• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ 13ರಂದು ಈದುಲ್ ಫಿತ್ರ್ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸಿ: ಧರ್ಮಗುರುಗಳ ಕರೆ

By Lekhaka
|

ಮಂಗಳೂರು, ಮೇ 11: ಕರಾವಳಿಯ ಮುಸ್ಲಿಂ ಬಾಂಧವರು ಮೇ 13ರಂದು ಈದುಲ್ ಫಿತ್ರ್ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸುವಂತೆ ಮುಸ್ಲಿಂ ಧರ್ಮಗುರುಗಳು ಕರೆ ನೀಡಿದ್ದಾರೆ.

ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಈ ಬಾರಿಯ ಈದುಲ್ ಫಿತ್ರ್ ಹಬ್ಬವನ್ನು ಮನೆಗಳಲ್ಲೇ ಆಚರಿಸಬೇಕು. ಸರಳವಾಗಿ ಆಚರಿಸಿ ಬಡವರಿಗೆ ದಾನ ನೀಡಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಜ್ ಅಹ್ಮದ್ ಮುಸ್ಲಿಯರ್ ಕರೆ ನೀಡಿದ್ದಾರೆ.

ಈದುಲ್ ಫಿತ್ರ್ ದಿನದಂದು ಮುಂಜಾನೆಯೇ ಬಡವರಿಗೆ ದಾನ ಮಾಡಿ, ಮುಸ್ಲಿಮರು ಮನೆಗಳಲ್ಲೇ ಬೆಳಗಿನ ನಮಾಜ್ ಮಾಡಬೇಕು. ಹಬ್ಬದ ದಿನ ಕುಟುಂಬಸ್ಥರು, ನೆಂಟರ ಮನೆಗೆ ತೆರಳದೇ ಅವರ ಮನೆಗಳಲ್ಲೇ ಇದ್ದು ಮನೆ ಮಂದಿಯೊಂದಿಗೆ ಹಬ್ಬ ಆಚರಿಸಬೇಕು. ಸಾಮಾಜಿಕ ಜಾಲತಾಣದ ಮೂಲಕ ಹಬ್ಬದ ಶುಭಾಶಯಗಳನ್ನು ಮಾಡಿ, ದೈಹಿಕ ಅಂತರ ಕಾಪಾಡಬೇಕು ಎಂದು ಖಾಝಿ ಅವರು ಮನವಿ ಮಾಡಿದ್ದಾರೆ.

ಕೊರೊನಾ ಸಂಕಷ್ಟದ ಕಾಲದಲ್ಲಿ ಹಬ್ಬದ ನೆಪದಲ್ಲಿ ದುಂದು ವೆಚ್ಚ ಮಾಡಬಾರದು. ಸಂಕಷ್ಟದಲ್ಲಿರುವ ಸರ್ವ ಧರ್ಮದರವರಿಗೂ ನೆರವಾಗಬೇಕು. ಈ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಭಾಗಿಯಾಗಿ, ನಿಯಮಗಳನ್ನು ಪಾಲಿಸಿ ಕೈ ಜೋಡಿಸಬೇಕು ಅಂತಾ ಖಾಝಿ ಅಲ್ ಹಾಜ್ ಅಹ್ಮದ್ ಮುಸ್ಲಿಯರ್ ಹೇಳಿದ್ದಾರೆ.

ಕಳೆದ ಮೂವತ್ತು ದಿನಗಳ ಉಪವಾಸ ವೃತಾಚರಣೆಯನ್ನು ಮುಸ್ಲಿಮರು ಆಚರಿಸಿದ್ದು, ಹಬ್ಬದ ದಿನ ಪವಿತ್ರ ಉಪವಾಸ ಆಚರಣೆ ಕೊನೆಗೊಳ್ಳಲಿದೆ. ಪಾಪ ವಿಮೋಚನೆಯ ಈ ತಿಂಗಳು ಬಹಳ ಪವಿತ್ರವಾದವುದು ಎಂಬುವುದು ಮುಸ್ಲಿಂ ಬಾಂಧವರ ನಂಬಿಕೆಯಾಗಿದೆ. ಹಸಿವಿನ ಮಹತ್ವದೊಂದಿಗೆ ದಾನ ಧರ್ಮ ಮತ್ತು ದೇವರ ಆರಾಧನೆಗೆ ಆದ್ಯತೆ ಮಾತ್ರವಲ್ಲದೆ ಹೆಚ್ಚಾಗಿ ಆಧ್ಯಾತ್ಮದ ನೆನಪಿಗಾಗಿ ಈ 30 ದಿನಗಳ ಕಠಿಣ ಉಪವಾಸವನ್ನು ಮುಸ್ಲಿಮರು ಮಾಡಿದ್ದಾರೆ.

