ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಂವಿಧಾನಿಕ, ಅವೈಜ್ಞಾನಿಕ ಪಠ್ಯಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಿ: ನಿರಂಜನಾರಾಧ್ಯ

|
Google Oneindia Kannada News

ಬೆಂಗಳೂರು, ಮೇ 24: ಕರ್ನಾಟಕ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ರಾಜ್ಯದಲ್ಲಿ ಜೋರು ಸದ್ದು ಮಾಡುತ್ತಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯಲ್ಲಿ ನಡೆದ ಪರಿಷ್ಕರಣೆಯನ್ನು ವಿರೋಧಪಕ್ಷ, ಸಾಹಿತಿಗಳು ವಿರೋಧಿಸಿದ್ದಾರೆ. ರೋಹಿತ್ ಚಕ್ರತೀರ್ಥ ಶಿಕ್ಷಣ ತಜ್ಞರಲ್ಲ ಎಂಬುದು ಮತ್ತೊಂದು ವಿವಾದಕ್ಕೂ ಕಾರಣವಾಗಿದೆ. ಈ ನಡುವೆ ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ. ಶಿಕ್ಷಣ ತಜ್ಞರು ಏನು ಬರೆದಿದ್ದಾರೆ ಇಲ್ಲಿದೆ ವಿವರ.

ಪಠ್ಯಕ್ರಮ, ಪಠ್ಯವಸ್ತು ಮತ್ತು ಪಠ್ಯಪುಸ್ತಕವನ್ನು ಕ್ರಮವನ್ನು ರೂಪಿಸುವಾಗ ಅಥವಾ ಪರಿಷ್ಕರಿಸುವಾಗ , ಒಂದು ಪ್ರಮಾಣೀಕರಿಸಿದ ಚೌಕಟ್ಟು ಹಾಗು ಪ್ರಜಾಸತ್ತಾತ್ಮಕ ವಿಧಾನವನ್ನು ಅನುಸರಿಸಬೇಕಿದೆ. ಅದರಲ್ಲಿ, ಬಹಳ ಮುಖ್ಯವಾದದ್ದು ಶಿಕ್ಷಣದ ಗುರಿ ಮತ್ತು ಉದ್ದೇಶಗಳು; ಈ ಗುರಿಗಳನ್ನು ಸಾಧಿಸಲು ಯಾವ ಬಗೆಯ ವಿಷಯವನ್ನು ಆಯ್ಕೆ ಮಾಡಬೇಕು; ಕಲಿಕಾ ಅನುಭವಗಳ ಹೇಗಿರಬೇಕು; ಅಂಥಹ ಜ್ಞಾನ ಮತ್ತು ಅನುಭವಗಳನ್ನು ಕಟ್ಟಿಕೊಡುವ ಬಗೆ ಹೇಗೆ; ಅಗತ್ಯವಾದ ಪರಿಕರಗಳೇನು ಮತ್ತು ಗುರುತಿಸಿಕೊಂಡಿರುವ ಗುರಿ/ಉದ್ದೇಶಗಳ ಈಡೇರಿಕೆಯನ್ನು ಖಚಿತಪಡಿಸಿಕೊಳ್ಳುವ ವಿಧಿ-ವಿಧಾನಗಳೇನು ಎಂಬ ಹತ್ತು - ಹಲವು ಆಯಾಮಗಳನ್ನು ಅದು ಒಳಗೊಂಡಿರುತ್ತದೆ.

