ಶಾಲೆಗಳ ಬಂದ್ ಮಾಡುವ ಪ್ರಸ್ತಾಪವೇ ಇಲ್ಲ: ಒನ್ಇಂಡಿಯಾ ಕನ್ನಡಕ್ಕೆ ಶಿಕ್ಷಣ ಸಚಿವರ ಸ್ಪಷ್ಟನೆ
ಬೆಂಗಳೂರು, ಡಿ. 08: "ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಏನು ಕಟ್ಟು ನಿಟ್ಟು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚುವ ಬಗ್ಗೆ ತೀರ್ಮಾನ ಮಾಡಿಲ್ಲ. ಕೊರೊನಾ ವಿಚಾರದಲ್ಲಿ ಪ್ರತಿಷ್ಠೆಗೆ ಬಿದ್ದು 1.20 ಕೋಟಿ ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಲು ಅವಕಾಶ ಕೊಡುವುದಿಲ್ಲ"
ರೂಪಾಂತರಿ ಕೊರೊನಾ ವೈರಸ್‌ನಿಂದ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಗೊಂದಲಗಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಳೆದ 20 ತಿಂಗಳು ಶಾಲೆಗಳನ್ನು ಮುಚ್ಚಲಾಗಿತ್ತು. ಬಹುತೇಕ ಪರೀಕ್ಷೆಗಳನ್ನು ಸಹ ರದ್ದು ಮಾಡಲಾಗಿತ್ತು. ಕಳೆದ ಜುಲೈನಿಂದ ಈವರೆಗೆ ಹಂತ ಹಂತವಾಗಿ ಶಾಲೆಗಳನ್ನು ತೆರೆಯಲಾಗಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ. ಸದ್ಯ ಸರ್ಕಾರಿ ಶಾಲೆಗಳು ಸೇರಿದಂತೆ 1.20 ಕೋಟಿ ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದಾರೆ. ಇದೀಗ ರೂಪಾಂತರಿ ಒಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಸೋಂಕು ಮತ್ತೆ ಶಾಲೆಗಳಿಗೆ ಆತಂಕ ಹೆಚ್ಚಿಸಿದೆ.
ಕರ್ನಾಟಕ ನರ್ಸಿಂಗ್ ಶಾಲೆ ಸೇರಿದಂತೆ ಮೂರು ಶಾಲೆ - ಕಾಲೇಜಿನ 120 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಶಾಲೆಗಳನ್ನು ಮತ್ತೆ ಮುಚ್ಚಲಾಗುತ್ತದೆ ಎಂಬ ಗೊಂದಲ ಹುಟ್ಟು ಹಾಕಿತ್ತು. ಈ ಕುರಿತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಒಮಿಕ್ರಾನ್ ರೂಪಾಂತರಿ ಆತಂಕ ಮತ್ತು ಶಾಲೆಗಳನ್ನು ಮುಚ್ಚುವ ಪ್ರಸ್ತಾಪ ಕುರಿತು ಒನ್ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದ ವಿವರ ಇಲ್ಲಿದೆ.
ಪ್ರಶ್ನೆ: ಓಮಿಕ್ರಾನ್ ಭೀತಿಯಿಂದಾಗಿ ಶಾಲೆ ಮುಚ್ಚುವ ಗೊಂದಲ ಏರ್ಪಟ್ಟಿದೆ, ಈ ಕುರಿತ ನಿಮ್ಮ ಸ್ಪಷ್ಟ ಸಂದೇಶ ಏನು?
ಬಿ.ಸಿ. ನಾಗೇಶ್: ಸದ್ಯದ ಪರಿಸ್ಥತಿಯಲ್ಲಿ ಶಾಲೆಗಳನ್ನು ಮುಚ್ಚುವ ಪ್ರಮೇಯವೇ ಇಲ್ಲ. ಶಾಲೆಗಳನ್ನು ಮುಚ್ಚುವ ವಿಚಾರವನ್ನು ಒಂದು ಪ್ರತಿಷ್ಠೆ ವಿಚಾರವನ್ನಾಗಿ ಸರ್ಕಾರ ಪರಿಗಣಿಸುವುದಿಲ್ಲ. ಮಕ್ಕಳ ಆರೋಗ್ಯ ರಕ್ಷಣೆ ಮುಖ್ಯ. ಅಂತಹ ಕೆಟ್ಟ ಪರಿಸ್ಥಿತಿ ಬಂದರೆ ಮಾತ್ರ ಎಕ್ಸಪರ್ಟ್ ಕಮಿಟಿ ವರದಿ ನೋಡಿ ಆಲೋಚನೆ ಮಾಡುತ್ತೇವೆ. ಈ ಕ್ಷಣದ ವರೆಗೂ ಶಾಲೆಗಳನ್ನು ಮುಚ್ಚುವ ಯಾವ ಪರಿಸ್ಥಿತಿಯೂ ಬಂದಿಲ್ಲ. ಯಾವ ಕಾರಣಕ್ಕೂ ಶಾಲೆಗಳನ್ನು ಮುಚ್ಚುವುದಿಲ್ಲ.
