ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಚಾರಕ್ಕಿಳಿಯದ ಯಡಿಯೂರಪ್ಪ: ಅಭ್ಯರ್ಥಿಗಳಲ್ಲಿ ಆತಂಕ

|
Google Oneindia Kannada News

ಬೆಂಗಳೂರು, ಅ.15: ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ಆದರೆ, ಇದುವರೆಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಣಕ್ಕೆ ಧುಮುಕದಿರುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಚುನಾವಣಾ ಪ್ರಚಾರಗಳು ಎಂದರೆ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ಕಲ್ಪಿಸಿಕೊಳ್ಳುವುದಕ್ಕೆ ರಾಜ್ಯ ಬಿಜೆಪಿಗೆ ಇನ್ನೂ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರ ಇದೆ ಎಂದರೂ ಸಹ ರಾಜ್ಯ ನಾಯಕರು ಮತ್ತು ಪಕ್ಷದ ಅಭ್ಯರ್ಥಿಗಳು ಯಡಿಯೂರಪ್ಪ ಅವರ ಭಾಗವಹಿಸುವಿಕೆಯನ್ನು ಎದುರು ನೋಡುತ್ತಾರೆ. ಬಿಜೆಪಿ ಪಾಲಿಗೆ ಇಂತಹ ಶಕ್ತಿ ಗಳಿಸಿಕೊಂಡಿರುವ ಯಡಿಯೂರಪ್ಪ ಹಾನಗಲ್ ಮತ್ತು ಸಿಂಧಗಿ ಉಪಚುನಾವಣೆಯ ಬಗ್ಗೆ ಇದುವರೆಗೂ ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡದಿರುವುದು ನೋಡಿದರೆ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವನ್ನು ರವಾನಿಸುತ್ತಿದೆ.

ಯಡಿಯೂರಪ್ಪರನ್ನು ತಡರಾತ್ರಿ ಭೇಟಿ ಮಾಡಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯಯಡಿಯೂರಪ್ಪರನ್ನು ತಡರಾತ್ರಿ ಭೇಟಿ ಮಾಡಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಮತ್ತೊಂದೆಡೆ ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರದಿಂದ ಪ್ರಚಾರ ಪ್ರವಾಸ ಹಮ್ಮಿಕೊಂಡಿದ್ದಾರೆ. ಆದರೆ, ಬಿಜೆಪಿಯಲ್ಲಿ ಯಡಿಯೂರಪ್ಪನವರ ಮೌನ ಮತ್ತು ಉಳಿದವರಲ್ಲಿ ಕಾಣದ ರಣೋತ್ಸಾಹ ಹಾನಗಲ್ ಅಭ್ಯರ್ಥಿ ಶಿವರಾಜ ಸಜ್ಜನರ ಮತ್ತು ಸಿಂಧಗಿ ಅಭ್ಯರ್ಥಿ ರಮೇಶ ಭೂಸನೂರ ಅವರ ಸಹಆತಂಕಕ್ಕೆ ಕಾರಣವಾಗಿದೆ.

Former CM Yediyurappa Not Campaigning In By- election: Anxiety Among BJP Candidates

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಸರಾ ಶುಭಾಶಯ ತಿಳಿಸಲು ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ. ಉಪಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವ ಅಗತ್ಯತೆಯ ಬಗ್ಗೆ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಯಡಿಯೂರಪ್ಪ ಅವರು ಈ ಬಗ್ಗೆ ಬೊಮ್ಮಾಯಿ ಅವರಿಗೆ ಅಷ್ಟೇನೂ ಸಮಾಧಾನದಿಂದ ಸ್ಪಂದಿಸಿಲ್ಲ ಎಂದು ಹೇಳಲಾಗುತ್ತಿದೆ.

ಭೇಟಿ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, "ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರೆ. ಅ.20ರ ಬಳಿಕ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ವಿವಿಧ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ" ಎಂದಷ್ಟೇ ಹೇಳಿದರು.

ಉಪ ಚುನಾವಣೆಯ ವೇಳೆ ಬಿಎಸ್ವೈ ಮೇಲೆ ಕಾಂಗ್ರೆಸ್ಸಿಗೆ ಚಿಗುರೊಡೆದ ಪ್ರೀತಿ, ಪ್ರೇಮಉಪ ಚುನಾವಣೆಯ ವೇಳೆ ಬಿಎಸ್ವೈ ಮೇಲೆ ಕಾಂಗ್ರೆಸ್ಸಿಗೆ ಚಿಗುರೊಡೆದ ಪ್ರೀತಿ, ಪ್ರೇಮ