ಸಾಮಾನ್ಯವಾಗಿ ಪಠ್ಯ ಪುಸ್ತಕಗಳ ರಚನೆ ಅಥವಾ ಪರಿಷ್ಕರಣೆಯ ಸಂದರ್ಭದಲ್ಲಿ ಭಾಷಾ ಹಾಗೂ ಸಮಾಜ ವಿಜ್ಞಾನದ ವಿಷಯಗಳಲ್ಲಿ, ವಿಷಯಗಳಲ್ಲಿ ವಿಷಯದ ಜೊತೆಗೆ ವಸ್ತುನಿಷ್ಠತೆ, ಸಾಕ್ಷಾಧಾರಗಳು ಮತ್ತು ಪಠ್ಯದ ಮೂಲಕ ಮಕ್ಕಳಲ್ಲಿ ಬೆಳೆಸಬೇಕಾದ ಮೌಲ್ಯಗಳು ಪ್ರಾಮುಖ್ಯತೆ ಪಡೆಯುತ್ತವೆ. ವಿಷಯ ಆಯ್ಕೆಯ ಜೊತೆಗೆ ಲೇಖಕರ ಹಿನ್ನೆಲೆ ಮತ್ತು ಅದನ್ನು ಸಮರ್ಥಿಸಬಹುದಾದ ಸಂಶೋಧನಾತ್ಮಕ ಪುರಾವೆ ಮಕ್ಕಳಿಗೆ ಆದರ್ಶವಾಗುತ್ತದೆ . ಈ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳನ್ನು ರಚಿಸುವಾಗ ಸ್ವಾತಂತ್ರ್ಯ, ಭಾತೃತ್ವ, ನಂಬಿಕೆ, ಪರಸ್ಪರ ಗೌರವ ಮತ್ತು ಬಹುತ್ವವನ್ನು ಗೌರವಿಸುವುದು ಮತ್ತು ಮಾನವೀಯ ಮೌಲ್ಯಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸುವ ಮೂಲಕ ಪ್ರಜ್ಞಾವಂತ ನಾಗರೀಕರನ್ನಾಗಿ ರೂಪಿಸುವ ಪಠ್ಯವನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಒಂದು ವಸ್ತುನಿಷ್ಠ ವೈಚಾರಿಕ ವಿಷಯ ತಜ್ಞತೆಯ ಸಮಿತಿಯ ಮೇಲಿರುತ್ತದೆ.

ಸಮಕಾಲೀನ ಕಾಳಜಿಗಳ ಭಾಗವಾಗಿ ಲಿಂಗ ಕಾಳಜಿಗಳನ್ನು ಚರ್ಚಿಸುವಾಗ ಲಿಂಗ ಸಮಾನತೆ ಮತ್ತು ಸಂವೇದನಾಶೀಲತೆಯನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿ ನೋಡಬೇಕಾಗುತ್ತದೆ. ಈಗಿನ ಭಾಷಾ/ಸಮಾಜ ವಿಜ್ಞಾನದಲ್ಲಿನ ಪಿತೃ ಪ್ರಧಾನ ವ್ಯವಸ್ಥೆಯ ಪೂರ್ವಾಗ್ರಹಪೀಡಿತ ಜ್ಞಾನಮೀಮಾಂಸೆಯ ಚೌಕಟ್ಟಿನಿಂದ ಪೂರ್ಣ ಹೊರನಿಂತು ನೋಡುವ ಅವಶ್ಯಕತೆಯಿದೆ ಎಂದು ನಿರಂಜನಾರಾಧ್ಯ ಹೇಳಿದ್ದಾರೆ.

ಆಳವಾದ ಜ್ಞಾನವನ್ನು ಒದಗಿಸಬೇಕು

ಆಳವಾದ ಜ್ಞಾನವನ್ನು ಒದಗಿಸಬೇಕು

ಮಾನವ ಹಕ್ಕುಗಳ ಪರಿಕಲ್ಪನೆಗೆ ಒಂದು ಸಾರ್ವತ್ರಿಕ ಚೌಕಟ್ಟಿದೆ. ಮಕ್ಕಳು ಚಿಕ್ಕವರಿರುವಾಗಲೇ ಅವರಿಗೆ ಈ ಸಾರ್ವತ್ರಿಕ ಮೌಲ್ಯಗಳನ್ನು ಅವರ ವಯಸ್ಸಿಗೆ ಅನುಗುಣವಾದ ಪರಿಭಾಷೆಯಲ್ಲಿ ಪರಿಚಯಿಸುವುದು ಅಗತ್ಯವಿದೆ. ಸಮಕಾಲೀನ ಭಾರತವನ್ನು ಕೇಂದ್ರವಾಗಿಟ್ಟುಕೊಂಡು ವಿದ್ಯಾರ್ಥಿಗಳಿಗೆ ದೇಶ ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗು ಸಾಂಸ್ಕೃತಿಕ ಸವಾಲುಗಳನ್ನು ವಿಶ್ಲೇಷಿಸಿ ತೀರ್ಮಾನಿಸುವ ಆಳವಾದ ಜ್ಞಾನವನ್ನು ಒದಗಿಸಬೇಕು. ಜ್ಞಾನ ಗ್ರಹಿಕೆಯ ಪಲ್ಲಟವನ್ನು ಗಮನದಲ್ಲಿಟ್ಟಿಕೊಂಡು, ವರ್ತಮಾನ ಭಾರತವನ್ನು ಆದಿವಾಸಿ, ದಲಿತ ಮತ್ತು ಇನ್ನಿತರ ಸಮಾಜದ ಅಂಚಿನಲ್ಲಿರುವ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸುವಂತಾಗಬೇಕು.

ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಆಧುನಿಕ ಚರಿತ್ರೆಯ ಸಂಗತಿಗಳನ್ನು ಹಾಗು ಜಾಗತಿಕ ಮಟ್ಟದಲ್ಲಿನ ಮಹತ್ವದ ಬೆಳವಣಿಗೆಗಳನ್ನು ಚರಿತ್ರೆಯಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಸುತ್ತಲಿನ ಪ್ರಪಂಚದಲ್ಲಿ ಬದಲಾವಣೆ ಮತ್ತು ನಿರಂತರತೆಯ ಪ್ರಕ್ರಿಯೆಗಳನ್ನು ಅನ್ವೇಷಿಸಲು ಮತ್ತು ಅಧಿಕಾರ ಮತ್ತು ಹತೋಟಿ ಇವುಗಳನ್ನು ಅಂದು ಹಾಗೂ ಇಂದು ಯಾವ ಬಗೆಯಲ್ಲಿ ಬಳಸಲಾಗಿದೆ ಎಂಬುವುದನ್ನು ತುಲನಾತ್ಮಕವಾಗಿ ಮತ್ತು ವಿಮರ್ಶಾತ್ಮಕವಾಗಿ ನೋಡುವುದನ್ನು ಚರಿತ್ರೆಯ ಮುಖಾಂತರ ತಿಳಿಸಿಕೊಡಬೇಕು.

ಸಂವಿಧಾನದ ತಾತ್ವಿಕ ಬುನಾದಿ

ಸಂವಿಧಾನದ ತಾತ್ವಿಕ ಬುನಾದಿ

ಎಲ್ಲಕ್ಕಿಂತ ಮಿಗಿಲಾಗಿ, ಭಾರತೀಯ ಸಂವಿಧಾನದ ತಾತ್ವಿಕ ಬುನಾದಿ ಮತ್ತು ಅದರಲ್ಲಿ ಪ್ರಸ್ತಾಪವಾಗಿರುವ ವಿಶಿಷ್ಟ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ, ಭಾತೃತ್ವ, ಜಾತ್ಯತೀತತೆ, ಘನತೆ, ಬಹುತ್ವ ಮತ್ತು ಶೋಷಣೆ ಮುಕ್ತಿ ಸಮ-ಸಮಾಜದ ಬಗ್ಗೆ ಆಳವಾದ ಚರ್ಚೆ ಶಿಕ್ಷಣ ಪ್ರಕ್ರಿಯೆಯ ಕೇಂದ್ರಬಿಂದುವಾಗಿರಬೇಕು. ಭಾರತದಲ್ಲಿ ಪ್ರಜಾಪ್ರಭುತ್ವ ಪ್ರವೃದ್ಧಮಾನಕ್ಕೆ ಬಂದಿದ್ದು, ಪ್ರಜಾಪಭುತ್ವವನ್ನು ಗಟ್ಟಿಗೊಳಿಸುವ ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳಬೇಕಿದೆ. ಅದರಲ್ಲೂ ವಿಶೇಷವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಸಮಾಜವನ್ನು ವಿಶ್ಲೇಷಿಸಲು ಅಗತ್ಯವಾದ ಜ್ಞಾನವನ್ನು ಮಕ್ಕಳಿಗೆ ಕಟ್ಟಿಕೊಡಬೇಕಿದೆ.


