ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

EXCLUSIVE INTERVIEW: ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿದೆ: ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ!

|
Google Oneindia Kannada News

ಬೆಂಗಳೂರು, ಡಿ, 13: ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ಇದೀಗ ವಿಧಾನ ಪರಿಷತ್‌ನಲ್ಲಿ ಭಿಕ್ಕಟ್ಟಿಗೆ ಕಾರಣವಾಗಿದೆ. ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚೆಗೆ ಅವಕಾಶ ಕೊಡದೆ ಸಭಾಪತಿಗಳು ಸದನವನ್ನು ಏಕಾಏಕಿ ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆಂದು ಬಿಜೆಪಿ ಸದಸ್ಯರು ಆರೋಪಿಸಿದ್ದರು. ಜೊತೆಗೆ ಅವಿಶ್ವಾಸ ಗೊತ್ತುವಳಿ ಮಂಡಿಸಿದ ಬಳಿಕ ಹೀಗೆ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿರುವುದು ನಿಯಮ ಬಾಹೀರ ಎಂದು ಬಿಜೆಪಿ ಸದಸ್ಯರು ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಮಾಡಿ ದೂರಿದ್ದರು.

ಇದೀಗ ಸರ್ಕಾರದ ಸೂಚನೆಯಂತೆ ಮಂಗಳವಾರ ಮತ್ತೆ ವಿಧಾನ ಪರಿಷತ್ ಅಧಿವೇಶನ ಕರೆಯಲಾಗಿದೆ. ಈ ಎಲ್ಲ ಬೆಳವಣಿಗೆಗಳ ಕುರಿತು ಹಾಗೂ ತಮ್ಮ ಮೇಲೆ ವಿಧಾನ ಪರಿಷತ್‌ ಬಿಜೆಪಿ ಸದಸ್ಯರು ಮಾಡುತ್ತಿರುವ ಆರೋಪಗಳ ಕುರಿತು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು 'ಒನ್‌ಇಂಡಿಯಾ ಕನ್ನಡ'ಕ್ಕೆ ಕೊಟ್ಟಿರುವ EXCLUSIVE ಸಂದರ್ಶನದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಸಂದರ್ಶನದ ಸಂಪೂರ್ಣ ವಿವರ ಮುಂದಿದೆ.

ಕಾರಣ ಕೊಟ್ಟು ಮುಂದೂಡಲಾಗಿದೆ

ಕಾರಣ ಕೊಟ್ಟು ಮುಂದೂಡಲಾಗಿದೆ

ಒನ್‌ಇಂಡಿಯಾ ಕನ್ನಡ: ಅವಿಶ್ವಾಸ ಗೊತ್ತುವಳಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂದು ಬಿಜೆಪಿ ಆರೋಪಿಸಿತ್ತು, ಇದೀಗ ಮತ್ತೆ ಮಂಗಳವಾರ ಕಲಾಪ ಕರೆದಿದ್ದೀರಿ ಏನಿದು ಭಿಕ್ಕಟ್ಟು ಸಭಾಪತಿಗಳೇ?

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ: ಇಲ್ಲಿ ಪ್ರಮುಖವಾಗಿ ಎರಡು ವಿಚಾರಗಳಿವೆ. ಒಂದು ಅವಿಶ್ವಾಸ ನಿರ್ಣಯ ಕ್ರಮಬದ್ಧವಾಗಿಲ್ಲ ಎಂದು ಈಗಾಗಲೇ ತಿರಸ್ಕಾರವಾಗಿದೆ. ಅದನ್ನು ಸದನದಲ್ಲಿಯೂ ಹೇಳಿದ್ದೇವೆ. ಪರಿಷತ್‌ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಇರುವ ಕಾರಣವನ್ನೂ ನಾವು ಸದನದಲ್ಲಿ ಹೇಳಿದ್ದೇವೆ.

