• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸರ್ಕಾರದ ಬದ್ಧತೆಯ ಬಗ್ಗೆ ವಿರೋಧ ಪಕ್ಷದ ಕಾಳಜಿ ಅನಗತ್ಯ'

By ಎಸ್. ಸುರೇಶ್ ಕುಮಾರ್, ಶಿಕ್ಷಣ ಸಚಿವರು
|

ಕೋವಿಡ್ ಲಾಕ್‌ಡೌನ್‌ ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿನ ಸುಧಾರಣೆಗೆ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರ ವಿಫಲಗೊಂಡಿದೆ, ವಿದ್ಯಾರ್ಥಿಗಳನ್ನು ಮತ್ತು ಶಿಕ್ಷಕರನ್ನು ಸಮಸ್ಯೆಗಳ ಸುಳಿಗೆ ತಳ್ಳಿದೆ ಎಂದು ವಿರೋಧ ಪಕ್ಷದ ನನ್ನ ಕೆಲವು ಮಿತ್ರರು ಆರೋಪ ಮಾಡಿದ್ದಾರೆ. ರಾಜಕಾರಣದ ಉದ್ದೇಶವೇನೇ ಇರಲಿ, ನಮ್ಮ ಮಕ್ಕಳ ಹಿತದೃಷ್ಟಿಯ ಕಾರಣ, ನಮ್ಮ ಪೋಷಕರ ಹಿತದೃಷ್ಟಿಯ ಕಾರಣ ಹಾಗೂ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ನಮ್ಮ ಅಸಹಾಯಕ ಶಿಕ್ಷಕರ ಒಳಿತಿನ ನಿಟ್ಟಿನಲ್ಲಿ ಕೆಲವು ಸ್ಪಷ್ಟೀಕರಣಗಳನ್ನು ನಾನು ನೀಡಲು ಬಯಸಿದ್ದೇನೆ.

   ಜಸ್ಟ್ 1800 ರುಪಾಯಿ ಸಾಲ ತೀರಿಸಿಲ್ವಾ Dhoni | Oneindia Kannada

   ಮಾರ್ಚ್‌ 11,2020 ರಂದು ಕೊರೋನಾ ವೈರಸ್‌ನ್ನು ವಿಶ್ವ ಆರೋಗ್ಯ ಸಂಸ್ಥೆ ಸಾಂಕ್ರಾಮಿಕ ಪಿಡುಗೆಂದು ಘೋಷಿಸಿದಾಗಲೇ, ಶಿಕ್ಷಣ ಇಲಾಖೆಯ ಮೇಲೆ ಅದು ಒಡ್ಡಬಹುದಾದ ದೂರಗಾಮಿಯಾದ ಪರಿಣಾಮಗಳನ್ನು ಅಂದಾಜಿಸಿದ್ದೆವು. ಬೇರೆಲ್ಲ ಕ್ಷೇತ್ರಗಳಿಗಿಂತಾ ಹೆಚ್ಚಿನ ಪರೋಕ್ಷ ಸಂಕಟಗಳನ್ನು ಈ ಇಲಾಖೆ ಅನುಭವಿಸಬೇಕಾದ್ದು, ಬಹುಮುಖಿಯಾದ ಸವಾಲುಗಳನ್ನು ಎದುರಿಸಬೇಕಾದ್ದು ಅನಿವಾರ್ಯತೆಯಾಗಿತ್ತು.

   1 ರಿಂದ 9 ತರಗತಿಯವರೆಗೆ ಪರೀಕ್ಷೆ ರದ್ದು

   1 ರಿಂದ 9 ತರಗತಿಯವರೆಗೆ ಪರೀಕ್ಷೆ ರದ್ದು

   ಮೊದಲಿಗೆ ಲಾಕ್‌ ಡೌನ್‌ ಘೋಷಣೆಯಾದ ಕೂಡಲೇ ದಿನಾಂಕ 14.03.2020 ರಿಂದ ಅನ್ವಯಿಸುವಂತೆ ಒಂದರಿಂದ ಒಂಬತ್ತನೇ ತರಗತಿಯವರೆಗೆ ಪರೀಕ್ಷೆ ರದ್ದುಗೊಳಿಸಿ, ಹಿಂದಿನ ಮೌಲ್ಯಾಂಕನದ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಿದೆವು.

   ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರ ಬದ್ಧ; ಸುರೇಶ್ ಕುಮಾರ್

   ಮುಂದಿನ ಎರಡು ತಿಂಗಳ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳು, ಕೈಗಾರಿಕೆಗಳು, ಇತರೆ ವಾಣಿಜ್ಯ ವ್ಯವಹಾರಗಳು ಸಂಪೂರ್ಣವಾಗಿ ಸ್ತಬ್ಧವಾದ ಹಿನ್ನೆಲೆಯಲ್ಲಿ ಇಂತಹ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಪೋಷಕರಿಗೆ ವೇತನಕ್ಕೂ ಸಮಸ್ಯೆಯಾಯಿತು.

   ಇದೇ ಸಂದರ್ಭದಲ್ಲಿ ಹಲವಾರು ಖಾಸಗಿ ಅನುದಾನರಹಿತ ಶಾಲೆಗಳು, ವಿಶೇಷವಾಗಿ ನಗರಕೇಂದ್ರಿತ ಶಾಲೆಗಳು ವಿದ್ಯಾರ್ಥಿಗಳಿಗೆ ಆನ್‌ ಲೈನ್‌ ದೂರ ಶಿಕ್ಷಣ ನೀಡುತ್ತೇವೆನ್ನುವ ನೆಪವೊಡ್ಡಿ ಎಲ್.ಕೆ.ಜಿ., ಯು.ಕೆ.ಜಿ ಮಕ್ಕಳೂ ಸಮವಸ್ತ್ರ ಧರಿಸಿ ಕಂಪ್ಯೂಟರ್‌ ಗಳ ಮುಂದೆ ಕುಳಿತು ಕಲಿಯುವ ಹಾಗೆ ಮಾಡಿದವು. ಪೋಷಕರಿಂದ ಅವೈಜ್ಞಾನಿಕವಾದ ಶುಲ್ಕ ವಸೂಲಾತಿಗೆ ಮುಂದಾದವು.

   ಪೋಷಕರ ಮೇಲಿನ ಖಾಸಗಿ ಶಾಲೆಗಳ ನಿರಂತರ ಶೋಷಣೆಯನ್ನು ಗಮನಿಸಿದ ಮೇಲೆ ದಿನಾಂಕ 30.03.2020 ರಲ್ಲಿ ಮುಂದಿನ ಆದೇಶದವರೆಗೆ ಪೋಷಕರಿಂದ ಯಾವುದೇ ಶುಲ್ಕ ಪಡೆದುಕೊಳ್ಳದಿರಲು ಎಲ್ಲ ಖಾಸಗಿ ಶಾಲೆಗಳಿಗೆ ನಾವು ಸೂಚಿಸಿದೆವು.

   ಆನ್‌ಲೈನ್ ಬೋಧನೆ ನಿಯಂತ್ರಣ

   ಆನ್‌ಲೈನ್ ಬೋಧನೆ ನಿಯಂತ್ರಣ

   ಅದೇ ಸಂದರ್ಭದಲ್ಲಿ ನಾವು ಶಾಲೆಗಳ ಅವೈಜ್ಞಾನಿಕ ಆನ್‌ಲೈನ್‌ ಬೋಧನೆಯ ಮೇಲೆ ಸಹ ನಿಯಂತ್ರಣವನ್ನು ಹೇರಿದೆವು. ಐದನೇ ತರಗತಿಯವರೆಗೆ ಆನ್ ಲೈನ್‌ ಬೋಧನೆ ಸ್ಥಗಿತಗೊಳಿಸಿದ ನಮ್ಮ ನಿರ್ಧಾರಕ್ಕೆ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿ, ಆನ್‌ ಲೈನ್‌ ಶಿಕ್ಷಣ ಪಡೆಯುವುದು ವಿದ್ಯಾರ್ಥಿಗಳ ಹಕ್ಕೆಂದು ಪ್ರತಿಪಾದಿಸಿತು. ಆದರೆ ಯಾವುದೇ ಕಾರಣಕ್ಕೂ ಶಾಲೆಗಳು ಆನ್‌ ಲೈನ್‌ ಶಿಕ್ಷಣಕ್ಕೆ ಪ್ರತ್ಯೇಕ ಶುಲ್ಕ ವಸೂಲಾತಿಗೆ ಮುಂದಾಗಬಾರದೆಂದು ಹೇಳಿತು.