ನಮ್ಮ ರಾಜ್ಯದಲ್ಲಿ ಈಗ ನಡೆಯುತ್ತಿರುವ ಪಠ್ಯಪರಿಷ್ಕಣೆ ಪ್ರಕ್ರಿಯೆಯು, ಇದೆಲ್ಲವನ್ನೂ ಗಾಳಿಗೆ ತೂರಿ ಕೇವಲ ಒಂದು ಪಕ್ಷದ ಕೋಮುವಾದಿ ಹಾಗು ಪ್ರತಿಗಾಮಿ ವಿಷಯಗಳನ್ನು ಪಠ್ಯದಲ್ಲಿ ಸೇರಿಸುವ ಮೂಲಕ ಕೋಮುವಾದ ಹಾಗು ಪಂಥೀಯ ಭಾವನೆಗಳನ್ನು ಬಿತ್ತಿ-ಬೆಳೆಸುವ ಅಪಾಯಕಾರಿ ಬೆಳೆವಣಿಗೆಯಾಗಿ ಮಾರ್ಪಟ್ಟಿದೆ . ಪಠ್ಯ ಪರಿಷ್ಕರಣೆ ಎಂದರೆ ಪಾಠ ಸೇರಿಸುವ- ಪಾಠ ತೆಗೆಯುವ ಆಟವಾಗಿ ಮಾರ್ಪಟ್ಟಿದೆ .

ಶಿಕ್ಷಣದ ಹಿತದೃಷ್ಟಿಯಿಂದ ವಿಷಾದಕರ ಬೆಳವಣಿಗೆ

ಶಿಕ್ಷಣದ ಹಿತದೃಷ್ಟಿಯಿಂದ ವಿಷಾದಕರ ಬೆಳವಣಿಗೆ

ಈ ಎಲ್ಲಾ ಬೆಳವಣಿಗೆಗಳನ್ನು ಒಬ್ಬ ಸಾಮಾನ್ಯ ಪ್ರಜ್ಞಾವಂತನಾಗಿ ಯಾವುದೇ ಪಕ್ಷಪಾತವಿಲ್ಲದೆ , ಸಂವಿಧಾನದ ಚೌಕಟ್ಟು ಮೌಲ್ಯಗಳನ್ನು ಹಾಗು 2005 ರ ಪಠ್ಯಕ್ರಮ ಚೌಕಟ್ಟಿನ ನೆಲೆಯಲ್ಲಿ ಗಮನಿಸಿದರೆ ಆಘಾತ ಮತ್ತು ಆತಂಕವಾಗುತ್ತಿದೆ. ಒಂದು ಪಠ್ಯಕ್ರಮ ಚೌಕಟ್ಟಿಲ್ಲದೆ ಪರಿಷ್ಕರಣೆ ಹೇಗೆ ಸಾಧ್ಯ .ಇದು ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಅತ್ಯಂತ ವಿಷಾದಕರ ಬೆಳವಣಿಗೆ. ಶಿಕ್ಷಕರು, ಮಕ್ಕಳ ಪಾಲಕರು , ಶಿಕ್ಷಣ ತಜ್ಞರು ಹಾಗು ವಿಷಯ ತಜ್ಞರನ್ನು ಒಳಮಾಡಿಕೊಳ್ಳದೆ, ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಕ್ಕಳ ಶಿಕ್ಷಣದ ಜೊತೆಗೆ ಭವಿಷ್ಯವನ್ನು ಬಲಿಕೊಡಲು ಹೊರಟಿರುವುದು ಅತ್ಯಂತ ಖಂಡನೀಯ.ನಮ್ಮ ನಾಡಿನ ಮಕ್ಕಳ ಶಿಕ್ಷಣ ಸಂವಿಧಾನದ ಮೌಲ್ಯಗಳಿಗೆ ಅನುಗುಣವಾಗಿರಬೇಕೆಂಬುದು ನಮ್ಮ ಆಶಯವಾಗಿದೆ .