ಜೊತೆಗೆ ವಿಧಾನಸಭೆಯಿಂದ ಅಂಗೀಕೃತಗೊಂಡಿದ್ದಂತಹ ಎಲ್ಲ ವಿಧೇಯಕಗಳು ವಿಧಾನ ಪರಿಷತ್‌ನಲ್ಲಿ ಪಾಸ್ ಆಗಿವೆ. ಆದರೆ ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಸರ್ಕಾರ ವಿಧಾನಸಭೆಯಲ್ಲಿ ಮಂಡನೆ ಮಾಡಿರಲಿಲ್ಲ. ಹೀಗಾಗಿ ನಮ್ಮ ಎದುರುಗಡೆ ಯಾವುದೇ ವಿಧೇಯಕಗಳು ಬಾಕಿ ಉಳಿದಿಲ್ಲ.

ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭೆ ಡಿಸೆಂಬರ್ 10ಕ್ಕೆ ಮುಕ್ತಾಯವಾಗಿದೆ. ವಿಧಾನ ಪರಿಷತ್‌ನಲ್ಲಿ 25 ಸದಸ್ಯರು ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವರಿದ್ದಾರೆ. ಈಗ ವಿಧಾನಸಭೆ ಮುಂದೂಡಿ, ಅಲ್ಲಿನ ಸದಸ್ಯರಿಗೆ ಅವಕಾಶ ಮಾಡಿ ಕೊಟ್ಟು, ನಮ್ಮ ಸದಸ್ಯರಿಗೆ ಅವಕಾಶ ಮಾಡಿಕೊಡದಿದ್ದರೆ ಹೇಗೆ? ಯಾರೊ ಒಬ್ಬರು ಸದಸ್ಯ ಇದನ್ನು ಪ್ರಶ್ನೆ ಮಾಡಿದರೆ ಅದಕ್ಕೆ ಉತ್ತರ ಕೊಡಲಿಕ್ಕೆ ಸಭಾಪತಿಗಳಿಗೆ ಆಗುವುದಿಲ್ಲ.

ಒನ್‌ಇಂಡಿಯಾ ಕನ್ನಡ: ಗೋ ಹತ್ಯೆ ನಿಷೇಧ ವಿಧೇಯಕ ವಿಧಾನ ಪರಿಷತ್‌ನಲ್ಲಿ ಅಂಗೀಕಾರವಾಗಿಲ್ಲ?

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ: ಸರ್ಕಾರ ಯಾವುದೇ ತೀರ್ಮಾನ ಮಾಡಿದರೂ ಅದು ಎಲ್ಲರೂ ಒಪ್ಪುವಂತೆ ಇರಬೇಕು. ವಿಧಾನಸಭೆ ಹಾಗೂ ವಿಧಾನ ಪರಿಷತ್ ಎಲ್ಲರಿಗೂ ಒಂದೇ ಉತ್ತರ ಕೊಡುವ ಹಾಗೆ ಇರಬೇಕು. ಜೊತೆಗೆ ಗೋ ಹತ್ಯೆನಿಷೇಧ ವಿಧೇಯಕವನ್ನು ಪಾಸ್ ಮಾಡಲಿಕ್ಕೆ ಯಾವುದೇ ಅಡೆತಡೆ ಇದ್ದಿಲ್ಲ.

ವಿಧಾನ ಪರಿಷತ್ ಅಜೆಂಡಾದಲ್ಲಿ ವಿಧೇಯಕ ಇದ್ದರೂ, ವಿಧೇಯಕವನ್ನು ಮಂಡಿಸಿ ಅಂತಾ ಹೇಳಿದರೂ ಸರ್ಕಾರ ಮಂಡಿಸಲಿಲ್ಲ. ಸರ್ಕಾರ ಗೋ ಹತ್ಯೆ ನಿಷೇಧ ವಿಧೇಯಕ ಮಂಡಿಸದೇ ಇರುವುದರಿಂದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡ ಬೇಕಾಯ್ತು.

ಆದರೆ ಅದರ ನಂತರವೂ ಸರ್ಕಾರ ಮತ್ತೆ ಕಲಾಪ ನಡೆಸುವ ಅವಶ್ಯಕತೆ ಇದೆ ಎಂದಿದ್ದರಿಂದ ಸರ್ಕಾರ ಕೋರಿಕೆ ಸಲ್ಲಿಸಿದೆ, ಡಿಸೆಂಬರ್ 15ಕ್ಕೆ ಕಲಾಪ ನಡೆಸಲು ಕೋರಿದೆ. ಅದರ ಪ್ರಕಾರ ಮಂಗಳವಾರ ಸದನ ನಡೆಸಲು ಒಪ್ಪಿಗೆ ಕೊಟ್ಟಿದ್ದೇವೆ.