ಸರಳವಾಗಿ ಆಚರಿಸಿ ಹಬ್ಬ ಆಚರಿಸಿ: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ

ಕೊರೊನಾ ಮಹಾಮಾರಿಯ ಎರಡನೇ ಅಲೆಯು ನಮ್ಮನ್ನು ಇನ್ನಿಲ್ಲದಂತೆ ಬೆಚ್ಚಿ ಬೀಳಿಸಿದ್ದು, ಈ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರು ಈದುಲ್ ಫಿತ್ರ್ (ರಂಜಾನ್) ಹಬ್ಬವನ್ನು ಸರಳವಾಗಿ ಆಚರಿಸಬೇಕು. ಅಲ್ಲದೆ ತಮ್ಮ ನೆರೆಹೊರೆಯ ಅರ್ಹ ಬಡವರಿಗೆ ಜಾತಿ ಮತ ನೋಡದೆ ಸಹಾಯ ಮಾಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ತಮ್ಮ ಈದ್ ಸಂದೇಶದಲ್ಲಿ ತಿಳಿಸಿದ್ದಾರೆ.

ಕಳೆದ ಒಂದು ವರ್ಷಕ್ಕೂ ಮೇಲ್ಪಟ್ಟು ಈ ಜಗತ್ತು ಕೊರೊನಾ ಎಂಬ ಮಹಾಮಾರಿಯ ಕಬಂಧ ಬಾಹುವಿನಲ್ಲಿ ನಲುಗಿದ್ದು, ನಮ್ಮ ದೇಶವೂ ಅದಕ್ಕೆ ಹೊರತಾಗಿಲ್ಲ. ಕಳೆದ ವರ್ಷದ ಈ ಅವಧಿಯಲ್ಲಿ ಈ ಕಾಯಿಲೆಯಿಂದ ಅಂತಹ ಸಾವು ನೋವಿನ ಅನುಭವವಾಗದಿದ್ದರೂ ಅದರ ದುಷ್ಪರಿಣಾಮವು ಹಲವು ಆಯಾಮಗಳಲ್ಲಿ ನಮ್ಮನ್ನು ಕಾಡಿತ್ತು.

ನಮ್ಮ ಆರೋಗ್ಯ ಸೇನಾನಿಗಳಿಂದಾದಿಯಾಗಿ ಅದೆಷ್ಟೋ ದೇಶ ಬಾಂಧವರು ನಮ್ಮನ್ನು ಅಗಲಿರುವುದು ಮತ್ತು ಈ ಕಾಲಾವಧಿಯ ಪರಿಣಾಮಗಳು ನಮ್ಮೆಲ್ಲರನ್ನು ದುಃಖಕ್ಕೀಡು ಮಾಡಿದೆ. ಬಂಧು ಬಾಂಧವರನ್ನು ಕಳೆದುಕೊಂಡ ನೋವು ಮತ್ತು ಅನುಭವಿಸಿದ ಯಾತನೆಯು ಮನ ಕಲುಕಿಸಿದೆ ಎಂದು ಅವರು ಹೇಳಿದ್ದಾರೆ.

