ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದ ಶ್ರೀನಿವಾಸ ಪ್ರಸಾದ್, ಶಾಸಕ ರಿಜ್ವಾನ್ ಅರ್ಷದ್‌ಗೆ ಬಿಗ್ ರಿಲೀಫ್

By ಎಸ್‌ಎಸ್‌ಎಸ್
|
Google Oneindia Kannada News

ಬೆಂಗಳೂರು, ಜುಲೈ 12: ಚುನಾವಣಾ ಸಂಬಂಧ ಅಕ್ರಮಗಳ ಆರೋಪದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೈಕೋರ್ಟ್, ಸಂಸದ ಶ್ರೀನಿವಾಸ ಪ್ರಸಾದ್, ಶಾಸಕ ರಿಜ್ವಾನ್ ಅರ್ಷದ್‌ಗೆ ಬಿಗ್ ರಿಲೀಫ್ ನೀಡಿದೆ.

ಅವರುಗಳ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣಗಳಿಗೆ ನ್ಯಾಯಾಲಯ ಮಧ್ಯಂತರ ತಡೆ ಮಂಜೂರು ಮಾಡಿದೆ. ಹಾಗಾಗಿ ಇಬ್ಬರಿಗೂ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಿದೆ. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತ್ಯೇಕ ಆದೇಶಗಳನ್ನು ಹೊರಡಿಸಿದ್ದಾರೆ.

ಶ್ರೀನಿವಾಸ್ ಪ್ರಸಾದ್: ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ 2017ರಲ್ಲಿನಡೆದಿದ್ದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ. ಶ್ರೀನಿವಾಸ್‌ ಪ್ರಸಾದ್‌ (ಹಾಲಿ ಸಂಸದ) ಮತದಾರರೊಬ್ಬರಿಗೆ ಬಹಿರಂಗವಾಗಿ ಹಣ ನೀಡಿದ ಆರೋಪಕ್ಕೆ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಪ್ರಕರಣದ ಸಂಬಂಧ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದಲ್ಲಿ (ಜನಪ್ರತಿನಿಧಿಗಳ ವಿಶೇಷ ಕೋರ್ಟ್‌) ನಡೆಯುತ್ತಿರುವ ವಿಚಾರಣೆ ರದ್ದು ಕೋರಿ ಶ್ರೀನಿವಾಸ್‌ ಪ್ರಸಾದ್‌ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾಯಾಲಯ ಮಧ್ಯಂತರ ಆದೇಶ ಮಾಡಿತು.

ಪ್ರತಿವಾದಿಗಳಾದ ನಂಜನಗೂಡು ಗ್ರಾಮಾಂತರ ಪೊಲೀಸರು ಹಾಗೂ ದೂರುದಾರರಾದ ನಂಜನಗೂಡು ವಿಧಾನಸಭಾ ಕ್ಷೇತ್ರದ ಸೆಕ್ಟರ್‌ ಅಧಿಕಾರಿ ಎಸ್‌. ಜಯಶಂಕರ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಶ್ರೀನಿವಾಸ್‌ ಪ್ರಸಾದ್‌ ಪರ ಹಿರಿಯ ವಕೀಲರು, ಅರ್ಜಿದಾರರ ವಿರುದ್ಧದ ಐಪಿಸಿ ಸೆಕ್ಷನ್‌ 171ಎಚ್‌ (ಚುನಾವಣೆಗಾಗಿ ಅಕ್ರಮ ಹಣ ಹಂಚಿಕೆ) ಆರೋಪದಲ್ಲಿ ಯಾವುದೇ ಹುರುಳಿಲ್ಲ. ರಾಜಕೀಯ ವೈಷಮ್ಯದಿಂದ ಪ್ರಕರಣ ದಾಖಲಿಸಲಾಗಿದ್ದು ಅದನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.

ನಂಜನಗೂಡು ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀನಿವಾಸ್‌ ಪ್ರಸಾದ್‌ 2017ರ ಮಾರ್ಚ್ 23ರಂದು ದೇವರಸನಹಳ್ಳಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಈ ಸಂದರ್ಭದಲ್ಲಿ ವೃದ್ಧೆಯೊಬ್ಬರಿಗೆ ಬಹಿರಂಗವಾಗಿ 100 ರೂ. ನೋಟು ನೀಡಿದ್ದು, ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸೆಕ್ಟರ್‌ ಅಧಿಕಾರಿ ಜಯಶಂಕರ್‌ ನಂಜನಗೂಡು ಪೊಲೀಸ್‌ ಠಾಣೆಯಲ್ಲಿದೂರು ದಾಖಲಿಸಿದ್ದರು.