   ಈ ಸಂದರ್ಭದಲ್ಲೇ ನಾವು ಇಡೀ ರಾಷ್ಟ್ರದಲ್ಲಿ ಮೊದಲ ಪ್ರಯತ್ನವಾಗಿ ಒಂದು ಕೆಲಸಕ್ಕೆ ಮುಂದಾದೆವು. ಕೋವಿಡ್‌ ಪಿಡುಗು ಜಗತ್ತನ್ನೆಲ್ಲ ಆವರಿಸಿಕೊಂಡಂತೆ ಇತರೆ ರಾಜ್ಯಗಳು ಏನು ಮಾಡುತ್ತಿವೆ? ಅಂತಾರಾಷ್ಟ್ರೀಯ ವಸ್ತುಸ್ಥಿತಿ ಏನಿದೆ? ಮಕ್ಕಳಿಗಾಗಿ ಶಿಕ್ಷಣವನ್ನು ಮುಂದುವರೆಸುವುದರ ಬಗ್ಗೆ ಬೇರೆ ಸರ್ಕಾರಗಳ ನಿಲುವೇನು? ಇದೆಲ್ಲವನ್ನು ಅವಲೋಕಿಸಲು ನಾವು ಕೋವಿಡ್‌ ಸಂದರ್ಭದಲ್ಲಿ ಶಿಕ್ಷಣವನ್ನು ಮುಂದುವರೆಸುವ ಬಗ್ಗೆ ಸಲಹೆ ನೀಡಲು ತಜ್ಞರ ಸಮಿತಿಯನ್ನು ರಚಿಸಿ ಕೋವಿಡ್-19ರ ಸಾಂಕ್ರಾಮಿಕ ರೋಗದಿಂದಾಗಿ ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಬೇಕಾದಂತಹ ಪರಿಸ್ಥಿತಿಯನ್ನು ಎದುರಿಸಲು ಸಲಹೆಗಳನ್ನು ನೀಡುವಂತೆ ಕೋರಿದೆವು.

   ಎಸ್‌ಎಸ್‌ಎಲ್‌ಸಿ ಪರೀಕ್ಷೆ

   ಎಸ್‌ಎಸ್‌ಎಲ್‌ಸಿ ಪರೀಕ್ಷೆ

   ಈ ನಡುವೆ, ಎಸ್ಎಸ್ಎಲ್‌ಸಿ, ಪಿಯುಸಿ ಪರೀಕ್ಷೆಗಳನ್ನು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಜೂನ್‌ 25 ರಿಂದ ನಡೆಸಬೇಕೆಂಬ ನಿರ್ಣಯ ತೆಗೆದುಕೊಂಡೆವು. ಬೇರಾವ ರಾಜ್ಯಗಳೂ ಮುಂದಾಗದ ಪ್ರಯತ್ನವನ್ನು ನಾವು ಮಾಡಿದೆವು. ಪರೀಕ್ಷಾ ಅವಧಿಯ ಸಮಸ್ಯೆಗಳು, ಆನ್ಲೈನ್‌ ಶಿಕ್ಷಣದ ಆಗುಹೋಗುಗಳು, ಸರ್ಕಾರಿ ಶಾಲೆಗಳಲ್ಲಿನ ನಮ್ಮ ಮಕ್ಕಳಿಗೆ ಕಲಿಕೆಯನ್ನು ಮುಂದುವರೆಸಬೇಕಾದ ಅಗತ್ಯತೆಗಳು, ಸರ್ಕಾರದ ಎಲ್ಲ ವರ್ಗದ ಮಕ್ಕಳಿಗೆ ಒದಗಿಸಬೇಕಾದ ಸಮಾನ ಶಿಕ್ಷಣ ವ್ಯವಸ್ಥೆಯನ್ನು ಅತ್ಯಂತ ಜಾಗರೂಕವಾಗಿ ನಿರ್ವಹಿಸಬೇಕಿದ್ದ ಜವಾಬ್ದಾರಿ ನಮ್ಮ ಹೆಗಲೇರಿತ್ತು.