ಇತ್ತೀಚೆಗೆ ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷಾ ವರದಿಗಳ ಪ್ರಕಾರ ಹಾನಗಲ್ ಮತ್ತು ಸಿಂಧಗಿ ಎರಡೂ ಕ್ಷೇತ್ರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಇದೆ. ಈ ಟ್ರೆಂಡ್ ಬದಲಾಯಿಸಬೇಕಾದರೆ ಯಡಿಯೂರಪ್ಪ ಅವರು ಪೂರ್ಣ ಪ್ರಮಾಣದಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು. ಹಾನಗಲ್‌ನಲ್ಲಿ ದಿ.ಸಿ.ಎಂ. ಉದಾಸಿ ಅವರ ಕುಟುಂಬದವರೂ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಬೇಕು ಎಂಬ ವರದಿ ಬಂದಿತ್ತು. ಈ ಕಾರಣದಿಂದ ಯಡಿಯೂರಪ್ಪ ಅವರ ಪಾಲ್ಗೊಳ್ಳುವಿಕೆ ವಿಶೇಷ ಮಹತ್ವ ಪಡೆದುಕೊಂಡಿದೆ. ಆದರೆ, ಯಡಿಯೂರಪ್ಪ ಅವರು ಮಾತ್ರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಬಗ್ಗೆ ಇನ್ನೂ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.

Former CM Yediyurappa Not Campaigning In By- election: Anxiety Among BJP Candidates

ಬಿಎಸ್‌ವೈ ಮೌನಕ್ಕೆ ಕಾರಣವೇನು?

ಮೊದಲಿನಿಂದಲೂ ಚುನಾವಣೆಗಳನ್ನು ಹಬ್ಬದಂತೆ ಆಚರಿಸುತ್ತಿದ್ದ ಯಡಿಯೂರಪ್ಪ ಅವರು ಈಗ ಮಾತ್ರ ಮೌನಕ್ಕೆ ಶರಣಾಗಿರುವುದರ ಹಿಂದಿನ ಕಾರಣವೇನು ಎಂದು ನೋಡಿದರೆ ಉತ್ತರ ಅವರ ಪಕ್ಷದಲ್ಲಿಯೇ ಸಿಗುತ್ತದೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಅವರನ್ನು ಹಲವು ವಿಚಾರಗಳಲ್ಲಿ ಕಡೆಗಣಿಸಲಾಗಿದೆ ಎಂದು ಪಕ್ಷದ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ. ಮೇಲಾಗಿ ಇತ್ತೀಚೆಗೆ ಯಡಿಯೂರಪ್ಪ ಅವರ ಆಪ್ತ ಉಮೇಶ್ ಮತ್ತಿತರರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 750 ಕೋಟಿ ಮೌಲ್ಯದ ಅಕ್ರಮ ಸಂಪತ್ತನ್ನು ಪತ್ತೆ ಮಾಡಲಾಗಿದೆ. ಉಮೇಶ್ ಬಿಎಸ್‌ವೈ ಆಪ್ತ ಎಂಬ ವಿಚಾರ ಹೆಚ್ಚಿನ ಪ್ರಚಾರ ಪಡೆದಿದ್ದರಿಂದ, ಯಡಿಯೂರಪ್ಪ ಹೆಚ್ಚೆಚ್ಚು ಪ್ರಚಾರದಲ್ಲಿ ಪಾಲ್ಗೊಂಡಷ್ಟೂ ವಿರೋಧ ಪಕ್ಷಗಳನ್ನು ಇದನ್ನು ದಾಳವಾಗಿ ಬಳಸಬಹುದು ಎಂದು ಹೇಳಲಾಗುತ್ತದೆ.

ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ಬಳಿಕ ರಾಜ್ಯ ಪ್ರವಾಸ ಮಾಡುವುದಾಗಿ ಪ್ರಕಟಿಸಿದ್ದರು. ರಾಜ್ಯದಾದ್ಯಂತ ಪ್ರವಾಸ ಮಾಡಿ 2023ರಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರು. ಆದರೆ, ಅಧಿಕಾರ ಕಳೆದುಕೊಂಡ ಬಳಿಕ ಯಡಿಯೂರಪ್ಪ ಪ್ರವಾಸ ಮಾಡಿದರೆ ಬೇರೆಯದೇ ಸಂದೇಶ ನೀಡಿದಂತಾಗುತ್ತದೆ ಎಂಬ ಕಾರಣದಿಂದ ಅವರ ಪ್ರವಾಸಕ್ಕೆ ಬ್ರೇಕ್ ಹಾಕಲಾಯಿತು. ದಾವಣಗೆರೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ "ಯಡಿಯೂರಪ್ಪ ಒಬ್ಬರೇ ಪ್ರವಾಸ ಮಾಡುವುದು ಬೇಡ. ಮೂರು ತಂಡಗಳಲ್ಲಿ ಪ್ರವಾಸ ನಡೆಯಬೇಕು. ಮತ್ತಿಬ್ಬರು ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್ ಸಹ ಪ್ರವಾಸ ಕೈಗೊಳ್ಳಬೇಕು. ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಲ್ಲ ಪ್ರವಾಸಗಳ ಉಸ್ತುವಾರಿ ನೋಡಿಕೊಳ್ಳಬೇಕು" ಎಂದು ನಿರ್ಧರಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳಿಂದ ಯಡಿಯೂರಪ್ಪ ಅವರು ಪ್ರವಾಸ ಮಾಡುವ ನಿರ್ಧಾರವನ್ನೇ ಕೈಬಿಟ್ಟಿದ್ದರು. ರಾಜ್ಯದಲ್ಲಿ ಉಪಚುನಾವಣೆ ಘೋಷಣೆ ಆದ್ದರಿಂದ ಯಡಿಯೂರಪ್ಪ ರಾಜ್ಯ ಪ್ರವಾಸ ಮುಂದೆ ಹಾಕಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ತೇಪೆ ಹಾಕುವ ಪ್ರಯತ್ನ ಮಾಡಿದರು.

