ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದು ಸುಳ್ಳಿನ ಕಂತೆಯ ಪುಸ್ತಕ ಎಂದ ಜೋಶಿ

|
Google Oneindia Kannada News

ಬೆಂಗಳೂರು, ಜುಲೈ 02: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ 8 ವರ್ಷ ಪೂರೈಸಿದ ಕೇಂದ್ರ ಸರ್ಕಾರದ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ ಪುಸ್ತಕವು ಸುಳ್ಳಿನ ಹೊತ್ತಿಗೆ ಎಂದು ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ಸಚಿವ ಪ್ರಲ್ಹಾದ್ ಜೋಶಿ ದೂಷಿಸಿದ್ದಾರೆ.

ಮೋದಿ ವರ್ಷ 8, ಆವಾಂತರಗಳು 108: ಕಿರುಹೊತ್ತಿಗೆ ಬಿಡುಗಡೆಮೋದಿ ವರ್ಷ 8, ಆವಾಂತರಗಳು 108: ಕಿರುಹೊತ್ತಿಗೆ ಬಿಡುಗಡೆ

ಕಾಂಗ್ರೆಸ್ ಬಿಡುಗಡೆಗೊಳಿಸಿದ ವರ್ಷ ಎಂಟು, ಅವಾಂತರಗಳು ನೂರೆಂಟು ಎಂಬ ಪುಸ್ತಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಾಸ್ತವ ಅಂಕಿ-ಅಂಶಗಳನ್ನು ಮರೆ ಮಾಡಿದ್ದಾರೆ ಎಂದು ದೂಷಿಸಿದರು. ಸುಳ್ಳಿನ ಕಂತೆಯಿಂದ ಕೂರಿದ ಪುಸ್ತಕವನ್ನು ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದಾರೆ ಎಂದು ಟೀಕಿಸಿದರು.

ಕಳೆದ ಯುಪಿಎ ಸರ್ಕಾರವು ದೇಶದ ಭದ್ರತೆಯನ್ನು ಮರೆತು ಸಬ್ಸಿಡಿಗಳ ಮೂಲಕ ಸಾಲದ ಕೂಪದಲ್ಲಿ ಮುಳುಗಿದ ಸಂದರ್ಭದಲ್ಲಿ ಇದೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ದೇಶವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಬಂದಿತು. ಶತಕೋಟಿ ರೂಪಾಯಿ ಮೊತ್ತದಲ್ಲಿ ಭ್ರಷ್ಟಾಚಾರ, ಹಗರಣಗಳನ್ನೇ ನಡೆಸುತ್ತಿದ್ದ ಯುಪಿಎ ಕಾಲದ ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸಿ ತ್ವರಿತಗತಿಯಲ್ಲಿ ಕಾರ್ಯಸಾಧನೆ ದಾರಿಯನ್ನು ನಮ್ಮ ಸರ್ಕಾರ ಸಾಕಾರಗೊಳಿಸಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು. ಸಿದ್ದರಾಮಯ್ಯ ಬಿಡುಗಡೆ ಮಾಡಿರುವ ಪುಸ್ತಕ ಒಂದೊಂದೇ ಅಂಶಗಳನ್ನು ಉಲ್ಲೇಖಿಸಿ ಮಾತನಾಡಿದ ಜೋಶಿ ಏನೆಲ್ಲಾ ಹೇಳಿದ್ದಾರೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ರಾಜ್ಯಕ್ಕೆ ಅತಿಹೆಚ್ಚು ಅನುದಾನ ಕೊಟ್ಟಿರುವುದ ಮೋದಿ ಸರ್ಕಾರ

