ಹಾಗಾದ್ರೆ ಎಲ್ಲವನ್ನು ಅವನೇ ನಿರ್ಧಾರ ಮಾಡ್ತಾನಾ? ಸಿದ್ದರಾಮಯ್ಯ ಬೇಡವಾ?
ಬೆಂಗಳೂರು, ಫೆ. 25: ಮೈಸೂರು ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ಕಾಂಗ್ರೆಸ್ ಹಿರಿಯ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷ ಸಂಘಟನೆ ಕುರಿತು ಇಂದು (ಫೆ.25) ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಡಿಕೆಶಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದು ಇದಕ್ಕೆ ಕಾರಣ ಎನ್ನಲಾಗಿದೆ.
ಜೆಡಿಎಸ್ ಜೊತೆಗ ಮೈತ್ರಿ ಮಾಡಿಕೊಂಡಿದ್ದನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ. ಇಂತಹ ಆಟಗಳನ್ನು ಮಾಡುವುದು ಸರಿಯಲ್ಲ. ಪಕ್ಷದಲ್ಲಿ ಚರ್ಚಿಸದೆ ಹೇಗೆ ನಿರ್ಧಾರ ತೆಗೆದುಕೊಂಡಿರಿ? ನೀವೊಬ್ಬರೆ ನಿರ್ಧಾರ ಮಾಡುವುದಾದರೇ ನಾವ್ಯಾಕೆ ಇರಬೇಕು? ಶಾಸಕಾಂಗ ಪಕ್ಷದ ನಾಯಕರ ಅನುಮತಿ ಪಡೆದುಕೊಂಡ್ರಾ? ಎಂದು ನೇರವಾಗಿಯೇ ಡಿ.ಕೆ. ಶಿವಕುಮಾರ್ ಅವರನ್ನು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.
ಆಗ ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟ ಬಗ್ಗೆ ಮಾಜಿ ಸ್ಪೀಕರ್ ಅವರಿಗೆ ಸ್ಪಷ್ಟನೆ ಕೊಟ್ಟ ಡಿಕೆಶಿ ಅವರು, ಇದು ನನ್ನ ನಿರ್ಧಾರವಲ್ಲ. ಅಲ್ಲಿನ ಶಾಸಕ ತನ್ವೀರ್ ಸೇಠ್ ಈ ನಿರ್ಧಾರ ಮಾಡಿದ್ದು. ನಮ್ಮಲ್ಲಿ ಸ್ಥಳೀಯ ರಾಜಕೀಯಕ್ಕೆ ಯಾವ ಹೈಕಮಾಂಡ್ ಇಲ್ಲ. ಹೀಗಾಗಿ ನೀವೆ ಮುಂದುವರೆಯಿರಿ ಅಂತ ನಾನು ಹೇಳಿದ್ದೆ. ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಡಿಕೆಶಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹಾಗಾದ್ರೆ ಎಲ್ಲವನ್ನು ಅವನೇ ನಿರ್ಧಾರ ಮಾಡ್ತಾನಾ? ಸಿದ್ದರಾಮಯ್ಯ ಬೇಡವಾ?: ಹಾಗಾದ್ರೆ ಎಲ್ಲವನ್ನು ಅವನೇ ನಿರ್ಧಾರ ಮಾಡ್ತಾನಾ? ಸಿದ್ದರಾಮಯ್ಯ ಬೇಡವಾ? ಹಿರಿಯರ ಅಭಿಪ್ರಾಯ ಬೇಡವಾ? ತನ್ವೀರ್ ಸೇಠ್ಗೆ ನೊಟೀಸ್ ಜಾರಿ ಮಾಡಿ ಎಂದು ಹಿರಿಯ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ರಮೇಶ್ ಕುಮಾರ್ ಅವರ ಮಾತಿಗೆ ಮಾಜಿ ಸಚಿವ ಕೃಷ್ಣ ಬೈರೇಗೌಡ ಅವರು ಕೂಡ ಧನಿಗೂಡಿಸಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರದಲ್ಲಿ ನಾವು ಮಾತನಾಡಿ ನಾವು ವಿಲನ್ ಆಗಿದ್ದೇವು. ಅವರು ಈಗ ಬಿಜೆಪಿ ಜೊತೆಯೂ ಸಹ ಚೆನ್ನಾಗಿದ್ದಾರೆ.
ಮೈಸೂರಿನಲ್ಲಿ ಜೆಡಿಎಸ್-ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೆ ಜನರಿಗೆ ಜೆಡಿಎಸ್ ನಾಯಕರ ಅವಕಾಶವಾದಿತನ ಅರ್ಥವಾಗುತ್ತಿತ್ತು. ಆಗ ಜೆಡಿಎಸ್ ಜಾತ್ಯಾತೀತತೆಯನ್ನು ನಾವು ಪ್ರಶ್ನೆ ಮಾಡಬಹುದಿತ್ತು. ಆ ಅವಕಾಶವನ್ನು ನೀವು ಬಿಟ್ಟುಕೊಟ್ಟಿದ್ದೀರಿ. ನಿಮ್ಮ ಸ್ವಾರ್ಥಕ್ಕೆ ನಮ್ಮನ್ನು ಬಲಿ ಹಾಕಬೇಡಿ ಎಂದು ಕಾಂಗ್ರೆಸ್ ಹಿರಿಯ ನಾಯಕರು ಡಿಕೆಶಿ ಮೇಲೆ ಗರಂ ಆಗಿದ್ದಾರೆ. ಈ ಚರ್ಚೆ ವೇಳೆ ಸಂಬಂಧವೇ ಇಲ್ಲದಂತೆ ಸಿದ್ದರಾಮಯ್ಯ ಅವರು ಕುಳಿತಿದ್ದರಂತೆ. ನಿನ್ನೆಯ ಬೆಳವಣಿಗೆ ನನಗೆ ಬೇಸರ ತರಿಸಿದೆ ಎಂದಷ್ಟೇ ಹೇಳಿ ಸಿದ್ದರಾಮಯ್ಯ ಅವರು ಸುಮ್ಮನಾಗಿದ್ದಾರೆ ಎನ್ನಲಾಗಿದೆ.