಿರುವುದಾಗಿ ಮಾಜಿ ಸಚಿವ ಮತ್ತು ಸಂಸದ ಪ್ರಕಾಶ ಹುಕ್ಕೇರಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆಂದು ಹುಕ್ಕೇರಿ ಹೇಳಿದ್ದಾರೆ.

ಕೆ ಎನ್ ರಾಜಣ್ಣ

ಕೆ ಎನ್ ರಾಜಣ್ಣ

ನಾನು ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಮಧುಗಿರಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ಎನ್ ರಾಜಣ್ಣ ಹೇಳಿರುವುದರಿಂದ ಆ ಸ್ಥಾನದ ಆಕಾಂಕ್ಷಿಗಳ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆಯಾಗಿದೆ.

ಡಿ ಕೆ ಶಿವಕುಮಾರ್

ಡಿ ಕೆ ಶಿವಕುಮಾರ್

ಉತ್ತಮ ಸಂಘಟಕ, ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿಯಾಗಿರುವ ಡಿ ಕೆ ಶಿವಕುಮಾರ್ ಹೆಸರು ಕೂಡಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿದೆ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಪಕ್ಷದ ವರಿಷ್ಠರು ನನಗೆ ಯಾವ ಜವಾಬ್ದಾರಿ ನೀಡುತ್ತಾರೋ ಅದನ್ನು ನಾನು ನಿಭಾಯಿಸುತ್ತೇನೆ. ಅಧ್ಯಕ್ಷ ಸ್ಥಾನ ನೀಡುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಅದನ್ನು ಸಮರ್ಥವಾಗಿ ನಿಭಾಯಿಸಲು ನಾನು ಸಿದ್ದ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.

English summary
Former Union Minister and MP from Kolar, KH Muniyappa met Congress High Command Sonia Gandhi demanding for KPCC President post. S R Patil, Prakash Hukkeri, DK Shivakumar and K N Rajanna name also in and around for the KPCC President post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X