ರಾಜ್ಯಕ್ಕೆ ಅತಿಹೆಚ್ಚು ಅನುದಾನ ಕೊಟ್ಟಿರುವುದ ಮೋದಿ ಸರ್ಕಾರ

ದೇಶವು 21ನೇ ಶತಮಾನದತ್ತ ದಾಪುಗಾಲಿಕ್ಕುತ್ತಿದ್ದ ಕಾಲದಲ್ಲೂ ಬ್ರಿಟಿಷ್‌ ಕಾಲದ ನೀತಿಯಿಂದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿತ್ತು. ಆದರೆ ಅಂದಿನ ಕೆಟ್ಟ ಆರ್ಥಿಕ ನೀತಿಗಳನ್ನೇ ಸಿದ್ದರಾಮಯ್ಯ ಅಭಿವೃದ್ಧಿ ಎಂದು ಹೇಳುತ್ತಿದ್ದಾರೆ. ರಾಜ್ಯಕ್ಕೆ ಈಗಿನ ಕೇಂದ್ರ ಸರ್ಕಾರ ಕೊಟ್ಟಷ್ಟು ಅನುದಾನ ಮತ್ತು ಬೆಂಬಲಗಳನ್ನು ಹಿಂದಿನ ಯಾವ ಸರ್ಕಾರಗಳೂ ಕೊಟ್ಟಿಲ್ಲ ಎಂದರು. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರಿ ಯೋಜನೆಗಳಲ್ಲಿ ರಾಜ್ಯದ ಬೆಳವಣಿಗೆಯ ಕುರಿತಾಗಿ ಅಂಕಿ ಅಂಶಗಳನ್ನು ತೆರೆದಿಟ್ಟರು. ಜೀವನಜ್ಯೋತಿ ಬಿಮಾ ಯೋಜನೆಯಲ್ಲಿ 49.95 ಲಕ್ಷ ನೋಂದಣಿಯಾಗಿದ್ದು, 741.42 ಕೋಟಿ ಕ್ಲೇಮು ಆಗಿದೆ. ಸುರಕ್ಷಾ ಬಿಮಾದಲ್ಲಿ 1.1 ಕೋಟಿ ನೋಂದಣಿಯಾಗಿದ್ದು 144.12 ಕೋಟಿ ಕ್ಲೇಮು ಆಗಿದೆ. ಹಾಗೆ ಅಟಲ್‌ ಪಿಂಚಣಿ ಯೋಜನೆಯಲ್ಲಿ 22.06 ಲಕ್ಷ ಚಂದಾದಾರರಿದ್ದು ಯಶಸ್ವಿ ಯೋಜನೆಯಾಗಿದೆ ಎಂದು ಹೇಳಿದರು.

ಸಿದ್ದರಾಮಯ್ಯಗೆ ಸ್ವಾವಲಂಬಿ ಉದ್ಯೋಗದ ಬೆಲೆ ಗೊತ್ತಿಲ್ಲ

ಸಿದ್ದರಾಮಯ್ಯಗೆ ಸ್ವಾವಲಂಬಿ ಉದ್ಯೋಗದ ಬೆಲೆ ಗೊತ್ತಿಲ್ಲ

ಪಕೋಡ ಮಾರಿ ಎಂದು ಪ್ರತಿ ಮಾತಿಗೆ ಲೇವಡಿ ಮಾಡುವ ಸಿದ್ದರಾಮಯ್ಯಗೆ ಸ್ವಾವಲಂಬನೆ, ಸ್ವ-ಉದ್ಯೋಗದ ಬೆಲೆ ಎಳ್ಳಷ್ಟೂ ತಿಳಿದಿಲ್ಲ. ಯುವಕರನ್ನು ಸ್ವಾವಲಂಬಿ ಆಗಿ ಉದ್ಯಮಿಗಳಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ ಅತ್ಯಂತ ಯಶಸ್ವಿ ಯೋಜನೆಯಾಗಿದೆ. ಇದರಲ್ಲಿ 1.67 ಲಕ್ಷ ಕೋಟಿ ರೂ. ಈವರೆಗೆ ಮಂಜೂರಾಗಿದ್ದು, 1.63 ಲಕ್ಷ ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ.