ನಮ್ಮ ಮಕ್ಕಳು ಸ್ವಾತಂತ್ರ್ಯ ಚಳುವಳಿಯ ನೈಜ ಇತಿಹಾಸವನ್ನು ಅರಿತು , ತ್ಯಾಗ ಬಲಿದಾನ ಹೋರಾಟಗಳ ಗಳ ಮೂಲಕ ಪಡೆದ ಈ ಮೌಲ್ಯಯುತ ಸ್ವಾತಂತ್ರ್ಯವನ್ನು ಗೌರವಿಸಲು ಅಗತ್ಯವಾದ ಜ್ಞಾನವನ್ನು ಕಟ್ಟಿಕೊಡಬೇಕು. ಜೊತೆಗೆ, ಸ್ವಾತಂತ್ರ್ಯ ಚಳುವಳಿಯ ಅಂತಿಮ ಫಲಿತಾಂಶವಾಗಿ ರೂಪಗೊಂಡ ಸಂವಿಧಾನವನ್ನು ಪೂರ್ಣವಾಗಿ ಜಾರಿಗೊಳಿಸುವ ಮೂಲಕ ಒಂದು ಸಮ ಸಮಾಜವನ್ನು ಕಟ್ಟಿಕೊಳ್ಳಬೇಕು. ಜೊತೆಗೆ, ಶಿಕ್ಷಣ ನಮ್ಮಲ್ಲಿರು ಹಲವು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಪರಿಹಾರವನ್ನೊದಗಿಸುವ ಮೂಲಕ ಸಾಮಾಜಿಕ ಪರಿವರ್ತನೆಯ ಸಾಧನವಾಗಬೇಕು.

ಈಗಿನ ಪರಿಷ್ಕರಣೆಯಲ್ಲಿ ಇದಾವುದು ಚರ್ಚೆಯಾಗುತ್ತಿಲ್ಲ

ಈಗಿನ ಪರಿಷ್ಕರಣೆಯಲ್ಲಿ ಇದಾವುದು ಚರ್ಚೆಯಾಗುತ್ತಿಲ್ಲ

ಈ ಎಲ್ಲಾ ಕಾರಣಗಳಿಂದ , ಪಠ್ಯ ಪುಸ್ತಕದ ಪರಿಷ್ಕರಣಾ ಪ್ರಹಸನವನ್ನು ಇಲ್ಲಿಗೆ ನಿಲ್ಲಿಸಿ, ಮಕ್ಕಳಿಗೆ ಆದಷ್ಟು ಶೀಘ್ರವಾಗಿ ಪಠ್ಯಪುಸ್ತಕಗಳನ್ನು ಒದಗಿಸಲು ಕ್ರಮವಹಿಸಬೇಕೆಂದು ನಾನು ತಮ್ಮನ್ನು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇನೆ. ಈಗಿನ ಪರಿಷ್ಕರಣಾ ಕ್ರಮ, ವಿಧಾನ ಮತ್ತು ವಿಷಯಗಳ ಆಯ್ಕೆಯಲ್ಲಿ ಹೆಚ್ಚು ಗೊಂದಲವಿರುವುದರಿಂದ, ಈಗಿನ ಪರಿಷ್ಕರಣೆಯನ್ನು ಸಂಪೂರ್ಣವಾಗಿ ಕೈಬಿಟ್ಟು , ಈ ಹಿಂದೆ ರಚನೆಯಾಗಿದ್ದ ಪಠ್ಯಪುಸ್ತಕಗಳನ್ನು ಯಥಾವತ್ತಾಗಿ ಮುಂದುವರಿಸಬೇಕೆಂದು ನಾನು ತಮ್ಮಲ್ಲಿ ಆಗ್ರಹಿಸುತ್ತೇನೆ.

ಬಸವಾದಿ ನೆಲೆಯಲ್ಲಿನ ಸಮಾನತೆ, ಅನುಭವ ಮಂಟಪದ ಮುಕ್ತ ಚರ್ಚೆಯ ಪರಂಪರೆ ಹಾಗು ಎಲ್ಲಕಿಂತ ಮಿಗಿಲಾಗಿ ಜಾತ್ಯತೀತ ಸಮಾಜದ ಕಲ್ಪನೆಯ ಸಮಾಜದಿಂದ ಬಂದಿರುವ ತಾವು ಈ ಸೂಕ್ಷ್ಮತೆಗಳನ್ನು ಅರಿತು ತಕ್ಷಣ ಮಧ್ಯಪ್ರವೇಶಿಸಬೇಕೆಂದು ವಿನಂತಿಸುತ್ತೇನೆ.

English summary
Karnataka Text book row: Educationist VP Niranjanaradhya wrote latter to cm about text book conntrovercy; Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X