ಅವಿಶ್ವಾಸ ಗೊತ್ತುವಳಿ ತಿರಸ್ಕಾರವಾಗಿದೆ

ಅವಿಶ್ವಾಸ ಗೊತ್ತುವಳಿ ತಿರಸ್ಕಾರವಾಗಿದೆ

ಒನ್‌ಇಂಡಿಯಾ ಕನ್ನಡ: ಅವಿಶ್ವಾಸ ಗೊತ್ತುವಳಿ ಮಂಡಿಸಿದ ಸಂದರ್ಭದಲ್ಲಿ ಆ ಬಗ್ಗೆ ಚರ್ಚಿಸಲು ಅವಕಾಶ ಕೊಡದೆ ಸದನ ಮುಂದೂಡಲಾಗಿದೆ ಎಂಬುದು ಬಿಜೆಪಿ ಸದಸ್ಯರ ಆರೋಪ?

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ: ವಿಧಾನ ಪರಿಷತ್‌ನಲ್ಲಿ ಅವಿಶ್ವಾಸ ನಿರ್ಣಯವನ್ನು ಇತ್ಯರ್ಥ ಮಾಡದೇ ನಾವು ಕಲಾಪ ಮುಂದೂಡಿದ್ದರೆ ಅದು ತಪ್ಪು. ಆದರೆ ಅವಿಶ್ವಾಸ ನಿರ್ಣಯವನ್ನು ಇತ್ಯರ್ಥ ಮಾಡಿಯೇ ಕಲಾಪ ಮುಂದೂಡಲಾಗಿದೆ. ಅದಕ್ಕೂ ಮೊದಲು ಕಾನೂನು ತಜ್ಞರ ಸಲಹೆ ಮೇರೆಗೆ ಅದು ಕ್ರಮಬದ್ಧವಾಗಿಲ್ಲ ಎಂಬ ತೀರ್ಮಾನದ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ತಿರಸ್ಕಾರವಾಗಿದೆ.

ಮತ್ತು ಕಾರ್ಯದರ್ಶಿಗಳು ಅದಕ್ಕೆ ಹಿಂಬರಹವನ್ನೂ ಕೊಟ್ಟಿರುವುದರಿಂದ, ಅವಿಶ್ವಾಸ ಗೊತ್ತುವಳಿ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಇನ್ನು ಅವಿಶ್ವಾಸ ನಿರ್ಣಯ ಈ ಅಧಿವೇಶನದಲ್ಲಿ ಕಾಯ್ದೆ ಪ್ರಕಾರ ಮಂಡಿಸಲಿಕ್ಕಾಗಲಿ, ಚರ್ಚಿಸಲಿಕ್ಕಾಗಲಿ ಆಗುವುದಿಲ್ಲ.

ಒನ್‌ಇಂಡಿಯಾ ಕನ್ನಡ: ಆದರೆ ಬಿಜೆಪಿ ಸದಸ್ಯರು ಡಿ. 15ರಂದು ಮಂಗಳವಾದ ಪರಿಷತ್‌ನಲ್ಲಿ ಇದೇ ವಿಚಾರ ಪ್ರಸ್ತಾಪ ಮಾಡಲಿದ್ದಾರೆ ಎಂಬ ಮಾಹಿತಿಯಿದೆ, ಅದಕ್ಕೆ ಏನು ಹೇಳುತ್ತೀರಿ?

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ: ಕಾಯ್ದೆಯಲ್ಲಿ ಇಲ್ಲದ್ದನ್ನು ಮಾಡುವುದಕ್ಕೆ ಆಗುತ್ತದೆಯಾ? ಕಾನೂನು ಅಂತಾ ಒಂದು ಇದೆಯಲ್ಲ? ನಮಗೆ ವಿಧಾನ ಪರಿಷತ್ ನಡಾವಳಿ ಪುಸ್ತಕ ಇದೆ. ಅದರ ಪ್ರಕಾರ ಅವಕಾಶವಿದ್ದರೆ ಮಾಡಲೇಬೇಕು. ಅವರಿಗೆ ಹಕ್ಕಿರುತ್ತದೆ. ಆದರೆ ಅಲ್ಲಿಚರ್ಚೆಗೆ ಅವಕಾಶ ಇಲ್ಲದೆ ಇದ್ದಾಗಲೂ ಪ್ರಸ್ತಾಪ ಮಾಡುತ್ತೇವೆ ಅಂದರೆ ಉಡಾಫೆ ಮಾಡುತ್ತೇವೆ ಅಂದ ಹಾಗಲ್ಲವೇ?