Election code of conduct violation: HC stayed cases against MP Srinivasa prasad and MLA Rizwan Arshad

ತನಿಖೆ ನಡೆಸಿದ್ದ ಪೊಲೀಸರು ಸ್ಥಳೀಯ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು.

ರಿಜ್ವಾನ್ ಅರ್ಷದ್: 2019ರ ಲೋಕಸಭಾ ಚುನಾವಣೆ ವೇಳೆ ನಡೆದಿದೆ ಎನ್ನಲಾದ ನೀತಿ ಸಂಹಿತೆ ಉಲ್ಲಂಘನೆ ಆರೋಪ ಸಂಬಂಧ ಶಾಸಕ ರಿಜ್ವಾನ್‌ ಅರ್ಷದ್‌ ವಿರುದ್ಧದ ಎಫ್‌ಐಆರ್‌ ಹಾಗೂ ಆ ಕುರಿತು ವಿಚಾರಣೆಗೆ ಹೈಕೋರ್ಟ್‌ ಮಂಗಳವಾರ ಮಧ್ಯಂತರ ತಡೆ ನೀಡಿದೆ.

ಅರ್ಜಿದಾರರು ಪ್ರಸ್ತಾಪಿಸಿರುವ ಅಂಶಗಳನ್ನು ಗಮನಿಸಿದರೆ ಮತ್ತು ಅಪರಾಧ ದಂಡ ಸಂಹಿತೆ ಸೆಕ್ಷನ್‌ 155ರ ಪ್ರಕಾರ, ಚುನಾವಣಾ ನೀತಿ ಉಲ್ಲಂಘನೆ ಸಂಬಂಧ ಮೊದಲು ಮ್ಯಾಜಿಸ್ಪ್ರೇಟ್‌ ಮುಂದೆ ದೂರು ಸಲ್ಲಿಸಿ, ಅವರಿಂದ ತನಿಖೆ ಆದೇಶ ಪಡೆದ ನಂತರವೇ ತನಿಖೆ ನಡೆಸಬಹುದಾಗಿದೆ. ನೇರವಾಗಿ ಪೊಲೀಸರಿಗೆ ದೂರು ನೀಡುವಂತಿಲ್ಲ. ಹಾಗಾಗಿ ಸದ್ಯಕ್ಕೆ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಲಾಗುತ್ತಿದೆ ಎಂದು ಆದೇಶಿಸಿದೆ.

2019ರ ಲೋಕಸಭಾ ಚುನಾವಣೆ ವೇಳೆ ಏ.13ರಂದು ದೊಡ್ಡನೆಕುಂದಿ ಗ್ರಾಮದಲ್ಲಿ ಶ್ರೀರಾಮನವಮಿ ಪ್ರಯುಕ್ತ ಜಾತ್ರೆ ಮತ್ತು ಪಲ್ಲಕ್ಕಿ ನಡೆಯುತ್ತಿತ್ತು. ಆಗ ಶಾಸಕ ರಿಜ್ವಾನ್‌ ಅರ್ಷದ ಅವರು ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಅವರನ್ನು ಪ್ರಚಾರಕ್ಕೆ ಅನುಮತಿ ಇದೆಯೆ ಎಂದು ಕೇಳಿದ್ದಕ್ಕೆ ಅವರು, ಹೌದು ಅನುಮತಿ ಪಡೆಯಲಾಗಿದೆ ಎಂದು ಹೇಳಿದ್ದರು.

ಆದರೆ ವಾಸ್ತವವಾಗಿ ಅವರು ಪ್ರಚಾರ ನಡೆಸಲು ಅನುಮತಿ ಪಡೆದಿರಲಿಲ್ಲ, ಹಾಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ 171(1) ಮತ್ತು ಜನಪ್ರತಿನಿಧಿಗಳ ಕಾಯಿದೆ ಸೆಕ್ಷನ್‌ 144ರನ್ವಯ ಕ್ರಮ ಕೈಗೊಳ್ಳಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಸಿ. ವೆಂಕಟೇಶ್‌, ಎಚ್‌ಎಎಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು. ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

English summary
Election code of conduct violation case. Karnataka high court stayed cases against Chamarajanagara MP Srinivasa Prasad and Congress MLA Rizwan Arshad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X