   ಒಂದು ಲಕ್ಷಕ್ಕೂ ಅಧಿಕ ಪುಸ್ತಕಗಳು ಆ್ಯಪ್‌ನಲ್ಲಿ ಲಭ್ಯ!

   ಸಮಿತಿಯು ವಿವಿಧ ಅಂತರರಾಪ್ಷ್ರೀಯ ಹಾಗೂ ರಾಪ್ಷ್ರೀಯ ಸಂಸ್ಥೆಗಳು ಪ್ರಸ್ತಾಪಿಸಿರುವ ವಿಧಾನಗಳನ್ನು ಪರಿಶೀಲಿಸಿ, ಸಮಾಜದ ಎಲ್ಲ ವರ್ಗಗಳ ವಿದ್ಯಾರ್ಥಿಗಳೊಂದಿಗೆ ಲಭ್ಯವಿರುವ ಉಪಕರಗಳನ್ನು ಗಣನೆಗೆ ತೆಗೆದುಕೊಂಡು ಕರ್ನಾಟಕದಲ್ಲಿನ ಶಾಲೆಗಳು ಅಳವಡಿಸಿಕೊಳ್ಳಬಹುದಾದ ಮಾರ್ಗಸೂಚಿಗಳನ್ನು ದಿನಾಂಕ 07ನೇ ಜುಲೈ 2020ರಂದು ಸರ್ಕಾರಕ್ಕೆ ಸಲ್ಲಿಸಿತು

   ವಿದ್ಯಾಗಮ ಯೋಜನೆ ಜಾರಿಗೆ

   ವಿದ್ಯಾಗಮ ಯೋಜನೆ ಜಾರಿಗೆ

   ಈ ವರದಿಯನ್ನು ಆಧರಿಸಿ ಬೌತಿಕವಾಗಿ ಶಾಲೆಗಳು ಪ್ರಾರಂಭವಾಗುವವರೆಗೂ ಪ್ರತೀ ಮಗುವಿನ ಭವಿಷ್ಯದ ಕನಸಿಗೆ ಯಾವುದೇ ಅಡಚಣೆಗಳು ಅಡ್ಡಿಯಾಗದಂತೆ ಹಾಗೂ ರಾಜ್ಯದ ಎಲ್ಲಾ ಮಕ್ಕಳನ್ನು ಕಲಿಕೆಯೊಂದಿಗೆ ನಿರಂತರ ಸಂಪರ್ಕದಲ್ಲಿಡುವುದಕ್ಕಾಗಿ "ವಿದ್ಯಾಗಮ"ವನ್ನು ಪ್ರಾರಂಭಿಸಲಾಯಿತು.

   ಶಾಲೆ ಮುಚ್ಚಿರುವ ಸಮಯದಲ್ಲಿಯೂ ಮಕ್ಕಳ ನಿರಂತರ ಕಲಿಕೆ, ಸಮಾಜದ ಯಾವುದೇ ಆರ್ಥಿಕ ಸ್ತರಕ್ಕೂ ಸೇರಿದ ಪ್ರತಿ ಮಗುವೂ ಕಲಿಕಾ ವ್ಯಾಪ್ತಿಯಲ್ಲಿ ಬರುವಂತೆ ಯೋಜನೆ, ಶಿಕ್ಷಕರು-ಮಕ್ಕಳ ನಿರಂತರ ಸಂಪರ್ಕ, ಮಕ್ಕಳಲ್ಲಿ ಮಾರ್ಗದರ್ಶಿತ ಸ್ವಯಂ ಕಲಿಕೆ, ಶಿಕ್ಷಕರ ಮೂಲಕ ಮಕ್ಕಳ ಮನೋಸ್ಥೈರ್ಯದ ವೃದ್ಧಿ, ಶಿಕ್ಷಕರು, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಆಡಳಿತ ಮಂಡಳಿಯವರು, ಸ್ವಯಂ ಸೇವಕರು, ಪೋಷಕರು ಹಾಗೂ ಸಮುದಾಯದ ಎಲ್ಲಾ ಭಾಗೀದಾರ ಸಕ್ರಿಯ ತೊಡಗಿಸುವಿಕೆಯಂತಹ ಉದಾತ್ತವಾದ ಉದ್ದೇಶಗಳನ್ನು ವಿದ್ಯಾಗಮ ಹೊಂದಿದೆ.