ಒನ್‌ಇಂಡಿಯಾ ಕನ್ನಡ: ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಬಿಜೆಪಿ ಸದಸ್ಯರು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ?

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ: ರಾಜ್ಯಪಾಲರು ಏನೂ ಮಾಡಿಲ್ಲ. ಅವರ ಹಕ್ಕಿದೆ, ಪರಿಶೀಲನೆ ಮಾಡುತ್ತೇವೆ ಅಂತಾ ಅವರು ಹೇಳಿರುತ್ತಾರೆ. ಸರ್ಕಾರದ ಪರವಾಗಿ ಸಂಸದೀಯ ಇಲಾಖೆ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಸರ್ಕಾರದ ಪರವಾಗಿ ಒಂದು ದಿನದ ಕಲಾಪ ಕರೆಯಿರಿ ಎಂದು ಹೇಳಿದಾಗ ಸಭಾಪತಿಗಳು ಕರೆಯಲೆ ಬೇಕಾಗುತ್ತದೆ. ಸರ್ಕಾರ ಇಚ್ಚೆ ಪಟ್ಟಾಗ ಸದನ ಕರೆಯುವುದಿಲ್ಲ ಅಂತಾ ಹೇಳುವುದಕ್ಕೆ ಆಗುವುದಿಲ್ಲ. ಮಂಗಳವಾರ ಕಲಾಪ ನಡೆಯುತ್ತದೆ.

ಅವಿಶ್ವಾಸ ಗೊತ್ತುವಳಿ ಕ್ರಮಬದ್ಧವಾಗಿಲ್ಲ

ಅವಿಶ್ವಾಸ ಗೊತ್ತುವಳಿ ಕ್ರಮಬದ್ಧವಾಗಿಲ್ಲ

ಒನ್‌ಇಂಡಿಯಾ ಕನ್ನಡ: ಮಂಗಳವಾರದ ಅಜೆಂಡಾದಲ್ಲಿ ಸಭಾಪತಿಗಳ ವಿರುದ್ಧದ ವಿಚಾರ ಪ್ರಸ್ತಾಪ ಇರುತ್ತದೆಯಾ?

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ: ಕಾಯ್ದೆಯಲ್ಲಿ ಚರ್ಚೆಗೆ ಅವಕಾಶವೇ ಇಲ್ಲದಿರುವಾಗ ಅದ್ಹೇಗೆ ಅಜೆಂಡಾದಲ್ಲಿ ಇರುತ್ತದೆ ಹೇಳಿ. ನೀವು ಪರಿಷತ್ ನಡಾವಳಿ ಪುಸ್ತಕ ನೋಡಿ. ನಾವು ಹೇಳುವುದೇ ಬೇಕಾಗಿಲ್ಲ. ಇದು ರಾಜಕೀಯ ವೇದಿಕೆ ಅಲ್ಲ.

ಸಭಾಪತಿ ಸ್ಥಾನಕ್ಕೆ ಅದರದ್ದೆ ಆದ ಗೌರವವಿದೆ. ಅದರದ್ದೆ ಆದ ಕಾನೂನು ನೀತಿಯಲ್ಲಿ ಇರುತ್ತದೆ. ನಾವು ಏನು ಮಾಡಿದ್ದೇವೆಯೊ ಅದು ಎಲ್ಲರೂ ಒಪ್ಪುವಂತೆ ಇರಬೇಕು. ನಾವು ಕಲಾಪ ಮುಂದೂಡಿದ್ದರೂ ಕಾರಣ ಕೊಡುತ್ತೇವೆ. ಪುನಃ ಕರೆಯೋದಕ್ಕು ಕಾರಣ ಕೊಡುತ್ತೇವೆ. ನಮ್ಮ ಸ್ವ ಇಚ್ಛೆಯಿಂದ ಏನೂ ಮಾಡುವುದಕ್ಕೆ ಆಗುವುದಿಲ್ಲ. ಕಾನೂನಿಂತೆಯೆ ಎಲ್ಲವೂ ಆಗುತ್ತದೆ.