ಸರಕಾರ ಮತ್ತು ಆಡಳಿತ ಯಂತ್ರ ಕೊರೊನಾ ಮಹಾಮಾರಿಯ ಸರಪಣಿಯನ್ನು ಮುರಿಯುವ ಉದ್ದೇಶದಿಂದ ಹೇರಿದ ಕರ್ಫ್ಯೂ ಮತ್ತು ಲಾಕ್ಡೌನ್ ಗಳು ಅವೈಜ್ಞಾನಿಕವಾಗಿರುವ ಬಗ್ಗೆ ಜನ ಮಾನಸದಲ್ಲಿ ಅತೃಪ್ತಿ ಇದ್ದರೂ, ಸಮುದಾಯ ಈ ಸಾಂಕ್ರಾಮಿಕ ರೋಗಕ್ಕೆ ತಡೆ ನೀಡಲು ಆಡಳಿತದೊಂದಿಗೆ ಸಹಕರಿಸುತ್ತಿರುವುದು ಸಂತೋಷದಾಯಕ.

ಇದು ಸಮುದಾಯವು ವಿಚಾರಪೂರ್ಣ ಜವಾಬ್ದಾರಿಯುತ ಸೇವಾ ಮನೋಭಾವದ ಮಾನವೀಯ ಸಂಘಟನೆಗಳು ನಮ್ಮ ಸಹೋದರ ಸಹೋದರಿಯರ ನೆರವಿಗಾಗಿ ಹಗಲು ರಾತ್ರಿ ಕೈಯೊಡ್ಡಿರುವುದು ಸರ್ವಶಕ್ತನಾದ ಜಗದೊಡೆಯನ ಕೃಪೆಗೆ ಪಾತ್ರವಾಗಿದೆ. ಪವಿತ್ರ ರಮಜಾನಿನ ಉಪವಾಸ ವೃತಾಚರಣೆಯಲ್ಲೂ ನಮ್ಮ ಸಂಘಟನೆಗಳ ಸದಸ್ಯರು, ಮಹಿಳಾ ಘಟಕಗಳೂ ಸೇರಿ ಕಟಿಬದ್ಧರಾಗಿ ಮೃತದೇಹಗಳ ವಿಲೇವಾರಿಯಿಂದಾದಿಯಾಗಿ ಮಾಡಿದ ಮತ್ತು ಮಾಡುತ್ತಿರುವ ಸೇವೆಗಳು ಪ್ರಪಂಚದಾದ್ಯಂತ ಪ್ರಶಂಸನೀಯವಾಗಿದೆ.

   Corona Vaccine ತೆಗೆದುಕೊಳ್ಳೋಕೆ ಮುಂಚೆ ಹಾಗೂ ತೆಗೆದುಕೊಂಡ ಮೇಲೆ ಇದನ್ನ ಫಾಲೋ ಮಾಡಿ | Oneindia Kannada

   ಪವಿತ್ರ ರಮದಾನ್ ಕಳೆದ ವರ್ಷದಂತೆ ಈ ವರ್ಷವೂ ಕಳೆದಿದ್ದು, ವಿದಾಯ ಹಂತದಲ್ಲಿದೆ. ಒಬ್ಬರನ್ನೊಬ್ಬರು ಹರಸಿ ಹಾರೈಸುವ ಸಂತೋಷವು ಕಮರಿದೆ. ಆದರೆ ದೂರದಿಂದಲೇ ದೂರವಾಣಿ ಸಂದೇಶದ ಮೂಲಕ ನಮ್ಮ ಹಾರೈಕೆಗಳನ್ನು ವಿನಿಮಯ ಮಾಡಿಕೊಂಡು ಸೃಷ್ಠಿಕರ್ತನಿಗೆ ಕೃತಾರ್ಥರಾಗೋಣ ಮತ್ತು ನಮ್ಮನ್ನಗಲಿದ ದೇಶ ಬಾಂಧವರ ಸದ್ಗತಿಗಾಗಿ ಹಾಗೂ ಈ ಸಂಕಟದಲ್ಲಿ ನರಳುತ್ತಿರುವ ಜೀವಗಳ ಚೇತರಿಕೆಗಾಗಿ ಪ್ರಾರ್ಥಿಸೋಣ.

   English summary
   Islamic Religious Leaders of the coastal districts have called for the Eid Ul-Fitr 2021 festival on May 13 to be celebrated at home simply amid lockdown.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X