   ನಾನು ವಿದ್ಯಾಗಮ ಪ್ರಾರಂಭವಾದಾಗಿನಿಂದ ಹಲವಾರು ಜಿಲ್ಲೆಗಳ ಗ್ರಾಮಾಂತರ ಪ್ರದೇಶಗಳಿಗೂ ಭೇಟಿ ನೀಡಿದ್ದೇನೆ. ಕೋವಿಡ್‌ ಸಂದರ್ಭದಲ್ಲೂ ಯಾವುದೇ ವಿದ್ಯಾರ್ಥಿಯಾಗಲೀ, ಪೋಷಕರಾಗಲೀ ಯೋಜನೆಯ ಬಗ್ಗೆ ದೂರಿದ್ದು ನಾನು ಕಾಣಲಿಲ್ಲ. ಮಕ್ಕಳೆಲ್ಲ ಯಾವುದೋ ಬಯಲಿನ ನೆರಳಲ್ಲಿ ಕುಳಿತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಲಿಕೆಯನ್ನು ಮುಂದುವರೆಸಿರುವುದು, ನಮ್ಮ ಶಿಕ್ಷಕರು ಆಸಕ್ತಿಯಿಂದ ಮಕ್ಕಳ ಬಳಿ ತೆರಳಿ ಇಷ್ಟ ಪಟ್ಟು ಕಲಿಸುತ್ತಿರುವುದು ನಿಜಕ್ಕೂ ಖುಷಿ ತರುವ ವಿಷಯ.

   "ಸಂವೇದ' ಟಿ.ವಿ ಆಧಾರಿತ ಕಲಿಕೆ

   ಖಾಸಗಿ ಶಾಲೆಗಳೂ ಸಹ ಸರ್ಕಾರದ ಈ ಉತ್ತಮ ಉಪಕ್ರಮವನ್ನು ಅಳವಡಿಸಿಕೊಳ್ಳಲು ಸ್ವತಂತ್ರರಿದ್ದಾರೆ. ಅದಕ್ಕೆಂದೇ ಈ ಯೋಜನೆಯ ಉಪಯುಕ್ತತೆಯ ಬಗ್ಗೆ ಬಾಹ್ಯಮೂಲದ ಸಂಸ್ಥೆಯಿಂದ ಮೌಲ್ಯಮಾಪನಕ್ಕೂ ನಾವು ಮುಂದಾಗುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೂ ಮಾಹಿತಿ ಸಲ್ಲಿಸಿ ಇಂತಹ ಮಾದರಿಯಾದ TRUSTED, TESTED ಉಪಕ್ರಮವನ್ನು ಎಲ್ಲೆಡೆ ಅಳವಡಿಸಿಕೊಳ್ಳಬಹುದೆಂದು ಹೇಳಿದ್ದೇವೆ.