ಪ್ರಶ್ನೆ: ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆಯಲ್ಲ?
ಬಿ.ಸಿ. ನಾಗೇಶ್: ಕಳೆದ ಎರಡು ದಿನದಿಂದ ಪಾಸಿಟಿವಿಟಿ ಇಲ್ಲ. 120 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಎಲ್ಲೂ ಪಾಸಿಟಿವಿಟಿ ಜಾಸ್ತಿಯಾಗಿಲ್ಲ. ಧಾರವಾಡ ಆಯುರ್ವೇದ ನರ್ಸಿಂಗ್ ಕಾಲೇಜು ಮಕ್ಕಳಲ್ಲಿ ಕಾಣಿಸಿಕೊಂಡಿತ್ತು. ಅದರಿಂದ ಯಾರಿಗೂ ತೊಂದರೆ ಆಗಿಲ್ಲ. ಕಾಲೇಜು ನಡೆಯುತ್ತಿದೆ. 1.20 ಕೋಟಿ ಮಕ್ಕಳು ಶಾಲೆಗಳಿಗೆ ಬರುತ್ತಿದ್ದಾರೆ. ಅಂತಹ ಪರಿಸ್ಥಿತಿ ಎದುರಾದಾಗ ನೋಡೋಣ. ಸದ್ಯದ ಸ್ಥಿತಿಯಲ್ಲಿ ಶಾಲೆಗಳನ್ನು ಮುಚ್ಚುವ ಯಾವ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ.
ಪ್ರಶ್ನೆ: ಶಾಲೆ ಬಂದ್ ಮಾಡುವ ಬಗ್ಗೆ ತಜ್ಞರ ಸಮಿತಿ ಏನು ಸಲಹೆ ಕೊಟ್ಟಿದೆ?
ಬಿ.ಸಿ. ನಾಗೇಶ್: ಓಮಿಕ್ರಾನ್ ರೂಪಾಂತರಿ ಕೊರೊನಾ ಸೋಂಕು ಕುರಿತು ತಜ್ಞರ ಸಮಿತಿ ಸಭೆ ಸೇರಿ ಚರ್ಚೆ ನಡೆಸಿದ್ದೇವೆ. ತಜ್ಞರ ಸಮಿತಿ ಕೂಡ ಶಾಲೆಗಳನ್ನು ಮುಂದುರಿಸಲು ಸಮ್ಮಿತಿ ಸೂಚಿಸಿದ್ದಾರೆ. ಸೋಮವಾರ ಮುಖ್ಯಮಂತ್ರಿಗಳ ಜತೆ ಈ ಕುರಿತು ಚರ್ಚೆ ನಡೆಯಲಿದೆ. ಮುಖ್ಯಮಂತ್ರಿಗಳಿಗೂ ತಜ್ಞರ ಕಮಿಟಿ ಸದಸ್ಯರು ಹೇಳಿರುವ ವಿಚಾರವನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಲಾಗುವುದು. ಹೊರತು ಪಡಿಸಿ ಯಾವ ಕಾರಣಕ್ಕೂ ಶಾಲೆಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ವಸತಿ ಶಾಲೆಗಳ ಬಗ್ಗೆ ಗಾಬರಿ ಹುಟ್ಟಿದ್ದು ನಿಜ. ಸದ್ಯದ ಸ್ಥಿತಿಯಲ್ಲಿ ಯಾರೂ ತೊಂದರೆಗೆ ಒಳಗಾಗಿಲ್ಲ. ಆದರೆ, ಓಮಿಕ್ರಾನ್ ಸೋಂಕಿನಿಂದ ಯಾರಿಗೂ ತೊಂದರೆ ಆಗಿಲ್ಲ. ಓಮಿಕ್ರಾನ್ ತಡೆಯುವ ಜವಾಬ್ದಾರಿ ಸಮಾಜದ ಮೇಲೆ. ಸಮಾಜವನ್ನು ಎಚ್ಚರಿಸುವ ಕೆಲಸ ಆಗುತ್ತಿದೆ.