ಒನ್‌ಇಂಡಿಯಾ ಕನ್ನಡ: ಅವಿಶ್ವಾಸ ಗೊತ್ತುವಳಿ ಹೇಗೆ ಕ್ರಮಬದ್ಧವಾಗಿಲ್ಲ, ಆ ಬಗ್ಗೆ ಹೇಳಬಹುದಾ?

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ:ನೀವು ಪಕ್ಷಪಾತಿ ಅಂತಾ ಹೇಳಿದ ಕೂಡಲೇ ಅದನ್ನು ಒಪ್ಪಿಕೊಳ್ಳಲು ಆಗುತ್ತದೆಯಾ? ಯಾವ ಪ್ರಕರಣದಲ್ಲಿ ಪಕ್ಷಪಾತ ಮಾಡಿದ್ದೇವೆ? ಯಾವ ವರ್ಷ? ಎಲ್ಲಿ ಮಾಡಿದ್ದೇವೆ? ಎಂಬುದರ ಕುರಿತು ಸ್ಪಷ್ಟವಾಗಿ ಹೇಳ ಬೇಕಲ್ಲವೆ? ಹಾಗೆ ಸ್ಪಷ್ಟವಾಗಿ ಉಲ್ಲೇಖಿಸಿದಾಗ ಮಾತ್ರ ನಮಗೆ ಉತ್ತರ ಕೊಡೋದಕ್ಕೆ ಸಾಧ್ಯವಾಗುತ್ತದೆ.

ನೀವು ಪಕ್ಷಪಾತ ಮಾಡುತ್ತೀರಿ. ಭ್ರಷ್ಟಾಚಾರ ಮಾಡುತ್ತೀರಿ, ಹಾಗೆ ಮಾಡುತ್ತೀರಿ, ಹೀಗೆ ಮಾಡುತ್ತೀರಿ ಅಂತಾ ಹೇಳಿದ ಕೂಡಲೇ ಅದಕ್ಕೆಲ್ಲ ಉತ್ತರ ಕೊಡುವುದಕ್ಕೆ ಆಗುತ್ತಾ? ಪಕ್ಷಪಾತ ಮಾಡಿರುವ ಕುರಿತು ನಿಖರವಾದ ಸ್ಪಷ್ಟ ಪ್ರಕರಣವನ್ನು ಉಲ್ಲೇಖಿಸಬೇಕು.

ಯಾವುದೇ ಒಂದು ನಿರ್ಣಯವನ್ನು ಮಂಡನೆ ಮಾಡಬೇಕು ಎಂದರೆ ಅದಕ್ಕೆ ಟೆಕ್ಸ್ಟ್ ಅಂತಾ ಇರುತ್ತದೆ. ಯಾವ ವಿಷಯಗಳ ಮೇಲೆ ಅಂತಾ ನಿರ್ಣಯ ಮಂಡಿಸಬೇಕು. ಅದನ್ನು ಇಟ್ಟಿರಬೇಕು. ಸೂಚನೆ ಮತ್ತು ಸೂಚನೆಯ ನಿರ್ಣಯ ಇರಬೇಕು ಎಂಬುದನ್ನು ಬರೆಯಬೇಕು.

ಯಾಕೆ ತಿರಸ್ಕಾರವಾಗಿದೆ?

ಯಾಕೆ ತಿರಸ್ಕಾರವಾಗಿದೆ?

ಒನ್‌ಇಂಡಿಯಾ ಕನ್ನಡ: ಈಗ ಬಿಜೆಪಿ ಸದಸ್ಯರು ಕೊಟ್ಟಿರುವ ಅವಿಶ್ವಾಸ ನಿರ್ಣಯದಲ್ಲಿ ಏನಿದೆ?