ಇನ್ನು ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆಯಡಿ ಗ್ರೀನ್‌ಫೀಲ್ಡ್‌ ಉದ್ಯಮ ಸ್ತಾಪನೆಗೆ ಎಸ್‌.ಸಿ/ಎಸ್‌ಟಿ ಸಮುದಾಯಗಳಿಗೆ ನೀಡುವ ಸಾಲದಲ್ಲೂ 7940 ಖಾತೆಗಳಿಗೆ ಸಾಲ ಮಂಜೂರಾಗಿದ್ದು 1,845 ಕೋಟಿ ರೂ. ಸಾಲ ನೀಡಲಾಗಿದೆ. ಎಮರ್ಜೆನ್ಸಿ ಕ್ರೆಡಿಟ್‌ ಲೈನ್‌ ಗ್ಯಾರೆಂಟಿ ಯೋಜನೆಯಲ್ಲೂ 9.77 ಲಕ್ಷ ಖಾತೆಗಳಿಗೆ ಸಾಲ ಮಂಜೂರಾಗಿದ್ದು ಒಟ್ಟು 21,709 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ 3.59 ಲಕ್ಷ ಖಾತೆಗಳಿಗೆ 16,270 ಕೋಟಿ ರೂ. ಮೊತ್ತ ಬಿಡುಗಡೆಯಾಗಿದೆ ಎಂದು ಪ್ರಲ್ಹಾದ್ ಜೋಶಿ ವಿವರಿಸಿದರು.

ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ 1.61 ಲಕ್ಷ ಖಾತೆಗಳಿಗೆ ಸಾಲ

ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ 1.61 ಲಕ್ಷ ಖಾತೆಗಳಿಗೆ ಸಾಲ

ದೇಶದಲ್ಲಿ ಬೀದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ 1.61 ಲಕ್ಷ ಖಾತೆಗಳು ಮಂಜೂರಾಗಿದ್ದು 1.42 ಲಕ್ಷ ಖಾತೆಗಳಿಗೆ 10 ಸಾವಿರ ವರೆಗೆ ವರ್ಕಿಂಗ್ ಕ್ಯಾಪಿಟಲ್‌ ಸಾಲ ನೀಡಲಾಗಿದೆ. ಡಿಜಿಟಲ್‌ ಪಾವತಿಗಳಿಗೆ ಇದರಡಿ ಬಹುಮಾನವನ್ನೂ ನೀಡಲಾಗುತ್ತಿದೆ.

ಪ್ರಧಾನ ಮಂತ್ರಿ ಜನಧನ್ ಯೋಜನೆ ಆರಂಭಿಸಿದಾಗ ಬಡವರಿಗೆ ಬ್ಯಾಂಕ್‌ ಖಾತೆ ನಿರ್ವಹಣೆ ಸಾಧ್ಯವೇ..? ಎಂದು ಇದೇ ಕಾಂಗ್ರೆಸ್ಸಿನವರು ಟೀಕಿಸಿದರು. ಆದರೆ ಇಂದು 1.56 ಕೋಟಿ ಖಾತೆಗಳು ಈ ಯೋಜನೆಯಡಿ ತೆರೆಯಲಾಗಿದ್ದು, ಖಾತೆಗಳಲ್ಲಿ 5,821 ಕೋಟಿ ರೂ. ಇದೆ. ಮಹಿಳೆಯರ ಹೆಸರಿನಲ್ಲಿ 87.38 ಲಕ್ಷ ಖಾತೆಗಳಿದ್ದು ಜನ್‌ಧನ್ ಯೋಜನೆ ಅತ್ಯಂತ ಯಶಸ್ವಿಯಾಗಿದೆ. ಪ್ರಧಾನ ಮಂತ್ರಿ ಕಿಸಾನ್‌ ಕ್ರೆಡಿಟ್ ಕಾರ್ಡ್‌ ಯೋಜನೆಯಡಿಯೂ, 19,950 ಕೋಟಿ ಸಾಲ ಮಂಜೂರಾಗಿದೆ ಎಂದು ಕೇಂದ್ರ ಸಚಿವ ಜೋಶಿ ಹೇಳಿದ್ದಾರೆ.

ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಶೇ.148ರಷ್ಟು ಏರಿಕೆ

ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಶೇ.148ರಷ್ಟು ಏರಿಕೆ

ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಬಡಬಡಿಸುವ ಸಿದ್ದರಾಮಯ್ಯ ಅಂಕಿ ಅಂಶಗಳನ್ನು ನೋಡುವ ಗೋಜಿಗೆ ಹೋಗಿಲ್ಲ. ಕೇವಲ ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಶೇ.148ರಷ್ಟು ಏರಿಕೆಯಾಗಿದ್ದರೆ, ಕೇಂದ್ರದ ಅನುದಾನದಲ್ಲಿ ಶೇ.129ರಷ್ಟು ಏರಿಕೆಯಾಗಿದೆ. ಇದೇ 2009-14 ಅವಧಿಯಲ್ಲಿ 54,396 ಕೋಟಿ ರೂಪಾಯಿಯಿದ್ದ ತೆರಿಗೆ ಹಂಚಿಕೆ 2014-19ರ ಅವಧಿಯಲ್ಲಿ 1.35 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹಾಗೆಯೇ ಯುಪಿಎ ಅವಧಿಯಲ್ಲಿದ್ದ 39, 919 ಕೋಟಿ ರೂ. ಅನುದಾನ ಹಂಚಿಕೆಯು ಎನ್‌ಡಿಎ ಅವಧಿಯಲ್ಲಿ 91, 374 ಕೋಟಿ ರೂ.ಗಳಿಗೆ ಏರಿಕೆಯಾಗಿದೆ.

2022-23ರ ಬಜೆಟ್‌ನಲ್ಲಿ ಹಣಕಾಸು ಆಯೋಗದಡಿ 5,058 ಕೋಟಿ ರೂ.ಗಳನ್ನು ನೀಡಲು ಯೋಜಿಸಲಾಗಿದೆ. 2009-10ರಲ್ಲಿ ಇದು 2, 476 ಕೋಟಿ ರೂ. ಆಗಿತ್ತು. ಹಿಂದಿನ ಯುಪಿಎ ಸರ್ಕಾರ ರಾಜ್ಯದ ಪಾಲಿಗೆ ಮಲತಾಯಿ ಧೋರಣೆ ತೋರಿಸಿದ್ದು, ಆಗ ಸಿದ್ದರಾಮಯ್ಯ ಸೇರಿದಂತೆ ಯಾವ ಕಾಂಗ್ರೆಸ್ಸಿಗರೂ ರಾಜ್ಯಕ್ಕೆ ಬರಬೇಕಾದ ಅನುದಾನ, ತೆರಿಗೆ ಹಂಚಿಕೆಗಳ ಬಗ್ಗೆ ತುಟಿ ಪಿಟಕ್ ಎನ್ನಲಿಲ್ಲ ಎಂದು ಜೋಶಿ ಟೀಕಿಸಿದ್ದಾರೆ.

ಎನ್‌ಡಿಎ ಸರ್ಕಾರದಿಂದ ತ್ವರಿತಗತಿಯಲ್ಲಿ ಯೋಜನೆಗಳ ಕಾಮಗಾರಿ

ಎನ್‌ಡಿಎ ಸರ್ಕಾರದಿಂದ ತ್ವರಿತಗತಿಯಲ್ಲಿ ಯೋಜನೆಗಳ ಕಾಮಗಾರಿ

ಯುಪಿಎ ಕಾಲದಲ್ಲಿ ರಸ್ತೆಗಳು ಹೇಗಿದ್ದವು, ದೇಶದ ಹೆದ್ದಾರಿ ಕೆಲಸಗಳು ಹೇಗೆ ವರ್ಷಾನುಗಟ್ಟಲೆ ಕುಂಟುತ್ತಾ ಸಾಗುತ್ತಿದ್ದವು ಎಂಬುದು ಜನರಿಗೆ ಚೆನ್ನಾಗಿ ತಿಳಿದಿದೆ. ಈಗಿನ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಹಲವಾರು ಯೋಜನೆಗಳು ತ್ವರಿತವಾಗಿ ನಡೆಯುತ್ತಿದ್ದು, ಹಲವಾರು ಸಾರ್ವಜನಿಕ ಸೇವೆಗೆ ಲಭ್ಯವಾಗಿವೆ. 2022-23ರಲ್ಲಿ ರಸ್ತೆ ಯೋಜನೆಗಳಿಗೆ 9,795 ಕೋಟಿ ರೂ. ನೀಡಲು ಯೋಜಿಸಲಾಗಿದೆ. 2022-23ರ ಅಂತ್ಯಕ್ಕೆ 33,913 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 1064 ಕಿ.ಮೀ. ಉದ್ದದ ಪ್ರಮುಖ ರಸ್ತೆ ಯೋಜನೆಗಳು ಅನುಷ್ಠಾನಕ್ಕೆ ಬರಲಿವೆ ಎಂದು ಜೋಶಿ ಮಾಹಿತಿ ನೀಡಿದರು.