   ನಾವು ಹಿಂದೆ ಕೈಗೊಂಡ ಸಮೀಕ್ಷೆಯ ಫಲಿತಾಂಶದಂತೆ ಸುಮಾರು ಶೇ.90ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ಮನೆಗಳಲ್ಲಿ ಟಿ.ವಿ ಲಭ್ಯವಿರುವುದರಿಂದ, ‘ಸಂವೇದ'-ಟಿ.ವಿ ಆಧಾರಿತ ಕಲಿಕಾ ಕಾರ್ಯಕ್ರಮವನ್ನು ಸಹ ‘ವಿದ್ಯಾಗಮ' ಕಾರ್ಯಕ್ರಮದ ಅಂಗವಾಗಿ ರೂಪಿಸಲಾಗಿದೆ. 1 ರಿಂದ 10ನೇ ತರಗತಿಯವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಪಾಠಗಳನ್ನು ಪರಿಣಿತ ಶಿಕ್ಷಕರ ಬೋಧನೆಯ ವಿಡಿಯೋ ತಯಾರಿಸಿ ಇಲಾಖೆಯ ಯುಟ್ಯೂಬ್‌ ಚಾನೆಲ್ಗಳಲ್ಲಿಯೂ ಸಹ ಲಭ್ಯವಿರಲು ಕ್ರಮ ವಹಿಸಲಾಗುತ್ತಿದೆ.

   ದಾಖಲಾತಿ ಪ್ರಕ್ರಿಯೆ ಆರಂಭ

   ದಾಖಲಾತಿ ಪ್ರಕ್ರಿಯೆ ಆರಂಭ

   ಹಲವು ಜಿಲ್ಲೆಗಳಲ್ಲಿ ಇಂದು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾಗಿದೆ. ಮಕ್ಕಳು ಕ್ರಿಯಾಶೀಲರಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ದಾಖಲೆ ನಾನೇ ನನ್ನ ವಿರೋಧ ಪಕ್ಷದ ಸ್ನೇಹಿತರಿಗೆ ಒದಗಿಸಬಲ್ಲೆ.

   ಬಹಳ ಮುಖ್ಯವಾಗಿ ಇಂದು ಖಾಸಗಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲು ಅನುಮತಿ ನೀಡಲಾಗಿದೆ. ಜೊತೆಯಲ್ಲಿಯೇ ಇಂದು (05.09.2020ರಂದು) ಪೋಷಕರಿಂದ ಪ್ರಸಕ್ತ ಸಾಲಿನ ಮೊದಲ ಕಂತಿನ ಅಧಿಕೃತ ಶುಲ್ಕವನ್ನು ವಸೂಲಿ ಮಾಡಲು ಅನುಮತಿಯನ್ನು ಸಹ ನೀಡಿದ್ದೇನೆ. ಮುಂದಿನ ದಿನಗಳ ಪರಿಸ್ಥಿತಿಗೆ ಅನುಗುಣವಾಗಿ ಶುಲ್ಕ ಪಾವತಿ ಪ್ರಕ್ರಿಯೆ ಮುಂದುವರೆಯಲಿದ್ದು, ಶಾಲೆಗಳು ಈ ರೀತಿಯಾಗಿ ವಸೂಲಾಗುವ ಶುಲ್ಕವನ್ನು ಶಿಕ್ಷಕರ ವೇತನಕ್ಕೆ ಬಳಸಲು ಮೊದಲ ಪ್ರಾಧಾನ್ಯತೆಯನ್ನು ಕೊಡಬೇಕೆಂದು ಹೇಳಿದ್ದೇನೆ. ಹಾಗೂ ನಮ್ಮ ಪೋಷಕರಿಗೆ ಅನ್ಯಾಯವಾಗದ ರೀತಿಯಲ್ಲಿ ಕಳೆದ ಸಾಲಿಗಿಂತ ಯಾವುದೇ ಕಾರಣಕ್ಕೂ ಶುಲ್ಕ ಹೆಚ್ಚಳವಾಗಬಾರದೆಂದು ಆದೇಶ ಮಾಡಿದ್ದೇನೆ. ಇದರಿಂದ ನಮ್ಮ ಖಾಸಗಿ ಶಾಲಾ ಶಿಕ್ಷಕರ ಬವಣೆ ಖಂಡಿತವಾಗಿಯೂ ಬಗೆಹರಿಯಲಿವೆ.