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ: ಅವರು ಕೊಟ್ಟಿರುವುದು ಅವಿಶ್ವಾಸ ಸೂಚನೆಯಲ್ಲಿ ಪಕ್ಷಪಾತಿ ಎಂದು ಕೊಟ್ಟಿದ್ದಾರೆ. ಆದರೆ ಅವಿಶ್ವಾಸ ನಿರ್ಣಯ ಅಂಗೀಕಾರ ಮಾಡಲು ಒಂದು ಟೆಕ್ಸ್ಟ್ ಇರುತ್ತದೆ. ಅದರಲ್ಲಿ ಇಂತಿಂಥ ಕಾರಣಗಳನ್ನು ಕೊಟ್ಟು ಉಲ್ಲೇಖಿಸಬೇಕು ಎಂದಿರುತ್ತದೆ. ಆದರೆ ಅವರು ಸಲ್ಲಿಸಿರುವುದರಲ್ಲಿ ಟೆಕ್ಸ್ಟ್ ಇಲ್ಲ, ಕ್ರಮಬದ್ಧತೆ ಇಲ್ಲ. ಹೀಗಾಗಿ ಅದು ಕ್ರಮಬದ್ಧವಾಗಿಲ್ಲ. ಯಾರಾದರೂ ರಾಜೀನಾಮೆ ಕೊಟ್ಟ ತಕ್ಷಣ ಅಂಗೀಕಾರ ಮಾಡುತ್ತಾರಾ? ರಾಜೀನಾಮೆ ಕ್ರಮಬದ್ಧವಾಗಿದೆ ಅಂತಾ ನೋಡುವುದಿಲ್ಲವಾ? ಕ್ರಮಬದ್ಧವಾಗಿದ್ದರೆ ಆತ್ರ ಅಂಗೀಕರಿಸುವುದಿಲ್ಲವಾ? ರಾಜೀನಾಮೆ ಕೊಟ್ಟು ಹೊರಗೆ ಹೋಗುವುದಕ್ಕೂ ಅಂಗೀಕಾರ ಬೇಕಲ್ಲವಾ?

ಆ ನಿರ್ಣಯ ಕೂಡ ಕ್ರಮಬದ್ಧವಾಗಿದ್ದರೆ ಮಾತ್ರ ಅಂಗೀಕಾರ ಆಗುತ್ತದೆ. ಬಳಿಕ ಅದು ಸದನದ ಕಾರ್ಯಕಲಾಪಗಳ ಪಟ್ಟಿಗೆ ಬಂದ ಮೇಲೆಯೆ ಅಂಗೀಕಾರವಾಗುವುದು. ಕಾರ್ಯಕಲಾಪಗಳ ಪಟ್ಟಿದೆ ಬರದೇ ಚರ್ಚೆ ಮಾಡಲಿಕ್ಕೆ ಅವಕಾಶ ಆಗುವುದಿಲ್ಲ. ಹೀಗಾಗಿ ಮತ್ತೆ ಇದೇ ವಿಷಯ ಚರ್ಚೆಗೆ ಬರುವುದಿಲ್ಲ.

ಒನ್‌ಇಂಡಿಯಾ ಕನ್ನಡ: ಹಾಗಾದರೆ ಮಂಗಳವಾರದ ವಿಧಾನ ಪರಿಷತ್‌ ಕಲಾಪದ ಅಜೆಂಡಾದಲ್ಲಿ ಏನೇನು ಇರುತ್ತದೆ?

ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ: ಗೋ ಹತ್ಯೆ ಪ್ರತಿಬಂಧಕ ಕಾಯ್ದೆ ಇದೆಯಲ್ಲ? ಅದನ್ನು ತಿದ್ದುಪಡಿ ಇರಬಹುದು. ನಿಯಮ 68ರಡಿ ನಡೆದ ಚರ್ಚೆಗೆ ಉತ್ತರ ಕೊಡುವುದು ಇದೆ. ಜೊತೆಗೆ ಪ್ರಶ್ನೋತ್ತರ ಕಲಾಪ ತಗೆದುಕೊಳ್ಳಬಹುದು. ಅವೆಲ್ಲವೂ ಮಂಗಳವಾರದ ಅಜೆಂಡಾದಲ್ಲಿ ಇರುತ್ತವೆ. ಧನ್ಯವಾದಗಳು.

English summary
On Tuesday, the Legislative Council session will convened again. All these developments and the allegations made by BJP members of the Council on them have been explained in an exclusive interview with Legislative Council Chairperson Pratap Chandra Shetty to 'Oneindia Kannada'. Here is the full details of the interview.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X