ರಾಜ್ಯದಲ್ಲಿ ಎಲೆಕ್ಟ್ರಾನಿಕ್‌ ಉತ್ಪಾದನೆ ಕೇಂದ್ರ, ಮೀನುಗಾರಿಕೆ ಕ್ಲಸ್ಟರ್‌, ಮೆಗಾಫುಡ್ ಪಾರ್ಕ್, ಎನ್‌ಐಸಿಡಿಸಿ, ಫಾರ್ಮಾ, ವಿಶೇಷ ಆರ್ಥಿಕ ವಲಯ ಮತ್ತು ಜವಳಿ ವಲಯಕ್ಕೆ ಕೇಂದ್ರ ಬೆಂಬಲ ನೀಡುತ್ತಿದ್ದು, ಪಿಎಂ ಗತಿಶಕ್ತಿ ರಾಷ್ಟ್ರೀಯ ಪ್ಲ್ಯಾನ್‌ ಭಾಗವಾಗಿ 62 ನೋಡ್‌ಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

ಜಗತ್ತಿನಲ್ಲೇ ಅತಿಹೆಚ್ಚು ಡಿಜಿಟಲ್ ವಹಿವಾಟು ನಡೆಸುತ್ತಿರುವ ಭಾರತ

ಜಗತ್ತಿನಲ್ಲೇ ಅತಿಹೆಚ್ಚು ಡಿಜಿಟಲ್ ವಹಿವಾಟು ನಡೆಸುತ್ತಿರುವ ಭಾರತ

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರವು ನೋಟ್ ಬ್ಯಾನ್ ಮೂಲಕ ಜಗತ್ತನ್ನೇ ನಿಬ್ಬೆರಗಾಗುವಂತೆ ಮಾಡಿತು. ನೋಟ್ ಬ್ಯಾನ್ ನಂತರದಲ್ಲಿ ವಿಶ್ವವೇ ಒಮ್ಮೆ ತಿರುಗಿ ನೋಡುವಷ್ಟರ ಮಟ್ಟಿಗೆ ದೇಶದಲ್ಲಿ ಡಿಜಿಟಲ್ ವಹಿವಾಟು ಪ್ರಾರಂಭವಾಯಿತು. ಎಲ್ಲ ರಂಗಗಳಲ್ಲೂ ವಿಶ್ವದಲ್ಲೇ ನಂಬರ್‌ 1 ಆಗುವತ್ತ ದಾಪುಗಾಲಿಕ್ಕುತ್ತಿದೆ. ಯುಪಿಎ ಭ್ರಷ್ಟಾಚಾರದಿಂದ ಮನೆ ಮಾತಾಗಿತ್ತು. ಆದರೆ ಮೋದಿರ ಸರ್ಕಾರದ ಅಭಿವೃದ್ಧಿ ಕಾರ್ಯಗಳಿಂದ ಜಾಗತಿಕ ನಾಯಕರೂ ಭಾರತವನ್ನು ಗುರುತಿಸುವಂತಾಗಿದೆ.