ವಿಜಯೇಂದ್ರ ನಿರ್ಲಕ್ಷ್ಯ:

ಉಪ ಚುನಾವಣೆ ಉಸ್ತುವಾರಿ ಹೆಸರಿನಲ್ಲಿ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಪರಿಗಣಿಸಿಯೇ ಇರಲಿಲ್ಲ. ಒತ್ತಡ ಹೆಚ್ಚಾದ ಬಳಿಕ ಅವರನ್ನು ಹಾನಗಲ್ ಕ್ಷೇತ್ರದ ಉಸ್ತುವಾರಿಗಳ ಸಾಲಿನಲ್ಲಿ ಸೇರಿಸಲಾಯಿತು. ಕೆ.ಆರ್. ಪೇಟೆಯಲ್ಲಿ ನಾರಾಯಣಗೌಡ ಹಾಗೂ ಶಿರಾದಲ್ಲಿ ಡಾ.ರಾಜೇಶ್ ಗೌಡ ಅವರನ್ನು ಗೆಲ್ಲಿಸಿದ್ದ ವಿಜಯೇಂದ್ರ ಮಸ್ಕಿಯಲ್ಲಿ ಪ್ರತಾಪ ಗೌಡ ಪಾಟೀಲ ಅವರನ್ನು ಗೆಲ್ಲಿಸುವಲ್ಲಿ ವಿಫಲ ಆಗಿದ್ದರು. ಆದರೂ ಚುನಾವಣೆಗಳು ಬಂದಾಗ ವಿಜಯೇಂದ್ರ ಅವರೇ ಉಸ್ತುವಾರಿ ವಹಿಸಿಕೊಳ್ಳಬೇಕು ಎಂಬ ನಿರೀಕ್ಷೆಯೂ ಕೆಲವರಲ್ಲಿ ಇದೆ. ಹೀಗಿರುವಾಗ ಹಾನಗಲ್ ಮತ್ತು ಸಿಂಧಗಿ ಕ್ಷೇತ್ರದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ವಿಜಯೇಂದ್ರ ಅವರಿಗೆ ಯಾವುದೇ ಜವಾಬ್ದಾರಿ ನೀಡಿರಲಿಲ್ಲ. ಕಾರ್ಯಕರ್ತರ ಒತ್ತಡದ ಬಳಿಕ ವಿಜಯೇಂದ್ರ ಅವರ ಹೆಸರು ಹಾನಗಲ್ ಚುನಾವಣಾ ಉಸ್ತುವಾರಿಗಳ ಪಟ್ಟಿಯಲ್ಲಿ ಸೇರ್ಪಡೆ ಆಯಿತು. ವಿಜಯೇಂದ್ರ ಹಾನಗಲ್‌ನಲ್ಲಿ ಇನ್ನೂ ಅವರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲ.

ಅನಾರೋಗ್ಯದಲ್ಲೂ ಭಾಗಿ:

ಕೇಂದ್ರದ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಕಳೆದ ಏಪ್ರಿಲ್‌ನಲ್ಲಿ ನಡೆಯಿತು. ಆ ಸಂದರ್ಭದಲ್ಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಯಡಿಯೂರಪ್ಪ ಅವರು ಅನಾರೋಗ್ಯದ ಮಧ್ಯೆಯೇ ಬೆಳಗಾವಿಗೆ ತೆರಳಿ ಪ್ರಚಾರ ಮಾಡುವ ಮೂಲಕ ಪಕ್ಷದ ಅಭ್ಯರ್ಥಿ ಮಂಗಳಾ ಆಂಗಡಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು. ಆದರೀಗ ಯಾಕೆ ಯಡಿಯೂರಪ್ಪ ಅವರು ಇನ್ನೂ ಪ್ರಚಾರಕ್ಕೆ ಧುಮುಕುತ್ತಿಲ್ಲ ಎಂಬ ಪ್ರಶ್ನೆ ಕಾರ್ಯಕರ್ತರನ್ನು ಕಾಡುತ್ತಿದೆ.

Recommended Video

IPL ಟ್ರೋಫಿ ಗೆಲ್ಲೋದಕ್ಕೆ ಅರ್ಹವಾಗಿರೋರು ನಾವಲ್ಲ ಎಂದ ಧೋನಿ!ಮತ್ಯಾರು? | Oneindia Kannada

English summary
CM Yediyurappa not campaign in the Hanagal and Sindagi by-elections has raised anxiety among bjp candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X