   ಪ್ರಜಾಸತ್ತಾತ್ಮಕ ನಿರ್ಣಯ

   ಪ್ರಜಾಸತ್ತಾತ್ಮಕ ನಿರ್ಣಯ

   ನಾವು ವೈಜ್ಞಾನಿಕವಾಗಿ, ಅತ್ಯಂತ ಪ್ರಜಾಸತ್ತಾತ್ಮಕವಾಗಿ ನಮ್ಮೆಲ್ಲ ನಿರ್ಣಯಗಳನ್ನು ತೆಗೆದು ಕೊಳ್ಳುತ್ತಿದ್ದೇವೆ. ಯಾವುದೇ ಪ್ರಧಾನ ನಿರ್ಣಯವೂ ಭಾಗೀದಾರರೊಂದಿಗಿನ ಚರ್ಚೆಯ ನಂತರವೇ ಹೊರಹೊಮ್ಮಿದೆ. ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಾಗ ನನಗೆ ನನ್ನ ಹುದ್ದೆ ಮುಖ್ಯವಾಗಿರಲಿಲ್ಲ. ಹಿಂದಿನ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರು, ಶಿಕ್ಷಕರ-ಪದವೀಧರ ಕೇತ್ರದ ಪ್ರತಿನಿಧಿಗಳು, ಪತ್ರಿಕಾ ಮುಖ್ಯ ಸಂಪಾದಕರು, ಶಾಲಾಭಿವೃದ್ಧಿ ಸಮಿತಿಗಳ ಸದಸ್ಯರುಗಳು, ಶಿಕ್ಷಕರ ಸಂಘಟನೆಗಳು, ಶಾಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಸಂಘಟನೆಗಳು- ಹೀಗೆ ಸಮಾಜದ ಬಹುಸ್ತರದ ಗಣ್ಯ ವ್ಯಕ್ತಿಗಳನ್ನು ನಾನೇ ಖುದ್ದಾಗಿ ಸಂಪರ್ಕಿಸಿ ಅವರಿಂದ ಬಂದ ಸಲಹೆ, ಸೂಚನೆಗಳನ್ನು ಅಳವಡಿಸಿಕೊಳ್ಳಲು ಕ್ರಮ ವಹಿಸಿದ್ದೇನೆ.

   ವಿರೋಧ ಪಕ್ಷದ ನಾಯಕರು ವೃಥಾ ಆರೋಪ ಮಾಡುವುದು ಬೇಡ. ನಾವೆಲ್ಲರೂ ನಮ್ಮ ಮಕ್ಕಳ ಹಿತ ಕಾಯಬೇಕಾಗಿದೆ. ದುಸ್ಥಿತಿಯಲ್ಲಿರುವ ಪೋಷಕರು, ಖಾಸಗಿ ಶಾಲಾ ಶಿಕ್ಷಕರನ್ನು ರಕ್ಷಿಸಬೇಕಿದೆ. ಅವರೊಂದಿಗೆ ನಾನು ಮುಕ್ತವಾಗಿ ಚರ್ಚಿಸಲು ಎಂದಿಗೂ ಸಿದ್ಧನಿದ್ದೇನೆ. ರಾಜಕಾರಣ ಇಂತಹ ಸಂದರ್ಭದಲ್ಲಿ ಅಪೇಕ್ಷಣೀಯವಲ್ಲ. ಜನರಿಗೆ ಬೇಕಿರುವುದು ರಾಜಕಾರಣಿಗಳು ನೀಡಬೇಕಿರುವ ವಿಶ್ವಾಸ. ಸರ್ಕಾರದ ಬದ್ಧತೆಯ ಬಗ್ಗೆ ಕಾಳಜಿ ಬೇಡವೆಂದೇ ನಾನು ಅವರೆಲ್ಲರಲ್ಲಿ ಮನವಿ ಮಾಡುತ್ತೇನೆ.

   (ಲೇಖಕರು: ಕರ್ನಾಟಕ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು)

   English summary
   Minister of Education S Suresh Kumar Written an article on Government Education policies during Lockdown. In the article, he clarifies the opposition parties' allegations. For more information
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X