ಭಾರತದಲ್ಲಿ ಮಾತ್ರ ಕೋವಿಡ್-19 ಲಸಿಕೆ ಸಂಪೂರ್ಣ ಉಚಿತ

ಭಾರತದಲ್ಲಿ ಮಾತ್ರ ಕೋವಿಡ್-19 ಲಸಿಕೆ ಸಂಪೂರ್ಣ ಉಚಿತ

ಕೋವಿಡ್-19 ಮಹಾಮಾರಿ ಜಗತ್ತನ್ನೇ ನರಳುವಂತೆ ಮಾಡಿದ್ದ ಸಂದರ್ಭದಲ್ಲಿ ಭಾರತದಲ್ಲಿ ಮಾತ್ರ 200 ಕೋಟಿ ಡೋಸ್ ಲಸಿಕೆಗಳನ್ನು ಪ್ರಜೆಗಳಿಗೆ ಉಚಿತವಾಗಿ ನೀಡಲಾಯಿತು. ಯುರೋಪ್‌ನ ಹಲವು ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚು ವ್ಯಾಕ್ಸಿನ್ ಅನ್ನು ಭಾರತ, ತನ್ನ ಪ್ರಜೆಗಳಿಗೆ ಉಚಿತವಾಗಿ ನೀಡಿತು. ಕೋವಿಡ್‌ನಂತ ತುರ್ತು ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ ದೇಶದ ಜನರಿಗೆ ಉಚಿತ ಆಹಾರ ಒದಗಿಸುವ ಕೆಲಸವನ್ನೂ ಎನ್‌ಡಿಎ ಸರ್ಕಾರ ಮಾಡಿದೆ. ಹಿಂದೆಂದೂ ಕಂಡು ಕೇಳರಿಯದ ರೀತಿ ಅತಿ ಸಂಕೀರ್ಣ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಇದೇ ಮೋದಿ ಸರ್ಕಾರ. ಆದರೆ ಇದನ್ನು ಸಿದ್ದರಾಮಯ್ಯ ಮರೆತಿದ್ದಾರೆ ಎಂದು ಪ್ರಲ್ಹಾದ್ ಜೋಶಿ ಕುಟುಕಿದರು.

ಯುಪಿಎ ಸರ್ಕಾರವು ಕರ್ನಾಟಕ್ಕೆ ಕೊಟ್ಟಿದ್ದೇನು?

ಯುಪಿಎ ಸರ್ಕಾರವು ಕರ್ನಾಟಕ್ಕೆ ಕೊಟ್ಟಿದ್ದೇನು?

ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಕೊಟ್ಟ ಕೊಡುಗೆ ಏನು..? ತನ್ನ ಸಾಧನೆ ಏನು..? ಎಂಬುದನ್ನು ಮೊದಲು ಸಿದ್ದರಾಮಯ್ಯ ಹೇಳಲಿ. ಯುಪಿಎ ಅವಧಿಯಲ್ಲಿ ಒಂದು ಕುಟುಂಬ ಅಭಿವೃದ್ಧಿಯಾಗಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿರುವ ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷವಾಗಿ ವಿರೋಧಿಸುವುದೇ ನಮ್ಮ ಕೆಲಸ ಎಂಬ ಕಾರಣಕ್ಕೆ ವಿರೋಧಿಸುವ ಚಾಳಿ ಬೇಡ. ಸತ್ಯಾಂಶಗಳನ್ನು ತಿಳಿದುಕೊಳ್ಳದೇ ತಮ್ಮ ಮಗನ ವಯಸ್ಸಿನ ನಕಲಿ ಗಾಂಧಿ, ಅಪ್ರಬುದ್ಧ ರಾಜಕಾರಣಿ ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಸಿದ್ದರಾಮಯ್ಯ ಗುಲಾಮಗಿರಿ ಮಾಡುತ್ತಿದ್ದಾರೆ. ವಿಚಿತ್ರ ಹೇಳಿಕೆ ನೀಡುತ್ತಿದ್ದಾರೆ.

ಕಾಂಗ್ರೆಸ್‌ ಸೇರಿದಂತೆ ಅದರ ನಾಯಕರು ಹೇಳುತ್ತಿರುವ ಸುಳ್ಳುಗಳನ್ನು, ದಾರಿತಪ್ಪಿಸುವ ಹೇಳಿಕೆಗಳನ್ನು ಪರಾಮರ್ಶಿಸುವಷ್ಟು ಈಗ ಜನರೂ ಬುದ್ಧಿವಂತರಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

Recommended Video

ಮೆಕ್ಸಿಕೋದಲ್ಲಿ ಇದೇ ಕಾರಣಕ್ಕೆ ಮೇಯರ್ ಮೊಸಳೆನ ಮದುವೆ ಆಗಿರೋದು !! | OneIndia Kannada

English summary
Congress Leader Siddaramaiah released the book of false allegation against Narendra Modi Govt, Says Pralhad Joshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X